- ತಲಾ ಎರಡು ಪದವೀಧರ-ಶಿಕ್ಷಕರ ಕ್ಷೇತಗಳಿಗೆ ಚುನಾವಣೆ-ಜೂನ್ 15ಕ್ಕೆ ಫಲಿತಾಂಶ ಪ್ರಕಟ
- ನಾಲ್ಕು ಕ್ಷೇತ್ರದಿಂದ ಒಟ್ಟು 49 ಅಭ್ಯರ್ಥಿಗಳು ಕಣಕ್ಕೆ
- ರಾಜಕೀಯ ಪಕ್ಷಗಳಿಂದ ತೀವ್ರ ಪೈಪೋಟಿ
ಬೆಂಗಳೂರು: ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆ ಮತದಾನವು ಇಂದು (ಜೂನ್ 13) ನಡೆಯಲಿದೆ. ಜುಲೈ 4ರಂದು ವಿಧಾನ ಪರಿಷತ್ತಿನ ಸದಸ್ಯರಾದ ಬಸವರಾಜ ಹೊರಟ್ಟಿ, ನಿರಾಣಿ ಹಣಮಂತ ರುದ್ರಪ್ಪ, ಕೆ.ಟಿ.ಶ್ರೀಕಂಠೇಗೌಡ, ಅರುಣ್ ಶಹಾಪುರ ಅವರು ನಿವೃತ್ತಿಯಾಗಲಿದ್ದು, ನಿವೃತ್ತಿಯಿಂದ ತೆರವಾಗುವ ಈ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಒಟ್ಟು ನಾಲ್ಕು ಕ್ಷೇತ್ರಗಳಿಗೆ ಚುನಾವಣಾ ಕಣದಲ್ಲಿ 49 ಅಭ್ಯರ್ಥಿಗಳಿದ್ದಾರೆ. ಮತದಾನ ಪ್ರಕ್ರಿಯೆಯು ಜೂನ್ 13ರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಆದರೆ, ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಮಾತ್ರ ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,84,992 ಮತದಾರರು ಇದ್ದು, ಮತದಾನಕ್ಕೆ 607 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜೂನ್ 15ರಂದು ಮತ ಎಣಿಕೆ ನಡೆಯಲಿದೆ.
ಚುನಾವಣಾ ಆಯೋಗವು ಮತದಾನಕ್ಕೆ ಸಂಬಂಧಿಸಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕುರಿತು ಅಗತ್ಯ ಕ್ರಮಗಳ ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ.
ರಜೆ ಘೋಷಣೆ
ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಸಂಘಗಳು, ಕಾರ್ಖಾನೆಗಳ ಖಾಯಂ ಹಾಗೂ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವ ಪದವೀಧರರು, ಶಿಕ್ಷಕರಿಗೆ ಮತದಾನದಲ್ಲಿ ಪಾಲ್ಗೊಳ್ಳಲು ವಿಶೇಷ ಸಾಂದರ್ಭಿಕ ರಜೆ ಘೋಷಿಸಲಾಗಿದೆ.
ಕ್ಷೇತ್ರಕ್ಕೆ ಜಿಲ್ಲೆಗಳ ವ್ಯಾಪ್ತಿ
ಕರ್ನಾಟಕ ವಾಯುವ್ಯ ಪದವೀಧರರ ಕ್ಷೇತ್ರ – ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳು. ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರ – ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳು. ಕರ್ನಾಟಕ ವಾಯುವ್ಯ ಕ್ಷೇತ್ರ ಶಿಕ್ಷಕರ ಕ್ಷೇತ್ರ- ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳು. ಕರ್ನಾಟಕ ಪಶ್ಚಿಮ ಕ್ಷೇತ್ರ ಶಿಕ್ಷಕರ ಕ್ಷೇತ್ರ- ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳು.
ಗೆಲುವಿಗಾಗಿ ಅಭ್ಯರ್ಥಿಗಳ ಕಸರತ್ತು
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಯಲ್ಲಿ ಪ್ರಮುಖ ಮೂರು ರಾಜಕೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್-ಜೆಡಿ(ಎಸ್) ನಡುವೆ ತೀವ್ರ ಪೈಪೋಟಿ ಇದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಾಲ್ಕೂ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ವಾಯುವ್ಯ ಪದವೀಧರ ಕ್ಷೇತ್ರ ಹೊರತುಪಡಿಸಿ, ಜೆಡಿಎಸ್ ಉಳಿದ ಮೂರು ಕ್ಷೇತ್ರಗಳಲ್ಲೂ ಸ್ಪರ್ಧಿಸಿದೆ.
ಸ್ಪರ್ಧೆಯಲ್ಲಿರುವ ಎಲ್ಲಾ ಅಭ್ಯರ್ಥಿಗಳು ಮತದಾರರನ್ನು ಓಲೈಸಲು ಹಲವು ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಗೆಲ್ಲಲು ಕೊನೆ ಕ್ಷಣದ ಕಸರತ್ತಿಗೆ ಮುಂದಾಗಿದ್ದಾರೆ. ಮತದಾರರನ್ನು ಓಲೈಸಿಕೊಳ್ಳಲು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ 7 ಅಭ್ಯರ್ಥಿಗಳು:
ಬಿಜೆಪಿಯಿಂದ ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಕಾಂಗ್ರೆಸ್‍ನಿಂದ ಬಸವರಾಜ ಗುರಿಕಾರ, ಜೆಡಿಎಸ್‍ನಿಂದ ಶ್ರೀಶೈಲ ಗಡದಿಮ್ಮಿ ಪಕ್ಷೇತರರಾಗಿ ಕರಬಸಪ್ಪ ಮಧ್ಯಾನ್ನದ, ಕೃಷ್ಣವಾಣಿ ಶ್ರೀನಿವಾಸ ಗೌಡ, ಫಕೀರಗೌಡ ಕಲ್ಲನಗೌಡರ, ವೆಂಕನಗೌಡ ಗೋವಿಂದಗೌಡ (ಎಎಪಿ ಬೆಂಬಲ) ಚುನಾವಣಾ ಕಣದಲ್ಲಿದ್ದಾರೆ.
ವಾಯವ್ಯ ಪದವೀಧರ ಕ್ಷೇತ್ರಕ್ಕೆ 11 ಮಂದಿ ಕಣಕ್ಕೆ:
ಬಿಜೆಪಿಯಿಂದ ಹನುಮಂತ ನಿರಾಣಿ, ಕಾಂಗ್ರೆಸ್‌ನಿಂದ ಸುನೀಲ ಸಂಕ, ಸರ್ವ ಜನತಾ ಪಾರ್ಟಿಯಿಂದ ಜಿ.ಸಿ. ಪಟೇಲ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಯಲ್ಲಪ್ಪ ಕಲಕುಟ್ರಿ, ಪಕ್ಷೇತರರಾಗಿ ಆದರ್ಶಕುಮಾರ ಪೂಜಾರಿ, ಘಟಿಗೆಪ್ಪ ಮಗದುಮ್ಮ, ದೀಪಿಕಾ ಎಸ್, ನಿಂಗಪ್ಪ ಮಾರುತಿ ಭಜಂತ್ರಿ, ಭೀಮಸೇನ ಬಾಳಪ್ಪ ಬಾಗಿ, ಆರ್.ಆರ್. ಪಾಟೀಲ ಹಾಗೂ ಸುಭಾಸ ರಂಗಪ್ಪ ಕೋಟಿಕಲ್ ಸೇರಿ ಒಟ್ಟು 11 ಜನ ಕಣದಲ್ಲಿದ್ದಾರೆ.
ವಾಯುವ್ಯ ಶಿಕ್ಷಕ ಕ್ಷೇತ್ರಕ್ಕೆ 12 ಜನ ಸ್ಪರ್ಧೆ:
ಬಿಜೆಪಿಯಿಂದ ಅರುಣ ಶಹಾಪುರ, ಕಾಂಗ್ರೆಸ್‌ನಿಂದ ಪ್ರಕಾಶ ಹುಕ್ಕೇರಿ, ಜೆಡಿಎಸ್‌ನಿಂದ ಚಂದ್ರಶೇಖರ ಲೋಣಿ, ಪಕ್ಷೇತರರಾಗಿ ಎನ್.ಬಿ. ಬನ್ನೂರ, ಅಪ್ಪಾಸಾಹೇಬ ಕುರಣಿ, ಶ್ರೀನಿವಾಸಗೌಡ ಗೌಡರ, ಬಸಪ್ಪ ಮಣಿಗಾರ, ಚಂದ್ರಶೇಖರ ಗುಡಸಿ, ಶ್ರೀಕಾಂತ ಪಾಟೀಲ, ಶ್ರೇಣಿಕ ಜಾಂಗಟೆ, ಸಂಗಮೇಶ ಚಿಕ್ಕನರಗುಂದ, ಜಯಪಾಲ ಪಾಟೀಲ ಸೇರಿದಂತೆ ಒಟ್ಟು 12 ಜನ ಸ್ಪರ್ಧೆಯಲ್ಲಿದ್ದಾರೆ.
ದಕ್ಷಿಣ ಪದವೀಧರ ಕ್ಷೇತ್ರಕ್ಕೆ 19 ಸ್ಪರ್ಧಾಳುಗಳು
ಕಾಂಗ್ರೆಸ್‍ನಿಂದ ಮಧು.ಜಿ ಮಾದೇಗೌಡ, ಬಿಜೆಪಿಯಿಂದ ಮೈ.ವಿ.ರವಿಶಂಕರ್, ಜೆಡಿಎಸ್‍ನಿಂದ ಎಚ್.ಕೆ.ರಾಮು, ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ರೈತಸಂಘ, ದಲಿತ ಸಂಘರ್ಷ ಸಮಿತಿಗಳು, ಪ್ರಗತಿಪರ ಸಂಘಟನೆಗಳು, ಆಮ್ ಆದ್ಮಿ ಪಕ್ಷದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್.ಗೌಡ, ಎಸ್‌ಡಿಪಿಐ ರಫತ್ ಉಲ್ಲಾಖಾನ್, ಆರ್‌ಪಿಐ ಪಕ್ಷದಿಂದ ಎನ್.ವೀರಭದ್ರಸ್ವಾಮಿ, ಪಕ್ಷೇತರ ಅಭ್ಯರ್ಥಿಗಳಾಗಿ ವಿನಯ್, ಡಾ.ಬಿ.ಎಚ್.ಚನ್ನಕೇಶವಮೂರ್ತಿ ಪ್ರಮುಖ ಸ್ಪರ್ಧಾಳುಗಳು.