ಕೋಮು ಹಿಂಸಾಚಾರ ನಡೆಸುವವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹ
ದೇಶದಲ್ಲಿ ದ್ವೇಷ ಭಾಷಣಗಳ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಕೋಮು ಹಿಂಸಾಚಾರ ಮತ್ತು ಅದಕ್ಕೆ ಅಧಿಕೃತ ಕೃಪಾಪೋಷಣೆ ಇರುವಂತೆ ಕಾಣುತ್ತಿರುವುದರಿಂದ ಕಳವಳಗೊಂಡಿರುವ ಐದು ಎಡಪಕ್ಷಗಳು ಸೇರಿದಂತೆ 13 ರಾಜಕೀಯ ಪಕ್ಷಗಳ ಮುಖಂಡರು ಒಂದು ಜಂಟಿ ಮನವಿಯಲ್ಲಿ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕು ಎಂದು ಎಲ್ಲ ಜನವಿಭಾಗಗಳಿಗೆ ಮನವಿ ಮಾಡಿಕೊಂಡಿದ್ದಾರೆ ಹಾಗೂ ಕೋಮು ಹಿಂಸಾಚಾರ ಪ್ರಚೋದಿಸುತ್ತಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಜಂಟಿ ಹೇಳಿಕೆಯ ಪೂರ್ಣಪಾಟವನ್ನು ಈ ಮುಂದೆ ಕೊಡಲಾಗಿದೆ:
ನಾವು, ಈ ಕೆಳಗೆ ಸಹಿ ಮಾಡಿದ ರಾಜಕೀಯ ಪಕ್ಷಗಳ ನಾಯಕರು ಈ ಮನವಿಯನ್ನು ಮಾಡಲು ಒಟ್ಟುಗೂಡಿದ್ದೇವೆ.
ನಾವು, ನಮ್ಮ ಸಮಾಜವನ್ನು ಧ್ರುವೀಕರಿಸಲು ಆಹಾರ, ಉಡುಗೆ, ನಂಬಿಕೆ, ಹಬ್ಬಗಳು ಮತ್ತು ಭಾಷೆಗೆ ಸಂಬಂಧಿಸಿದ ವಿಷಯಗಳನ್ನು ಆಳುವ ವ್ಯವಸ್ಥೆಯ ಕೆಲವು ವಿಭಾಗಗಳು ಉದ್ದೇಶಪೂರ್ವಕವಾಗಿ ಬಳಸುತ್ತಿರುವ ರೀತಿಯಿಂದ ತೀವ್ರ ದುಃಖಿತರಾಗಿದ್ದೇವೆ.
ನಾವು ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣದ ಘಟನೆಗಳ ಬಗ್ಗೆ ಅತ್ಯಂತ ಕಳವಳಗೊಂಡಿದ್ದೇವೆ. ಈ ದ್ವೇಷ ಭಾಷಣಗಳನ್ನು ಮಾಡುತ್ತಿರುವವರು ಅಧಿಕೃತ ಕೃಪಾಪೋಷಣೆ ಪಡೆದಿರುವಂತೆ ಕಾಣುತ್ತದೆ, ಅವರ ವಿರುದ್ಧ ಯಾವುದೇ ಅರ್ಥಪೂರ್ಣ ಮತ್ತು ಬಲವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ.
ನಾವು, ದೇಶದ ಹಲವಾರು ರಾಜ್ಯಗಳಲ್ಲಿ ಇತ್ತೀಚೆಗೆ ಭುಗಿಲೆದ್ದಿರುವ ಕೋಮುವಾದಿ ಹಿಂಸಾಚಾರವನ್ನು ಬಲವಾಗಿ ಖಂಡಿಸುತ್ತೇವೆ. ಈ ಘಟನೆಗಳು ಸಂಭವಿಸಿದ ಪ್ರದೇಶಗಳಲ್ಲಿ ಒಂದು ದುಷ್ಟ ನಮೂನೆ ಇದೆ ಎಂಬುದನ್ನು ವರದಿಗಳು ಸೂಚಿಸುತ್ತಿರುವುದರಿಂದ ನಾವು ತೀವ್ರವಾಗಿ ಕಳವಳಗೊಂಡಿದ್ದೇವೆ. ಆಕ್ರಮಣಕಾರಿ ಸಶಸ್ತ್ರ ಮತೀಯ ಮೆರವಣಿಗೆಗಳಿಗೆ ಮುಂಚಿತವಾಗಿ ಕೊಳ್ಳಿಯಿಡುವ ದ್ವೇಷದ ಭಾಷಣಗಳು ಕೋಮುವಾದಿ ಹಿಂಸಾಚಾರವನ್ನು ಹರಿಯ ಬಿಟ್ಟಿರುವುದು ಕಾಣ ಬಂದಿದೆ.
ನಮಗೆ, ದ್ವೇಷ ಮತ್ತು ಪೂರ್ವಾಗ್ರಹವನ್ನು ಹರಡಲು ಅಧಿಕೃತ ಕೃಪಾಪೋಷಣೆಯೊಂದಿಗೆ ಸಾಮಾಜಿಕ ಮಾಧ್ಯಮ ಮತ್ತು ದೃಶ್ಯ-ಶ್ರಾವ್ಯ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ರೀತಿ ಅತೀವ ನೋವುಂಟು ಮಾಡಿದೆ.
ನಾವು ಪ್ರಧಾನಿಯವರ ಮೌನದಿಂದ ಆಘಾತಕ್ಕೊಳಗಾಗಿದ್ದೇವೆ… ಅವರು ಮತಾಂಧತೆಯನ್ನು ಪ್ರತಿಪಾದಿಸುವವರ ಮಾತು ಮತ್ತು ಕ್ರಿಯೆಗಳ ವಿರುದ್ಧ ಮತ್ತು ತಮ್ಮ ಮಾತು ಹಾಗೂ ನಡೆಯ ಮೂಲಕ ನಮ್ಮ ಸಮಾಜವನ್ನು ಪ್ರಚೋದಿಸುವ ಹಾಗೂ ಉದ್ರೇಕಿಸುವವರ ವಿರುದ್ಧ ಮಾತನಾಡಲು ವಿಫಲರಾಗಿದ್ದಾರೆ. ಈ ಮೌನವೇ ಇಂತಹ ಖಾಸಗಿ ಸಶಸ್ತ್ರ ಗುಂಪುಗಳಿಗೆ ಅಧಿಕೃತ ಕೃಪಾಪೋಷಣೆಯ ವಿಲಾಸ ದೊರೆತಿದೆ ಎಂಬುದಕ್ಕೆ ಬಹುದೊಡ್ಡ ಸಾಕ್ಷಿಯಾಗಿದೆ.
ನಾವು, ಶತಮಾನಗಳಿಂದ ಭಾರತವನ್ನು ನಿರೂಪಿಸಿರುವ ಮತ್ತು ಶ್ರೀಮಂತಗೊಳಿಸಿರುವ ಸಾಮಾಜಿಕ ಸಾಮರಸ್ಯದ ಬಂಧಗಳನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವ ನಮ್ಮ ಸಾಮೂಹಿಕ ಸಂಕಲ್ಪವನ್ನು ಪುನರುಚ್ಚರಿಸುತ್ತೇವೆ.
ನಾವು, ನಮ್ಮ ಸಮಾಜದಲ್ಲಿ ಒಡಕುಬುದ್ಧಿ ಬೇರುಬಿಡುವಂತೆ ಮಾಡಲು ಪ್ರಯತ್ನಿಸುತ್ತಿರುವ ವಿಷಕಾರಿ ಸಿದ್ಧಾಂತಗಳನ್ನು ಎದುರಿಸಲು ಮತ್ತು ಅವುಗಳ ವಿರುದ್ಧ ಹೋರಾಡಲು ಬದ್ಧರಾಗಿದ್ದೇವೆ ಎಂಬುದನ್ನು ಪುನರುಚ್ಚರಿಸುತ್ತೇವೆ.
ನಾವು, ನಮ್ಮ ದೇಶವು ಅದರ ಅನೇಕ ವೈವಿಧ್ಯತೆಗಳನ್ನು ಪೂರ್ಣ ಪ್ರಮಾಣದಲ್ಲಿ ಗೌರವಿಸಿ, ಅವುಗಳಿಗೆ ಅವಕಾಶ ಮಾಡಿಕೊಟ್ಟು, ಅವನ್ನು ಸಂಭ್ರಮಿಸಿದರೆ ಮಾತ್ರ ಅಭಿವೃದ್ಧಿ ಹೊಂದುತ್ತದೆ ಎಂಬ ನಮ್ಮ ದೃಢವಾದ ನಂಬಿಕೆಯನ್ನು ಪುನರುಚ್ಚರಿಸುತ್ತೇವೆ.
ನಾವು, ಶಾಂತಿಯನ್ನು ಕಾಯ್ದುಕೊಳ್ಳಬೇಕು ಮತ್ತು ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸ ಬಯಸುವವರ ದುಷ್ಟ ಉದ್ದೇಶವನ್ನು ವಿಫಲಗೊಳಿಸಬೇಕು ಎಂದು ಎಲ್ಲ ಜನವಿಭಾಗಗಳಿಗೆ ಮನವಿ ಮಾಡುತ್ತೇವೆ.
ನಾವು, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಸ್ವತಂತ್ರವಾಗಿಯೂ ಮತ್ತು ಜಂಟಿಯಾಗಿಯೂ ಕೆಲಸ ಮಾಡಬೇಕು ಎಂದು ದೇಶಾದ್ಯಂತ ನಮ್ಮ ಎಲ್ಲಾ ಪಕ್ಷದ ಘಟಕಗಳಿಗೆ ಕರೆ ನೀಡುತ್ತೇವೆ.
ಈ ಮನವಿಗೆ ಸೋನಿಯಾ ಗಾಂಧಿ, ಅಧ್ಯಕ್ಷರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ , ಶರದ್ ಪವಾರ್, ಅಧ್ಯಕ್ಷರು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷರು, ಎಂಕೆ ಸ್ಟಾಲಿನ್, ಮುಖ್ಯಮಂತ್ರಿ, ತಮಿಳುನಾಡು ಮತ್ತು ಅಧ್ಯಕ್ಷರು, ಡಿಎಂಕೆ, ಸೀತಾರಾಮ್ ಯೆಚೂರಿ, ಪ್ರಧಾನ ಕಾರ್ಯದರ್ಶಿ, ಸಿಪಿಐ(ಎಂ), ಹೇಮಂತ್ ಸೋರೆನ್, ಮುಖ್ಯಮಂತ್ರಿ, ಜಾರ್ಖಂಡ್ ಮತ್ತು ಕಾರ್ಯಾಧ್ಯಕ್ಷ ಜೆಎಂಎಂ, ಡಾ ಫಾರೂಕ್ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ, ಜಮ್ಮು ಮತ್ತು ಕಾಶ್ಮೀರ ಮತ್ತು ಅಧ್ಯಕ್ಷರು, ನ್ಯಾಷನಲ್ ಕಾನ್ಫರೆನ್ಸ್, ತೇಜಸ್ವಿ ಯಾದವ್, ವಿರೋಧ ಪಕ್ಷದ ನಾಯಕ – ಬಿಹಾರ ವಿಧಾನಸಭೆ, ಆರ್.ಜೆ.ಡಿ., ಡಿ.ರಾಜ, ಪ್ರಧಾನ ಕಾರ್ಯದರ್ಶಿ, ಸಿಪಿಐ, ದೇಬಬ್ರತ ಬಿಸ್ವಾಸ್, ಪ್ರಧಾನ ಕಾರ್ಯದರ್ಶಿ, ಫಾರ್ವರ್ಡ್ ಬ್ಲಾಕ್, ಮನೋಜ್ ಭಟ್ಟಾಚಾರ್ಯ, ಪ್ರಧಾನ ಕಾರ್ಯದರ್ಶಿ, ಆರ್‍ಎಸ್‍ಪಿ, ಪಿ ಕೆ ಕುನ್ಹಾಲಿಕುಟ್ಟಿ, ಪ್ರಧಾನ ಕಾರ್ಯದರ್ಶಿ, ಐಯುಎಂಎಲ್ ಮತ್ತು ದೀಪಂಕರ್ ಭಟ್ಟಾಚಾರ್ಯ, ಪ್ರಧಾನ ಕಾರ್ಯದರ್ಶಿ, ಸಿಪಿಐ(ಎಂಎಲ್)-ಲಿಬರೇಶನ್ ಸಹಿ ಮಾಡಿದ್ದಾರೆ.