ಸ್ಟಾಕ್‌ಹೋಮ್: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಫಿಲಿಪೈನ್ಸ್‌ನ ಪತ್ರಕರ್ತೆ ಮಾರಿಯಾ ರೆಸ್ಸಾ ಮತ್ತು ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ್ ಅವರಿಗೆ 2021ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ.
ವಿಶ್ವಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪ್ರಶಸ್ತಿ ಆಯ್ಕೆ ಸಮಿತಿಯು, ಅದರ ರಕ್ಷಣೆಗಾಗಿ ಹೋರಾಟ ನಡೆಸಿದ ಪತ್ರಕರ್ತರನ್ನು ಗುರುತಿಸಿ 2021ನೇ ಸಾಲಿನ ನೊಬಲ್ ಶಾಂತಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದೆ.
“ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಧೈರ್ಯದಿಂದ ಹೋರಾಡಿದ್ದಕ್ಕಾಗಿ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯವು ವಿಶ್ವದಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಅದರ ರಕ್ಷಣೆಗಾಗಿ ನಿಲ್ಲುವ ಎಲ್ಲಾ ಪತ್ರಕರ್ತರನ್ನು ಈ ಇಬ್ಬರು ಪ್ರಶಸ್ತಿ ಪುರಸ್ಕೃತರು ಪ್ರತಿನಿಧಿಸುತ್ತಾರೆ ” ಎಂದು ನಾರ್ವೆ ನೊಬೆಲ್ ಸಮಿತಿಯ ಅಧ್ಯಕ್ಷೆ ಬೆರಿಟ್ ರೀಸ್-ಆಂಡರ್ಸನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1935ರ ನಂತರ ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗುತ್ತಿದೆ. 1935 ಜರ್ಮನಿಯ ಪತ್ರಕರ್ತ ಕಾರ್ಲ್ ವಾನ್ ಒಸಿಟೆಸ್ಕಿ ಅವರು ತಮ್ಮ ದೇಶ ಜಾಗತಿಕ ಯುದ್ಧಾ ನಂತರ ಹೇಗೆ ಮತ್ತೆ ಶಸ್ತ್ರಸಜ್ಜಿಕೆ ಆರಂಭಿಸಿತ್ತು ಎಂಬುದನ್ನು ಜಗತ್ತಿಗೆ ತಿಳಿಸಿದ್ದರು. ಅದಕ್ಕಾಗಿ ಅವರಿಗೆ ಶಾಂತಿ ಪ್ರಶಸ್ತಿ ನೀಡಲಾಗಿತ್ತು.
ಕಳೆದ ವರ್ಷದ ಪ್ರಶಸ್ತಿಯು ವಿಶ್ವದಾದ್ಯಂತ ಹಸಿವು ಮತ್ತು ಆಹಾರ ಅಭದ್ರತೆಯನ್ನು ಎದುರಿಸಲು ಮಾಡಿದ ಪ್ರಯತ್ನಗಳಿಗಾಗಿ ʼವಿಶ್ವ ಆಹಾರ ಕಾರ್ಯಕ್ರಮʼದ ಪಾಲಿಗೆ ದಕ್ಕಿತ್ತು.
ನೊಬೆಲ್ ಪ್ರಶಸ್ತಿಯನ್ನು ಸ್ಥಾಪಿಸಿದ ಆಲ್ಫ್ರೆಡ್ ನೊಬೆಲ್ ಅವರ ಪುಣ್ಯಸ್ಮರಣೆಯಾದ ಡಿ.10ರಂದು ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (₹8.55 ಕೋಟಿ) ಒಳಗೊಂಡಿರಲಿದೆ.