ಕಲಬುರಗಿ | ಮೋಸದಿಂದ ರಷ್ಯಾ ಗಡಿಯಲ್ಲಿ ಸಿಲುಕಿರುವ ಮಗ ಮತ್ತು ಅವರ ಸ್ನೇಹಿತರನ್ನು ಕರೆತರುವಂತೆ ಡಿಸಿ, ಸಚಿವರಿಗೆ ಪತ್ರ ಬರೆದ ತಂದೆ

ಕಲಬುರಗಿ: ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಲು ಭಾರತದಿಂದ ರಷ್ಯಾಕ್ಕೆ ತೆರಳಿ, ಉಕ್ರೇನ್ ವಿರುದ್ಧ ಯುದ್ಧ ಮಾಡಲು ಒತ್ತಾಯಕ್ಕೊಳಗಾದ ಭಾರತೀಯ ಯುವಕರ ಗುಂಪಿನಲ್ಲಿ ಮೂವರು ಯುವಕರು ರಾಜ್ಯದ ಕಲಬುರಗಿ ಮೂಲದವರಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಸೆಕ್ಯುರಿಟಿ ಗಾರ್ಡ್‌ ಕೆಲಸಕ್ಕೆಂದು ಏಜೆಂಟರ ಮೂಲಕ ರಷ್ಯಾಕ್ಕೆ ಹೋಗಿದ್ದ ಅವರನ್ನು ಅಲ್ಲಿನ ಖಾಸಗಿ ಸೈನ್ಯಕ್ಕೆ ಬಲವಂತವಾಗಿ ನೇಮಿಸಿ ರಷ್ಯಾ-ಉಕ್ರೇನ್ ಗಡಿಗೆ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ.

ಕಲಬುರಗಿ ಜಿಲ್ಲೆಯ ಮದ್ಬೂಲ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಸೈಯದ್ ನವಾಜ್ ಅಲಿ ಅವರ ಮಗ ಕೂಡಾ ಇದರಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದ್ದು, ಅವರ ಮಗನೊಂದಿಗೆ ಇತರ ಒಂಬತ್ತು ಯುವಕರು ಕೂಡಾ ಇದ್ದಾರೆ ಎಂದು ವರದಿ ಹೇಳಿದೆ. ಹೀಗಾಗಿ ತನ್ನ ಮಗ ಮತ್ತು ಅವರ ಸ್ನೇಹಿತರನ್ನು ಮರಳಿ ಭಾರತಕ್ಕೆ ಕರೆತರುವಂತೆ ಕ್ರಮ ಕೈಗೊಳ್ಳಲು ಸೈಯ್ಯದ್ ನವಾಜ್ ಅವರು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮತ್ತು ಕಲಬುರಗಿ ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ರೈತ ಹೋರಾಟದ ವೇಳೆ ಕೊಲ್ಲಲ್ಪಟ್ಟ ಯುವರೈತನ ಸಹೋದರಿಗೆ ಉದ್ಯೋಗ ಮತ್ತು 1 ಕೋಟಿ ರೂ. ಪರಿಹಾರ – ಪಂಜಾಬ್ ಸಿಎಂ

ಈ ಮಧ್ಯೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ತುರ್ತು ಕ್ರಮಕ್ಕೆ ಮನವಿ ಮಾಡಿದ್ದಾರೆ. ಪತ್ರದಲ್ಲಿ ಭಾರತೀಯರ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಪರಿಸ್ಥಿತಿಯನ್ನು ಅವರು ಒತ್ತಿ ಹೇಳಿದ್ದಾರೆ.

ಕಲಬುರಗಿಯ ಮೂವರು ಯುವಕರು ಮತ್ತು ತೆಲಂಗಾಣದ ಒಬ್ಬರು ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಉತ್ತಮ ಸಂಬಳದ ಆಮಿಷಕ್ಕೆ ಒಳಗಾಗಿ ರಷ್ಯಾಕ್ಕೆ ತೆರಳಿದ್ದರು. ಆದರೆ ಅಲ್ಲಿನ ಏಜೆಂಟ್ ರಷ್ಯಾ-ಉಕ್ರೇನ್ ಯುದ್ಧಕ್ಕಾಗಿ ಅವರನ್ನು ಖಾಸಗಿ ಮಿಲಿಟರಿ ಕಂಪನಿಗೆ ಬಲವಂತವಾಗಿ ನಿಯೋಜನೆ ಮಾಡಿದ್ದಾರೆ. “ಯುವಕರ ಪ್ರಾಣ ಅಪಾಯದಲ್ಲಿದ್ದು, ತಕ್ಷಣದ ಮಧ್ಯಪ್ರವೇಶದ ಅಗತ್ಯವಿದೆ” ಎಂದು ಖರ್ಗೆ ಹೇಳಿದ್ದು, ಗಂಭೀರ ಕ್ರಮ ತೆಗೆದುಕೊಳ್ಳುವಂತೆ ಜೈಶಂಕರ್ ಅವರನ್ನು ವಿನಂತಿಸಿದ್ದಾರೆ.

ನವಾಜ್ ಅಲಿ ಅವರು ತಮ್ಮ ಪತ್ರದಲ್ಲಿ ಆಳಂದ ತಾಲೂಕಿನ ನರೋಣಾ ಮೂಲದ ತಮ್ಮ ಮಗ ಸೈಯದ್ ಇಲ್ಯಾಸ್ ಹುಸೇನಿ ಮತ್ತು ಅವರ ಸ್ನೇಹಿತರಾದ ಅಬ್ದುಲ್ ನಯೀಮ್, ಮೊಹಮ್ಮದ್ ಸುಫಿಯಾನ್ ಮತ್ತು ಮೊಹಮ್ಮದ್ ಸಮೀರ್ ಅಹಮದ್ ದುಬೈ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಅವರು ಯೂಟ್ಯೂಬ್‌ನಲ್ಲಿ ರಷ್ಯಾದಲ್ಲಿ ಭದ್ರತಾ ಸಿಬ್ಬಂದಿಯ ಪೋಸ್ಟ್‌ಗಳ ಜಾಹೀರಾತನ್ನು ನೋಡಿದ್ದರು. ಅಲ್ಲಿ ನೇಮಕಗೊಂಡವರನ್ನು ರಷ್ಯಾದ ನಗರದಲ್ಲಿ ನಿಯೋಜಿಸಲಾಗುವುದು ಮತ್ತು ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ ಎಂದು ಜಾಹೀರಾತಿನಲ್ಲಿ ಹೇಳಲಾಗಿತ್ತು.

ಇದನ್ನೂ ಓದಿ: ದೆಹಲಿ ಚಲೋ ಹೋರಾಟಕ್ಕೆ ವಿಷಯಾಧಾರಿತ ಬೆಂಬಲ ಘೋಷಿಸಿದ ಎಸ್‌ಕೆಎಂ; ಯುವ ರೈತನ ಹತ್ಯೆಗೆ ದೇಶವ್ಯಾಪಿ ಪ್ರತಿಭಟನೆಗೆ ಕರೆ

ಹಾಗಾಗಿ, ನವಾಜ್ ಅಲಿ ಅವರ ಮಗ ಮತ್ತು ಇತರರು ಮುಖ್ಯ ಏಜೆಂಟ್ ಬ್ಬಾಬ್ ವೋಗ್ಲಾ ಮತ್ತು ಇತರ ಏಜೆಂಟರಾದ ಸುಫಿಯಾನ್, ಮೊಯಿನ್ ಮತ್ತು ಪೂಜಾ ಅವರನ್ನು ಭೇಟಿಯಾಗಿದ್ದಾರೆ. ಅಲ್ಲಿಂದ ಅವರು 2023ರ ಡಿಸೆಂಬರ್ 18ರಂದು ಏರ್ ಅರೇಬಿಯಾ ವಿಮಾನದಲ್ಲಿ ಚೆನ್ನೈ ಮೂಲಕ ರಷ್ಯಾಕ್ಕೆ ತೆರಳಿದ್ದಾರೆ. ನಾಲ್ವರನ್ನು ರಷ್ಯಾ-ಉಕ್ರೇನ್ ಗಡಿಯಲ್ಲಿರುವ ಯುದ್ಧ ವಲಯದಲ್ಲಿ ನಿಯೋಜಿಸಲಾಗಿದೆ ಎಂದು ಹೆಡ್ ಕಾನ್‌ಸ್ಟೆಬಲ್ ಸೈಯದ್ ನವಾಜ್ ಅಲಿ ಹೇಳಿದ್ದು, ಅವರನ್ನು ಮೋಸದಿಂದ ಕರೆಸಿದ ದುರ್ಷರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ  ಅವರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.

ಈ ವೇಳೆ ನವಾಜ್ ಅಲಿ ಅವರು ತಮ್ಮ ಮಗನ ವಿಡಿಯೋ ಕ್ಲಿಪ್ಪಿಂಗ್ ಅನ್ನು ತೋರಿಸಿದ್ದು, ಅದರಲ್ಲಿ ಅವರ ಮಗ ಮಿಲಿಟರಿ ದಿರಿಸು ಧರಿಸಿರುವುದು ದಾಖಲಾಗಿದೆ. ಅವರನ್ನು ಬಲವಂತವಾಗಿ ಸೈನ್ಯದಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ವಿಡಿಯೊದಲ್ಲಿ ಇಲ್ಯಾನ್ ಹುಸೇನಿ ಅವರ ಇಬ್ಬರು ಸ್ನೇಹಿತರು ತಮ್ಮ ನಾಲ್ಕನೇ ಸ್ನೇಹಿತ ಎಲ್ಲಿದ್ದಾರೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಅವರು ಮತ್ತು ಅವರ ಸ್ನೇಹಿತರು ಕೆಲಸ ಮಾಡುತ್ತಿರುವ ಅರಣ್ಯ ಪ್ರದೇಶವನ್ನು ತೋರಿಸಿದ್ದು, ಅದನ್ನುಅವರು “ಅಪಾಯಕಾರಿ ವಲಯ” ಎಂದು ಕರೆದಿದ್ದಾರೆ.

ವಿಡಿಯೊ ನೋಡಿ: 🔴 Liveಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ : 10ನೇ ದಿನ, ಫೆಬ್ರವರಿ 23

Donate Janashakthi Media

Leave a Reply

Your email address will not be published. Required fields are marked *