ರಾಯಚೂರು: ಸಿಂಧನೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಜನತಾ ದಳ (ಜಾತ್ಯತೀತ)-ಜೆಡಿಎಸ್ ಪಕ್ಷದ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಖಚಿತ ಎಂದಿದ್ದಾರೆ.
ಬಿಜೆಪಿ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎನ್ನಲು ನಳೀನ್ ಕುಮಾರ್ ಬಗ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಸಂವಿಧಾನ ನನಗೆ ಹಕ್ಕು ಕೊಟ್ಟಿದೆ. ಅದನ್ನು ಮೀರಿ ಮಾತನಾಡೋಕೆ ಇವರಿಗೇನು ಅಧಿಕಾರ ಇದೆ? ಸಿದ್ದರಾಮಯ್ಯಗೆ ಹಕ್ಕಿಲ್ಲ ಅನ್ನೋದಕ್ಕೆ ಇವರಿಗೇನು ಸಂವಿಧಾನ ಹಕ್ಕು ಕೊಟ್ಟಿದೆಯಾ? ಸಂವಿಧಾನ ಓದಿಕೊಂಡಿದ್ದಾರಾ ಅವರು? ಪ್ರತಿಯೊಬ್ಬರ ಅಭಿವ್ಯಕ್ತಿ ಸ್ವಾತಂತ್ರ‍್ಯ ಕಿತ್ತುಕೊಳ್ಳುವುದಕ್ಕೆ ಅವರು ಸುಪ್ರೀಂ ಕೋರ್ಟಾ? ಎಂದು ತರಾಟೆಗೆ ತೆಗೆದುಕೊಂಡರು.
ಭ್ರಷ್ಟಾಚಾರ, ದುರಾಡಳಿತದಲ್ಲಿ ತೊಡಗಿರುವ ಬಿಜೆಪಿಗೆ ಈ ಬಾರಿ 50ರಿಂದ 60 ಸೀಟುಗಳೂ ಬರುವುದಿಲ್ಲ. ಕಾಂಗ್ರೆಸ್ 130 ರಿಂದ 150 ಸೀಟು ಗೆಲ್ಲಲಿದೆ. ಎಂದಿರುವ ಸಿದ್ದರಾಮಯ್ಯ ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾನಂದರೆ ಬಿಜೆಪಿ, ಜೆಡಿಎಸ್ ಅವರಿಗೆ ಭಯ. ಹೀಗಾಗಿ ಆ ಪಕ್ಷದ ನಾಯಕರು ನನ್ನ ವಿರುದ್ಧ ಏನಾದರೂ ಹೇಳಿಕೆ ನೀಡುತ್ತಿರುತ್ತಾರೆ ಎಂದರು.
ಕಾಂಗ್ರೆಸ್ ಬಗ್ಗೆ ಹೇಳಿಕೆ ನೀಡುವ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು. ಕಾಂಗ್ರೆಸ್ ಗೆ ಮುಸ್ಲಿಮರು ಮತ ಹಾಕಬೇಡಿ ಅನ್ನುವ ಅವರ ಹೇಳಿಕೆಯಲ್ಲಿ ಅರ್ಥವಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಯಾರು? ಕುಮಾರಸ್ವಾಮಿಯೇ ಯಡಿಯೂರಪ್ಪ ಜೊತೆ ಸೇರಿ ಸರ್ಕಾರ ಮಾಡಿದ್ದು. ಕಾಂಗ್ರೆಸ್ ಬಿಜೆಪಿ ಬಿ ಟೀಮ್ ಎಂದು ಪ್ರಚಾರ ಮಾಡುವ ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದರು.
ಕೋಲಾರದಿಂದಲೇ ಸ್ಪರ್ಧೆ
ನಾನು ಎಲ್ಲೆ ನಿಂತರೂ ಬಿಜೆಪಿಯವರಿಗೆ ಭಯ. ಬಾದಾಮಿಯಲ್ಲಿ ನಿಂತರೂ ಗೆಲ್ಲುತ್ತೇನೆ, ಕೋಲಾರದಲ್ಲಿ ನಿಂತರೂ ಗೆಲುತ್ತೇನೆ. ಬಾದಾಮಿ ದೂರ ಆಗುತ್ತಿತ್ತು. ಕೋಲಾರ ಹತ್ತಿರ ಅಂತ ಅಲ್ಲಿರುವ ಕಾರ್ಯಕರ್ತರು ಕರೆದರು. ಅಲ್ಲಿ ನಿಲ್ಲುವುದಕ್ಕೆ ತೀರ್ಮಾನಿಸಿದ್ದೇನೆ. ಹೈಕಮಾಂಡ್ ತೀರ್ಮಾನ ಕೊಟ್ಟರೆ ಕೋಲಾರದಲ್ಲೇ ಸ್ಪರ್ಧೆ ಎಂದರು.
ದುಡ್ಡಿದೆ ಅಂತಾ ಹೊಸ ಪಕ್ಷ
ಕರ್ನಾಟಕದ ರಾಜಕಾರಣದ ಮಟ್ಟಿಗೆ ಹೊಸ ಪಕ್ಷ ಕಟ್ಟಿದವರು ಯಾರೂ ಉಳಿದಿಲ್ಲ. ಪಾಪ ಜನಾರ್ದನ ರೆಡ್ಡಿ ಅವರ ಬಳಿ ದುಡ್ಡು ಇದೆ ಅಂತ ಹೊಸ ಪಕ್ಷ ಕಟ್ಟಿದ್ದಾರೆ. ಅವರ ಪಕ್ಷಕ್ಕೆ ನನ್ನದೇನು ತಕರಾರು ಇಲ್ಲ. ಶ್ರೀರಾಮುಲುನೂ ಒಂದು ಪಕ್ಷ ಕಟ್ಟಿದ್ದ. ಬಂಗಾರಪ್ಪನೂ ಒಂದು ಪಕ್ಷ ಕಟ್ಟಿದ್ದ. ಯಡಿಯೂರಪ್ಪನೂ ಒಂದು ಪಕ್ಷ ಕಟ್ಟಿದ್ದ. ದೇವರಾಜ್ ಅರಸು ಒಂದು ಪಕ್ಷ ಕಟ್ಟಿದ್ದರು. ವಿಜಯ್ ಮಲ್ಯ ಪಕ್ಷ ಕಟ್ಟಿದ. ಪಾಪ ಹಾಗೇ ಜನಾರ್ದನ ರೆಡ್ಡಿ ಪಕ್ಷವೂ ಆಗಬಹುದು ಎಂದು ಕುಟುಕಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ