ಸುಪ್ರೀಂ ಕೋರ್ಟ್‌ ಜಾಮೀನು ನೀಡಿದರೂ ಪತ್ರಕರ್ತ ಸಿದ್ದಿಕಿ ಕಪ್ಪನ್ ಬಿಡುಗಡೆ ಸದ್ಯಕ್ಕೆ ಇಲ್ಲ

ಲಖನೌ: ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದ್ದರೂ, ಅವರ ಮೇಲಿನ ಮತ್ತೊಂದು ಪ್ರಕರಣದ ತನಿಖೆಯಿಂದಾಗಿ ಜಾರಿ ನಿರ್ದೇಶನಾಲಯದಲ್ಲಿ ಬಾಕಿ ಇರುವ ಕಾರಣ ಜೈಲಿನಲ್ಲೇ ಉಳಿಯುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿದ್ದಿಕಿ ಕಪ್ಪನ್ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದಾಖಲಾಗಿರುವ ಪ್ರಕರಣದ ತನಿಖೆ ಇನ್ನೂ ಬಾಕಿ ಇದ್ದು, ಜೈಲಿನಲ್ಲಿಯೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ.

ಜೈಲು ಅಧಿಕಾರಿ ಡಿಜಿ ಪ್ರೊ ಸಂತೋಷ್ ವರ್ಮಾ ಅವರು ಸುದ್ದಿ ಸಂಸ್ಥೆ ಈ ಮಾಹಿತಿ ನೀಡಿದ್ದು, ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದರೂ ಸಹ ಸಿದ್ದಿಕ್ ಕಪ್ಪನ್ ಅವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಮೇಲ್ಜಾತಿಯ ಕೆಲ ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶ ರಾಜ್ಯದ ಹಾತ್ರಾಸ್‌ 2020ರಲ್ಲಿ ನಡೆದಿದ್ದು, 2020ರ ಅಕ್ಟೋಬರ್‌ ಸಮಯದಲ್ಲಿ ಅಲ್ಲಿಗೆ ತೆರಳುವ ಮಾರ್ಗದಲ್ಲಿ ಉತ್ತರ ಪ್ರದೇಶ ಪೊಲೀಸರು ಕಪ್ಪನ್‌ ಮತ್ತು ಇತರ ಮೂವರನ್ನು ಬಂಧಿಸಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ನ ಜೊತೆ ನಂಟು ಹೊಂದಿರುವ ಆರೋಪದಡಿ ಬಂಧಿಸಲಾಗಿತ್ತು. ಐಪಿಸಿ, ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲಿದ್ದಾರೆ.

ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್‌ ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತ್ತು.

ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು (ಎಎಸ್‌ಜೆ) ತಲಾ ಒಂದು ಲಕ್ಷದ ಎರಡು ಖಾತರಿ ನೀಡಬೇಕು ಎಂಬ ಷರತ್ತಿನೊಂದಿಗೆ ಜಾಮೀನಿನ ಮೇಲೆ ಬಿಡುಗಡೆಗೆ ಸೋಮವಾರ(ಸೆಪ್ಟಂಬರ್‌ 11) ಆದೇಶ ನೀಡಿದ್ದರು. ಆದರೂ ಇ.ಡಿ ತನಿಖೆಯಿಂದಾಗಿ ಅವರು ಜೈಲಿನಲ್ಲೇ ಉಳಿಯುವಂತಾಗಿದೆ.

ಜಾರಿ ನಿರ್ದೇಶನಾಲಯ ಅವರ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪ ಕುರಿತಂತೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದೆ.

ಸುಪ್ರೀಂ ಕೋರ್ಟ್‌ ಒಂದು ಪ್ರಕರಣದಲ್ಲಿ ಜಾಮೀನು ನೀಡಿದ್ದನ್ನು ಸ್ವಾಗತಿಸಿರುವ ವಿರೋಧ ಪಕ್ಷಗಳು, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲೂ ಜಾಮೀನು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿವೆ.

Donate Janashakthi Media

Leave a Reply

Your email address will not be published. Required fields are marked *