ರೈತ, ಕಾರ್ಮಿಕ, ದಲಿತ ಐಕ್ಯ ಹೋರಾಟ ಸಮಿತಿಯಿಂದ ರಾಜಭವನ ಚಲೋ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಓರ್ವ ರೈತ ವಿರೋಧಿಯಾಗಿದ್ದು, ಜೆಡಿಎಸ್ ಪಕ್ಷದ ಚಿಹ್ನೆ ಬದಲಾಯಿಸಿಕೊಳ್ಳಲಿ ಎಂದು ಐಕ್ಯ ಹೋರಾಟ ಸಮಿತಿ ಮುಖಂಡ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.
ಐಕ್ಯ ಹೋರಾಟ ಸಮಿತಿಯಿಂದ ಇಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ, ಜೆಡಿಎಸ್ ಪಕ್ಷ ತೆನೆಹೊತ್ತ ರೈತ ಮಹಿಳೆ ಚಿನ್ನೆ ಹೊಂದಿದ್ದಾರೆ. ಆದರೆ ಅನ್ನದಾತರ ವಿರೋಧಿಯಾಗಿರುವ ಜೆಡಿಎಸ್ ಪಕ್ಷಕ್ಕೆ ಈ ಚಿನ್ನೆ ಶೋಬೆ ತರುವದಿಲ್ಲ ಹಾಗಾಗಿ ಚಿನ್ನೆ ಬದಲಾಯಿಸಿಕೊಳ್ಳಬೇಕು. ವಿಧಾನಪರಿಷತ್‌ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಮರಿತಿಬ್ಬೇಗೌಡ ಅವರನ್ನು ಹೊರತುಪಡಿಸಿದರೆ ಉಳಿದೆಲ್ಲ ಜೆಡಿಎಸ್ ಸದಸ್ಯರು ಮಸೂದೆ ಪರ ಎದ್ದು ನಿಂತು ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಪಕ್ಷದ ಶಾಸಕರು ಮಾರಾಟವಾಗಿದ್ದಾರೆ ಎಂದು ಬಡಗಲಪುರ ನಾಗೇಂದ್ರ ಆರೋಪ ಮಾಡಿದ್ದಾರೆ.
ಇದಕ್ಕೂ ಮುನ್ನ ರೈತರು ಐಕ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಸಿದರು. ರೈತ ವಿರೊಧಿ ಮಸೂದೆಗಳಿಗೆ ರಾಜ್ಯಾಪಾಲರು ಸಹಿಹಾಕಬಾರದು ಎಂದು ಪ್ರತಿಭಟನೆಕಾರರು ಒತ್ತಾಯವನ್ನು ಮಾಡಿದ್ದಾರೆ. ರಾಜ್ಯ ಸರಕಾರ ಜಾರಿ ಮಾಡಿರುವ ಭೂ ಸುಧಾರಣಾ ತಿದ್ದುಪಡಿ ಮಸೂದೆ 2020 ನ್ನು ಪ್ರಕಟಿಸದೆ ವಾಪಸ್ಸ ಪಡೆಯಬೇಕು ಇಲ್ಲದೆ ಹೋದಲ್ಲಿ ದೆಹಲಿ ಮಾದರಿಯಲ್ಲಿ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆಯನ್ನು ನೀಡಿದ್ದಾರೆ. ರಾಜ್ ಭವನಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಹೋರಾಟಗಾರರನ್ನು ತಡೆದರು. ರೈತರು ರಾಜ ಭವನ ಪ್ರವೇಶಿಸದಂತೆ ಬಾರೀ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಲಾಗಿತ್ತು.
ಈ ಮೆರವಣಿಗೆಯಲ್ಲಿ ಕೃಷಿ ತಜ್ಞ ಪ್ರಕಾಶ್ ಕಮ್ಮರಡಿ, ರೈತ ಮುಖಂಡರಾದ ಕುರುಬೂರು ಶಾಂತಕುಮಾರ, ಚಾಮರಸ ಮಾಲೀಪಾಟೀಲ್, ಕುಮಾರ ಸಮತಳ, ದಲಿತ ಮುಖಂಡರಾದ ಗುರುಪ್ರಸಾದ್ ಕೆರೆಗೋಡು, ವಿ,ಗಾಯತ್ರಿ, ಗೋಪಾಲಕೃಷ್ಣ ಹರಳಹಳ್ಳಿ, ಮೋಹನ್ ರಾಜ್, ಕಾರ್ಮಿಕ ಮುಖಂಡರಾದ ಕೆ.ಎನ್. ಉಮೇಶ್, ಕೆ.ಮಹಾಂತೇಶ್, ಕಾಳಪ್ಪ, ಡಿ.ಎಚ್. ಪೂಜಾರ, ಮಹಿಳಾ ಸಂಘಟನೆಯ ಗೌರಮ್ಮ ಸೇರಿದಂತೆ ಅನೇಕರಿದ್ದರು.