ಬೆಂಗಳೂರು: ರಾಜ್ಯಸಭಾ ಚುನಾವಣೆ ಮತದಾನ ರೋಚಕ ಘಟ್ಟ ತಲುಪಿದ್ದು, ಜೆಡಿಎಸ್ ನಿಂದ ಮೊದಲ ಅಡ್ಡಮತದಾನವಾಗಿದೆ. ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಗೆ ಮತಹಾಕಿದ್ದಾರೆ.
ರಾಜ್ಯಸಭೆ ಚುನಾವಣೆ ಸಂಬಂಧ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯಲ್ಲಿ ಕೋಲಾರ ಶಾಸಕ ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಪರ ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಧಾನಸೌಧದಲ್ಲಿ ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್‌ಗೆ ಸೇರುತ್ತಿದ್ದೇನೆ ಹಾಗಾಗಿ ಕಾಂಗ್ರೆಸ್ ಗೆ ಮತಹಾಕಿದ್ದೇನೆ ಇದರಲ್ಲಿ ಯಾವುದೇ ಮುಚ್ಚು ಮರೆಯಿಲ್ಲ ಎಂದು ಹೇಳಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಬೆಳಗ್ಗೆ ಶ್ರೀನಿವಾಸ ಗೌಡರ ಮನೆಗೆ ಹೋಗಿ ಕೊನೆಯ ಹಂತದ ಮಾತುಕತೆ ನಡೆಸಿದ್ದರು. ಶ್ರೀನಿವಾಸಗೌಡ ಜಡಿಎಸ್ ಶಾಸಕರಾದರೂ ಸಹ ಕಳೆದೊಂದು ವರ್ಷದಿಂದಲೂ ಜೆಡಿಎಸ್ ನಾಯಕರನ್ನು ಟೀಕಿಸುತ್ತಾ, ಕಾಂಗ್ರೆಸ್ ನಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ನಮ್ಮ ಶಾಸಕರಿಂದ ಅಡ್ಡ ಮತದಾನ ಮಾಡಿಸುವಲ್ಲಿ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಯಶಸ್ವಿಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಇದರಿಂದ ಬಿಜೆಪಿಗೆ ಲಾಭ ಆಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ – ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದ್ದಾರೆ.