ಅರಕಲಗೂಡು: ತಾಲ್ಲೂಕಿನ ರಾಮನಾಥಪುರ ಹೋಬಳಿ ಗಂಗೂರು ಗ್ರಾಮದ ಜೀತವಿಮುಕ್ತ ದಲಿತರು ಜೀವನ ಸಾಗಿಸಲು ಭೂಮಿ ಸಾಗುವಳಿ ಮಾಡಲು ಜಮೀನು ಮಂಜೂರು ಮಾಡಬೇಕೆಂದು ದಲಿತ ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ತಹಶೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿ ಒತ್ತಾಯಿಸಿದ್ದಾರೆ.
ಗಂಗೂರು ದಲಿತರನ್ನು ಜೀತದಿಂದ ವಿಮುಕ್ತಿಗೊಳಿಸಿ 27 ವರ್ಷ ಕಳೆದರೂ, ಸರ್ಕಾರ ಮತ್ತು ಜಿಲ್ಲಾಡಳಿತ ಜೀತವಿಮುಕ್ತ ದಲಿತರಿಗೆ ಕೃಷಿ ಜಮೀನು ಮಂಜೂರು ಮಾಡಿಲ್ಲ ಮತ್ತು ಪುನರ್ವಸತಿ ಕಲ್ಪಿಸಿಲ್ಲ ಎಂದು ಪ್ರತಿಭಟನಾಕರರು ಆಗ್ರಹಿಸಿದ್ದಾರೆ.
ಇದನ್ನು ಓದಿ: ಜೀತಕ್ಕಷ್ಟೇ ವಿಮುಕ್ತಿ, ಸೆರೆಯಲ್ಲೇ ಉಳಿದ ಬದುಕು
ಭೂಹೀನ ದಲಿತರಿಗೆ ಕೃಷಿ ಭೂಮಿ ನೀಡಲು ಕೂಡಲೆ ಕ್ರಮಕೈಗೊಳ್ಳಬೇಕೆಂದು ಈಗಾಗಲೇ ಸರ್ಕಾರ ಹಾಗೂ ಹಾಸನ ಜಿಲ್ಲಾಡಳಿತ, ಅರಕಲಗೂಡು ತಾಲ್ಲೂಕು ಆಡಳಿತಕ್ಕೆ ಆಗ್ರಹಿಸಿ ಹಲವು ಭಾರಿ ಒತ್ತಾಯಿಸಿದ್ದರೂ ಯಾವುದೇ ಕ್ರಮವಹಿಸದ ಅಧಿಕಾರಿಗಳು ಜೀತದಿಂದ ವಿಮುಕ್ತರಾದವರಿಗೆ ಅನ್ಯಾಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ಜಿಲ್ಲಾಡಳಿತ 1994ರಲ್ಲಿಯೇ ಗಂಗೂರಿನ 91 ದಲಿತ ಕುಟುಂಬಗಳನ್ನು ಜೀತದಿಂದ ವಿಮುಕ್ತಗೊಳಿಸಿದರು. ಆವರ ಬದುಕಿನ ನಿರ್ವಹಣೆಗಾಗಿ ಕೃಷಿ ಭೂಮಿ ಮತ್ತು ಇನ್ನಿತರೆ ಜೀವನೋಪಾಯದ ಸೌಲಭ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 27 ವರ್ಷವಾಗಿದೆ. ಆದರೆ, ಇವರಿಗೆ ಜಮೀನು ನೀಡುವಲ್ಲಿ ಆಡಳಿತ ವಿಫಲವಾಗಿದೆ.
ಜೀತದಿಂದ ಹೊರಬಂದ ದಲಿತ ಕುಟುಂಬಗಳು ಜೀವನ ಸಾಗಿಸಲು 1970 ರಿಂದಲೂ ಸಾಗುವಳಿ ಮಾಡುತ್ತಿದ್ದ ಗಂಗೂರಿನ ಗೊಬ್ಬಳ್ಳಿ ಅರಣ್ಯ ಪ್ರದೇಶದಲ್ಲಿಯೇ ಕೃಷಿ ಮಾಡಿಕೊಂಡಿರುತ್ತಾರೆ. 1974ರಲ್ಲಿಯೇ ಆ ಜಾಗದ ಹಕ್ಕು ಪತ್ರ ನೀಡುವಂತೆ ಸರ್ಕಾರಕ್ಕೆ ಹಣ ಪಾವತಿಯಾಗಿದೆ. ಅಲ್ಲದೆ, ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ. ಇಷ್ಟಿದ್ದರೂ ಸರ್ಕಾರ ಜಮೀನಾಗಲೀ ಅಥವಾ ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕುಪತ್ರವಾಗಲೀ ನೀಡಲಿಲ್ಲ ಎಂದು ಪ್ರತಿಭಟನೆಯ ಮೂಲಕ ಆಗ್ರಹಿಸಿದ್ದಾರೆ.
ಇದನ್ನು ಓದಿ: ಗಂಗೂರು: ಜೀತವಿಮುಕ್ತ ಭೂಹೀನ ದಲಿತರಿಗೆ ಭೂಮಿ ಸಿಗುವವರೆಗೂ ಹೋರಾಟ
ಜೀವನ ಸಾಗಿಸಲು ಪರ್ಯಾಯ ವ್ಯವಸ್ಥೆ ಇಲ್ಲದ ಜೀತವಿಮುಕ್ತರು ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಜಾಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿಯಾಗಿ ಮಾರ್ಚ್ 31ರ ರಾತ್ರಿ ದಲಿತರನ್ನು ಬಲವಂತವಾಗಿ ತೆರವುಗೊಳಿಸಿದ್ದಾರೆ. ಅಲ್ಲದೆ, ಮೇ 2ರಂದು ಅದೇ ಜಾಗದಲ್ಲಿ ಅರಣ್ಯ ಇಲಾಖೆಯು ಗಿಡಗಳನ್ನು ನೆಡಲು ಮುಂದಾಗಿದ್ದರು. ಇದನ್ನು ಹಲವು ಸಂಘಟನೆಗಳ ನೇತೃತ್ವದಲ್ಲಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಜುಲೈ 23ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದು ಗಂಗೂರಿನ ಜೀತವಿಮುಕ್ತರ ಪ್ರಕರಣ ಗಂಭೀರವೆಂದು ಪರಿಗಣಿಸಿ ಅರಣ್ಯ ಹಕ್ಕು ಕಾಯ್ದೆಯಡಿ ಜೀತವಿಮುಕ್ತರಿಗೆ ಹಕ್ಕುಪತ್ರ ನೀಡಲು ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿತು.
ಇವುಗಳ ಹಿನ್ನೆಲೆಯಲ್ಲಿ ಜೀತವಿಮುಕ್ತರನ್ನು ತೆರವುಗೊಳಿಸದಂತೆ ಹಾಗೂ ಗಿಡಗಳನ್ನು ನೆಡದಂತೆ ಅರಣ್ಯ ಇಲಾಖೆಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಆದರೆ, ಜಿಲ್ಲಾಧಿಕಾರಿಗಳ ಸಭೆ ನಡೆದು ಒಂದು ತಿಂಗಳೂ ಕಳೆದರೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅರಕಲಗೂಡು ತಾಲ್ಲೂಕು ಆಡಳಿತ ಯಾವುದೇ ಕ್ರಮವಹಿಸಿಲ್ಲ. ಇದರೊಂದಿಗೆ ಜೀತವಿಮುಕ್ತ ದಲಿತರ ಗುಡಿಸಲುಗಳನ್ನು ತೆರವುಗೊಳಿಸುವಂತೆ ಅಧಿಕಾಋಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ಪ್ರತಿಭಟನೆಯ ಮೂಲಕ ತಿಳಿಸಿದ್ದಾರೆ.
ಭೂಮಿ ಮಂಜೂರು ಮಾಡುವವರೆಗೆ ಅವರು ಉಳುಮೆ ಮಾಡಿಕೊಂಡು ಬದುಕುತ್ತಿದ್ದ ಗೊಬ್ಬಳಿ ಅರಣ್ಯ ಪ್ರದೇಶದಲ್ಲಿ ಜೀವನೋಪಾಯಕ್ಕಾಗಿ ಕೃಷಿ ಚಟುವಟಿಕೆ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಸರ್ಕಾರ ಭೂಮಿ ಮಂಜೂರು ಮಾಡದಿದ್ದರೆ, ಊರಿನ ಪಕ್ಕದಲ್ಲಿರುವ ಅರಣ್ಯ ಭೂಮಿಯನ್ನೇ ಉಳುಮೆ ಮಾಡಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾಧಿಕಾರಿಗಳು ಅರಕಲಗೂಡು ತಾಲ್ಲೂಕು ಕಛೇರಿ ತಹಶಿಲ್ದಾರರು, ಅರಣ್ಯ ಅಧಿಕಾರಿಗಳಿಗೆ ಹಕ್ಕೊತ್ತಾಯಗಳ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ, ಕರ್ನಾಟಕ(ಡಿಹೆಚ್‌ಎಸ್) ಮತ್ತು ಎಲ್ಲಾ ದಲಿತ ಜನಪರ ಸಂಘಟನೆಗಳ ನೇತೃತ್ವ ವಹಿಸಿದ್ದರು.