ಜ್ಯೋತಿ ಶಾಂತರಾಜು
ಯಜಮಾನರಿಲ್ಲ ಮಕ್ಕಳಿಲ್ಲ ಹೊಟ್ಟೆಪಾಡು ಏನ್ ಮಾಡಣವ್ವ ಕಡಲೆಕಾಯಿ ವ್ಯಾಪಾರ ಮಾಡ್ತೀನಿ ಎನ್ನುವ ನಿಂಗಮ್ಮ ಅಜ್ಜಿಗೆ ನಾರಯಣಪ್ಪ, ಚಿನ್ನಮ್ಮ, ಲಕ್ಷ್ಮಿ, ನರಸಮ್ಮ, ಚಿಕ್ಕ ವಯಸ್ಸಿನಲ್ಲಿ ತೀರಿದ ಒಂದು ಹೆಣ್ಣು ಮಗು ಸೇರಿ ನಾಲ್ಕು ಹೆಣ್ಣು ಒಂದು ಗಂಡು ಒಟ್ಟು ಐದು ಮಕ್ಕಳು ಹಾಗೂ ಏಳು ಜನ ಮೊಮ್ಮಕ್ಕಳಿದ್ದರು. ನಾರಾಯಣಪ್ಪನಿಗೆ ಬಿಪಿ ಹೆಚ್ಚಾಗಿ, ಚಿನ್ನಮ್ಮನಿಗೆ ಗಂಟಲು ಕ್ಯಾನ್ಸರ್ ಆಗಿ, ಲಕ್ಷ್ಮಿಗೆ ಜ್ವರ ಬಂದು ಹೀಗೆ ಮಕ್ಕಳು ಕಾಯಿಲೆ ಬಿದ್ದು ಹೆತ್ತವರು ವಯಸ್ಸಾಗಿ ಇವರೆಲ್ಲರೂ ತೀರಿ ಹೋಗಿದ್ದಾರೆ. ಮೊಮ್ಮಕ್ಕಳು ಮದುವೆ ಆಗಿ ಅವರವರ ಜೀವನ ನೋಡಿಕೊಂಡು ಹೋಗಿದ್ದಾರೆ. ಅವರ್ಯಾರೂ ಇದುವರೆಗೆ ಬಂದು ನೋಡಿಲ್ಲ ನನ್ನ ಕಷ್ಟಸುಖ ಕೇಳಿಲ್ಲ.
ನನ್ನ ಗಂಡ ಮದ್ದೂರಯ್ಯ ನಾನು ನಡದ್ರೆ ನನ್ನ ಕಾಲು ಮಣ್ಣಾಗುತ್ತೇನೋ ಅನ್ನುವಂಗೆ ನೋಡ್ಕೋತಿದ್ರು. ಮದ್ವೆಯಾದಾಗ ನಾನು ಚಿಕ್ಕವಳಾದ್ದರಿಂದ ನನ್ನಿಂದ ಅಡುಗೆ ಕೂಡ ಮಾಡಿಸ್ತಿರಲಿಲ್ಲ, ಬೆಳಿಗ್ಗೆ ಬೇಗ ಎದ್ದು ಮಕ್ಕಳಿಗೆ ಸ್ನಾನ ಮಾಡಿಸಿ ಅಡುಗೆ ಮಾಡಿಟ್ಟು ಅವರು ಕೆಲಸಕ್ಕೆ ಹೋಗ್ತಿದ್ರು. ನಾನು ಮನೇಲಿದ್ದು ಮಕ್ಳನ್ನ ನೋಡ್ಕಂಡಿರ್ತಿದ್ದೆ. ಆದ್ರೆ ಆ ದ್ಯಾವ್ರು ಈ ಸುಖಾನ ಬೇಗನೇ ಕಿತ್ಕಂಬಿಟ್ಟ. ಒಂದಿನ ಅವ್ರು ಕೆಲಸಕ್ಕೆ ಹೋದಾಗ ತೆಂಗಿನ ಮರ್ದಿಂದ ಬಿದ್ದು ತೀರೋಗ್ಬಿಟ್ರು. ಅವಾಗಿಂದ ನನ್ನ ಬದುಕು ದಿನದಿನಕ್ಕೂ ನರಕವಾಯ್ತಾ ಹೋಯ್ತು. ಮಕ್ಳನ್ನ ಬೆಳಸೋಕೆ ತುಂಬಾನೇ ತೊಂದ್ರೆಯಾಯ್ತು. ಮನೆ ಹೊರಗಿನ ಬೀದಿಗಳನ್ನೇ ನೋಡ್ದಿರೋಳು ಬೀದೀಲೆ ಬದುಕೋಹಾಗಾಯ್ತು.
ಮೊದ್ಲೆಲ್ಲ ಒಂಚೂರು ಒಳ್ಳೆ ವ್ಯಾಪಾರವಾಗ್ತಿತ್ತು. ಈಗ ಜನ ವ್ಯಾಪಾರ ಮಾಡೋದಿರ್ಲಿ ಸರಿಯಾಗಿ ಮಾತಾಡೋದೂ ಕಷ್ಟ. ಯಾರೋ ಒಂದಷ್ಟು ಪುಣ್ಯಾತ್ಮರ ಐದತ್ತು ರೂಪಾಯಿಯ ವ್ಯಾಪಾರ ಹೊಟ್ಟೆಗೆ ಗಂಜಿಯಾಯ್ತದೆ.