ಜಮ್ಮು ಕಾಶ್ಮೀರದಲ್ಲಿ ಕೊನೆ ಹಂತದ ಮತದಾನ: 9 ಗಂಟೆ ವೇಳೆಗೆ ಶೇ 11.60 ರಷ್ಟು ಮತದಾನ

ಜಮ್ಮು ಕಾಶ್ಮೀರ : ಕಣಿವೆ ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಹಾಗೂ ಅಂತಿಮ ಹಂತದ ಮತದಾನ ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗಿದ್ದು, ಬಿರುಸಿನಿಂದ ಸಾಗಿದೆ. ಬೆಳಗ್ಗೆ 9 ಗಂಟೆವರೆಗಿನ ಪ್ರಾಥಮಿಕ ಮಾಹಿತಿಗಳ ಪ್ರಕಾರ ಸುಮಾರು ಶೇ 11.60ರಷ್ಟು ಮತದಾನವಾಗಿದೆ ಎಂದು ಚುನಾವನಾ ಆಯೋಗದ ಮೂಲಗಳು ಮಾಹಿತಿ ನೀಡಿವೆ.

ಮೂರನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ ಮತದಾರರು ಮುಂದೆ ಬಂದು ತಮ್ಮ ಹಕ್ಕು ಚಲಾಯಿಸುವಂತೆ ಮತದಾರರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದ ಮತದಾನ ಮಂಗಳವಾರ ಆರಂಭಗೊಂಡಿದ್ದು, ಚಳಿಗಾಲದ ರಾಜಧಾನಿ ಜಮ್ಮು ಸೇರಿದಂತೆ ಏಳು ಜಿಲ್ಲೆಗಳ 40 ಸ್ಥಾನಗಳಲ್ಲಿ ವೋಟಿಂಗ್​ ಬಿರುಸಿನಿಂದ ಸಾಗಿದೆ. 39.18 ಲಕ್ಷಕ್ಕೂ ಹೆಚ್ಚು ಅರ್ಹ ಮತದಾರರು 415 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ಮತಯಂತ್ರದಲ್ಲಿ ಭದ್ರಗೊಳಿಸುತ್ತಿದ್ದಾರೆ.

ಕೊನೆ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿರುವ 40 ಕ್ಷೇತ್ರಹಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಉತ್ತರ ಕಾಶ್ಮೀರದ ಮೂರು ಗಡಿ ಜಿಲ್ಲೆಗಳ 16 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿದೆ. ಬಾರಾಮುಲ್ಲಾ, ಉರಿ, ರಫಿಯಾಬಾದ್, ಪಟ್ಟನ್, ಗುಲ್ಮಾರ್ಗ್, ಸೋಪೋರ್, ಮತ್ತು ವಗೂರಾ-ಕ್ರೀರಿ (ಬಾರಾಮುಲ್ಲಾ ಜಿಲ್ಲೆ), ಕುಪ್ವಾರಾ, ಕರ್ನಾಹ್, ಟ್ರೆಹ್ಗಾಮ್, ಹಂದ್ವಾರಾ, ಲೋಲಾಬ್ ಮತ್ತು ಲ್ಯಾಂಗೇಟ್ (ಕುಪ್ವಾರಾ ಜಿಲ್ಲೆ) ವಿಧಾನಸಭಾ ಕ್ಷೇತ್ರಗಳು ಚುನಾವಣೆ ನಡೆಯಲಿವೆ. ಬಂಡಿಪೋರಾ, ಸೋನಾವರಿ ಮತ್ತು ಗುರೇಜ್ (ಬಂಡಿಪೋರಾ ಜಿಲ್ಲೆ) ಕ್ಷೇತ್ರಗಳಲ್ಲಿ ಜನರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಈ 16 ಕ್ಷೇತ್ರಗಳಲ್ಲಿ ಒಟ್ಟು 202 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಉಧಂಪುರ, ಸಾಂಬಾ ಮತ್ತು ಕಥುವಾ ಜಿಲ್ಲೆಗಳು ಸೇರಿದಂತೆ ಜಮ್ಮು ಪ್ರದೇಶದ 24 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತದಾನ ಮುಂದುವರೆದಿದೆ. ಚುನಾವಣೆಯ ಹಿಂದಿನ ಹಂತಗಳಲ್ಲಿ ಅತ್ಯುತ್ತಮ ಮತದಾನವಾಗಿದೆ. ಸೆಪ್ಟೆಂಬರ್ 18 ರಂದು ನಡೆದ ಮೊದಲ ಹಂತದಲ್ಲಿ ಶೇ 61.38 ಹಾಗೂ ಸೆಪ್ಟೆಂಬರ್ 25 ರಂದು ನಡೆದ ಎರಡನೇ ಹಂತದಲ್ಲಿ ಶೇ 57.31ರಷ್ಟು ಮತದಾನವಾಗಿತ್ತು. ಅಕ್ಟೋಬರ್ 8 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

 

Donate Janashakthi Media

Leave a Reply

Your email address will not be published. Required fields are marked *