ಚೆನ್ನೈ: ಶಿವಗಂಗಾ ಜಿಲ್ಲೆಯ ಕಚನಾಥಂ ಗ್ರಾಮದಲ್ಲಿ 2018ರಲ್ಲಿ ನಡೆದ ಮೂವರು ದಲಿತರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ 27 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ತಮಿಳುನಾಡಿನ ಶಿವಗಂಗಾ ವಿಶೇಷ ನ್ಯಾಯಾಲಯವು ಶುಕ್ರವಾರ(ಆಗಸ್ಟ್ 05) ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.
ಮೇ 28, 2018 ರಂದು, ಕಚನಾಥಂ ಗ್ರಾಮದಲ್ಲಿ ಮೂವರು ದಲಿತರನ್ನು ಹತ್ಯೆಗೈದ ಎಲ್ಲಾ 27 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಗ್ರಾಮದಲ್ಲಿ ದೇವಸ್ಥಾನದ ಉತ್ಸವದ ವಿವಾದದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅರುಮುಗಂ (65), ಷಣ್ಮುಗನಾಥನ್ (31) ಮತ್ತು ಚಂದ್ರಶೇಖರನ್ (34) ಅವರನ್ನು ಮತ್ತೊಂದು ಸಮುದಾಯಕ್ಕೆ ಸೇರಿದ ಮಂದಿ ಕೊಲೆಗೈದಿದ್ದರು.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಂಗಾಡು ಗ್ರಾಮದ ಸುಮನ್, ಅರುಣಕುಮಾರ್, ಚಂದ್ರಕುಮಾರ್, ಅಗ್ನಿರಾಜ್, ರಾಜೇಶ್ ಸೇರಿದಂತೆ 33 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರಲ್ಲಿ ಇಬ್ಬರು ವಿಚಾರಣೆ ವೇಳೆ ಸಾವನ್ನಪ್ಪಿದ್ದಾರೆ. ಮೂವರು ಬಾಲಕಋು ಮತ್ತು ಮತ್ತೊಬ್ಬರು ಪರಾರಿಯಾಗಿದ್ದಾರೆ. ಇದರಿಂದ ಉಳಿದ 27 ಮಂದಿಯ ವಿಚಾರಣೆಯನ್ನು ಶಿವಗಂಗಾ ಸಮಗ್ರ ನ್ಯಾಯಾಲಯ ಸಂಕೀರ್ಣದಲ್ಲಿರುವ ದೌರ್ಜನ್ಯ ತಡೆ ನ್ಯಾಯಾಲಯದಲ್ಲಿ ನಡೆಸಲಾಗಿತ್ತು.
ಆಗಸ್ಟ್ 1 ರಂದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣಗಳ ವಿಶೇಷ ವಿಚಾರಣೆಗಾಗಿ ವಿಶೇಷ ನ್ಯಾಯಾಲಯವು ಪ್ರಕರಣದ 27 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು.
ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲು ಆಗಸ್ಟ್ 3 ರಂದು ವಿಚಾರಣೆ ನಡೆದಿದೆ. ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಶಿವಗಂಗಾ ಪೊಲೀಸ್ ವರಿಷ್ಠಾಧಿಕಾರಿಗಳ ಮನವಿ ಮೇರೆಗೆ 27 ಆರೋಪಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು.
ಅಂದು ನಡೆದ ಭೀಕರ ಘರ್ಷಣೆಯಲ್ಲಿ ಹಲವಾರು ದಲಿತರಿಗೆ ಗಾಯಗಳಾಗಿತ್ತು. ಗಾಯಗೊಂಡವರಲ್ಲಿ ತನಶೇಖರನ್ (32) ಎಂಬುವವರು ಘಟನೆ ನಡೆದು ಒಂದೂವರೆ ವರ್ಷಗಳ ನಂತರ ನಿಧನರಾದರು.