ಕಳಪೆ ರಸ್ತೆಯ ಬಗ್ಗೆ ಮಾತನಾಡುತ್ತಿರುವಾಗಲೇ, ರಸ್ತೆಗುಂಡಿಯಿಂದಾಗಿ ಪಲ್ಟಿ ಹೊಡೆದ ಅಟೋ!

ಲಖನೌ: ವ್ಯಕ್ತಿಯೊಬ್ಬರು ಕಳಪೆ ರಸ್ತೆಯ ಬಗ್ಗೆ ಕ್ಯಾಮೆರಾ ಮುಂದೆ ನಿಂತು ಮಾತನಾಡುತ್ತಿರುವಾಗಲೇ ಅವರ ಹಿಂಬದಿಯಲ್ಲಿದ್ದ ರಸ್ತೆಯಲ್ಲಿ ಆಟೋ ರಿಕ್ಷಾವೊಂದು ರಸ್ತೆಗುಂಡಿಯಿಂದಾಗಿ ಪಲ್ಟಿ ಹೊಡೆದ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದ್ದು, ವ್ಯಕ್ತಿಯ ಆರೋಪವನ್ನು ಈ ಘಟನೆಯು ಆ ಕ್ಷಣವೇ ಸಾಬೀತು ಮಾಡಿತು.

ಮಾಧ್ಯಮ ಸಂದರ್ಶನದ ಸಮಯದಲ್ಲಿ ನೇರ ದೃಶ್ಯಾವಳಿಯಲ್ಲಿ ಆಟೋ ರಿಕ್ಷಾವೊಂದು ನೀರು ತುಂಬಿದ ರಸ್ತೆ ಗುಂಡಿಯಿಂದಾಗಿ ಮಗುಚಿ ಬಿದ್ದ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದಕ್ಕಿಂತ ಸಾಕ್ಷಿ ಬೇರೇನೂ ಬೇಕು ಎಂದು ನೆಟ್ಟಿಗರು ವಿಡಿಯೋ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಿವಾಸಿಯೊಬ್ಬರು ರಸ್ತೆಗಳ ದುಸ್ಥಿತಿಯ ಬಗ್ಗೆ ವಿವರಣೆ ನೀಡುವಾಗಲೇ ಆಟೋ ಪಲ್ಟಿ ಹೊಡೆದಿದ್ದು, ಅಲ್ಲಿನ ರಸ್ತೆಗಳ ಕರಾಳ ಪರಿಸ್ಥಿತಿಗೆ ಘಟನೆ ಕನ್ನಡಿ ಹಿಡಿದಂತಿತ್ತು. ರಸ್ತೆಗಳು ಸಂಪೂರ್ಣ ಹಾಳಾಗಿದ್ದರು, ಇದುವರೆಗೂ ಯಾವೊಬ್ಬ ಅಧಿಕಾರಿಗಳು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿನಿತ್ಯ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಂಚಾರ ಮಾಡಬೇಕಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕಳೆದ ತಿಂಗಳು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿಯ ಪ್ರಕಾರ, 2018 ಮತ್ತು 2020ರ ನಡುವೆ 5,626 ಜನರ ಸಾವಿಗೆ ರಸ್ತೆ ಗುಂಡಿಗಳಿಂದ ಉಂಟಾದ ಅಪಘಾತಗಳು ಕಾರಣ ಎಂದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *