ಕೊಪ್ಪಳ: ಕೊಪ್ಪಳದ ಬಾಲಕಿಯರ ವಸತಿ ಶಾಲೆಯಲ್ಲಿ ನೀಡುತ್ತಿರುವ ಆಹಾರವು ಕಳಪೆಯಾಗಿದ್ದು ಅಲ್ಲದೇ, ಸಿಬ್ಬಂದಿಗಳು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ, ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ವತಿಯಿಂದ ಪ್ರತಿಭಟನೆ ನಡೆದಿದೆ.
ಎಸ್ಎಫ್ಐನ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಸತಿ ಶಾಲೆಯಲ್ಲಿ ಅನೇಕ ದಿನಗಳಿಂದ ಸರಿಯಾದ ಊಟವಿಲ್ಲ ಹಾಗೂ ಊಟದಲ್ಲಿ ಹುಳು ಬರುತ್ತೇವೆ. ಅಡುಗೆ ಸಿಬ್ಬಂದಿ ವಿದ್ಯಾರ್ಥಿನಿಯರಿಗೆ ನಿಂದನೆ ಮಾಡುತ್ತಾರೆ. ಅಲ್ಲದೇ, ವಸತಿ ಶಾಲೆಯಲ್ಲಿ ಸ್ವಚ್ಛತೆ ಇಲ್ಲ. ಗ್ರಂಥಾಲಯ, ಹಾಸಿಗೆ, ತಟ್ಟೆ, ಗ್ಯಾಸ್ ಇಲ್ಲ, ಶುಚಿತ್ವದ ಕಿಟ್ ಕೊಟ್ಟಿಲ್ಲ. ನೀರಿನ ಅವ್ಯವಸ್ಥೆ ಇದೆ. ಇವೆಲ್ಲವೂ ಬಗ್ಗೆ ವಾರ್ಡನ್ ಅವರನ್ನು ವಿಚಾರಿಸಿದರೆ, ಬೈತಾರೆ. ಅಲ್ಲದೆ ವಿದ್ಯಾರ್ಥಿಗಳು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದರೂ ಸಹ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ದಿಢೀರ್ ಎಂದು 3 ಗಂಟೆಗಳ ಕಾಲ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆ ಸ್ಥಳಕ್ಕೆ ಸಂಬಂಧ ಪಟ್ಟ ಸಮಾಜ ಕಲ್ಯಾಣ ಅಧಿಕಾರಿಗಳು ಕೊಪ್ಪಳ ತಾಲೂಕು ಪಂಚಾಯಿತಿ ಇ.ಓ. ತಾಲೂಕಾ ಸಮಾಜ ಕಲ್ಯಾಣಾಧಿಕಾರಿಗಳು ಬಂದು ಮನವಿ ಸ್ವೀಕರಿಸಿದರು.
ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳನ್ನು ಪರಿಹರಿಸಿದ ಮೇಲೆ ಪ್ರತಿಭಟನೆ ವಾಪಸ್ಸು ತೆಗೆದುಕೊಳ್ಳಲಾಯಿತು.ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಗ್ಯಾನೇಶ ಕಡಗದ, ಕಾರ್ಯದರ್ಶಿ ಸಿದ್ದಪ್ಪ, ಸಹ ಕಾರ್ಯದರ್ಶಿ ಶಿವುಕುಮಾರ, ವಿದ್ಯಾರ್ಥಿನಿರಾದ ಸೌಮ್ಯ, ಮಹಾದೇವಿ, ಸವಿತಾ, ತಿಪ್ಪಮ್ಮ, ದುರುಗಮ್ಮ, ಗಂಗಮ್ಮ ಇತರರು ಇದ್ದರು.