ಕಾಕಿನಾಡ: ಜಿಲ್ಲೆಯ ಜಿ.ರಾಗಂಪೇಟೆಯಲ್ಲಿ ಖಾದ್ಯ ತೈಲ ಕಾರ್ಖಾನೆಯಲ್ಲಿ ತೈಲ ಟ್ಯಾಂಕರ್ ಅನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ 7 ಮಂದಿ ಮರಣ ಹೊಂದಿರುವ ಧಾರೂಣ ಘಟನೆ ನಡೆದಿದೆ. ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ನಿಧನ ಹೊಂದಿರುವ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ತೈಲ ಟ್ಯಾಂಕರ್‌ಗಳಲ್ಲಿನ ವಿಷಕಾರಿ ಅನಿಲಗಳಿಂದ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಅನುಸರಿಸದೆ ಕಾರ್ಮಿಕರನ್ನು ನೇಮಿಸಿಕೊಂಡು ಕೆಲಸವನ್ನು ನಿರ್ವಹಿಸಲು ಬಿಟ್ಟಿರುವುದೇ ದುರಂತಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.
ಇದನ್ನು ಓದಿ: ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ಇಬ್ಬರು ಕಾರ್ಮಿಕರ ಸಾವು; ಪ್ರಕರಣ ದಾಖಲು
ಮೃತರನ್ನು ರಾಮರಾವ್, ಪ್ರಸಾದ್ ಜಗದೀಶ್, ವೆಚ್ಚಂಗಿ ಸಾಗರ್, ಬೊಂಜುಬಾಬು, ವೆಚ್ಚಿಂಗಿ ಕೃಷ್ಣ ಮತ್ತು ವೆಚ್ಚಂಗಿ ನರಸಿಂಹ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಮೃತರು ಪೆದ್ದಾಪುರಂ ಮಂಡಲದ ಪಾಡೇರು ಮತ್ತು ಪುಲಿಮೇರು ಮೂಲದವರು. ಓರ್ವ ವ್ಯಕ್ತಿ ಮೊದಲು ಟ್ಯಾಂಕ್ ಸ್ವಚ್ಛಗೊಳಿಸಲು ಪಾಡೇರುವಿನ ಕೃಷ್ಣ ಎಂಬ ವ್ಯಕ್ತಿ ಮುಂದಾಗಿದ್ದಾನೆ ಮತ್ತು ಸ್ವಚ್ಛತೆಯ ವೇಳೆ ಉಸಿರಾಟದ ಕೊರತೆಯಿಂದ ಟ್ಯಾಂಕಿನಲ್ಲಿ ಬಿದ್ದಾನೆ. ಆತನನ್ನು ರಕ್ಷಿಸಲು ಹೋದ ನರಸಿಂಹ ಮತ್ತು ಸಾಗರ್ ಸಹ ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಳಿಕ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಸಿರಿಯಾ-ಟರ್ಕಿ ಭೂಕಂಪನ; 4300ಕ್ಕೂ ಹೆಚ್ಚು ಮಂದಿ ಸಾವು; 7 ದಿನ ರಾಷ್ಟ್ರೀಯ ಶೋಕಾಚರಣೆ
ಮೃತರಲ್ಲಿ ಒಬ್ಬರು ಇತ್ತೀಚೆಗೆ ಮದುವೆಯಾಗಿದ್ದರು ಎಂದು ಆತನ ಸಹೋದ್ಯೋಗಿಗಳು ಹೇಳಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸದೇ ಕಾರ್ಮಿಕರನ್ನು ಇಂತಹ ಕೆಲಸದಲ್ಲಿ ನಿಯೋಜಿಸಿರುವುದು ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮತ್ತೊಂದೆಡೆ ಪೆದ್ದಾಪುರಂ ಪೊಲೀಸರು ದುರಂತದ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆಯೂ ಕಾರ್ಖಾನೆಯಲ್ಲಿ ಹಲವು ಅವಘಡಗಳು ಸಂಭವಿಸಿದ್ದು, ಮಾಲೀಕರ ನಿರ್ಲಕ್ಷ್ಯದಿಂದ ಕಾರ್ಮಿಕರು ಬೆಲೆ ತೆರಬೇಕಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸರ್ಕಾರ ಕೂಡಲೇ ಘಟನೆಗೆ ಸ್ಪಂದಿಸಿ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಗ್ರಾಮದ ಜನರ ಆಗ್ರಹವಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ