ಬೆಂಗಳೂರು: ಶಿಕ್ಷಣ ಇಲಾಖೆ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಲು ಸಂಪೂರ್ಣವಾಗಿ ಸೋತಿದ್ದು, ಪ್ರತಿನಿತ್ಯ ಒಂದಲ್ಲ ಒಂದು ಗೊಂದಲವನ್ನು ಸೃಷ್ಟಿಸುತ್ತಿದೆ. ಕಳೆದ ಎರಡು ಮೂರು ವರ್ಷಗಳಿಂದ ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಸಚಿವರು ಶಿಕ್ಷಣ ಇಲಾಖೆ ಸಾರಥ್ಯ ವಹಿಸಿಕೊಂಡ ನಂತರ ಒಂದಲ್ಲ ಒಂದು ಅವಾಂತರಗಳಿಗೆ ಕಾರಣವಾಗುತ್ತಿದೆ.
ಶಿಕ್ಷಣ ಇಲಾಖೆಯು, ಅಕ್ಟೋಬರ್ 19ರಂದು ಹೊರಡಿಸಿರುವ ಆದೇಶ ಸಂವಿಧಾನದ ಪರಿಚ್ಛೇಧ 21ಎ ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆರೋಪಿಸಿದೆ.
ರಾಜ್ಯದ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅಗತ್ಯವಿರುವ ಖರ್ಚುವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು ₹100 ಸಂಗ್ರಹಿಸಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್ಡಿಎಂಸಿ) ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ, ವೇದಿಕೆಯ ಸಂಸ್ಥಾಪಕ ಮಹಾಪೋಷಕ ಪ್ರೊ. ವಿ.ಪಿ ನಿರಂಜನಾರಾಧ್ಯ ಅವರು, ಉಚಿತ ಮತ್ತು ಕಡ್ಡಾಯ ಗುಣಾತ್ಮಕ ಶಿಕ್ಷಣ ಒದಗಿಸುವ ಪೂರ್ಣ ಜವಾಬ್ದಾರಿ ಸರಕಾರದ ಮೇಲಿರುವಾಗ, ಅದನ್ನು ಬಡ ಪಾಲಕರ ಹೆಗಲಿಗೆ ವರ್ಗಾಯಿಸುವುದು ಅಂತಾರಾಷ್ಟ್ರೀಯ ಕಾನೂನು, ಸಂವಿಧಾನ ಮತ್ತು ಶಿಕ್ಷಣ ಹಕ್ಕು ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಸರ್ಕಾರಿ ಶಾಲೆಗಳಿಗೂ ಹಬ್ಬಿದ ಡೊನೇಷನ್ ಹಾವಳಿ!
ಶಿಕ್ಷಣ ಹಕ್ಕು ಆಧಾರಿತ ನೆಲೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಬದಲು, ಸ್ವಲ್ಪ ಮಟ್ಟಿಗಾದರೂ ಪ್ರಗತಿಪರ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಶಿಕ್ಷಣ ವ್ಯವಸ್ಥೆಯನ್ನು ಧರ್ಮ ಹಾಗು ಅವೈಜ್ಞಾನಿಕ ನೆಲೆಯಲ್ಲಿ ಹಾಳುಗೆಡವಲಾಗುತ್ತಿದೆ ಎಂದಿದ್ದಾರೆ.
ಸಚಿವರು ಶಿಕ್ಷಣ ಒಂದು ಸಾಮಾಜಿಕ ಒಳಿತು ಹಾಗು ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಅದೊಂದು ಮೂಲಭೂತ ಹಕ್ಕೆಂದು ತಿಳಿದು ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೂರ್ಣವಾಗಿ ಸೋತಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿ ಶಾಲಾ ಶಿಕ್ಷಣ ಗೊಂದಲಮಯವಾಗಿದ್ದು, ವ್ಯವಸ್ಥೆ ಪೂರ್ಣವಾಗಿ ಹಳಿತಪ್ಪಿದೆ ಎಂದು ಪ್ರೊ. ವಿ.ಪಿ. ನಿರಂಜನಾರಾಧ್ಯ ಎಂದಿದ್ದಾರೆ.
ಸುತ್ತೋಲೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಮ್ಮ ಸಂವಿಧಾನಾತ್ಮಕ ಹಾಗು ನೆಲದ ಕಾನೂನುಗಳ ಅಡಿಯಲ್ಲಿ ಕಾರ್ಯನಿರ್ವಹಿಸಲು ಸಂಪೂರ್ಣ ವಿಫಲರಾಗಿದ್ದು ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಬಿಡುಗಡೆಗೊಳಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಒತ್ತಾಯಿಸಿದೆ.