ಕಡಕೋಳರ ಪುಸ್ತಕ ಬಿಡುಗಡೆಗೆ ಅಡ್ಡಿ, ನಿಂದನೆ

ಕಲಬುರಗಿ: ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಅವರ ‘ಕಡಕೋಳ ನೆಲದ ನೆನಪುಗಳು’ ಕೃತಿಯ ಬಿಡುಗಡೆಗೆ ಗುಂಪೊಂದು ಅಡ್ಡಿಪಡಿಸಿದ್ದು, ಅಲ್ಲದೇ ಮನಸೋಇಚ್ಛೆ ನಿಂದಿಸಿದ ಘಟನೆ ಶನಿವಾರ ಯಡ್ರಾಮಿ ತಾಲ್ಲೂಕಿನ ಕಡಕೋಳದಲ್ಲಿ ನಡೆದಿದೆ.

‘ಕಡಕೋಳ ಮಡಿವಾಳಪ್ಪನವರ ಮಠದಲ್ಲಿ ಆಯೋಜಿಸಿದ್ದ ಮಡಿವಾಳಪ್ಪನವರ ದ್ವಿಶತಮಾನೋತ್ಸವ ಮತ್ತು ಮಠದ ಮಹಾದ್ವಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಲು ಉದ್ದೇಶಿಸಲಾಗಿತ್ತು.

10 ಕ್ಕೂ ಹೆಚ್ಚು ಜನರಿದ್ದ ಗುಂಪು ಕೃತಿ ಬಿಡುಗಡೆಗೂ ಮುನ್ನ ವೇದಿಕೆ ಏರಿ ಗಲಾಟೆ ಮಾಡಿದರು. ಯಾವುದೇ ಕಾರಣಕ್ಕೂ ಕೃತಿ ಬಿಡುಗಡೆಯಾಗಬಾರದು ಎಂದು ಪಟ್ಟು ಹಿಡಿದರು. ಅಷ್ಟಕ್ಕೆ ಸುಮ್ಮನಾಗದ ಅವರು ಅತ್ಯಂತ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದರು. ವೇದಿಕೆಯಿಂದ ಕೆಳಗಿಳಿಯುವಂತೆ ಎಳೆದಾಡಿದರು’ ಎಂದು ಮಲ್ಲಿಕಾರ್ಜುನ ಕಡಕೋಳ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

‘ಕೃತಿಯಲ್ಲಿ ಯಾವ ಪುಟದಲ್ಲಿ ಏನು ತಪ್ಪಾಗಿದೆ ಎಂಬುದನ್ನು ತಿಳಿಸಿ. ಸಂವಾದದ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಪರಿಪರಿಯಾಗಿ ಬೇಡಿಕೊಂಡರೂ ಗುಂಪಿಗೆ ಕೇಳುವ ಮನಸ್ಥಿತಿ ಇರಲಿಲ್ಲ. ನನ್ನೂರಲ್ಲಿ ಕೃತಿ ಬಿಡುಗಡೆಯಾಗಬೇಕೆಂದು ತುಂಬಾ ಆಸೆಪಟ್ಟಿದ್ದೆ. ಸಂಭ್ರಮಿಸಿದ್ದೆ. ಆದರೆ, ಕಾರ್ಯಕ್ರಮವನ್ನೇ ರದ್ದುಪಡಿಸಬೇಕಾಯಿತು. ತುಂಬಾ ನೋವಾಯಿತು’ ಎಂದು ತಮಗಾದ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಘಟನೆ ಕುರಿತು ಜನರು ತೀವ್ರವಾಗಿ ಖಂಡಿಸಿದ್ದಾರೆ. ಇಂಥ ಘಟನೆ ನಡೆದಿರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಾಹಿತಿ ಯೋಗೇಶ್ ಮಾಸ್ಟರ್ ಪ್ರತಿಕ್ರಿಯೆ ನೀಡಿದ್ದು, ತಪ್ಪು ಸರಿಗಳನ್ನು ತೀರ್ಮಾನಿಸಲು ಇವರು ಯಾರು? ಬೇಕಾಗಿದ್ದರೆ ಓದಲಿ, ಬೇಡದಿರೆ ಬಿಡಲಿ. ಆಕ್ಷೇಪಿಸುವಂತಿದ್ದರೆ ವೈಚಾರಿಕವಾಗಿ ಮತ್ತು ಸಾಹಿತ್ಯಕವಾಗಿಯೇ ಟೀಕಿಸಲಿ. ದಿಗ್ಬಂಧನ ಮಾಡಲು ಇವರು ಯಾರು?ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ.ಇದು ಸಂವಿಧಾನಾತ್ಮಕವಾಗಿರುವ ಪ್ರಜಾಪ್ರಭುತ್ವದ ರಾಜ್ಯವೋ? ಗೂಂಡಾ ರಾಜ್ಯವೋ? ಎಂದು ಆಕ್ರೋಶ ಹೊರ ಹಾಕಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *