ಜೂನ್‌-ಸೆಪ್ಟೆಂಬರ್‌ ವಾಡಿಕೆಯಷ್ಟು ಮಳೆಯಾಗುವ ಸೂಚನೆ: ಹವಾಮಾನ ಇಲಾಖೆ

ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ 2024ರ ಮುಂಗಾರು ಅವಧಿ ಜೂನ್‌-ಸೆಪ್ಟೆಂಬರ್‌ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಈಗಾಗಲೇ ಮುನ್ಸೂಚನೆ ನೀಡಿದೆ. ಅಲ್ಲದೇ ಹಿಂಗಾರು ಮಳೆಯೂ ಕೆಲವು ಜಿಲ್ಲೆಗಳಲ್ಲಿ ಸುರಿಯುತ್ತಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಸಂತಸ ತಂದಿದೆ. ಜೂನ್‌

ಜೂನ್‌ 10ರೊಳಗೆ ನೈಋತ್ಯ ಮುಂಗಾರು ರಾಜ್ಯಕ್ಕೆ ಪ್ರವೇಶಿಸಿಸುವ ನಿರೀಕ್ಷೆ ಇದೆ. ಮುಂಗಾರು ಆರಂಭಕ್ಕೂ ಮುನ್ನವೇ ಕರ್ನಾಟಕ ಸರ್ಕಾರ ಪೂರ್ವ ತಯಾರಿಗಳ ಕುರಿತು ವಿವಿಧ ಇಲಾಖೆಗಳಿಗೆ ಸುತ್ತೋಲೆಯ ಮೂಲಕ ಮಾಹಿತಿ ನೀಡಿದೆ.

ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ ಮತ್ತು ನೋಂ & ಮು) ಸರ್ಕಾರದ ಉಪ ಕಾರ್ಯದರ್ಶಿ ಎಸ್. ಆರ್. ಶಿವಶಂಕರ್‌ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ 2024ನೇ ಸಾಲಿನ ಮುಂಗಾರು/ ಪೂರ್ವ ಮುಂಗಾರು ಮಳೆ ಅವಧಿಯ ಪೂರ್ವ ಸಿದ್ಧತೆ ಕುರಿತು ಸಲಹೆ ಸೂಚನೆಗಳು ಎಂಬ ವಿಷಯವನ್ನು ಒಳಗೊಂಡಿದೆ.

ಇದನ್ನೂ ಓದಿ: ನಗರದಲ್ಲಿ ಮುಂದಿನ ಎರಡು ವಾರಗಳ ಕಾಲ ಮಳೆಯಾಗುವ ಸಾಧ್ಯತೆ, ತಾಪಮಾನ ಇಳಿಕೆ

ಸುತ್ತೋಲೆಯ ವಿವರಗಳು: 2024ರ ಏಪ್ರಿಲ್ 15ರಂದು ಭಾರತೀಯ ಹವಾಮಾನ ಇಲಾಖೆ ಹೊರಡಿಸಿದ ನೈಋತ್ಯ ಮಾನ್ಸೂನ್-2024ರ ಮೊದಲ ಹಂತದ ಕಾರ್ಯಾಚರಣೆಯ ದೀರ್ಘ ವ್ಯಾಪ್ತಿಯ ಮುನ್ಸೂಚನೆಯ ಪ್ರಕಾರ ಒಟ್ಟಾರೆಯಾಗಿ ದೇಶದಾದ್ಯಂತ ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿ ಇರುತ್ತದೆ. ಅಂದರೆ ದೀರ್ಘಾವಧಿ ಸರಾಸರಿಯು ಶೇ.104ಕ್ಕಿಂತ ಹೆಚ್ಚು ಇದೆ.

ಪ್ರಾದೇಶಿಕ ವಿತರಣೆಯು ಕರ್ನಾಟಕ ಸೇರಿದಂತೆ ಭಾರತದ ಪರ್ಯಾಯ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆಯನ್ನು ಸೂಚಿಸುತ್ತದೆ. ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಉಂಟಾದಲ್ಲಿ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಹಾನಿಯನ್ನು ತಗ್ಗಿಸಲು ಮುಂಗಾರು ಪೂರ್ವದಲ್ಲಿ ಪೂರ್ವ ಸಿದ್ಧತೆ/ ಸನ್ನದ್ಧತೆ ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆ ಎಂದು ಸುತ್ತೋಲೆ ಹೇಳಿದೆ.

ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಹಂತದ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತೆ ಸಭೆಗಳನ್ನು ಏರ್ಪಡಿಸಿ ಈ ಕೆಳಕಂಡ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಿ ಹಾಗೂ ಸಿದ್ಧತೆಗಳ ಬಗ್ಗೆ ಸೂಚನೆಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಯಾವುದೇ ಜಿಲ್ಲೆಯಲ್ಲಿ ವಿಪತ್ತುಗಳಿಗೆ ತುತ್ತಾಗುವಂತಹ ಪ್ರದೇಶಗಳನ್ನು ಗುರುತಿಸಿ ಸ್ಥಳೀಯ ಸಮುದಾಯಕ್ಕೆ ಅರಿವು ಮೂಡಿಸುವ ಕರ್ತವ್ಯ/ ಜವಾಬ್ದಾರಿ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ, ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮೌಲ್ಯ ಮಾಪನದ ಮೇಲ್ವಿಚಾರಣೆ ಮತ್ತು ಪರಾಮರ್ಶೆ ನಡೆಸಬೇಕು ಎಂದು ತಿಳಿಸಲಾಗಿದೆ.

ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಇಲಾಖೆಗಳು ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರಗಳನ್ನು ಸುಸಜ್ಜಿತವಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳುವುದು. ಮುಂಗಾರಿನಲ್ಲಿ ಆಗಾಗ್ಗೆ ವಿಪತ್ತುಗಳಿಗೆ (ಪ್ರವಾಹ/ ಭೂಕುಸಿತ) ತುತ್ತಾಗುವಂತಹ ತಾಲ್ಲೂಕು ಕೇಂದ್ರಗಳಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯುವುದು, ಅವಶ್ಯವೆನಿಸಿದ್ದಲ್ಲಿ 24/7 ಸಕ್ರಿಯಗೊಳಿಸುವುದು.

ವಿವಿಧ ಹಂತಗಳಲ್ಲಿ ವಿಪತ್ತು ನಿರ್ವಹಣೆಯಲ್ಲಿ ತೊಡಗಿರುವ ಅಧಿಕಾರಿಗಳ ಹೆಸರು, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆಗಳನ್ನೊಳಗೊಂಡ ಮಾಹಿತಿ ಸಿದ್ಧಪಡಿಸಿ, ಎಲ್ಲರನ್ನೂ ಒಳಗೊಂಡ ವಾಟ್ಸ್ ಆಪ್ ಗ್ರೂಪ್ ಮಾಡುವುದು. ಮುಂಗಾರು ಮಳೆ ಅವಧಿಯ ಮುಂಚಿತವಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರವರ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಮನದಟ್ಟು ಮಾಡುವುದು ಎಂದು ಸುತ್ತೋಲೆ ಹೇಳಿದೆ.

ಜಿಲ್ಲೆಯ ಎಲ್ಲಾ ಮೊಬೈಲ್/ ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಭೆಗಳನ್ನು ನಡೆಸುವುದು. ತುರ್ತು ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ತಕ್ಷಣವೇ ದೂರವಾಣಿ ಸಂಪರ್ಕವನ್ನು ಪುನಃ ಸ್ಥಾಪಿಸಲು ಪೂರೈಕೆದಾರರಿಗೆ ನಿರ್ದೇಶಿಸಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಜೂನ್‌

ಇದನ್ನೂ ನೋಡಿ: ಸಂಯುಕ್ತ ಕಿಸಾನ್‌ ಮೋರ್ಚಾ ಅಖಿಲ ಭಾರತ ಪತ್ರಿಕಾಗೋಷ್ಠಿ-ಹುಬ್ಬಳ್ಳಿ SKM All India Press Meet Karnataka.

Donate Janashakthi Media

Leave a Reply

Your email address will not be published. Required fields are marked *