ಬಿಹಾರ್ ಚುನಾವಣೆಯಲ್ಲಿ ಬಿಜೆಪಿಯ ಚಾಣಾಕ್ಷ ನಡೆಯಿಂದ ಶಾಸಕರ ಸಂಖ್ಯೆ ಇಳಿಮುಖವಾಗಿ ಬಿಜೆಯ ತಮ್ಮನಾಗಿರುವ ಜೆಡಿಯುಗೆ ಈಗ BJP ಮತ್ತೊಂದು ಶಾಕ್ ನೀಡಿದೆ. JDU ನ ಆರು ಶಾಸಕರು BJP ಗೆ ಶಿಫ್ಟ್ ಆಗಿದ್ದಾರೆ.
ಅರುಣಾಚಲ ಪ್ರದೇಶ ವಿಧಾನಸಭೆಯ 7 ಜೆಡಿಯು ಶಾಸಕರ ಪೈಕಿ 6 ಜನರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಈ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಭಾರೀ ಮುಖಭಂಗವಾಗಿದೆ. ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಜೆಡಿಯು ಸರ್ಕಾರ ರಚನೆ ಮಾಡಿದೆ. ಅರುಣಾಚಲದ ಈ ಬೆಳವಣಿಗೆ ಜೆಡಿಯುಗೆ ನುಂಗಲಾರದ ತುತ್ತಾಗಿದೆ.
60 ಸದಸ್ಯರಿರುವ ಅರುಣಾಚಲ ಪ್ರದೇಶದಲ್ಲಿ ಜೆಡಿಯು 7 ಸ್ಥಾನಗಳನ್ನು ಗೆದ್ದಿತ್ತು. ಈ ಪೈಕಿ ಆರು ಶಾಸಕರು ಬಿಜೆಪಿ ಸೇರಿದ್ದಾರೆ. ಹೀಗಾಗಿ, ಪಕ್ಷಾಂತರ ಕಾಯ್ದೆ ಕೂಡ ಇದಕ್ಕೆ ಅನ್ವಯ ಆಗುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಏಳು ಜನ JDU ಶಾಸಕರ ಸೇರ್ಪಡೆಯಿಂದ, ಪೀಪಲ್ ಪಾರ್ಟಿ ಆಫ್ ಅರುಣಾಚಲ ಪಕ್ಷದ ಬೆಂಬಲವೂ ಸೇರಿ ಬಿಜೆಪಿ ಈಗ 48 ಸದಸ್ಯ ಬಲವನ್ನು ಹೊಂದಿದಂತಾಗಿದೆ. ಹಯೇಂಗ್ ಮಂಗ್ಫಿ, ಜಿಕ್ಕೆ ತಕೊ, ಡೊಂಗ್ರು ಸಿಯೊಂಗ್ಜು, ತಲೇಮ್ ತಬೋಹ್, ಕಾಂಗ್ಗಾಂಗ್ ಟಕು ಮತ್ತು ಡೋರ್ಜಿ ವಾಂಗ್ಡಿ ಖರ್ಮಾ ಬಿಜೆಪಿ ಸೇರಿದ ಶಾಸಕರು.
ಪಕ್ಷ ವಿರೋಧಿ ಕಾರ್ಯದಲ್ಲಿ ತೊಡಗಿದ ಆರೋಪದ ಮೇಲೆ ಮೂವರನ್ನು ಸಸ್ಪೆಂಡ್ ಮಾಡಲಾಗಿತ್ತು ಮತ್ತು ನೋಟಿಸ್ ಕೂಡ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ಈ ಆರು ಶಾಸಕರು ಬಿಜೆಪಿ ಸೇರಿದ್ದಾರೆ ಎಂದು ಅರುಣಾಚಲ ರಾಜ್ಯ ಬಿಜೆಪಿ ಘಟಕ ಹೇಳಿದೆ.
ಅರುಣಾಚಲ ರಾಜಕೀಯ ಬೆಳವಣಿಗೆಯಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಅರುಣಾಚಲ ಪ್ರದೇಶದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಬಿಜೆಪಿ (41) ನಂತರ ಅತಿ ಹೆಚ್ಚು ಸ್ಥಾನ ಗಳಿಸಿದ ಹೆಗ್ಗಳಿಕೆ ಜೆಡಿಯುನದ್ದಾಗಿತ್ತು.
ಜೆಡಿಯು ಗೆ ನಿರಂತರ ಹೊಡೆತ : ಬಿಹಾರ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ರನ್ನು ಮುಂದೆ ಬಿಟ್ಟು JDU ಹೆಚ್ಚು ಸೀಟುಗಳಿಸದಂತೆ ಬಲೆ ಹೆಣದಿದ್ದ ಬಿಜೆಪಿ ಅದರಲ್ಲಿ ಯಶಸ್ವಿಯಾಗಿತ್ತು. ಬಿಜೆಪಿಗಿಂತ ಹೆಚ್ಚು ಸ್ಥಾನಗೆದ್ದು ಸೀನಿಯರ್ ಪಾರ್ಟನರ್ ಆಗಿರುತ್ತಿದ್ದ JDU ಈಗ ಜ್ಯೂನಿಯರ್ ಪಾರ್ಟನರ್ ಆಗಿದೆ. ನಿತೀಶ್ ಬಿಜೆಪಿಗಿಂತ ಕಡಿಮೆ ಸ್ಥಾನಗಳಿಸಿದ್ದರೂ ಮುಖ್ಯಮಂತ್ರಿ ಹುದ್ದೆ ನೀಡಿರುವ ಬಿಜೆಯ ಹಿಂದೆ ದೊಡ್ಡ ಅಜೆಂಡ್ ಇದ್ದಂತೆ ಕಾಣಿಸುತ್ತದೆ. ಪ್ರಾದೇಶಿಕ ಪಕ್ಷಗಳ ಪ್ರಾಭಲ್ಯವನ್ನು ಕಡಿಮೆ ಮಾಡುವುದು ಬಿಜೆಪಿಯ ಅಜೆಂಡವಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು, ಗುಜರಾತಿನಲ್ಲಿ ಜನತಾ ಪಕ್ಷವನ್ನು ನಾಶ ಮಾಡಿದಂತೆ ಈಗ ಅರುಣಾಚಲ ಪ್ರದೇಶದಲ್ಲಿ ಜೆಡಿಯು ಕಥೆ ಮುಗಿಸಿದೆ. ಮುಂದೆ ಬಿಹಾರದ ಮುಗಿಸುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೆ ರಾಜಕೀಯ ವರ್ಚಸ್ಸು ಕಳೆದುಕೊಂಡಿರುವ ನಿತೀಶ್ ಕುಮಾರ್ ಗೆ ಈ ಬೆಳವಣಿಗೆ ನುಂಗಲಾರದ ತುಪ್ಪವಾಗಿದೆ.