ಕಲಬುರಗಿ : ರೈತ ವಿರೋಧಿ ಕೃಷಿ ವಾಪಸಾತಿಗಾಗಿ, ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ ರದ್ಧತಿಗಾಗಿ, ಉದ್ಯೋಗ ಖಾತ್ರಿ ಅನುದಾನ ಕಡಿತ ವಿರೋಧಿಸಿ ಹಾಗೂ ಪೆಟ್ರೋಲ್, ಡೀಸೆಲ್ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಮೆರವಣಿಗೆ.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಆಳಂದ ತಾಲೂಕು ಸಮಿತಿಯಿಂದ ಇಂದು ಕಲಬುರಗಿದ ಆಳಂದ ತಾಲೂಕಿನ ಎ.ಪಿ.ಎಂ.ಸಿ ಮಂಡಿಯಲ್ಲಿ ಇಂದು ಬೃಹತ್ ಮಹಿಳಾ ಮಹಾಸಭಾ ಮತ್ತು ಮೆರವಣಿಗೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಗೌರಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು ಹಾಗೂ ನಾವೆಲ್ಲರೂ ಎಚ್ಚರಿಕೆಯಿಂದ ಮುನ್ನಡೆಯುವುದು ತುಂಬ ಮುಖ್ಯ ಪ್ರಭುತ್ವ ನಡೆಯನ್ನು ಪ್ರಶ್ನಿಸುವುದು ನಮ್ಮ ಹಕ್ಕು ನಾವೆಲ್ಲರೂ ಪ್ರಶ್ನಿಸೋಣ. ನಮ್ಮೆಲ್ಲರನ್ನು ಜೈಲಿಗೆ ಹಾಕಲಿ ಎಂದು ತಿಳಿಸಿದರು.
ನಂತರ ಮಾತನಾಡಿದ ಪೂಜಾರವರು ʻʻಉದ್ಯೋಗ ಖಾತ್ರಿ ನಮ್ಮ ಹಕ್ಕು ನಮ್ಮ ಹಕ್ಕನ್ನು ನಾವು ಹೋರಾಟದಿಂದಲೇ ಪಡೆಯಲು ಸಾಧ್ಯವೆಂದು ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಜೊತೆಗೆ ನಿಲ್ಲೋಣʼʼ ಎಂದು ಹೇಳಿದರು.
ಕೃಷಿಯನ್ನು ಕಂಡು ಹಿಡಿದು ಅದನ್ನು ಬೆಳೆಸಿದ್ದು ಮೊದಲು ಮಹಿಳೆಯರೇ. ಹಾಗಾಗಿ ಇಂದು ಅದನ್ನು ಉಳಿಸಲೂ ನಾವೇ ಮುಂದಾಗಬೇಕಿದೆ. ಅಂದು ಹೇಗೆ ವಾಮನ ತನ್ನ ಮೂರನೇ ಕಾಲನ್ನು ಬಲಿಚಕ್ರವರ್ತಿಯ ತಲೆಯ ಮೇಲೆ ಇಟ್ಟಿದ್ದನೋ ಅದೇ ರೀತಿ ಇಂದು ಕೃಷಿವಿರೋಧಿ ಮೂರು ಕಾನೂನುಗಳು ನಮ್ಮ ರೈತ ಕಾರ್ಮಿಕರ ಜೀವಕ್ಕೆ ಕುತ್ತು ಎಂದು ಕೋರಣೇಶ್ವರ ಸ್ವಾಮಿಯವರು ಹೇಳಿದರು.
ಈ ಮಹಾಸಭೆಯಲ್ಲಿ ಆಳಂದ ತಾಲೂಕಿನ ಮುನ್ನೊಳ್ಳಿ, ಜಂಬಗಾ, ತಡಕಲ್, ಜಿಡಗಾ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು ಹಾಗೂ ಜನವಾದಿಯ ಕೆ ನೀಲಾ, ಜಗದೇವಿ ನೂಲಕರ್, ಶಹಾನಾಜ್, ನಂದಾದೇವಿ ಮುಂತಾದವರು ಇದ್ದರು.