ಕಲಮಸ್ಸೆರಿ ಸ್ಫೋಟ | ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಕೇರಳ ಸರ್ಕಾರ

ತಿರುವನಂತಪುರಂ: ಕೇರಳದ ಕಲಮಸ್ಸೆರಿ ಸ್ಫೋಟದಲ್ಲಿ ಸಾವನ್ನಪ್ಪಿದ ಐದು ಜನರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ನವೆಂಬರ್ 15 ರ ಬುಧವಾರ ಕೇರಳ ಕ್ಯಾಬಿನೆಟ್ ಘೋಷಿಸಿದೆ. ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ(CMDRF)ಯಿಂದ ಹಣವನ್ನು ಪಾವತಿಸಲಾಗುವುದು ಎಂದು ಸರ್ಕಾರ ತೀರ್ಮಾನಿಸಿದ್ದು, ಘಟನೆಯ ಎಲ್ಲಾ ಸಂತ್ರಸ್ತರು ಮತ್ತು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸಹ ಭರಿಸಲಾಗುವುದು ಎಂದು ಹೇಳಿದೆ.

ಅಕ್ಟೋಬರ್ 29ರ ಭಾನುವಾರದಂದು ಕೊಚ್ಚಿಯ ಕಲಮಸ್ಸೆರಿಯಲ್ಲಿರುವ ಕನ್ವೆನ್ಷನ್ ಸೆಂಟರ್‌ವೊಂದರಲ್ಲಿ ಕ್ರಿಶ್ಚಿಯನ್ ಸಮುದಾಯದ ”ಯಹೋವನ ಸಾಕ್ಷಿಗಳು” ಎಂಬ ಪಂಗಡದ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಫೋಟಗಳು ಸಂಭವಿಸಿತ್ತು. ಈ ಪಂಥದ ಮಾಜಿ ಸದಸ್ಯರಾಗಿದ್ದ ಡೊಮಿನಿಕ್ ಮಾರ್ಟಿನ್ ಸ್ಪೋಟದ ಹೊಣೆಯನ್ನು ಅಂದೇ ವಹಿಸಿಕೊಂಡು ಪೊಲೀಸರಿಗೆ ಶರಣಾಗಿದ್ದನು.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಸ್ವೀಕಾರ| ಕೆಲವು ನಾಯಕರು ಗೈರು

ಸ್ಫೋಟ ಸಂಭವಿಸಿದ ತಕ್ಷಣ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರನ್ನು ಕೊಚ್ಚಿಯ ಕುರುಪ್ಪಂಪಾಡಿಯ ಲಯೋನಾ ಪೌಲೋಸ್( 60) ಎಂದು ಗುರುತಿಸಲಾಗಿದೆ. ನಂತರದ ದಿನಗಳಲ್ಲಿ, 12 ವರ್ಷದ ಮಗು ಸೇರಿದಂತೆ ಇನ್ನೂ ನಾಲ್ಕು ಜನರು ಸ್ಫೋಟದಲ್ಲಿ ಉಂಟಾದ ಸುಟ್ಟ ಗಾಯಗಳಿಗೆ ಬಲಿಯಾಗಿದ್ದಾರೆ.

ಲಿಬಿನಾ ಎಂಬ ಮಗು ಸ್ಫೋಟದ ಒಂದು ದಿನದ ನಂತರ ಸಾವನ್ನಪ್ಪಿತು. ಅವರ ತಾಯಿ 45 ವರ್ಷ ವಯಸ್ಸಿನ ಸ್ಯಾಲಿ ಪ್ರದೀಪನ್ ಅವರು ನವೆಂಬರ್ 12 ರಂದು ನಿಧನರಾದರು. ಸ್ಥಳದಲ್ಲಿದ್ದ ಇತರ ಇಬ್ಬರು ಮಹಿಳೆಯರಾದ ತೊಡುಪುಳದ 53 ವರ್ಷದ ಕುಮಾರಿ ಮತ್ತು ಕಲಮಸ್ಸೆರಿಯ ಮೋಲಿ ಜಾಲಿ ನವೆಂಬರ್‌ ತಿಂಗಳಲ್ಲಿ ಮೃತಪಟ್ಟಿದ್ದಾರೆ.

ಇನ್ನೂ ಹದಿನೇಳು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಲಿಬಿನಾ ಅವರ ಇಬ್ಬರು ಸಹೋದರರಾದ 24 ವರ್ಷದ ಪ್ರವೀಣ್ ಮತ್ತು 21 ವರ್ಷದ ರಾಹುಲ್ ಕೂಡಾ ಸೇರಿದ್ದಾರೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ), ಸ್ಫೋಟಕ ವಸ್ತುಗಳ ಕಾಯಿದೆಯ ಸೆಕ್ಷನ್ 3 ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ಡೊಮಿನಿಕ್ ಮಾರ್ಟಿನ್ ವಿರುದ್ಧ ದಾಖಲಿಸಲಾಗಿದ್ದು, ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ವಿಡಿಯೊ ನೋಡಿ: ಕಾರ್ನಾಡ್ ನೆನಪು : ಕಾರ್ನಾಡ್ ನಾಟಕಗಳಲ್ಲಿ ಐತಿಹಾಸಿಕ ವಸ್ತು – ನಟರಾಜ ಹೊನ್ನವಳ್ಳಿ ಮಾತುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *