ಕಾವಿಯ ಹೊದ್ದವನ ಬಳಿಯ ನ್ಯಾಯ…

ಭಾವನ ಟಿ.

ಕಾವಿಯ ಹೊದ್ದವನಿಗೆ
ಮುಟ್ಟಿನ ಕೆಂಬಣ್ಣ ತಾಕುವಂತಿಲ್ಲ
ಗರ್ಭದೊಳಗಿನ ಮೊಟ್ಟೆ
ಮನಕ್ಕಂಟಿ ಮರಿಮಾಡುವಂತಿಲ್ಲ…

ಮೊಟ್ಟೆ ಮರಿಯಾದರೆ,
ರೆಕ್ಕೆ ಬಲಿತು
ಜಗಕ್ಕೆ ತಿಳಿಯುವಂತೆ ರೆಕ್ಕೆ ಬಿಚ್ಚಿ ಹಾರಾಡಿ
ಎಲ್ಲಿ ನನ್ನ ವೀರ್ಯದ ಹೆಸರಿಗೆ ಬಸಿರೆಂಬ
ಬದಲಿ ನಾಮಕರಣ ಮಾಡಿಯಾವೆಂಬ ಭಯ..

ಆದರೆ ಗೌರವ – ಘನತೆಯ ಮರೆಯಲ್ಲಿ
ತ್ಯಾಗವ ಧರಿಸಿರುವ ಸೋಗಿನಲ್ಲಿ
ಮನುಷ್ಯತ್ವದ ಕಗ್ಗೊಲೆಗಯ್ಯುತ್ತಾ,

ಪುಟ್ಟ ಪುಟ್ಟ ಯೋನಿಗಳೊಂದಿಗೆ ಚೆಲ್ಲಾಟವಾಡಲು
ಇಂತಿಷ್ಟು ಮುಜುಗರವಿಲ್ಲದೇ,
ಶಿಶ್ನದ ದ್ರವದ ಅಂಟು ಸ್ವಲ್ಪವೂ ಆರದಂತೆ
ಹೆಮ್ಮೆಯಿಂದ ನೋಡಿಕೊಳ್ಳುತ್ತಾನೆ…

ರಕ್ಷಕನೆಂಬ ಹಣೆಪಟ್ಟಿಯ ಎಲ್ಲರೆದಿರು ಹಚ್ಚಿಕೊಳ್ಳುತ್ತಾ
ಒಂಟಿ ಕತ್ತಲ ಕೋಣೆಯಲ್ಲಿ
ಪುಟ್ಟ ಕಣ್ಣುಗಳಿಗೆ ಮತ್ತಷ್ಟು
ಕಗ್ಗತ್ತಲನ್ನು ತೋಡಿಸುತ್ತಾ,
ಭೀಕರ ಬರಗಾಲದಲ್ಲಿ ತುತ್ತನ್ನಕ್ಕೆ ಪರದಾಡುವ
ಭಕ್ಷಕನ ಅವತಾರವ ತಾಳುತ್ತಾನೆ
ಯಾರಿಗೂ ತಿಳಿಯದಂತೆ…

ತಪ್ಪು ತಪ್ಪು ಕಾವಿಯ ಹೊದ್ದವನ ಬಳಿ
ಅನ್ಯಾಯ ಸುಳಿಯುವಂತಿಲ್ಲ
ಬೇಕಾದರೆ ಅವನೇ ಘೋಷಾದೊಳಗಿನ
ಅನ್ಯಾಯಕ್ಕೆ ನ್ಯಾಯವೆಂದೂ ಪ್ರತಿಬಿಂಬಿಸಬಹುದು…

Donate Janashakthi Media

Leave a Reply

Your email address will not be published. Required fields are marked *