ಬೆಂಗಳೂರು : ಬಳ್ಳಾರಿ ಜಿಲ್ಲೆಯ ತೋರಣಗಲ್ಲು- ಕುರೇಕುಪ್ಪ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಜಿಂದಲ್ ಸ್ಟೀಲ್ ಕಂಪನಿಗೆ 3,667 ಎಕರೆ ಜಮೀನನ್ನು ಮಾರಾಟ ಮಾಡಲು ನಿರ್ಧರಿಸುವ ಸಚಿವ ಸಂಪುಟ ದ ಕ್ರಮವನ್ನು ಸಿಪಿಐಎಂ ತೀವ್ರವಾಗಿ ವಿರೋಧಿಸಿದೆ. ಈ ಕೂಡಲೆ ಸಚಿವ ಸಂಪುಟದ ನಿರ್ಣಯವನ್ನು ವಾಪಾಸು ಪಡೆಯುವಂತೆ ಬಲವಾಗಿ ಒತ್ತಾಯಿಸಿದೆ.
ಈ ಕುರಿತು ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಪ್ರಕಟಣೆ ನೀಡಿದ್ದು, ಈ ಪ್ರದೇಶದ ಅಭಿವೃದ್ಧಿ ಪಡಿಸಲಾದ ಜಮೀನುಗಳ ಬೆಲೆಯು ತಲಾ ಎಕರೆಗೆ ಕನಿಷ್ಠವೆಂದರೂ 3 ಕೋಟಿ ರೂಗಳಷ್ಠಾಗಿದೆ. ಅದರಂತೆ ಜಿಂದಾಲ್ ಕಂಪನಿಗೆ ನೀಡುವ ಒಟ್ಟು 3,667 ಎಕರೆಯ ಈಗಿನ ಮಾರಾಟದ ಮೌಲ್ಯ 11,001 ಕೋಟಿ ರೂ ಗಳಾಗುತ್ತದೆ. ಅಭಿವೃದ್ಧಿ ಪಡಿಸಲಾದ ಮೊತ್ತ ಶೇ 40 ಕಳೆದರೂ ಅದರ ಮೌಲ್ಯ ಸುಮಾರು 7,000 ಕೋಟಿ ರೂ ಗಳಾಗುತ್ತದೆ. ಆದರೆ, ಸರಕಾರ ಈಗ 1,667 ಎಕರಗೆ ಕೇವಲ 1,20 ಲಕ್ಷ ರೂಗಳಂತೆ, 24.40 ಕೋಟಿ ನಿಗದಿಸಿದೆ. ಉಳಿದ 2,000 ಎಕರೆಗೆ ಕೇವಲ 1.5 ಲಕ್ಷ ರೂಗಳಂತೆ ಸುಮಾರು 25 ಕೋಟಿ ರೂ ನಿಗದಿಸಿ, ಒಟ್ಟು 50 ಕೋಟಿ ರೂಗಳಿಗೂ ಕಡಿಮೆ ದರಕ್ಕೆ ಮಾರಾಟಕ್ಕೆ ಕ್ರಮವಹಿಸಿರುವುದು ಖಂಡನೀಯವಾಗಿದೆ.
ಈ ಅಕ್ರಮ ಮಾರಾಟದಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಸುಮಾರು 10,950 ಕೋಟಿ ರೂಗಳಷ್ಠು ನಷ್ಠವಾಗುತ್ತದೆ ಎಂದು ಸಿಪಿಐಎಂ ಕಳವಳ ವ್ಯಕ್ತಪಡಿಸಿದೆ.
ರಾಜ್ಯ ಸರಕಾರ, ಸದಾ ಬಜೆಟ್ ಸಂಪನ್ಮೂಲದ ಕೊರತೆ ತುಂಬಲು ಜನತೆಯ ಮೇಲೆ ತೆರಿಗೆ ಹಾಗೂ ಸಾಲದ ಹೊರೆ ಹೇರುವ ಬದಲು ಇಂತಹ ಸಂಪನ್ಮೂಲದ ಸಮರ್ಪಕವಾದ ಬಳಕೆಗೆ ಕ್ರಮವಹಿಸ ಬೇಕಾಗಿದೆ. ಗುತ್ತಿಗೆ ಜೊತೆ ಮಾರಾಟ ನೀತಿಯಲ್ಲಿ, ಮಾರಾಟದ ಕ್ರಮ ರದ್ದುಪಡಿಸಲು, ಗುತ್ತಿಗೆ ಮೊತ್ತ ಹೆಚ್ಚಿಸಲು ಸಿಪಿಐಎಂ ಆಗ್ರಹಿಸಿದೆ.
ಬಹುತೇಕ ಕಂಪನಿಗಳ ಜೊತೆ ಕೆಐಏಡಿಬಿ ಮತ್ತು ಮಂತ್ರಿಮಂಡಲ ಶಾಮೀಲಾಗಿ ರೈತರನ್ನು ವಂಚಿಸಿ, ಬಲವಂತವಾಗಿ, ಅತ್ಯಂತ ಕಳಪೆ ಹಾಗು ಮೋಸದ ಬೆಲೆಗೆ ಖರೀದಿಸಿ, ರಾಜ್ಯದಾದ್ಯಂತ ದೊಡ್ಡ ದೊಡ್ಡ ಕಂಪನಿಗಳಿಗೆ ಸಾವಿರಾರು ಎಕರೆ ಜಮೀನುಗಳನ್ನು ಗುತ್ತಿಗೆ ಜೊತೆ ಮಾರಾಟ ಒಪ್ಪಂದ ( ಲೀಸ್ ಕಂ ಸೇಲ್ )ದಂತೆ ನೀಡಲಾಗುತ್ತದೆ. ಇದೂ ಕೂಡಾ ರಾಜ್ಯದ ಬೊಕ್ಕಸವನ್ನು ವಂಚಿಸುವ ಭ್ರಷ್ಠಾಚಾರಕ್ಕೆ ಬಹುದೊಡ್ಡ ಅನುಕೂಲ ಮಾಡಿಕೊಡುವ ಅಕ್ರಮ ನೀತಿಯಾಗಿದೆ.
ಈಗ ರಾಜ್ಯದಲ್ಲಿ ಕಂಪನಿಗಳಿಗೆ ಕೆಐಏಡಿಬಿ ನೀಡಿದ ಹತ್ತಾರು ಸಾವಿರ ಎಕರೆ ಜಮೀನುಗಳಿಗೆ, ಪ್ರತಿವರ್ಷ ತಲಾ ಎಕರೆಗೆ ಬಹುತೇಕ ಕೇವಲ, 100 ರೂಗಳಿಂದ 1,000 ರೂಗಳಿಗೆ ಗುತ್ತಿಗೆ ಹಣ ನಿಗದಿಸಲಾಗಿದೆ. ಕೆಲವು ಕಂಪನಿಗಳಿಗೆ ತಲಾ ಎಕರೆಗೆ 10,000 ರೂ ನಿಗದಿಸಲಾಗಿದೆ ಎನ್ನಲಾಗಿದೆ. ನಿಗದಿಸಲಾದ ಮೋಸದ ಅಥವಾ ಭ್ರಷ್ಠಾಚಾರದ ಈ ದರವೂ ಕೂಡಾ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡುತ್ತಿದೆ.
ಹೊರಗಡೆ ರೈತರು ಗುತ್ತಿಗೆಗೆ ಪಡೆದ ಜಮೀನುಗಳಿಗೆ ನೀರಾವರಿ ಪ್ರದೇಶದಲ್ಲಿ ತಲಾ ಎಕರೆಗೆ 25 ರಿಂದ 30 ಸಾವಿರ ರೂ ದರ ನೀಡುತ್ತಿರುವಾಗ ರಾಜ್ಯ ಸರಕಾರ ಮತ್ತು ಕಂಪನಿಗಳಿಗೆ ಇಷ್ಠು ಕಳಪೆ ಬೆಲೆಗೆ ನೀಡುವುದೇಕೆ ? ಈ ಕೂಡಲೆ ಗುತ್ತಿಗೆಯ ಮೊತ್ತವನ್ನು ಕನಿಷ್ಟ 30,000 ರೂ ಗೆ ಹೆಚ್ಚಿಸಬೇಕು ಮತ್ತು ಇದರಲ್ಲಿ ಜಮೀನು ನೀಡಿದ ರೈತ ಕುಟುಂಬಕ್ಕೆ ತಲಾ ಎಕರೆಗೆ 25,000 ರೂ ನೀಡಲು ಅಗತ್ಯ ಕ್ರಮ ವಹಿಸುವಂತೆ ಸಿಪಿಐಎಂ ಒತ್ತಾಯಿಸಿದೆ.
ಗುತ್ತಿಗೆ ಜೊತೆ ಮಾರಾಟ (ಲೀಸ್ ಕಂ ಸೇಲ್) ಒಪ್ಪಂದದ ಮೂಲಕ ಹಳೆಯ ದರಕ್ಕೆ ಮಾರಾಟ ಮಾಡುವ ಅಕ್ರಮವು ಅಕ್ಷಮ್ಯವಾಗಿದೆ. ಈ ಕೂಡಲೇ (ಲೀಸ್ ಕಂ ಸೇಲ್ ) ಗುತ್ತಿಗೆ ಜೊತೆ ಮಾರಾಟ ಕ್ರಮದಲ್ಲಿ ಮಾರಾಟದ ಒಪ್ಪಂದವನ್ನು ತಕ್ಷಣವೇ ರದ್ದುಪಡಿಸಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ. ಈ ಮಾರಾಟದ ಅಕ್ರಮ ಒಪ್ಪಂದವು ಭ್ರಷ್ಠಾಚಾರದ ಬಹುದೊಡ್ಡ ಹಗರಣವೆಂದು ಕಟುವಾಗಿ ಠೀಕಿಸುತ್ತದೆ. ಇದರ ವಂಚಕತನವನ್ನು ಜಿಂದಾಲ್ ಕಂಪನಿಗೆ ಮಾರಾಟ ಮಾಡಲು ನಿಗದಿಸಿದ ಅಕ್ರಮ ದರದಲ್ಲಿ ಢಾಳಾಗಿ ಕಾಣುತ್ತಿದೆ ಎಂದು ಹೇಳಿದೆ.
ಕಾಂಗ್ರೆಸ್ – ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಕಂಪನಿಗಳ ಪರ ಬಾಲ ಬಡುಕತನ ಬಯಲು !
ಈ ಹಿಂದೆ ಬಿಜೆಪಿ ಸರಕಾರ ಮತ್ತು ಜೆಡಿಎಸ್ ಕುಮಾರ ಸ್ವಾಮಿ ನೇತೃತ್ವದ ಸರಕಾರಗಳು ಅಧಿಕಾರದಲ್ಲಿದ್ದಾಗ ಜಿಂದಾಲ್ ಕಂಪನಿಗೆ ಈ ಜಮೀನುಗಳ ಶುದ್ದ ಕ್ರಯ ಪತ್ರಕ್ಕೆ ಕ್ರಮವಹಿಸಿದುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋದಿಸಿತ್ತು. ಇದೀಗ ಅದೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ತಾವು ವಿರೋಧಿಸಿದ ಕ್ರಮವನ್ನೆ ಯಥಾರ್ಥವಾಗಿ ಜಾರಿಗೊಳಿಸಲು ಹೊರಟಿದೆ.
ಅವರು ಅಧಿಕಾರದಲ್ಲಿದ್ದಾಗ ಇವರು ಮತ್ತು ಇವರು ಅಧಿಕಾರದಲ್ಲಿದ್ದಾಗ ಅವರು ವಿರೋದಿಸುವುದು ಅವರ ಎಡಬಿಡಂಗಿ ಜನ ವಿರೋದಿ ನಿಲುಮೆಯನ್ನು ಬಯಲುಗೊಳಿಸುತ್ತದೆ.
ದುರಂತವೆಂದರೆ, ಈ ಹಿಂದೆ ಇದನ್ನು ವಿಧಾನ ಸಭೆಯಲ್ಲಿ ತೀವ್ರವಾಗಿ ವಿರೋದಿಸಿದ್ದ ಶಾಸಕರಾಗಿದ್ದ ಶ್ರೀ ಹೆಚ್.ಕೆ. ಪಾಟೀಲರು ಇದೀಗ ಕಾನೂನು ಸಚಿವರಾಗಿ ಸರಕಾರದ ನಿರ್ಧಾರದಲ್ಲಿ ಭಾಗಿಯಾಗಿರುವುದು ಮಾತ್ರವಲ್ಲಾ ! ಸರಕಾರ ವಕ್ತಾರರಾಗಿ ಬಹಿರಂಗ ಪಡಿಸಿರುವುದು ನಾಚಿಕೆಗೇಡಿತನದ ಪರಾಕಾಷ್ಠೆಯಾಗಿದೆ !
ಈ ಎಲ್ಲವೂ ಇವರೆಲ್ಲರ ಈ ನಾಚಿಕೆ ಗೇಡಿನ ಮತ್ತು ಹೊಣೆಗೇಡಿತನದ ಹಾಗು ಭ್ರಷ್ಠಾಚಾರದ ನಡೆಗಳನ್ನು ಎತ್ತಿ ತೋರುತ್ತವೆ ಮತ್ತು ಅಣಕಿಸುತ್ತಿವೆ ಎಂದು ಸಿಪಿಐಎಂ ಲೇವಡಿ ಮಾಡಿದೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಂಪನಿಗಳ ಜೊತೆ ಹೇಗೆ ಶಾಮೀಲಾಗಿ, ಸರಕಾರಿ ಆಸ್ತಿಗಳನ್ನು ಅಕ್ರಮವಾಗಿ ಮಾರಾಟಮಾಡಿ, ರಾಜ್ಯ ಸರಕಾರದ ಬೊಕ್ಕಸಕ್ಕೆ ಹೇಗೆ ನಷ್ಟ ಉಂಟು ಮಾಡುತ್ತಿವೆ ಎಂಬುದನ್ನು ಇವು ಬಯಲುಗೊಳಿಸುತ್ತಿವೆ. ಸಾರ್ವಜನಿಕರು,ಈ ಅಕ್ರಮವನ್ನು ಅರಿಯಲು ಮತ್ತು ತೀವ್ರವಾಗಿ ಪ್ರತಿರೋದಿಸಿ ಸಾರ್ವ ಜನಿಕ ಆಸ್ತಿಗಳನ್ನು ಉಳಿಸಿಕೊಳ್ಳಲು ಸಿಪಿಐಎಂ ಕರೆ ನೀಡಿದೆ.