ಬೇಲೂರು : ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದೆ. ಕಾಡಾನೆ ದಾಳಿಯಿಂದ ಇಬ್ಬರು ಸಾವನ್ನಪ್ಪಿರುವ ಘಟನೆ ಕಡೆಗರ್ಜಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಯ್ಯ (65) ಮತ್ತು ಈರಯ್ಯ (68) ಕಾಡಾನೆ ದಾಳಿಗೆ ಸಾವನ್ನಪ್ಪಿದ ಕಾಫಿ ತೋಟದ ಕಾರ್ಮಿಕರು.
ಈ ಹಿಂದೆ, ಇದೇ ರೀತಿಯ ಘಟನೆಯು ಆಲೂರು ಮತ್ತು ಸಕಲೇಶಪುರ ತಾಲ್ಲೂಕುಗಳಲ್ಲಿ ನಡೆದಿತ್ತು. ಇಂತಹ ಅಹಿತಕರ ಘಟನೆಯನ್ನು ತಡೆಯಲು ಅರಣ್ಯ ಇಲಾಖೆ ಕ್ರಮಗಳನ್ನು ತೆಗೆದುಕೊಂಡಿವೆ. ಅದಾಗಿಯೂ, ಕಾಡಾನೆ ದಾಳಿಗೆ ಬೇಲೂರು ತಾಲ್ಲೂಕಿನ ಕಡೆಗರ್ಜೆ ಗ್ರಾಮದ ಕಾಫಿ ತೋಟದ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಳೆದ ವಾರದಿಂದ ಈ ಭಾಗದಲ್ಲಿ ಆನೆಗಳು ಸಂಚಾರ ಮಾಡುತ್ತಿದ್ದು ಆತಂಕ ಸೃಷ್ಟಿಮಾಡಿದ್ದು ಕೂಲಿ ಕಾರ್ಮಿಕರು ಕಾಫಿ ತೋಟದ ಕೆಲಸಕ್ಕೆ ಹೋಗಲು ಭಯಬೀಳುವಂತಾಗಿದೆ.
ಕಾಡನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೃತ ಕಾರ್ಮಿಕರಿಗೆ ಪರಿಹಾರ ಜೊತೆಗೆ ಕಾಡಾನೆಯನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.