ಕಾಡು ಪ್ರಾಣಿಗಳ ದಾಳಿ; ಹೆಚ್ಚಿನ ಪರಿಹಾರ: ಬಸವರಾಜ್‌ ಬೊಮ್ಮಾಯಿ

  • ಮುಂದಿನ ಮೂರು ವರ್ಷಗಳ ಕಾಲ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಯಾವುದೇ ಗೊಂದಲ ಬೇಡ

ಮಡಿಕೇರಿ: ‘ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ಹೆಚ್ಚಿನ ಪರಿಹಾರ ನೀಡಬೇಕೆಂಬುದು ರೈತರ ಬೇಡಿಕೆಯಾಗಿದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದರು.

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಆನೆ ಹಾಗೂ ಮಾನವ ಸಂಘರ್ಷ ತೀವ್ರವಾಗಿದೆ. ಆನೆ ದಾಳಿಯಿಂದ ಜೀವಹಾನಿ ಹಾಗೂ ಕಾಫಿ ತೋಟ ನಾಶವಾಗುತ್ತಿದೆ. ರೈತರ ಪ್ರತಿಭಟನೆ ಮತ್ತಿತರ ಕಾರಣಕ್ಕೆ ಕಾನೂನು ಸುವ್ಯವಸ್ಥೆಯ ಸಮಸ್ಯೆ ಆಗಲಿದೆ. ಆಗ ಪೊಲೀಸರೇ ಪರಿಸ್ಥಿತಿ ನಿಭಾಯಿಸಬೇಕು. ಆದ್ದರಿಂದ, ಪರಿಹಾರ ಹೆಚ್ಚಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಜೊತೆಗೆ ಚರ್ಚಿಸುತ್ತೇನೆ. ಆದಷ್ಟು ಬೇಗ ತೀರ್ಮಾನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಕೊಡಗಿನಲ್ಲಿ ಹೋಂಸ್ಟೇ ಹಾಗೂ ರೆಸಾರ್ಟ್‌ಗಳಿವೆ. ಅಲ್ಲಿ ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯಕೂಡದು. ನಿಗಾ ವಹಿಸುವಂತೆಯೂ ಪೊಲೀಸರಿಗೆ ಸೂಚಿಸಿದ್ದೇನೆ. ಡ್ರಗ್ಸ್‌ ಮುಕ್ತ ರಾಜ್ಯಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಕೋವಿಡ್‌–19 ಹಾಗೂ ಭೂಕುಸಿತದ ಸಂದರ್ಭದಲ್ಲಿ ಜಿಲ್ಲೆಯ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಇತರೆ ಇಲಾಖೆಗಳೊಂದಿಗೆ ಸಮನ್ವಯತೆ ಕಾಪಾಡಿಕೊಂಡು, ಕೆಲಸ ಮಾಡಿದ್ದು ವಿಶೇಷ. ತೊಂದರೆಯಲ್ಲಿದ್ದ ಜನರಿಗೆ ನೆರವು ನೀಡಿದ್ದಾರೆ. ಇಲಾಖೆ ಸಿಬ್ಬಂದಿ ಶ್ಲಾಘನೀಯ ಕೆಲಸ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯು ಗುಡ್ಡಗಾಡು ಪ್ರದೇಶ. ಮನೆಗಳೂ ದೂರ ದೂರ ಇವೆ. ಈ ಭೌಗೋಳಿಕ ಪ್ರದೇಶದಲ್ಲಿ ಪೊಲೀಸರಿಗೆ ಕರ್ತವ್ಯ ನಿರ್ವಹಣೆ ಮಾಡುವುದು ಸವಾಲು. ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಬಂಧನವಾಗಿರುವ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ತನಿಖೆಯಲ್ಲಿ ಲೋಪದೋಷ ಆಗಬಾರದು. ತನಿಖೆ ಉತ್ತಮವಾಗಿರಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

ಮುಂದಿನ ಮೂರು ವರ್ಷಗಳ ಕಾಲ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು.

ಜಿಲ್ಲಾವಾರು ಪರಿಶೀಲನೆ: ಸರ್ಕಾರ ರಚನೆಯಾದ ಆರಂಭದಲ್ಲಿ ವಲಯವಾರು ಪೊಲೀಸ್‌ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಇದೀಗ ಜಿಲ್ಲಾವಾರು ಪರಿಶೀಲನೆ ನಡೆಸುತ್ತಿದ್ದೇನೆ. ಕೊಡಗು ಜಿಲ್ಲೆಯ ಅಪರಾಧ ಪ್ರಕರಣಗಳ ಪತ್ತೆ ಹಚ್ಚುವಿಕೆ, ಜಿಲ್ಲೆಯ ಕಾನೂನು ಸುವ್ಯವಸ್ಥೆ, ಇಲಾಖೆ ಕಟ್ಟಡಗಳ ಸ್ಥಿತಿಗತಿ ಹಾಗೂ ಸಿಬ್ಬಂದಿ ಮಾಹಿತಿ ಪಡೆದುಕೊಂಡಿರುವೆ ಎಂದು ಗೃಹ ಸಚಿವರು ಹೇಳಿದರು.

ನೇಮಕಾತಿ: ಸಿವಿಲ್‌ ಹಾಗೂ ಡಿಎಆರ್‌ ಘಟಕದಲ್ಲಿ ಕೆಲವು ಸಿಬ್ಬಂದಿ ಕೊರತೆಯಿದೆ. ಶೀಘ್ರದಲ್ಲೇ ನೇಮಕಾತಿ ಮಾಡಲಾಗುವುದು. ಈ ವರ್ಷ ಶೇ 70ರಷ್ಟು ಸಿಬ್ಬಂದಿ ನೇಮಕಾತಿ ಮಾಡಲಾಗುವುದು. ಕೊಡಗು ಜಿಲ್ಲೆಯ ಪೊಲೀಸ್‌ ಇಲಾಖೆಯನ್ನು ಬಲಪಡಿಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ವಲಯದ ಪೊಲೀಸ್‌ ಮಹಾನಿರ್ದೇಶಕ ವಿಪುಲ್‌ ಕುಮಾರ್, ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಜರಿದ್ದರು.

ಕೊಡಗಿನಲ್ಲಿ 3ನೇ ಎಎನ್‌ಎಫ್‌ ಕ್ಯಾಂಪ್‌

‘ತಮಿಳುನಾಡು, ಕೇರಳಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆ ಕಂಡುಬಂದಿದ್ದು ರಾಜ್ಯದಲ್ಲೂ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ಕೊಡಗಿನಲ್ಲಿ ಎರಡು ನಕ್ಸಲ್‌ ನಿಗ್ರಹ ಪಡೆಯ (ಎಎನ್‌ಎಫ್‌) ಎರಡು ಕ್ಯಾಂಪ್‌ಗಳಿದ್ದು ಶೋಧ ಕಾರ್ಯಕ್ಕೆ ನೆರವಾಗಲು ಮತ್ತೊಂದು ಎಎನ್‌ಎಫ್‌ ಕ್ಯಾಂಪ್‌ಗೆ ಅನುಮತಿ ನೀಡಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಲ್ಲಿ ಶುಕ್ರವಾರ ಹೇಳಿದರು.

‘ಗಡಿಯಾಚೆಗೆ ನಡೆಯುತ್ತಿರುವ ನಕ್ಸಲ್‌ ಚಟುವಟಿಕೆಯ ಪರಿಣಾಮ ರಾಜ್ಯದ ಮೇಲೂ ಆಗುತ್ತಿದ್ದು, ನಿಗಾ ವಹಿಸಲು ಗಡಿ ಜಿಲ್ಲೆಗಳ ಪೊಲೀಸರಿಗೆ ಸೂಚಿಸಲಾಗಿದೆ. ಕೊಡಗಿನಲ್ಲಿ 3ನೇ ಕ್ಯಾಂಪ್‌ ಸ್ಥಾಪನೆಗೆ ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು. ನ.3ರಂದು ವಯನಾಡು ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಕೊಡಗಿನ ಗಡಿಯಲ್ಲಿ ಶೋಧ ಕಾರ್ಯ ಚುರುಕು ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಕ್ರಮ ಗೋವು ಸಾಗಣೆ ಹಾಗೂ ಗೋಹತ್ಯೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ‘ವಿಶೇಷ ಕಾರ್ಯಪಡೆ’ ರಚಿಸಲು ಚಿಂತಿಸಲಾಗಿದೆ’ ಎಂದು ಗೃಹ ಸಚಿವರು ಹೇಳಿದರು.

ತಜ್ಞರೊಂದಿಗೆ ಚರ್ಚೆ: ‘ಮದುವೆಗಾಗಿ ಮತಾಂತರ ಆಗುತ್ತಿರುವುದು ಸಾಮಾಜಿಕ ಪಿಡುಗಾಗಿದೆ. ಅದನ್ನು ತಡೆಯಲು ರಾಜ್ಯದಲ್ಲೂ ಕಾನೂನಿನ ಅಗತ್ಯವಿದ್ದು ಸಂವಿಧಾನ ತಜ್ಞರೊಂದಿಗೆ ಚರ್ಚಿಸಿ ಕಾನೂನು ಜಾರಿಗೆ ತರಲಾಗುವುದು. ಅದರಲ್ಲಿ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ’ ಎಂದು ಸಚಿವರು ಪ್ರತಿಕ್ರಿಯಿಸಿದರು.

ಧ್ವನಿವರ್ಧಕದ ನಿಷೇಧ ಆದೇಶ: ಡಿಜಿಪಿಯೊಂದಿಗೆ ಚರ್ಚೆ ‘ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧಕ್ಕೆ ಸಂಬಂಧಿಸಿದಂತೆ ಡಿಜಿಪಿ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಕೊಡಗಿಗೆ ಬಂದ ಬಳಿಕ ನನಗೆ ಈ ಮಾಹಿತಿ ತಿಳಿಯಿತು. ಯಾವುದೇ ಆದೇಶ ಮಾಡಿಲ್ಲ. ಬೆಂಗಳೂರಿಗೆ ತೆರಳಿದ ಬಳಿಕ ಪೊಲೀಸ್‌ ಮಹಾನಿರ್ದೇಶಕರ ಜೊತೆಗೆ ಚರ್ಚಿಸುತ್ತೇನೆ’ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಡಿ.ಜೆ ಹಳ್ಳಿ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಸಂಪತ್‌ರಾಜ್‌ ಬಂಧನಕ್ಕೆ ತಂಡ ರಚಿಸಲಾಗಿದೆ. ಶೀಘ್ರವೇ ಅವರ ಬಂಧನವಾಗಲಿದೆ ಎಂದು ನುಡಿದರು.

Donate Janashakthi Media

Leave a Reply

Your email address will not be published. Required fields are marked *