ಕೊಪ್ಪಳ: ಪ್ರಸ್ತುತ ಶೈಕ್ಷಣಿಕ ವರ್ಷದಿಂದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯು ಸ್ನಾತಕೋತ್ತರ ಪದವಿ ವಿಷಯಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಕೊಪ್ಪಳ ಮತ್ತು ಯಲಬುರ್ಗಾ ಸ್ನಾತಕೋತ್ತರ ಕೇಂದ್ರದಲ್ಲಿ ಇಲ್ಲಿವರೆಗೂ ಇದ್ದ ಎಂ.ಎ. ಪತ್ರಿಕೋದ್ಯಮ, ಎಂ.ಎ. ಕನ್ನಡ, ಎಂ.ಎಸ್.ಡಬ್ಲ್ಯೂ, ಯಲಬುರ್ಗಾದಲ್ಲಿ ರಾಜ್ಯಶಾಸ್ತ್ರ, ಇಂಗ್ಲೀಷ್, ಇತಿಹಾಸ ಮತ್ತು ಪುರತತ್ವ, ಅರ್ಥಶಾಸ್ತ್ರ ವಿಷಯಗಳನ್ನು ಕೈ ಬಿಟ್ಟಿರುವುದು ಖಂಡನೀಯ ಎಂದು ಎಸ್‌ಎಫ್‌ಐ ತಿಳಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರೂ ಹಾಗೂ ಕೊಪ್ಪಳ ಜಿಲ್ಲೆ ಉಸ್ತುವಾರಿ ಹಾಲಪ್ಪ ಆಚಾರ ಅವರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಸಂಘಟನೆಯ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಕೊಪ್ಪಳ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ವಿಶ್ವವಿದ್ಯಾಲಯದ ಇಂತಹ ಕ್ರಮದಿಂದ ಈ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ಕೊಪ್ಪಳ ಮತ್ತು ಯಲಬುರ್ಗಾ ಕೇಂದ್ರ ಬಿಟ್ಟು ಬೇರೆ ಕಡೆ ಹೋಗಿ ಕಲಿಯಲು ವಿದ್ಯಾರ್ಥಿಗಳಿಗೆ ಊಟ, ವಸತಿ, ಆರ್ಥಿಕ ತೊಂದರೆ ಎದುರಾಗಲಿದೆ. ಈ ಭಾಗದ ಅಭಿವೃದ್ಧಿಗಾಗಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ಕಡಿಮೆ ಇದ್ದು ಆ ಸಂಖ್ಯೆ ಹೆಚ್ಚಳ ಮಾಡಬೇಕೆಂಬ ಸರಕಾರದ ಮೂಲ ಉದ್ದೇಶಕ್ಕೆ ವಿಶ್ವವಿದ್ಯಾಲಯದ ಉಪಕುಲಪತಿಗಳ ಕ್ರಮವು ಉನ್ನತ ಶಿಕ್ಷಣಕ್ಕೆ ಎಳ್ಳುನೀರು ಬಿಟ್ಟಂತಾಗಿದೆ ಎಂದು ತಿಳಿಸಿದ್ದಾರೆ.
ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲಿಯಲು ಅನುಕೂಲವಾಗುವಂತೆ ಸರ್ಕಾರ ವಿದ್ಯಾರ್ಥಿಗಳಿಗಾಗಿ ಕೇಂದ್ರಗಳನ್ನು ಆರಂಭಿಸಿದೆ. ವಿದ್ಯಾರ್ಥಿಗಳು ವಿಷಯಗಳ ಆಯ್ಕೆಗಳನ್ನು ಕೈಬಿಟ್ಟಿರುವುದರಿಂದ ತೊಂದರೆಗಳು ಎದುರಾಗುತ್ತಿದೆ. ಮುಖ್ಯವಾಗಿ ಕನ್ನಡ ನಮ್ಮ ನಾಡಭಾಷೆ ಹಾಗೂ ಬಹುತೇಕರ ಮಾತೃಭಾಷೆ ಅದು ಅಂತಹ ವಿಷಯದಲ್ಲಿ ಈಗಾಗಲೇ 22 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಸಂವಿಧಾನದ ನಾಲ್ಕನೇ ಅಂಗ ಎಂದು ಗುರುತಿಸಲ್ಪಟ್ಟಿರುವ ಮಾಧ್ಯಮ ರಂಗದ ಪತ್ರಿಕೋದ್ಯಮ ವಿಷಯವನ್ನು ಕೈಬಿಟ್ಟಿರುವ ಹಿನ್ನೆಲೆ ನೋಡಿದರೆ ಈ ಭಾಗದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಕುಲಪತಿಗಳು ಉನ್ನತ ಶಿಕ್ಷಣವನ್ನು ನಿರಾಕರಣೆ ಮಾಡಲು ಹೊರಟಂತೆ ಕಾಣುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಸ್ನಾತಕೋತ್ತರ ಪದವಿ ವಿಷಯಗಳಿಗೆ ಸಂಬಂಧಿಸಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಿಯಲು ಆಸಕ್ತಿ ಇದ್ದರೂ ಸಹ ವಿಶ್ವವಿದ್ಯಾಲಯ ಅನ್ಯಾಯ ಎಸಗುತ್ತಿರುವುದು ಎಸ್‌ಎಫ್‌ಐ ಖಂಡಿಸಿದೆ. ಈಗಾಗಲೇ ಈ ಬಗ್ಗೆ ಸಂಘಟನೆಯು ಕೊಪ್ಪಳ ಜಿಲ್ಲಾ ಸಮಿತಿಯು ಕೊಪ್ಪಳ ಸ್ನಾತಕೋತ್ತರ ಕೇಂದ್ರ ನಿರ್ದೇಶಕರು ಮೂಲಕ ಈಗಾಗಲೇ ಒಂದು ಮನವಿ ಸಲ್ಲಿಸಿ ಒತ್ತಾಯ ಮಾಡಿರುತ್ತದೆ.
ಸಚಿವರು ಕೂಡಲೇ ಮುತುವರ್ಜಿ ವಹಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕೈಬಿಟ್ಟಿರುವ ವಿಷಯಗಳನ್ನು ಪುನಃ ಪ್ರಾರಂಭ ಮಾಡಬೇಕೆಂದು ಮನವಿ ಮಾಡಿದ್ದಾರೆ ಹಾಗೂ ಸ್ನಾತಕೋತ್ತರ ಪದವಿ ಶೈಕ್ಷಣಿಕ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಬೇಕೆಂದು ಆಗ್ರಹಿಸಿದ್ದಾರೆ.
ಇಂದು ಸಚಿವ ಹಾಲಪ್ಪ ಆಚಾರ್ ಅವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಿದ್ದಪ್ಪ ಎಂ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹಾಗು ವೈ.ಬಿ. ಬಂಡಿ ಇತರರು ಇದ್ದರು.