ಭಾರತೀಯರಿಗೆ; ಜೀವನವೇ ಜಾತಿ, ಜಾತಿಯೇ ಜೀವನ

ಹರೀಶ್‌ ಗಂಗಾಧರ್‌

ಈ ದೇಶದ ಜನ ಕೇಳುತ್ತಾರೆ ” ಅಸ್ಪೃಶ್ಯನಾಗಿ ಬಾಳುವುದೆಂದರೆ” ಹೇಗೆಂದು. ಇಲ್ಲಿ ಕಪ್ಪುವರ್ಣದವರು ದಿನನಿತ್ಯ ಅನುಭವಿಸುವ ವರ್ಣಭೇದ ನೀತಿಯಂತೆಯೇ ಜಾತಿಭೇದ ಅನ್ನೋದು ಅಂತ ನಾನು ವಿವರಿಸುತ್ತೇನೆ. “ಆದ್ರೆ ಯಾರಿಗಾದರೂ ನಿಮ್ ಜಾತಿನ ಹೇಗ್ ಗೊತ್ತಾಗುತ್ತೆ? ಜಾತಿ ಅನ್ನೋದು ಚರ್ಮದ ಬಣ್ಣದಿಂದ ತಿಳಿಯುವುದಿಲ್ಲವಲ್ಲ? ಎಂಬ ಮರು ಪ್ರಶ್ನೆಗಳು ಥಟ್ ಅಂತ ಬರುತ್ತವೆ.

ಭಾರತದ ಪ್ರತಿಯೊಂದು ಹಳ್ಳಿ ಮತ್ತು ಪಟ್ಟಣಗಳಲ್ಲಿ ಎಲ್ಲರಿಗೂ ಎಲ್ಲರ ಪರಿಚಯವಿರುತ್ತದೆ. ಎಲ್ಲಾ ಜಾತಿಗಳಿಗೂ ಅದರದೇ ಆದ ಪಾತ್ರ ಮತ್ತು ಕರ್ತವ್ಯಗಳಿವೆ, ಎಲ್ಲಾ ಜಾತಿಗಳಿಗೂ ವಾಸಿಸಬೇಕಾದ ಸ್ಥಳ ಗೊತ್ತುಪಡಿಸಲಾಗಿರುತ್ತದೆ.  ಬ್ರಾಹ್ಮಣರು, ಕುಂಬಾರರು, ಕಮ್ಮಾರರು, ಬಡಗಿಗಳು, ಅಗಸರು ಹೀಗೆ ಹಳ್ಳಿಗಳಲ್ಲಿ ಎಲ್ಲಾ ಜಾತಿಯವರಿಗೂ ವಾಸಿಸಲು ಪ್ರತ್ಯೇಕ ಜಾಗ ನಿಗದಿಪಡಿಸಲಾಗಿರುತ್ತದೆ. ಅಸ್ಪೃಶ್ಯರಿಗೆ ಅನುವಂಶಿಕವಾಗಿ ಬರುವ ವಿಶೇಷ ಜವಾಬ್ದಾರಿ ಬೇರೆಯವರ ಜಮೀನುಗಳಲ್ಲಿ ಕೂಲಿಯಾಳುಗಳಾಗಿ ದುಡಿಯುವುದು ಅಥವಾ ಹಿಂದೂ ಸಮಾಜದ ಬೇರೆ ಜಾತಿಯವರು ಅಸಹ್ಯವೆಂದು, ಹೊಲಸೆಂದು ಪರಿಗಣಿಸುವ ಕೆಲಸಗಳನ್ನ ಮಾಡುವುದು. ಇಂತಹ ಕೆಲಸ ಮಾಡುವ ಅಸ್ಪೃಶ್ಯರಿಗೆ ಹಳ್ಳಿಗಳಲಿ ಬದುಕುವ ಅನುಮತಿಯೇ ಇಲ್ಲ! ಅವರು ಹಳ್ಳಿಯ ಗಡಿಯಾಚೆ ಬಾಳಬೇಕು. ದೇವಾಳಗಳಿಗೆ  ಅವರಿಗೆ ಪ್ರವೇಶವಿಲ್ಲ. ಬೇರೆ ಜಾತಿಯವರು ಬಳಸುವ ಕೆರೆ, ಬಾವಿ, ನಲ್ಲಿಗಳಿಂದ ನೀರು ತರುವ ಅವಕಾಶಗಳಿಲ್ಲ. ಮೇಲ್ಜಾತಿಯವರ ಜೊತೆಗೆ ಕುಳಿತು ಉಣ್ಣುವ ಹಾಗಿಲ್ಲ. ಅವರು ಬಳಸಿದ ಪಾತ್ರೆ ಪಡಗಳನು ಬಳಸುವಾಗಿಲ್ಲ. ಸ್ಥಳದಿಂದ ಸ್ಥಳಕ್ಕೆ ಬದಲಾಗುವ ಇಂತಹ ಸಾವಿರಾರು ನಿರ್ಬಂಧ, ಅವಮಾನಗಳಿವೆ. ಪ್ರತಿ ದಿನ ಭಾರತದ ಸುದ್ದಿ ಪತ್ರಿಕೆಯ ಪುಟಗಳನೊಮ್ಮೆ ತಿರುವಿಹಾಕಿದರೆ ಸೈಕಲ್ ಏರಿದಕ್ಕೆ, ಚಪ್ಪಲಿ ತೊಟ್ಟಿದಕ್ಕೆ ಕೊಲೆಯಾದ ಅಥವಾ ತೀವ್ರ ಥಳಿತಕ್ಕೆ ಒಳಗಾದ ಅಸ್ಪೃಶ್ಯ ಕುರಿತು ನೀವು ಓದುತ್ತೀರ.

ಇದನ್ನು ಓದಿ: ಜಾತಿ ಗೋಡೆಗಳ ದಾಟುತ್ತಾ

ನಮ್ಮ ಪಟ್ಟಣ ಮತ್ತು ಹಳ್ಳಿಗಳಲ್ಲಿ ಎಲ್ಲರಿಗೂ ಎಲ್ಲರ ಜಾತಿ ಗೊತ್ತಿರುವುದರಿಂದ ಜಾತಿಯಿಂದ ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಆದ್ರೆ ನೀವು ಬೇರೆಡೆ ಹೋದಾಗ, ಯಾರು ಪರಿಚಯವಿಲ್ಲದ ಊರುಗಳಿಗೆ ಹೋದಾಗ ನಿಮ್ಮ ಜಾತಿ ಹೇಗೆ ತಿಳಿಯುತ್ತೆ? ಅಲ್ಲಿ “ನಿಮ್ ಜಾತಿ ಯಾವುದು?” ಅಂತ ನೇರವಾಗಿ ಕೇಳುತ್ತಾರೆ. ಈ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಮತ್ತು ಪ್ರಶ್ನೆಗೆ ಉತ್ತರಿಸದೆ ಇರಲು ಕೂಡ ಆಗುವುದಿಲ್ಲ. ಇಲ್ಲಿ ಸಾಂಪ್ರದಾಯಿಕವಾಗಿ ಎಲ್ಲರು ಎಲ್ಲರ ಜಾತಿ ತಿಳಿದುಕೊಳ್ಳುವ ಅಧಿಕಾರವಿದೆ.

ಇದನ್ನು ಓದಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ವಿದ್ಯಾರ್ಥಿಗಳ ವಿರುದ್ಧ ಈಗಲೂ ತಾರತಮ್ಯ -ಡಾ.ಶಿವದಾಸನ್

ನೀವು ನನ್ನಂತೆ ವಿದ್ಯಾವಂತಳಾದರೆ, ಲಾಕ್ಷಣಿಕವಾಗಿ ನೋಡಲಿಕ್ಕೆ ಅಸ್ಪೃಶ್ಯಳಂತೆ ಕಾಣದಿದ್ದರೆ ನಿಮಗೊಂದು ಆಯ್ಕೆಯಿದೆ. ಇರುವ ಸತ್ಯ ಹೇಳಿ ಬಹಿಷ್ಕಾರಕ್ಕೆ, ಅಪಹಾಸ್ಯಕ್ಕೆ, ಕಿರುಕುಳಕ್ಕೆ ಒಳಗಾಗಿ (ದೇಶದ ವಿಶ್ವವಿದ್ಯಾಲಯಗಳಲ್ಲಿ ನಿಯಮಿತವಾಗಿ ಘಟಿಸುವ) ಆತ್ಮಹತ್ಯೆಗೆ ತಳ್ಳಲ್ಪಡುವುದು.

ಅಥವಾ ನೀವು ಸುಳ್ಳುನ್ನೂ ಹೇಳಬಹುದು. ಆಗ ನಿಮ್ಮನ್ನು ನಂಬದೆ ಅನುಮಾನದಿಂದಲೇ ನೋಡುತ್ತಾ, ನಿಮ್ಮ ಜಾತಿಯನ್ನ ಬೇರೆ ಮಾರ್ಗಗಳಲ್ಲಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. “ನಿನ್ನ ತಮ್ಮ ಮದುವೆಯಲ್ಲಿ ಕುದುರೆ ಸವಾರಿ ಮಾಡಿದ್ನ? ನಿನ್ನ ಹೆಂಡತಿ ಕೆಂಪು ಸೀರೆ ಉಟ್ಟಿದ್ದಳೋ ಅಥವಾ ಬಿಳಿ ಸೀರೆ ಉಟ್ಟಿದ್ದಳೋ? ಅವಳು ಯಾವ ಶೈಲಿಯಲ್ಲಿ ಸೀರೆ ಉಡುತ್ತಾಳೆ? ನೀವು ದನದ ಮಾಂಸ ತಿನ್ನುತ್ತೀರಾ? ನಿಮ್ ಮನೆ ದೇವ್ರು ಯಾವುದು?” ಅಲ್ಲೂ ವಿಷಯ ಕಲೆಹಾಕಲು ಆಗದಿದ್ದರೆ ಕೊನೆಗೆ ನಿಮ್ಮ ಊರಿನವರನ್ನ ಸಂಪರ್ಕಿಸಿ ಜಾತಿ ತಿಳಿದುಕೊಳ್ಳುತ್ತಾರೆ.

ಹೇಗೋ ಮಾಡಿ ನೀವು ಹೇಳುವ ಸುಳ್ಳನ್ನ ನಂಬಿಸಿ ಬಿಟ್ರಿ ಅಂತ ಅಂದ್ಕೊಳ್ಳಿ, ನಿಮ್ಮ ಕತೆಗಳನ್ನ ಎಂದೂ ಹೇಳಿಕೊಳ್ಳಲು ಆಗಲ್ಲ, ನಿಮ್ಮ ಜೀವನದ ಕತೆಗಳನ್ನ, ಬಂಧು ಬಳಗದ ಕತೆಗಳನ್ನ ಹೇಳಿಕೊಳ್ಳಲು ಆಗಲ್ಲ. ಕತೆಗಳಿಂದ ಜಾತಿ ತಿಳಿದುಬಿಡುತ್ತದೆ. ಏಕೆಂದರೆ ನಿಮ್ಮ ಬದುಕೇ ಜಾತಿ, ಜಾತಿಯೇ ಬದುಕು.

ಅವರಿಗೆ ಸತ್ಯ ತಿಳಿದಿದಿಯೋ ಇಲ್ಲವೋ, ನಾವೆಂದು ನಮ್ಮ ಅಸ್ಪೃಶ್ಯ ಬಾಳಿನ ಬಗ್ಗೆ ಎಂದೂ ಮಾತನಾಡಲಾಗಲ್ಲ. ಪಂಜಾಬ್, ದೆಹಲಿ, ಬಾಂಬೆ, ಬೆಂಗಳೂರು, ಮದ್ರಾಸ್, ವಾರಂಗಲ್, ಕಾನ್ಪುರ್, ಕಲ್ಕತ್ತಾ ಎಲ್ಲೆಲ್ಲೂ ಈ ವಾಸ್ತವ ಬದಲಾಗಿಲ್ಲ.

ನನ್ನ ಇಪ್ಪತ್ತಾರನೇ ವಯಸ್ಸಿಗೆ ನಾನು ಅಮೆರಿಕಾಕ್ಕೆ ಬಂದೆ. ಇಲ್ಲಿ ಜನರಿಗೆ ಮೈಬಣ್ಣದ ಬಗ್ಗೆ ಅತಿ ಹೆಚ್ಚು ಆಸಕ್ತಿ, ಹುಟ್ಟಿದ ಜಾತಿಯಲ್ಲ. ಇಲ್ಲಿನ ಕೆಲವರು ಭಾರತೀಯರನ್ನ ಇಷ್ಟಪಡುತ್ತಾರೆ, ಇನ್ ಕೆಲವರು ದ್ವೇಷಿಸುತ್ತಾರೆ. ಆದರೆ ಅವರ ಭಾವನೆಗಳು ಜಾತಿಯಿಂದ ಭಾದಿತವಾಗಿಲ್ಲ ಅನ್ನೋದೇ ಖುಷಿ. ಒಮ್ಮೆ ಅಟ್ಲಾಂಟಾದ ಬಾರ್ ವೊಂದರಲ್ಲಿ ” ನಾನು ಅಸ್ಪೃಶ್ಯಳು” ಎಂದು ಒಬ್ಬನ ಬಳಿ ಹೇಳಿಕೊಂಡೆ ಅದಕ್ಕೆ ಅವ ” Oh, but you’re so touchable” ಎಂದಿದ್ದ.  ಇಲ್ಲಿಗೆ ಬಂದು ಕೆಲ ಗೆಳೆಯರೊಡನೆ ಮಾತನಾಡಿದ ಮೇಲೆಯೇ ನನಗೆ ಅರಿವಾಗಿದ್ದು ನನ್ನ ಕತೆಗಳು, ನನ್ನವರ ಕತೆಗಳು ಅಪಮಾನದ, ಮುಜುಗರದ ಕತೆಗಳಲ್ಲವೆಂದು.

ಇದನ್ನು ಓದಿ: ಇಂದಿನ ಶಿಕ್ಷಣ ವ್ಯವಸ್ಥೆ ಮಠದ ಪ್ರವಚನದಂತಿದೆ: ಪ್ರೊ. ಎಂ. ಚಂದ್ರಪೂಜಾರಿ

ಹೀಗೆ ಸುಜಾತಾ ಗಿದ್ಲಾ ತನ್ನ ants among elephants- An Untouchable Family and the Making of Modern India ಎಂಬ ಕಾದಂಬರಿಯಲ್ಲಿ ಬರೆದುಕೊಂಡದ್ದು ಓದಿದ್ದು ಜ್ಞಾಪಕವಿದೆ. ವಿದೇಶ ಸುಜಾತಾ ಗಿದ್ಲಾ ಅಂತವರಿಗೆ ನೀಡಿದ ಹೊಸಬಾಳು ಎಂತದ್ದು! ಜಾತಿಗಳಿಲ್ಲದ, ಅಸ್ಪೃಶ್ಯತೆಗಳಿಲ್ಲದ ಆ ಲಿಬರೇಟಿಂಗ್ ಫೀಲಿಂಗ್ ಹೇಗಿದ್ದಿರಬಹುದು! ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ವಿದೇಶದಲ್ಲಿ ಅವರಿಗೆ ಅನುಭವವಾದ ಈ ವಿಮೋಚನೆ ಕುರಿತು ಅವರ ಬರಹಗಳಲ್ಲಿ ಹೇಳಿಕೊಳ್ಳುತ್ತಾರೆ.  ಗಿದ್ಲಾ ಮತ್ತು ಅಂಬೇಡ್ಕರ್ ಅವರನ್ನ ಓದಿದಾಗ ಈ ಹಾಳು ಜಾತಿ ಪದ್ದತಿಯ ಮಾರಕ ಉಪಟಳ ಭಾರತಕ್ಕೆ ಸೀಮಿತವಾಗಿದೆಯೆಂದು ಖುಷಿಪಟ್ಟಿದ್ದೆ.  ಆದರೆ ಐ ವಾಸ್ ರಾಂಗ್. ಜಾತಿ ಎಂಬ ಕ್ಯಾನ್ಸರ್ ಇಂದು ವಿಶ್ವದೆಲ್ಲೆಡೆ ಹರಡಿದೆ. ಭಾರತೀಯರು ಎಲ್ಲಿಗೆ ಹೋದರು ಅಲ್ಲಿಗೆ ತಮ್ಮ ಜಾತಿಯನ್ನೂ ತೆಗೆದುಕೊಂಡು ಹೋಗುತ್ತಾರೆ. ಅಲ್ಲೂ ತಮ್ತಮ್ಮ ಜಾತಿಯ ಸಂಘ, ಮಂಡಳಿ, ghettoಗಳನ್ನ ತೆರೆಯುತ್ತಾರೆ ಅನ್ನೋದು ಬಹುಬೇಗ ತಿಳಿದುಕೊಂಡೆ. ಹೌದು for ಇಂಡಿಯನ್ಸ್ ಸುಜಾತಾ ಗಿದ್ಲಾ ಹೇಳುವ ಹಾಗೆ “Life is your Caste, your caste is your life.”

ಸುಜಾತಾ ಗಿದ್ಲಾ ಹೇಳುವ ಇನ್ನೊಂದು ಘಟನೆಯ ಬಗ್ಗೆಯೂ ಇಲ್ಲಿ ಪ್ರಸ್ತಾಪಿಸುವುದು ಸರಿಯೆನ್ನಿಸುತ್ತದೆ. ಸುಜಾತಾಗೆ ತಾನೊಬ್ಬ ಅಸ್ಪ್ರಶ್ಯಳು ಎನ್ನುವ ಅಸ್ಮಿತೆಗಿಂತ ತಾನೊಬ್ಬ ಕ್ರೈಸ್ತಳು ಎನ್ನುವುದು ಹೆಚ್ಚು ಮನನವಾಗಿರುತ್ತದೆ. ಅವಳು ವಿದ್ಯಾಭ್ಯಾಸ ಮಾಡುವ ಆಂಧ್ರ ಪ್ರಾಂತ್ಯದಲ್ಲಿ ಬ್ರಾಹ್ಮಣ ಹುಡುಗರು ಈ ಕ್ರೈಸ್ತ ಹುಡುಗಿಯರನ್ನ ಕಾಗೆ, ಹಂದಿ ಅಂತಲೋ, ತೋಟಿ ಅಂತಲೋ  ಕರೆಯುವುದು ಸರ್ವೇ ಸಾಮಾನ್ಯವಾಗಿರುತ್ತೆ. ಸುಜಾತಾ ಓದಲು ಮದ್ರಾಸಿನ ಐಐಟಿ ಸೇರಿದಾಗ ಅವಳಿಗೊಂದು ಅಚ್ಚರಿ ಕಾದಿರುತ್ತದೆ. ಅಲ್ಲಿನ ಹಾಸ್ಟೆಲ್ನಲ್ಲಿರುವ ಕೇರಳ ಕ್ರಿಶ್ಚಿಯನ್ ಹುಡುಗಿಯರಿಗೆ ಎಲ್ಲಿಲ್ಲದ ಮೇಲಿರಿಮೆ ಇರುತ್ತದೆ. ಸುಜಾತಾ ಕ್ರೈಸ್ತ ಧರ್ಮಕ್ಕೆ ಸೇರಿದವಳಾದರು ಅವಳನ್ನ ಹತ್ತಿರಕ್ಕೂ ಸೇರಿಸದ ಮನಸ್ಥಿತಿ ಅವರಲ್ಲಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಹುಡುಗಿಯರ ಹಿಂದೆ ಬ್ರಾಹ್ಮಣ ಹುಡುಗರು ಬಿದ್ದಿರುತ್ತಾರೆ. ಕೇರಳ ಕ್ರಿಶ್ಚಿಯನ್ ಹುಡುಗಿಯರು ಸಂಭಾವಿತರು ಕೂಡ ಆಗಿರುತ್ತಾರೆ. ಒಂದು ದಿನ ಸುಜಾತಾ ಜೆಸ್ಸಿ ಎಂಬ ಹುಡುಗಿಯನ್ನ ವಿಚಾರಿಸಲಾಗಿ ಸತ್ಯ ತಿಳಿಯುತ್ತದೆ. “ನಾವು ಬ್ರಾಹ್ಮಣರು” ಎಂದು ಜೆಸ್ಸಿ ಹೇಳಿತ್ತಾಳೆ. ಹಾಗಾದ್ರೆ ಕ್ರೈಸ್ತ ಮತಕ್ಕೆ ಯಾವಾಗ ಸೇರಿಕೊಂಡ್ರಿ ಎಂದು ಮುಗ್ಧ ಸುಜಾತಾ ಕೇಳುತ್ತಾಳೆ.

ಇದನ್ನು ಓದಿ: ಅಸ್ಪೃಶ್ಯರ ಮೇಲೆ ಮೇಲ್ಜಾತಿಯವರ ದಬ್ಬಾಳಿಕೆ-ಯಜಮಾನಿಕೆ

“ನೋಡು ಸುಜಾತಾ ನಾವು ಮೊದಲು ಬ್ರಾಹ್ಮಣ ನಂಬೋದಿರಿಗಳಾಗಿದ್ದೆವು. ಜೇಷ್ಠ ಪುತ್ರನಿಗೆ ಮಾತ್ರ ಪೋಷಕರ ಆಸ್ತಿ ಮತ್ತು ಆತನಿಗೆ ಮಾತ್ರ ಮದುವೆಯ ಭಾಗ್ಯವೆಂಬ ಪದ್ಧತಿ ನಂಬೋದಿರಿಗಳಲ್ಲಿದೆ. ಇದರಿಂದ ಕಿರಿಯ ಪುತ್ರರಿಗೆ ನಯ ಪೈಸೆ ಸಿಗುತ್ತಿರಲಿಲ್ಲ ಮತ್ತು ಅವರು ಕೆಳ ಜಾತಿ ಹೆಣ್ಣು ಮಕ್ಕಳ ಸಹವಾಸ ಮಾಡಬೇಕಿತ್ತು ಅಥವಾ ಬ್ರಹ್ಮಚಾರಿಯಾಗಿಯೇ ಉಳಿಯಬೇಕಿತ್ತು. ಈ ವಿಚಿತ್ರ ಪದ್ದತಿಯಿಂದ ತಪ್ಪಿಸಿಕೊಳ್ಳಲು ಕ್ರಿ.ಶ 50ರಲ್ಲಿ ಕೇರಳ ದಲ್ಲಿ ಪ್ರವಾಸ ಮಾಡುತ್ತಿದ್ದ ಸಂತ ಥಾಮಸ್ ನ ಸಹಾಯ ಪಡೆದ ನಂಬೋದಿರಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು.” ಎಂದು ಜೆಸ್ಸಿ ಸುಜಾತಗೆ ತಿಳಿಸುತ್ತಾಳೆ . ಮತ ಬದಲಾಯಿತು ಆದರೆ ಜಾತಿಯ ಸವಲತ್ತುಗಳು, ಮೇಲಿರಿಮೆ ಹಾಗೆ ಉಳಿಯಿತು. ಬದಲಾಗುವ ಸನ್ನಿವೇಶಗಳಿಗೆ ಹೊಂದಾಣಿಕೆ ಮಾಡಿಕೊಂಡು ಜಾತಿ ಹಸನಾಗಿ ಬೆಳೆಯುವ ಬಗೆಯಿದು.

ಇನ್ನೊಂದೆಡೆ ಜಾತಿರಹಿತ ಧರ್ಮವೆಂದು ಹೆಸರುವಾಸಿಯಾಗಿರುವ ಇಸ್ಲಾಂ ಧರ್ಮದಲ್ಲೂ ಜಾತಿ ನುಸುಳಿಕೊಂಡಿದೆ. ಹಾಗೆ ನೋಡಿದರೆ ಜಾತಿ ಅಂಟಿಸಿಕೊಂಡ ಇಂಡಿಯನ್ ಇಸ್ಲಾಂ ಜಗತ್ತಿನ ಬೇರೆ ಇಸ್ಲಾಂಗಳಿಗಿಂತ ವಿಭಿನ್ನವಾಗಿದೆ ಎನ್ನುತ್ತಾರೆ ಲೇಖಕ ಝಿಯಾ ಉಸ್ ಸಲಾಂ. ಇತ್ತೀಚಿಗೆ ಭಾರತದ ಅತಿ ಹಳೆಯ ಮುಸ್ಲಿಂ ಸಂಘಟನೆ “ಜಮೀಯತ್ ಉಲಮಾ ಹೇ ಹಿಂದ್” ಶಾಲೆ, ಕಾಲೇಜು ಮತ್ತು ಸರ್ಕಾರಿ ನೌಕರಿಗಳಲ್ಲಿ “ದಲಿತ ಮುಸ್ಲಿಂರಿಗೆ”  ಮೀಸಲಾತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿರುವುದನ್ನ ನಾವಿಲ್ಲಿ  ಗಮನಿಸಬೇಕು.  (A picture of Islam that is quite different- The Jamaat-e-Islami Hind and the Jamiat Ulama-i-Hind are presenting themselves in different ways as entities with a uniquely Indian identity by Ziya Us Salam ದ ಹಿಂದೂ Feb 20/2023 ಗಮನಿಸಿ)

ಅಮೇರಿಕಾದಲ್ಲಿ ಜಾತಿಯ ಅಸ್ತಿತ್ವ ಹೇಗಿದೆ? ಸುಜಾತ ಅಸ್ಪೃಶ್ಯತೆಯ ಅವಮಾನಗಳಿಂದ ಹೊರಬಂದು ಆತ್ಮವಿಶ್ವಾಸದಿ ತನ್ನ ಕತೆ ಹೇಳಿಕೊಳ್ಳುವ ಅಮೆರಿಕಾದಲ್ಲಿ ಜಾತಿ ಎಷ್ಟು ಆಳವಾಗಿ ಬೇರುಬಿಟ್ಟಿದೆ? ಇದೇ ಫೆಬ್ರವರಿ 21 ರಂದು ಅಮೆರಿಕಾದ ಸಿಯಾಟಲ್ ನಗರ ಕೌನ್ಸಿಲ್ ಜಾತಿ ತಾರತಮ್ಯವನ್ನ ಬ್ಯಾನ್ ಮಾಡಿತು. ವರ್ಣ, ಧರ್ಮ, ಲಿಂಗ ತಾರತಮ್ಯದ ಜೊತೆಗೆ ಜಾತಿ ತಾರತಮ್ಯವು ಕಾನೂನು ಬಾಹಿರವಾಯಿತು. ಅಮೇರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಹಾರ್ವರ್ಡ್, ಬ್ರೌನ್, ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾಲಯಗಳು ಜಾತಿ ತಾರತಮ್ಯವನ್ನ ತಡೆಗಟ್ಟಲು ಕಠಿಣ ನೀತಿಗಳನ್ನ ಜಾರಿಗೆ ತಂದಿವೆ.  ಈಕ್ವಾಲಿಟಿ ಲ್ಯಾಬ್ಸ್ ಮತ್ತಿತರ ಸ್ಥಳೀಯ ಸಂಘಗಳು ಈ ಆದೇಶ ಜಾರಿಗೆ ತರಲು ಸಿಯಾಟಲ್ನಲ್ಲಿ ಶ್ರಮಿಸಿದರು.

ಈಕ್ವಾಲಿಟಿ ಲ್ಯಾಬ್ 2016ರಲ್ಲಿ ನೆಡೆಸಿದ  ಸಮೀಕ್ಷೆಯ ಪ್ರಕಾರ ಅಮೇರಿಕಾದಲ್ಲಿ ನೆಲೆಸಿದ್ದ ನಾಲ್ಕು ದಲಿತರಲ್ಲಿ ಒಬ್ಬರು ಮೌಖಿಕ ಅಥವಾ ದೈಹಿಕ ದಾಳಿಗೆ ಒಳಗಾಗಿದ್ದರು. ಮೂವರಲ್ಲಿ ಇಬ್ಬರಿಗೆ ಕೆಲಸ ಮಾಡುವಲ್ಲಿ ಜಾತಿ ಆಧಾರಿತ ನಿಂದನೆ, ತಾರತಮ್ಯ ಸಹಿಸಬೇಕಾಗಿತ್ತು. ಕೆಲಸ ಮಾಡುವ ಜಾಗಗಳಲ್ಲಿ, ಪೂಜಾ ಸ್ಥಳಗಳಲ್ಲಿ, ಸಮುದಾಯಗಳ ಒಡನಾಟಗಳಲ್ಲಿ ಜಾತಿ ತಾರತಮ್ಯ ಎದುರಿಸಿ ಅದರ ವಿರುದ್ಧ ಸಿಡಿದೆದ್ದವರ ಮಾಹಿತಿ ಕಲೆ ಹಾಕಿತ್ತು ಈಕ್ವಾಲಿಟಿ ಲ್ಯಾಬ್ಸ್.

ಇದನ್ನು ಓದಿ: ಹಿಂದುತ್ವದ ಜಿಜ್ಞಾಸೆ ಹಾಗೂ ಹಿಂದೂಪರ ಸಂಘಟನೆಗಳ ಮೀಸಲಾತಿ ವಿರೋಧಿ ಹೇಳಿಕೆಯ ಪ್ರಶ್ನೆಗಳು…..???

ಮೈಕ್ರೋಸಾಫ್ಟ್, ಅಮೆಜಾನ್, ಬೋಯಿಂಗ್ ನಂತಹ ಕಂಪನಿಗಳ ತವರೂರಾಗಿರುವ ಸಿಯಾಟಲ್ ನಗರದಲ್ಲೂ ಜಾತಿ ಇಷ್ಟು ಸೊಂಪಾಗಿ ಬೆಳೆಯುತ್ತೆ ಅಂದರೆ ಮನುಸ್ಮೃತಿಯಲ್ಲಿ ಜನಿಸಿ ಕ್ರಮೇಣ ಸಮಾಜದಲ್ಲಿ ಕಠಿಣ ಕ್ರಮಾನುಗತ ಹುಟ್ಟಿ ಹಾಕಿದ ಜಾತಿ ಪದ್ಧತಿಗೆ ಇರುವ ಪ್ರಭಾವ ಎಂತದ್ದು ಅನ್ನೋದನ್ನ ನಾವು ಮನಗಾಣಬೇಕು. ಅಮೆರಿಕಾದ ಸಿಯಾಟಲ್ ನಂತಹ ನಗರದಲ್ಲೂ ದಲಿತರು ಅವಮಾನ, ತಾರತಮ್ಯ ಎದುರಿಸಬೇಕಾಗುತ್ತದೆ ಎಂದರೆ, ಬೇರೆ ಧರ್ಮದ ಒಳಗೂ ನುಸುಳಿ ಅದು ಜೀವಿಸುವುದಾದರೆ ಜಾತಿ ಎಂಬ ಆಕ್ಟೋಪಸ್  ಬಾಹುಗಳು ಬಲಿಷ್ಠತೆಯನ್ನು ಅಂದಾಜಿಸುವುದು ಕಷ್ಟ.

ಮತ್ತೆ ಭಾರತಕ್ಕೆ ಬರೋಣ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಲೋಕಸಭೆಯಲ್ಲಿ ನೀಡಿದ ಮಾಹಿತಿ ಪ್ರಕಾರ 2014-2021ರ ವರೆಗೆ ಭಾರತದ ಐಐಟಿ, ಐಐಎಂ, ಏನ್ ಐಟಿ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿಒಟ್ಟು 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ 68ಮಂದಿ Reserved category ಗೆ ಸೇರಿದವರು. ಇವರಲ್ಲಿ 24 ದಲಿತರು, 41 ಹಿಂದುಳಿದ ವರ್ಗದ ಮತ್ತು ಮೂವರು ಪರಿಶಿಷ್ಟ ಪಂಗಡದವರಿದ್ದಾರೆ.

ಎಐಐಎಂಎಸ್‌ ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲೂ ಪರಿಶಿಷ್ಟ ಜಾತಿ/ಪಂಗಡದವರು ಎಂಬ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನ ಫೇಲ್ ಮಾಡುವ ಪದ್ದತಿಯಿದೆ ಎಂದು ಕಿರೀಟ್ ಪ್ರೇಮ್ ಭಾಯ್  ಸೋಲಂಕಿ ಸಮಿತಿ ವರದಿ ಸಲ್ಲಿಸಿದೆ. ಇದನ್ನ ಮೀರಿ ಎಲೈಟ್ ಸಂಸ್ಥೆಗಳಲ್ಲಿ ಬೋಧಿಸುವ ಶಿಕ್ಷಕರು ಕೂಡ ಸತತ ಜಾತಿ ಆಧಾರಿತ ಕಿರುಕುಳ, ನಿಂದನೆ ಹಾಗು ಕಡೆಗಣನೆಗೆ ಒಳಗಾಗುತ್ತಾರೆಂಬುದು ರಹಸ್ಯವಾಗಿ ಉಳಿದಿಲ್ಲ.

ಇದನ್ನು ಓದಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 4 ದಿನಗಳಲ್ಲಿ 3 ವಿದ್ಯಾರ್ಥಿಗಳ ಆತ್ಮಹತ್ಯೆ

ಇನ್ನು ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಖಾಲಿಯಿರುವ ಪರಿಶಿಷ್ಟ ಜಾತಿ/ಪಂಗಡ ಮೀಸಲಿರುವ ಹುದ್ದೆಗಳ ಭರ್ತಿ ಕುರಿತು ಮಾತನಾಡವುದೇ ಬೇಡ.

ನಮ್ಮ ದೇಶದ ಎಲೈಟ್ ಶಿಕ್ಷಣ ಸಂಸ್ಥೆಗಳಲ್ಲಿ ರೋಹಿತ್ ವೇಮುಲ, ದರ್ಶನ್ ಸೋಲಂಕಿ, ಅನಿಕೇತ್ ಅಂಭೋರೆ, ಪಾಯಲ್ ತಡ್ವಿಯಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪ್ರಾಣ ಬಿಟ್ಟರು, ನಮ್ಮ ದೇಶದಲ್ಲಿ ಜಾತಿ ಎಂಬುದಿಲ್ಲ ಎಂದು ವಾದಿಸುತ್ತೇವೆ. ಜಾತಿ ಎಂಬ ಆಕ್ಟೋಪಸ್ ತನ್ನ ರೂಪ, ಬಣ್ಣ, ಆಕಾರ ಬದಲಾಯಿಸಿ ಎಲ್ಲೆಲ್ಲೂ ನುಸುಳಿದರು, ಜಾತಿ ಇಲ್ಲವೆಂದು ವಾದಿಸುತ್ತೇವೆ. ನಾವೆಲ್ಲ ಹಿಂದೂ. ನಾವೆಲ್ಲ ಒಂದು ಎಂಬ ಕೂಗು ಹಾಕುತ್ತೇವೆ. ಸಿಯಾಟಲ್ ನಗರ ಕಠಿಣ ಕ್ರಮ ಕೈಗೊಂಡು ಜಾತಿ ತಾರತಮ್ಯವನ್ನ ನಿಷೇಧಿಸಿದೆ. ನಮ್ಮಲ್ಲೂ ಆರ್ಟಿಕಲ್ 15 The State shall not discriminate against any citizen on grounds only of religion, race, caste, sex, place of birth or any of them ಎಂಬುದು ಬರಿಯ ಆರ್ಟಿಕಲ್ ಆಗಿ ಪುಸ್ತಕಗಳಲ್ಲಿ ಕಳೆದು ಹೋಗಿದೆ. Caste Persists and it thrives.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *