ಡಾರ್ವಿನ್ ವಿಕಾಸವಾದದ ಪಿತಾಮಹ

ಅಹಮದ್ ಹಗರೆ

ಜಗತ್ತನ್ನು ಬದಲಾಯಿಸುವಲ್ಲಿ ವಿಜ್ಞಾನಿಗಳ ಪಾತ್ರ ಅನನ್ಯ, ಮಾನವ ಹುಟ್ಟಿದಾಗಿನಿಂದಲೂ ಮಾನವನ ಉಗಮ ಹೇಗಾಯಿತು ಎಂದು ತಲೆ ಕೆಡಿಸಿಕೊಳ್ಳುತ್ತಲೇ ಬಂದ. ನೆಮ್ಮದಿಗಾಗಿ ದೇವರನ್ನು ಸೃಷ್ಠಿಸಿ ಅವನ ಮಕ್ಕಳು ಎಂದು ಕೊಳ್ಳಲಾರಂಬಿಸಿದ ಈ ಹುಟ್ಟಿಗೆ ಧರ್ಮ ಗ್ರಂಥಗಳ ಮೊರೆ ಹೋದ. ಈ ಹುಟ್ಟಿನ ಮೂಲವನ್ನು ಸಾವಿರಾರು ಪಂಡಿತರು ಅಲ್ಲಗಳೆಯುತ್ತಾ ಬಂದರು, ಆದರೆ ಸಾಬೀತು ಮಾಡಲು ತಿಣುಕಾಡಿದರು. 19ನೆ ಶತಮಾನದಲ್ಲಿ ಮಾನವ ದೇವರ ಸೃಷ್ಠಿಯಲ್ಲ ವಿಕಾಸವಾಗಿ ಬಂದ ಕೂಸು, ಮಂಗನಿಂದ ಮಾನವ ಎಂದು ನಿರೂಪಿಸಿ ಜಗತ್ತನ್ನು ನಿದ್ರೆಯಿಂದ ಎಬ್ಬಿಸಿ ಭೂಮಿಯ ತಿರುವನ್ನು ಬದಲಿಸಿದ ಮಹಾನುಭಾವ ಚಾರ್ಲ್ಸ್ ಡಾರ್ವಿನ್, ನನ್ನ ಅಚ್ಚುಮೆಚ್ಚಿನ ವಿಜ್ಞಾನಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ವಿಜ್ಞಾನಿಗೆ 214 ವರ್ಷದ ಸಂಭ್ರಮ.

ಬಾಲ್ಯ ಮತ್ತು ಶಿಕ್ಷಣ :

ಬ್ರಿಟನ್ನಿನ ಷ್ರೂಸ್ಟರಿ ನಗರದ ಪ್ರಖ್ಯಾತ ಮತ್ತು ಮಾನವಂತ ವ್ಶೆದ್ಯ ರಾಬರ್ಟ್‌ ಡಾರ್ವಿನ್ ಮತ್ತು ಅವರ ಸುಸಂಸ್ಕೃತ ಜಾಣೆ ಮಡದಿ ಸುಸಾನ ಇವರ ಕಿರಿಯ ಪುತ್ರ ಚಾರ್ಲ್ಸ್‌ ಡಾರ್ವಿನ್ 1809 ಫೆಬ್ರವರಿ 12 ರಂದು ಜನನ, ಕಿರಿಯ ಮಗ ಡಾರ್ವಿನ್‌ಗೆ ಚಿಕ್ಕಂದಿನಿಂದಲೂ ಅಕ್ಷರಾಭ್ಯಾಸ ಮತ್ತು ಪ್ರಾಣಿ-ಪಕ್ಷಿಗಳಲ್ಲಿ ಪ್ರೀತಿ, ಕರುಣೆ ಕಲಿಸಿ ಆಸಕ್ತಿ ಮೂಡಿಸಿದ ಆತ್ಮೀಯ ಶಿಕ್ಷಕಿಯಾಗಿದ್ದಳು. ಡಾರ್ವಿನ್‌ಗೆ 9 ವರ್ಷ ತುಂಬುವ ಮೊದಲೇ ತಾಯಿಯ ಮರಣ, ಅಪ್ಪ ಹಾಗೂ ಅಣ್ಣಂದಿರ ಆರೈಕೆಯಲ್ಲೆ ಬೆಳೆಯುವ ಅನಿವಾರ್ಯತೆ ಬಂತು ಆದರೆ ತಾಯಿಯಿಂದ ಬಂದ ಪ್ರಕೃತಿ ಪ್ರೇಮ ಲಬಿಸಲಿಲ್ಲ, ಶಾಲಾ ಕಲಿಕೆ ರುಚಿಸಲಿಲ್ಲ; ಅಲ್ಲಿನ ವ್ಯಾಕರಣ, ಗಣಿತ ಬೋರಾಗತೊಡಗಿತು ಆದರೆ ರಸಾಯನಶಾಸ್ತ್ರ ಆಸಕ್ತಿಯನ್ನು ಹುಟ್ಟಿಸಿತು! ಕಾರಣ ಇಷ್ಟೆ, ವಿವಿಧ ರಾಸಾಯನಿಕಗಳನ್ನು ಬೆರೆಸಿದಾಗ ಅವುಗಳ ರೂಪ ಬದಲಾಗುವುದನ್ನು ನೋಡಲು ಅವನಿಗೆ ರೋಮಂಚನವಾಗುತ್ತಿತ್ತು. ಈ ಆಸಕ್ತಿಯೇ ಅವನ್ನು ತುಂಟ ಹುಡುಗನನ್ನಾಗಿಸಿತು. ಶಾಲೆಯ ಗೋಡೆ, ಇತರೆ ಹುಡುಗರ ಪುಸ್ತಕದ ಆಕಾರ ಈತನಿಂದ ಬದಲಾಗುತ್ತಿದ್ದರಿಂದ ಈತನಿಗೆ bad Boy ಪಟ್ಟ ಅಂಟಿತ್ತು ಮಗನ ಮೊಂಡುತನದ ಕಾರಣ ಎಲ್ಲರ ಅಸಡ್ಡೆಗೆ ಗುರಿಯಾದದ್ದು ಅಪ್ಪನಿಗೆ ಬಹಳ ಆತಂಕ, ಬೇಸರ ಹಾಗೂ ವೇದನೆಯಾಗಿತ್ತು.

ಇದನ್ನು ಓದಿ: ಜನ ಇತಿಹಾಸ ಮಾಲೆ ಜಾತಿವ್ಯವಸ್ಥೆ ಸೇರಿದಂತೆ ಭಾರತದ ಜನರ ಬದುಕಿನ ಎಲ್ಲ ಆಯಾಮಗಳ ಸಮಗ್ರ ಇತಿಹಾಸ ನಿರೂಪಣೆಯ ಪ್ರಯತ್ನ:ಪ್ರೊ. ಹಬೀಬ್

1825ರಲ್ಲಿ ವ್ಶೆದ್ಯಕೀಯ ಶಿಕ್ಷಣಾಭ್ಯಾಸಕ್ಕಾಗಿ ಮಗನನ್ನು ಎಡಿನ್‌ ಬರೋ ವಿಶ್ವವಿದ್ಯಾಲಯ ಸೇರಿಸಿದರು. ಇಲ್ಲಿಯೂ ಇದೇ ಕತೆ. ಆ ಕಾಲದಲ್ಲಿ ಪ್ರಜ್ಞೆ ತಪ್ಪಿಸಿ  ಶಸ್ತ್ರಕ್ರಿಯೆ ನಡೆಸುವ ವಿಧಾನ ತಿಳಿದಿರಲಿಲ್ಲ. ರೋಗಿಗಳ ಆರ್ತನಾದ, ನರಳಾಟ ಕಂಡು ಡಾರ್ವಿನ್‌ಗೆ ಆಸ್ಪತ್ರೆ ಒಂದು ಕಟುಕರ ಕಸಾಯಿಖಾನೆ ತರಹ ಕಾಣಿಸಿತು. ವಿದ್ಯೆಯಲ್ಲಿ ನಿರಾಸಕ್ತಿ ಬೆಳೆದು ಪರೀಕ್ಷೆಯಲ್ಲಿ ಫೇಲಾದ. ವ್ಶೆದ್ಯ ವೃತ್ತಿಗೆ ಗುಡ್‌ಬೈ ಹೇಳಿದ ಆದರೆ ಅಲ್ಲಿನ ಪ್ರಕೃತಿ ವಿಜ್ಞಾನಿ ಜೇಮ್ಸನ್‌ ರ ಪಾಠ ಮತ್ತು ಪುಸ್ತಕಗಳು ಡಾರ್ವಿನ್‌ ಗೆ ಪ್ರಕೃತಿ ನೋಡುವ ಧಾಟಿಯನ್ನೇ ಬದಲಾಯಿಸಿತು.

ಡಾರ್ವಿನ್ನನ ಓದಿನಲ್ಲಿನ ನಿರಾಸಕ್ತಿ ಕಂಡು ದುಃಖಿಸಿದ ಆತನ ತಂದೆ ಇವನನಿಗೆ ಪಾದ್ರಿ ಒಂದೇ ಗ್ಯಾರಂಟಿ ಎಂದು ಅತ್ತೂ ಕರೆದು, ಬ್ಲಾಕ್ ಮೇಲ್ ಮಾಡಿ ಕೇಂಬ್ರಿಡ್ಜ್ ಕ್ರೈಸ್ಟ್ ಕಾಲೇಜಿಗೆ ಸೇರಿಸಿದರು. ಪಾದ್ರಿಯಾದರೆ ಹಳ್ಳಿಗಾಡು ಸುತ್ತಾಡಬಹುದು ಎಂದು ಬಹಳ ಆಸಕ್ತಿಯಿಂದಲೇ ಕಾಲೇಜಿಗೆ ಸೇರಿದ. ಇಲ್ಲಿ ಬಹಳ ಉತ್ಸಾಹದಿಂದ ದೈವಶಾಸ್ತ್ರ, ಧರ್ಮಶಾಸ್ತ್ರ ಮತ್ತು ತರ್ಕಶಾಸ್ತ್ರಗಳನ್ನು ಕಲಿತ ಅಗ ಧರ್ಮದ ಮರ್ಮ ಅವನಿಗೆ ಸ್ಪಷ್ಟವಾಗಿ ಅರ್ಥವಾಯಿತು, ನಿಖರವಾಗಿ ಜನರನ್ನು ನಿಬ್ಬೆರಗಾಗುವಂತೆ ವಿಷಯ ಮಂಡಿಸುವ ಕಲೆಯನ್ನ ಇಲ್ಲೇ ಕಲಿತ. ಯಾವ ವ್ಯಾಕರಣ ಶಿಕ್ಷಣ, ಯಾವ ವ್ಶೆದ್ಯ ಶಿಕ್ಷಣ ತನ್ನ ಸಮಸ್ಯೆಗೆ ಉತ್ತರ ಕೊಡಲು ಸಾಧ್ಯವಾಗಲಿಲ್ಲವೋ ಆ ಪ್ರಶ್ನೆಗೆ ಉತ್ತರ ಧರ್ಮಶಾಸ್ತ್ರ ಕಲಿಯುವಾಗ ಡಾರ್ವಿನ್‌ ಗೆ ಲಭಿಸಿತು. ಅಲ್ಲಿಂದಲೇ ಈ ಸೃಷ್ಟಿ ರಹಸ್ಯದ ಗುಟ್ಟನ್ನು ಚರ್ಚಿನ ಗೋಡೆಗಳೊಳಗಿಂದ ಜನರ ಮನದಾಳದೊಳಗೆ ಬಿತ್ತರಿಸುವ ಚೈತನ್ಯ ಪಡೆದ, ಧರ್ಮಶಾಸ್ತ್ರದ ಗೊಡ್ಡುಗಳನ್ನು ಮೀರಿ ಜೇಮ್ಸನ್ನರ ಪ್ರಕೃತಿ ವೀಕ್ಷಣೆಗೆ ತಾರ್ಕಿಕ ನೆಲೆಗಟ್ಟನ್ನು ಕಂಡುಕೊಂಡ. ಇವನ ಈ ಹಾದಿಗೆ ಭೂ ವಿಜ್ಞಾನಿ ಸೆಡ್ವಿಕ್ ಮತ್ತು ಸಸ್ಯ ವಿಜ್ಞಾನಿ ಡಾ.ಹನ್ಸಲೋರ ಪ್ರಭಾವದಿಂದ 1831ರಲ್ಲಿ ಬಿ.ಎ. ಪದವಿಗಳಿಸಿದ. ಪದವೀಧರನಾದ ಡಾರ್ವಿನ್ ಮತ ಪ್ರಚಾರ ಮಾಡುವ ಪಾದ್ರಿಯಾಗದೆ ಕಾನನಗರ್ಭದೊಳಗೆ ತಲ್ಲೀನನಾಗಿ ಚಿಟ್ಟೆ, ಜೀರುಂಡೆಗಳ ಜೊತೆ ಹಾಡಿ ಕುಣಿಯಲಾರಂಬಿಸಿದ.

ಅನ್ವೇಷಣೆ

ಆ ಕಾಲಘಟ್ಟದಲ್ಲಿ ಇಂಗ್ಲೇಂಡಿನ ಸಾಮ್ರಾಜ್ಯಶಾಹಿ ಧೋರಣೆ ಜಗತ್ತಿನ ಯಾವ ದೇಶವನ್ನೂ ನೆಮ್ಮದಿಯಿಂದ ಇರುವಂತೆ ಮಾಡಲು ಸಾಧ್ಯವಿರಲಿಲ್ಲ, ತನ್ನ ಲೂಟಿಕೋರ ನೀತಿಗೆ ಹೊಸ ಹೊಸ ದೇಶಗಳನ್ನು ಕಂಡುಹಿಡಿಯುವುದು ಅಲ್ಲಿನ ಸಂಪನ್ಮೂಲವನ್ನು ಹುಡುಕುವುದಕ್ಕಾಗೇ ತಂಡಗಳು ಇದ್ದವು, ಹಾಗಾಗಿ ಹೊಸ ಹೊಸ ದೇಶಗಳನ್ನು ಕಂಡುಹಿಡಿಯುವುದು ಅನಿವಾರ್ಯವಾಗಿತ್ತು. ಈ ಹಿನ್ನಲೆಯಲ್ಲೇ ಎಚ್.ಎಂ.ಎಸ್. ಬಿಗಲೆ ಎನ್ನುವ ಹಡಗು ವಿಶ್ವಪರ್ಯಟನೆ ಹೊರಟಿತ್ತು, ಜಗತ್ತಿನ ವಿವಿಧ ದೇಶಗಳ ಪ್ರಾಕೃತಿಕ ಸಂಪತ್ತುಗಳನ್ನು ಸರ್ವೇಕ್ಷಿಸುವ ಕೆಲಸ ಈ ಪ್ರಯಾಣದ್ದು. ಆದ್ದರಿಂದ ಪ್ರಯಾಣಕ್ಕೆ ನುರಿತ ಮತ್ತು ಆಸಕ್ತ ಯುವ ಪ್ರಕೃತಿತಜ್ಞರು ಬೇಕಾಗಿತ್ತು, ಆಗ ಡಾ.ಹನ್ಸಲೋ ಡಾರ್ವಿನ್ ಹೆಸರು ಸೂಚಿಸಿದರು. ತಂದೆಯಿಂದ ನಕಾರ, ಸೋದರಮಾವನ ಮಧ್ಯಸ್ಥಿಕೆಯಿಂದ ಸಾಹಸ ಯಾತ್ರೆಗೆ ಮಗನನ್ನು ಕಳುಹಿಸಲು ಒಲ್ಲದ ಮನಸ್ಸಿನಿಂದ ತಂದೆ ಒಪ್ಪಿಗೆ ನೀಡಿದ. ಆದರೆ ಪರ್ಯಟನಾ ತಂಡದ ಕ್ಯಾಪ್ಟನ್ ಫಿಡ್ಜರಾಯ್ ಡಾರ್ವಿನ್ನನನ್ನು ಯಾತ್ರೆಗೆ ಸೇರಿಸಿಕೊಳ್ಳಲು ತಕರಾರು ಮಾಡಿದ. ಕಾರಣ ಇಷ್ಟೇ, ಫಿಡ್ಜರಾಯ್ ಒಬ್ಬ ಮೂಢನಂಬಿಕೆಯ ಮನುಷ್ಯ ದಪ್ಪ ಮೂಗಿನ ವ್ಯಕ್ತಿಗಳಿಂದ ಸಾಹಸ ಯಾತ್ರೆಗೆ ಅಪಶಕುನ, ಅಪಾಯ ಎಂದು ಪೂರ್ವಗ್ರಹಪೀಡಿತನಾಗಿ ನಂಬಿದ್ದ. ಈ ಮಹಾನುಭಾವನಿಗೆ ಡಾ.ಹನ್ಸಲೋ ಡಾರ್ವಿನ್‌ನ ಆಸಕ್ತಿ, ಜ್ಞಾನ, ಮಹತ್ವಾಕಾಂಕ್ಷೆಯನ್ನು ಮನದಟ್ಟು ಮಾಡಿಸಿ ನಿನ್ನ ನಂಬಿಕೆ ಮೌಢ್ಯದ್ದು ಎಂದು ವಿವರಿಸಿ ಪ್ರಯಾಸಪಟ್ಟು ಒಪ್ಪಿಸಲು ವಾರವೇ ಹಿಡಿಯಿತು. ಜೀವನದಲ್ಲಿ ಮೊದಲ ಬಾರಿಗೆ ಫಿಡ್ಜರಾಯ್ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಳ್ಳಲೇ ಬೇಕಾಗಿ ಬಂತು, ಒಲ್ಲದ ಮನಸ್ಸಿನಿಂದಲೇ ಒಪ್ಪಿದ. ಆದರೆ ಡಾರ್ವಿನ್ ಜೊತೆ ನೋ ಮಾತು-ನೋ ನೋಟ, ಯಾವುದೇ ಜವಾಬ್ದಾರಿಯನ್ನೂ ಸಹ ನೀಡುತ್ತಿರಲಿಲ್ಲ.

ಇದನ್ನು ಓದಿ: ಏಂಗೆಲ್ಸ್ 200 ಮಾಲಿಕೆಯ ಎರಡು ಪುಸ್ತಕಗಳ ಪರಿಚಯ

ಅಂತು-ಇಂತು 1831 ಡಿಸೆಂಬರ್ 27 ಎಚ್.ಎಂ.ಎಸ್. ಬಿಗಲೆ ಸಮುದ್ರಯಾನ ಆರಂಭಿಸಿತು. ಅಟ್ಲಾಂಟಿಕ್ ಸಾಗರವನ್ನು ದಾಟಿ ಫೆ: 1832 ದಕ್ಷಿಣ ಅಮೇರಿಕಾದ ಬಹಿಯ ಪ್ರಾಂತ ತಲುಪಿತು. ಸಾಗರ ಕಿನಾರೆಯ ಈ ಪ್ರದೇಶದಲ್ಲಿ ಡಾರ್ವಿನ್‌ ಗೆ ಅಲ್ಲಿನ ಪ್ರಾಣಿ-ಪಕ್ಷಿ ಸಂಕುಲ, ಕ್ರಿಮಿ-ಕೀಟ, ಗಿಡ-ಮರಗಳ ಹಾಗೂ ತನ್ನೂರಿನ ಸಂಕುಲಗಳ ನಡುವಿನ ಭಿನ್ನತೆ ನೋಡಿ ಆಶ್ಚರ್ಯ ಹಾಗೂ ಸಂತೋಷವಾಯಿತು, ಉತ್ಸಾಹ ಇಮ್ಮಡಿಯಾಯಿತು. ಹಲವಾರು ತಿಂಗಳ ಅಧ್ಯಯನದ ಬಳಿಕ ಏಪ್ರಿಲ್ 1832 ರ ವೇಳೆಗೆ ನೌಕೆ ರಿಯೋಡಜನೈರೋ ತಲುಪಿತು. ಅಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಅಧ್ಯಯನ ನಡೆಸಲಾರಂಬಿಸಿದ. ಇಲ್ಲಿನ ಅಮಾನವೀಯ ಘಟನೆಯೊಂದು ತನ್ನ ಜೀವನದುದ್ದಕ್ಕೂ ಮರೆಯಲಾಗದ ನೋವನ್ನು ನೀಡಿತು. ಆ ನಗರದ ಬೀದಿ ಬೀದಿಗಳಲ್ಲಿ ಮನುಷ್ಯರನ್ನು ಪ್ರಾಣಿಗಳ ರೀತಿ [ಹಸುವಿನ ಬದಲಾಗಿ ಮನುಷ್ಯರನ್ನು ಗಾಡಿಗೆ, ಬೇಸಾಯಕ್ಕೆ ಕಟ್ಟಿ ಎಳೆಯುತ್ತಿದ್ದ ರೀತಿ, ಗುಲಾಮರಂತೆ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ರೀತಿ] ಹೀನಾಯವಾಗಿ ಬಳಸುತ್ತಿದ್ದ ರೀತಿ ಈತನನ್ನು ಮಮ್ಮಲ ಮರುಗಿಸಿತು. ಇದೊಂದು ಮಾನವನ ನಾಗರೀಕತೆಗೆ ಮಸಿ ಬಳಿಯುವ ಪದ್ದತಿ ಎಂದು ವಾದ ಮಾಡಿದ ಬಹುಶಃ ಈ ದೃಷ್ಯವೇ ಕಾರ್ಲ್ಸ್‌ಮಾರ್ಕ್ಸ್‌ ನ ಜೊತೆ ಸರಣಿಯಾಗಿ ಸಂವಾದಿಸುವ ಚಿಂತನೆಯನ್ನು ನೀಡಿತೇನೋ [ಮಾರ್ಕ್ಸ್‌ ಮತ್ತು ಡಾರ್ವಿನ್ ತಮ್ಮ ತಮ್ಮ ಅನಿಸಿಕೆ ಹಾಗೂ ಚಟುವಟಿಕೆಯ ಸಾರವನ್ನು ಸುಧೀರ್ಘವಾಗಿ ಹಂಚಿಕೊಂಡ ದಾಖಲೆಗಳಿವೆ. ಮಾತ್ರವಲ್ಲ, ಜರ್ಮನ್ ಬಾಷೆಯೇ ಗೊತ್ತಿಲ್ಲದ ಡಾರ್ವಿನ್ನನ ಮುಖ್ಯ ಲೈಬ್ರರಿಯಲ್ಲಿ ದ ಕ್ಯಾಪಿಟಲ್ ಪುಸ್ತಕ ಇತ್ತು ಎಂದು ಡಾರ್ವಿನ್ನನ ಜೀವಸಂಕುಲಗಳ ಉಗಮವನ್ನು ಕನ್ನಡಕ್ಕೆ ಭಾಷಾಂತರಿಸಿದ ಜಿ.ಪುಟ್ಟಸ್ವಾಮಿ ತಮ್ಮ ಕೃತಿಯಲ್ಲಿ ನಮೂದಿಸಿದ್ದಾರೆ] ನಂತರ ಇಡೀ ದಕ್ಷಿಣ ಅಮೇರಿಕಾ ಸುತ್ತು ಹಾಕಿ ಬ್ರೆಝಿಲ್‌ನ ದುರ್ಗಮ ಅರಣ್ಯವನ್ನು ಸುತ್ತಾಡಿ, ಅಲ್ಲಿದ್ದ ಜೀವ ಸಂಕುಲಗಳನ್ನೆಲ್ಲಾ ಅಭ್ಯಾಸ ಮಾಡಿದ ಅಲ್ಲಿ ಸಿಕ್ಕ ಪಳೆಯುಳಿಕೆಗಳು ಈಗಿನ ಬದುಕುಳಿದ ಜೀವಿಗಳ ಪಳೆಯುಳಿಕೆಗಳು ಒಂದಕ್ಕೊಂದು ಸಾಮ್ಯತೆ ಇರುವುದನ್ನು ಗುರುತಿಸಿದ. ಬೈಬಲ್‌ನಲ್ಲಿ ಹೇಳಿದ ಸೃಷ್ಟಿ ಸಿದ್ಧಾಂತದ ಮೇಲೆ ಬಲವಾದ ಅನುಮಾನ ಬರಲಾರಂಭಿಸಿತು.  1835 ಸೆಪ್ಟೆಂಬರ್ ವೇಳೆಗೆ ಗ್ಯಾಲಪಾಗಸ್ ದ್ವೀಪ ಸಮೂಹ ತಲುಪಿತು ಬಿಗಲೆ. ಡಾರ್ವಿನ್‌ಗೆ ತನ್ನ ಇಡೀ ಸಂಶೋಧನೆಯ ಸಾಕ್ಷಿಗಳ ಮಹಾಪೂರವೇ ಇಲ್ಲಿ ದೊರೆಯಿತು; ವಿವಿಧ ಜಾತಿಗಳ ಕೀಟ ಸಮೂಹ, ಸಸ್ಯ ಸಂಕುಲ, ಹವಳದ ದಿಬ್ಬ ಲಕ್ಷಾಂತರ ವರ್ಷಗಳ ಅತೀ ಪ್ರಾಚೀನ ಜೀವಿಗಳ ಪಳೆಯುಳಿಕೆಗಳ ಬಂಡಾರವೇ ಇಲ್ಲಿ ದೊರೆಯಿತು! ಬಹಳ ಎಚ್ಚರಿಕೆಯಿಂದ ಎಲ್ಲವನ್ನು ಅಧ್ಯಯನ ಮಾಡಿ ಪಟ್ಟಿಮಾಡಿ ಬರೆದುಕೊಂಡ, ಸಿಕ್ಕ ಪಳೆಯುಳಿಕೆಗಳನ್ನೆಲ್ಲಾ ಆರಿಸಿಕೊಂಡ, ಕಲಾವಿದರ ಸಹಾಯದಿಂದ ಚಿತ್ರ ಸಹ ಬರೆಸಿಕೊಂಡ. ಇವನ ಶ್ರದ್ಧೆ, ಶಿಸ್ತು, ಸಂಯಮ, ಆಸಕ್ತಿ, ಸಂಗ್ರಹಣೆ ಹಾಗೂ ನಿರೂಪಣಾ ಸಾಮರ್ಥ್ಯ ನೋಡಿ ಇಡೀ ತಂಡ ಮಂತ್ರ ಮುಗ್ಧತೆಯಿಂದ ಸಮ್ಮೋಹಗೊಂಡು ಅವನಲ್ಲೇ ಲೀನವಾಗಿತ್ತು. ಯಾತ್ರೆಯ ಕ್ಯಾಪ್ಟನ್ ಡಾರ್ವಿನ್ನನ ಅಕ್ಷರಶಃ ಅಭಿಮಾನಿಯೇ ಆಗಿಹೋಗಿದ್ದ. ಗ್ಯಾಲಪಾಗಸ್ ದ್ವೀಪದಲ್ಲಿನ ಹಸಿರು ಕಾಡು, ಅದರಲ್ಲಿನ ಚಿತ್ರ-ವಿಚಿತ್ರ ಕೀಟ, ಪಕ್ಷಿ ಸಂಕುಲಗಳು ಡಾರ್ವಿನನನ್ನು ಬೆಕ್ಕಸ ಬೆರಗಾಗಿಸಿ ಬೈಬಲ್ ಒಂದು ಸುಳ್ಳಿನ ಕಂತೆ ಎಂದು ಬೊಟ್ಟು ಮಾಡಿ ಜಗತ್ತಿಗೆ ತೋರಿಸಿದ. ಅಲ್ಲಿನ ಪ್ರಕೃತಿ ಅಧ್ಯಯನ ನಡೆಸಿ ಜೀವ ಪ್ರಬೇಧಗಳ ಸೃಷ್ಠಿಯಲ್ಲಿ ಪರಿಸರದ ಪಾತ್ರ ಗ್ರಹಿಸಿದ. ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾದ ಕಾಡುಗಳನ್ನೆಲ್ಲಾ ಜಾಲಾಡಿ ಅಗಾಧ ಪ್ರಮಾಣದಲ್ಲಿ ಸಾಕ್ಷಿಗಳನ್ನು ಹೊತ್ತುಕೊಂಡು ಬಿಗಲೆ 1836 ಅಕ್ಟೋಬರ್ 3ನೇ ತಾರೀಕು ಬ್ರಿಟನ್ನಿಗೆ ಹಿಂತಿರುಗಿತು.

ಇದನ್ನು ಓದಿ: ಕಮ್ಯುನಿಸ್ಟರು ಮತ್ತು ರಾಷ್ಟ್ರೀಯತೆಯ ಪ್ರಶ್ನೆ

5 ವರ್ಷಗಳ ಈ ವಿಶ್ವ ಪರ್ಯಟನೆಯಲ್ಲಿ ಡಾರ್ವಿನ್ ಸಾಧಾರಣ ಬಿ.ಎ. ಪದವೀದರ ಹೋಗಿ ಮಹಾನ್ ಮೇಧಾವಿ ವಿಜ್ಞಾನಿಯಾಗಿ ರೂಪುಗೊಂಡಿದ್ದ. ಯಾತ್ರೆಯ ಅಪ್ಪಟ ಮಹಾ ಮೂಢ ಕ್ಯಾಪ್ಟನ್ ಫಿಡ್ಜರಾಯ್ ಡಾರ್ವಿನ್ ವಿಷಯವಾಗಿ ತಾನು ಅವ್ಶೆಜ್ಞಾನಿಕವಾಗಿ ಜಗಳವಾಡಿದ್ದ ಡಾ.ಹನ್ಸಲೋ ರವರಿಗೆ ಕೃತಜ್ಞತೆ ಹೇಳಿ “ನಾನು ನನ್ನ ಅವಿವೇಕಿತನಕ್ಕೆ ಶರಣಾಗಿ ಸೋಲದಿದ್ದಿದ್ದರೆ ಇಂತಹ ಮಹಾನ್ ಪರ್ಯಟನೆಯ ಸಾರ್ಥಕತೆಯನ್ನು ಅಟ್ಲಾಂಟಿಕ್ ಸಾಗರದ ತಳ ಸೇರಿಸಿಬಿಡುತ್ತಿದ್ದೆ ನನ್ನನ್ನೆಂದೂ ನಾನು ಕ್ಷಮಿಸಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ, ಇತಿಹಾಸವೂ ಕ್ಷಮಿಸುತ್ತಿರಲಿಲ್ಲ. ನನ್ನ ಜೀವಮಾನದ ಅತ್ಯಂತ ಸಾರ್ಥಕದ ಪರ್ಯಟನೆ ಮಾಡಿ ನನ್ನ ಹೆಸರನ್ನು ಚಿರಸ್ಥಾಯಿಯಾಗಿಸಿದ ಡಾರ್ವಿನನ್ನೇ ನನ್ನ ಕ್ಯಾಪ್ಟನ್ ಎಂದು ಮಾರ್ಮಿಕವಾಗಿ ನುಡಿದಿದ್ದಾನೆ.”

ಸಂಶೋಧನೆ ಮತ್ತು ಸಾಧನೆ

5 ವರ್ಷಗಳ ಕಾಲ ಪರ್ಯಟನೆ ನಡೆಸಿ ಅದಾದ ನಂತರ ಮತ್ತೂ ಒಮ್ಮೆ ತಿರುಗಾಡಿ ಗುರುತು ಮಾಡಿಕೊಂಡಿದ್ದ ವಿಷಯವನ್ನು, ಸಂಗ್ರಹಿಸಿದ ವಸ್ತುಗಳನ್ನು ಸಿಕ್ಕ ಸಿಕ್ಕ ಪುಸ್ತಕ ನೋಡಿ ಅಭ್ಯಸಿಸಿ, ಬಂದ ಅನುಮಾನಗಳಿಗೆ ಸಂಬಂದಿಸಿದ ತಜ್ಞರಲ್ಲಿ ಸಂವಾದಿಸಿ ಒಂದು ಸಂಶೋಧನಾ ಗ್ರಂಥಮಾಲೆಯನ್ನು ಪ್ರಕಟಿಸಿದ. ‘ಹವಳದ ದಿಣ್ಣೆಗಳ ಹುಟ್ಟು ಮತ್ತು ವಿಕಾಸ’ ದ ಪ್ರವಾಸ ಕಥನವನ್ನು ಲೋಕಾರ್ಪಣೆ ಮಾಡಿದ್ದೇ ತಡ ಬೆಳಗಾಗುವಷ್ಟರಲ್ಲಿ ಡಾರ್ವಿನ್ ಮನೆ ಮನೆ ಕಥೆಯಾಗಿದ್ದ, ಇದರಿಂದ ಡಾರ್ವಿನ್‌ಗೆ ವಿಶೇಷ ಗೌರವಾದರಗಳು, ಇಂಗ್ಲೆಂಡಿನ ರಾಯಲ್ ಸೊಸ್ಶೆಟಿಯ ಫೆಲೋಷಿಪ್, ಪ್ರಶಸ್ತಿಗಳು ಕೊರಳ ಹುಡುಕಿ ಬಂದವು.

ತುಂಬಾ ದಣಿದ ಡಾರ್ವಿನ್ ತೀವ್ರ ತರದ ಖಾಯಿಲೆಗೆ ತುತ್ತಾದಾಗ ಆರೋಗ್ಯ ಸುಧಾರಣೆಗಾಗಿ ಜನಜಂಗುಳಿಯ ಲಂಡನ್ ಬಿಟ್ಟು ದೂರದ ಪ್ರಶಾಂತ ಹಳ್ಳಿಯೊಂದರಲ್ಲಿ ವಾಸಿಸಲಾರಂಬಿಸಿದ. ಇದು ಆತನ ವಿಕಾಸವಾದಕ್ಕೆ ನಿಸರ್ಗದ ಆಯ್ಕೆಯ ಬರವಣಿಗೆಗೆ ಪೂರಕ ಪ್ರತ್ಯಕ್ಷ ಸಾಕ್ಷಿ ಒದಗಿಸಿತು.

ಈ ಜಗತ್ತಿನಲ್ಲಿ ಹೊಸ ಪ್ರಬೇಧದ ಸಸ್ಯಗಳು, ಪ್ರಾಣಿಗಳು ಹೇಗೆ ಹುಟ್ಟಿದವು? ಜೀವಿಗಳ ಸೃಷ್ಟಿ ಧರ್ಮ ಗ್ರಂಥಗಳಲ್ಲಿರುವಂತೆ ಎಲ್ಲವೂ ಏಕಕಾಲಕ್ಕೆ ಆಯಿತೆ? ಅಥವ ಸಾವಿರಾರು ವರ್ಷಗಳಲ್ಲಿ ಆಯಿತೆ? ಈ ಭೂಮಿಯ ಮೇಲಿನ ಜೀವಿಗಳು ಯಾವಾಗಲೂ ಬದಲಾಗದೆ ಹಾಗೆಯೇ ಇರುತ್ತವೋ? ಹೇಗೆ? ಬದಲಾದಲ್ಲಿ ಹೇಗೆ ಬದಲಾಗುತ್ತವೆ? ಈ ಪ್ರಶ್ನೆ ಡಾವಿನ್ನನನ್ನೂ ಒಳಗೊಂಡಂತೆ ಹಿಂದಿನ ಅನೇಕ ವಿಜ್ಞಾನಿಗಳಿಗೂ ಕಾಡಿತ್ತು. ಕೆಲವರು ಬೈಬಲ್‌ನಲ್ಲಿ ನಂಬಿಕೆ ಇಟ್ಟಿದ್ದರು. ಕೆಲವರಿಗೆ ತುಂಬಾ ಕುತೂಹಲವಿತ್ತು!.

ಡಾರ್ವಿನ್ ತನ್ನ ಸಮಕಾಲೀನ ಸಮಾಜದ ಎಲ್ಲಾ ಸ್ಥರಗಳ ವಿಜ್ಞಾನಿ, ತಣಿತಜ್ಞ, ಅರ್ಥಶಾಸ್ತ್ರಜ್ಞ, ರಾಜಕೀಯ ಶಾಸ್ತ್ರಜ್ಞ ಹಾಗು ಇತರ ಭೌತ ವಿಜ್ಞಾನಿಗಳ ಜೊತೆ ಸಂಭಾಷಿಸಿ ಅವರವರ ವಿಚಾರಧಾರೆಗಳನ್ನ ಪರಾಮರ್ಷಿಸಿ ತನ್ನಲ್ಲಿರುವ ದಾಖಲೆ ಮತ್ತು ಅಧ್ಯಯನಗಳನ್ನು ಸತ್ಯತೆಯೊಂದಿಗೆ ಓರೆ ಹಚ್ಚಿ ತನ್ನ 30 ವರ್ಷದ ಸುಧೀರ್ಘ ಸಂಶೋಧನೆಯ ಆಧಾರದಲ್ಲಿ ತನ್ನದೇ ಆದ ಅನುಭವ ಮತ್ತು ಪ್ರಯೋಗಗಳನ್ನು ಬರವಣಿಗೆಗೆ ಇಳಿಸುತ್ತಾ ಹೋದ ಹಾಗೆ ಅದೊಂದು ಜಗತ್ತನ್ನು ತಲ್ಲಣಗೂಳಿಸುವ ಸುಂದರ ಗ್ರಂಥವಾಗಿ 1859ರ ನವೆಂಬರ್ 24 ʻʻಜೀವ ಸಂಕುಲಗಳ ಉಗಮ”[ORIGIN OF THE SPECIES] ಭೂಸ್ಪರ್ಷ ಮಾಡಿತು, ಮಾತ್ರವಲ್ಲ ಗಡ ಗಡ ನಡುಗಿಸಿತು. ಇದರ ಮೊದಲ ಮುದ್ರಣದ ಎಲ್ಲಾ ಪ್ರತಿಗಳು ಒಂದೇ ದಿನದಲ್ಲಿ ಖರ್ಚಾಗಿ ಮೂಲಭೂತವಾದಿಗಳ ಮೌಢ್ಯದ ಮೇಲೆ ಗದಾ ಪ್ರಹಾರ ಮಾಡಿತು. ಚರ್ಚು-ಮಂದಿರಗಳ ಗರ್ಭಗುಡಿಗಳು ನಲುಗಿ ತತ್ತರಿಸಿದವು. ರಾಜ ಪ್ರತ್ಯಕ್ಷ ದೇವತಾ ಮೋಸದ ಸಿದ್ಧಾಂತ ಮಣ್ಣುಪಾಲಾಯಿತು. ಇಡೀ ಜಗತ್ತು ಅದುಮಿ ನಂಬಿದ್ದ ಕುರುಡು ಸಿದ್ಧಾಂತ ಬಟಾಬಯಲಾಗಿ ವಸ್ತುವಾದಿ ಸೈದ್ಧಾಂತಿಕ ಧೋರಣೆಗಳಿಗೆ ಬಲ ಬಂದಂತಾಯಿತು, ಭಾವನಾವಾದದ ಪ್ರಭಾವ ಮುರುಟಿ ಹಿಂದೆ ಬಿತ್ತು, ಕ್ರಾಂತಿಕಾರಿ ಹೋರಾಟ ಜಗದಾದ್ಯಂತ ಚುರುಕುಗೊಂಡು, ನಿರಂಕುಶ ರಾಜಪ್ರಭುತ್ವ ನಾಶಗೊಂಡು, ಸಮಾಜವಾದಿ ಪ್ರಜಾಪ್ರಭುತ್ವ ತಲೆಎತ್ತಿ ನಿಂತಿತು.

ಏನಿದೆ ಈ ಜೀವ ಸಂಕುಲಗಳ ಉಗಮದೊಳಗೆ?

ಅತ್ಯಂತ ಸುಂದರ, ಸರಳ ಹಾಗೂ ಪುರಾವೆಗಳ ಮೂಲಕ ಹಂತ ಹಂತವಾಗಿ, ತಾರ್ಕಿಕವಾಗಿ ಜೀವಿಗಳ ವಿಕಾಸದ ಕಥೆಯನ್ನು ಹೆಣೆದಿದ್ದಾರೆ. ಸುಮಾರು 300 ಪುಟದ ಈ ಪುಸ್ತಕದಲ್ಲಿ 14 ಅಧ್ಯಾಯಗಳಿವೆ. ಈ ಎಲ್ಲಾ ಅಧ್ಯಯಗಳೂ ಈ ಕೆಳಗಿನ ಪ್ರಮುಖ 5 ಅಂಶಗಳಿಂದ ಕೂಡಿವೆ.

ಇದನ್ನು ಓದಿ: ಫ್ರೆಡೆರಿಕ್ ಏಂಗೆಲ್ಸ್ ಜನ್ಮ ದ್ವಿಶತಮಾನೋತ್ಸವ

  1. ವೈವಿಧ್ಯತೆ (Diversity):– ಪ್ರಪಂಚದ ಎಲ್ಲಾ ಜೀವಿಗಳಲ್ಲೂ ವ್ಯತ್ಯಾಸ ಮತ್ತು ವೈವಿಧ್ಯತೆಗಳು ಇರುತ್ತವೆ. ಈ ವೈವಿಧ್ಯತೆಯೇ ಜೀವಿಗಳನ್ನು ಭಿನ್ನ ಭಿನ್ನವಾಗಿ ಸೃಷ್ಠಿಸಿವೆ. ಈ ಭಿನ್ನತೆಯು ಮಾನವ ನಿಯಂತ್ರಿತ ಪರಿಸರ ಹಾಗೂ ನೈಸರ್ಗಿಕ ಪರಿಸರಗಳಲ್ಲಿ ಬೇರೆ ಬೇರೆಯಾಗಿಯೇ ಇರುತ್ತವೆ ಹಾಗೂ ಆ ಪರಿಸರ ಬಂಧಿಯಾಗಿರುತ್ತದೆ (ಉದಾ: ಸಾಕು ಪ್ರಾಣಿ ಲಕ್ಷಣ ಹಾಗೂ ಕಾಡುಪ್ರಾಣಿಗಳಲ್ಲಿನ ಲಕ್ಷಣಗಳ ವ್ಯತ್ಯಾಸ ಭಿನ್ನವಾಗೇ ಇರುತ್ತದೆ.)
  2. ಅತಿವೃಷ್ಠಿ (Over breeding):- ಜೀವಿಗಳಲ್ಲಿನ ಭಿನ್ನತೆಯಿಂದಾಗಿಯೇ ಎಲ್ಲ ಜೀವಿಗಳಲ್ಲೂ ಅತಿಹೆಚ್ಚಿನ ಸಂಖ್ಯೆಯಲ್ಲಿ ಸಂತಾನ ಮಾಡಿಕೊಳ್ಳುವ ಸಾಮರ್ಥ್ಯ ಇದೆ (ಮೊಲ ವರ್ಷಕ್ಕೆ 3 ಬಾರಿ, ಕೀಟಗಳು ದಿನಗಳಿಂದ ವಾರಕ್ಕೊಂದು ಬಾರಿ, ನೊಣ 15 ದಿನಕ್ಕೊಂದು ಬಾರಿ) ಆದರೆ ಇವುಗಳಲ್ಲಿ ಕೆಲವೇ ಕೆಲವು ಮಾತ್ರ ಬದುಕುಳಿಯುತ್ತವೆ.
  3. ಬದುಕಿಗಾಗಿ ಹೋರಾಟ (Struggle for existance):- ಜೀವಿಗಳ ಸಂಖ್ಯೆಯಲ್ಲಿ ಅದೆಷ್ಟೇ ಸಂಖ್ಯೆಯಲ್ಲಿ ಹೆಚ್ಚಿದರೂ ಈ ಭೂಮಿ ಮೇಲಿರುವ ಆಹಾರ ಮತ್ತು ಸ್ಥಳ ಹೆಚ್ಚುವುದಿಲ್ಲ. ಜೀವಿಗಳ ಸಂಖ್ಯೆ ಹೆಚ್ಚಾದಷ್ಟೂ ಆಹಾರ ಮತ್ತು ಸ್ಥಳಾವಕಾಶ ಕಡಿಮೆಯಾಗುತ್ತದೆ. ಆದ್ದರಿಂದ ಜೀವಿಗಳಲ್ಲಿ ಆಹಾರ ಮತ್ತು ಸ್ಥಳಾವಕಾಶಕ್ಕಾಗಿ ಹೋರಾಟ ಪ್ರಾರಂಭವಾಗುತ್ತದೆ. ಹೀಗೆ ಬದುಕಿಗಾಗಿ ನಡೆಯುವ ಹೋರಾಟದಲ್ಲಿ ಮೂರು ಬಗೆ ಮೊದಲನೆಯದಾಗಿ ಒಂದೇ ಪ್ರಬೇಧದ ಜೀವಿಗಳ ನಡುವೆ. ಎರಡನೆಯದಾಗಿ ಪ್ರಬೇಧ ಪ್ರಬೇಧಗಳ ನಡುವೆ ಮತ್ತು ಮೂರನೆಯದಾಗಿ ಪ್ರಕೃತಿ ವಿಕೋಪಗಳ ವಿರುದ್ಧ.
  4. ಬಲಿಸ್ಟರಿಗೆ ಬಾಳುವೆ (Survival of fittest):- ಬದುಕಿಗಾಗಿ ನಡೆವ ಹೋರಾಟದಲ್ಲಿ ನಿಸರ್ಗವನ್ನು ಜಯಿಸುವ ಸಾಮರ್ಥ್ಯವಿರುವ ಜೀವಿಗಳು ಮಾತ್ರ ಬದುಕುಳಿಯುತ್ತವೆ ಮಿಕ್ಕವು ನಾಶ ಹೊಂದುತ್ತವೆ.
  5. ಪ್ರಾಕೃತಿಕ ಆಯ್ಕೆ (Natural selection):- ಕುಸುಲಕ್ಕಿ ತಿನ್ನಲು ಸಾಧ್ಯವಾದರೆ ಮಾತ್ರ ಮಂಗಳೂರಿನಲ್ಲಿ ಬದುಕಲು ಸಾಧ್ಯ, ಛಳಿ ತಡೆಯಲು ಸಾಧ್ಯವಾದರೆ ಮಾತ್ರ ಊಟಿ ಮತ್ತು ಶಿಮ್ಲಾದಲ್ಲಿ ಸಂಸಾರ ಹೂಡಲು ಸಾಧ್ಯ. ಬಿಸಿಲ ಝಳ ತಡೆಯಲು ಸಾಧ್ಯವಾದರೆ ಮಾತ್ರ ಬಳ್ಳಾರಿಯಲ್ಲಿ ಇರಲು ಸಾಧ್ಯ. ಈ ಹಿನ್ನಲೆಯಲ್ಲಿಯೇ ಕುಸುಲಕ್ಕಿ ತಿನ್ನುವವನು ಮಂಗಳೂರು, ರಾಗಿ ತಿನ್ನುವವನು ಹಾಸನ, ರೊಟ್ಟಿ ತಿನ್ನುವವನು ಧಾರವಾಡಗಳಲ್ಲಿ ಹಂಚಿಕೆಯಾಗಿರುವುದು. ಭೌಗೋಳಿಕ ಹಂಚಿಕೆ ಮತ್ತು ಜೀವಿಗಳ ರೂಪುರೇಷೆಗಳು ಪ್ರಾಕೃತಿಕ ಆಯ್ಕೆಯನ್ನು ಸಮರ್ಥಿಸುತ್ತವೆ. ಅಂದರೆ ತನಗೆ ಬೇಕಾದ ಜೀವಿಗಳನ್ನ ಪ್ರಕೃತಿಯು ತನಗೆ ಬೇಕಾದ ರೀತಿಯಲ್ಲೇ ಆಯ್ಕೆ ಮಾಡಿಕೊಳ್ಳುತ್ತದೆ.

ಈ ಎಲ್ಲಾ ಹಿನ್ನಲೆಯಲ್ಲೇ ಡಾರ್ವಿನ್ ಜೀವಿಗಳು ಲಕ್ಷಾಂತರ ವರ್ಷಗಳಿಂದ ಒಂದು ಜೀವಿಯಿಂದ ಇನ್ನೊಂದು ಜೀವಿಯಾಗಿ ಮಾರ್ಪಾಟು ಹೊಂದಿ ವಿಕಾಸವಾಗಿ ಬಂದಿವೆಯೇ ಹೊರತು ಬೈಬಲ್ಲಿನ ಅಡಂ ಮತ್ತು ಈವ್ ನಿಂದಲ್ಲ ಎಂದು ಸಾಕ್ಷಿ ಸಮೇತ ನಿರೂಪಿಸಿದ.

ಮಾನವನ ಉಗಮ

1871ರಲ್ಲಿ ಇನ್ನೊಂದು ಮಹತ್ವಪೂರ್ಣ ಪುಸ್ತಕ “ಮಾನವನ ಉಗಮ” [The desent of Man] ಪ್ರಕಟಮಾಡಿದ ಇದರಲ್ಲಿ ಮಾನವನೂ ಸಹ ಇತರ ಜೀವಿಗಳಂತೆ ಒಂದು ಜೀವಿಯಿಂದ ವಿಕಾಸ ಹೊಂದಿ ಬಂದಿದ್ದಾನೆ ಎಂದು ನಿರೂಪಿಸಿ ಮನುಷ್ಯ ಗೊರಿಲ್ಲಾ ಜಾತಿಯ ಮೂಲದ ಪ್ರಾಣಿಯಿಂದ ಲಕ್ಷಾಂತರ ವರ್ಷಗಳ ಹಿಂದೆ ರೂಪಾಂತರ ಹೊಂದಿ ವಿಕಾಸವಾದನೇ ಹೊರತು ದೇವರು ಸೃಷ್ಟಿಸಿದ ಆತನ ಪ್ರತಿಬಿಂಬ ಅಲ್ಲ ಎಂದು ಸಾಬೀತು ಮಾಡಿದ.

ಇದನ್ನು ಓದಿ: 88 ವಿದ್ವಾಂಸರಿಂದ 12,000 ವರ್ಷಗಳ ಭಾರತೀಯ ನಾಗರಿಕತೆ ಮತ್ತು ಇತಿಹಾಸ ಕುರಿತ ವರದಿ

ಜಗತ್ತಿನ ವಿಜ್ಞಾನಿಗಳಲ್ಲಿ ಮನುಷ್ಯನ ಹುಟ್ಟಿನ ಮೂಲ ಹುಡುಕುವ ಕೆಲಸಕ್ಕೆ ಹಚ್ಚಿ, ಜ್ಯೋತಿಷ್ಯದ ಪಂಡಿತರಿಗೆ ಮರ್ಮಾಘಾತ ಉಂಟುಮಾಡಿ ಸೈದ್ಧಾಂತಿಕ ತಿಳುವಳಿಕೆಯಲ್ಲಿ ಅಲ್ಲೋಲ-ಕಲ್ಲೋಲ ಎಬ್ಬಿಸಿ 1882 ನವೆಂಬರ್ 19 ಹೊಸವಿಕಾಸಕ್ಕೆ ಮುನ್ನುಡಿ ಬರೆದು ನಿಸರ್ಗ ಗರ್ಭ ಸೇರಿತು ಈ ಮಹಾನ್ ಚೇತನ. ಈತನ ಸಂಶೋಧನೆಯಿಂದ ಪ್ರೇರೇಪಿತರಾಗಿ ಕಗ್ಗಂಟಾಗಿ ಉಳಿದಿದ್ದ ಮಾನವನ ಹುಟ್ಟಿನ ಮೂಲ ಸರಳವಾಗಿ ಬಿಡಿಸಿದಂತಾಯಿತು.

ಡಾರ್ವಿನ್ ಸಿದ್ಧಾಂತದ ಮಹಿಮೆ

ಒಬ್ಬ ವಿಜ್ಞಾನಿಯ ಸಾಧನೆಯನ್ನು ಅಳೆಯುವಾಗ ಆತ ಏನು ಮಾಡಿದ್ದಾನೆ ಎನ್ನುವುದಕ್ಕಿಂತ ಆತನ ಸಂಶೋಧನೆ ಬೇರೆಯವರಲ್ಲಿ ಎಂತಹ ಪರಿಣಾಮ ಬೀರಿದೆ ಎನ್ನುವುದು ಮುಖ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಡಾರ್ವಿನ್ನನ “ಜೀವ ಸಂಕುಲಗಳ ಉಗಮ” ಯೂರೋಪಿನಲ್ಲಿ ಅಲ್ಲೋಲ-ಕಲ್ಲೋಲ ಉಂಟುಮಾಡಿತು. ಧಾರ್ಮಿಕ ಪ್ರಭುಗಳು ವ್ಯಗ್ರ್ಯರಾದರು ಧರ್ಮದ ಅಮಲೇರಿಸಿಕೊಂಡಿದ್ದ ರಿಚರ್ಡ್ ಓವನ್ ಮತ್ತು ಲೂಯಿ ಅಗಾಸಿರ್ ಎನ್ನುವ ಪಳೆಯುಳಿಕಾ ವಿಜ್ಞಾನಿಗಳು ಸುಳ್ಳು ಪುರಾವೆಗಳನ್ನು ಸೃಷ್ಟಿಸಿ ಡಾರ್ವಿನ್ ಸಿದ್ಧಾಂತ ಸುಳ್ಳೆಂದು ಸಾಬೀತು ಮಾಡಲು ಹೋರಾಟ ನಡೆಸಿದರು. ಇವರ ವಿರುದ್ಧ ಡಾರ್ವಿನ್ ಸಿದ್ಧಾಂತದ ಪರ ಥಾಮಸ್ ಹೆನ್ರಿ ಹೆಕ್ಲಿ, ಜೋಸೆಫ್ ಹುಕಲ್ ಮತ್ತು ಅಗಾಸ್ಟೆ ಸಾಕ್ಷಿ-ಪುರಾವೆಗಳನ್ನು ಮತ್ತಷ್ಟು ಸಂಗ್ರಹಿಸಿ ಸೈದ್ಧಾಂತಿಕವಾಗಿ ಸುಮಾರು ವರ್ಷ ಹೋರಾಡಿದರು.

1863ರಲ್ಲಿ ಥಾಮಸ್ ಹೆಕ್ಲಿ ಡಾರ್ವಿನ್ ಸಿದ್ಧಾಂತದಿಂದ ಪ್ರೇರಿತನಾಗಿ ಡಾರ್ವಿನ್‌ ಗಿಂತ ಸುಂದರವಾಗಿ ಮಾನವನ ಉಗಮದ ಸಿದ್ಧಾಂತ ಮಂಡಿಸಿದ “Manʼs place in Nature” ಪುಸ್ತಕ ಪ್ರಕಟಿಸಿದ ಇದರಲ್ಲಿ ಮಾನವ-ಕಪಿ-ಗೊರಿಲ್ಲಾ ಸಮಬಂಧವನ್ನು ವಿವರಿಸಿ ಮಂಗನಿಂದ ಮಾನವ ಎಂದು ನೇರವಾಗೇ ನಿರೂಪಿಸಿದ (ಡಾರ್ವಿನ್‌ ಗೆ ಬಹುಶಃ ಆ ಧೈರ್ಯ ಇರಲಿಲ್ಲ.)

ಡಾರ್ವಿನ್ ಸಿದ್ಧಾಂತವನ್ನು ಒಂದು ವಿಜ್ಞಾನವನ್ನಾಗಿ ರೂಪಿಸಿದ ಖ್ಯಾತಿ ತಳಿವಿಜ್ಞಾನದ್ದು. ಅದು ನವ-ಡಾರ್ವಿನ್‌ ವಾದ(New-Darvinism) ಎನ್ನುವ ಸಿದ್ಧಾಂತವನ್ನು ಹುಟ್ಟು ಹಾಕಿತು. ಗ್ರೆಗರ್‌ಮೆಂಡಲ್ ಈ ಸಿದ್ಧಾಂತದ ಸಹಾಯದಿಂದ ಅನುವಂಶೀಯತೆಯನ್ನು ಪ್ರತಿಪಾದಿಸಿದರು.

ಇದನ್ನು ಓದಿ: ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ವಿಕೃತ ಮರು-ಬರವಣಿಗೆಯ ಹುನ್ನಾರ

ಕಾರ್ಲ್ಸ್‌ಮಾರ್ಕ್ಸ್‌ ಮತ್ತು ಫೆಡ್ರಿಕ್ ಎಂಗೆಲ್ಸರಿಗೆ ಸಮಾಜದ ರಚನೆಯನ್ನು ಅರಿಯಲು ಮತ್ತು ಆ ಮೂಲಕ ಮಾರ್ಕ್ಸ್‌ವಾದವನ್ನು ಒಂದು ಸಮಾಜ ವಿಜ್ಞಾನವನ್ನಾಗಿ ರೂಪಿಸಲು ಸಾಧ್ಯವಾಯಿತು. ಮಾರ್ಕ್ಸ್ ತಾನು ಜಾಗತಿಕವಾಗಿ ಮಂಡಿಸಲಿರುವ ದ್ವಂದ್ವಮಾನ ಮತ್ತು ಚಾರಿತ್ರಿಕ ಮೂಲಭೂತ ಭೌತವಾದದ ಮೂಲಕ ಸಮಾಜದ ಸಂರಚನೆ ತಿಳಿಸಲು ಈ ಗ್ರಂಥ ಪ್ರಬಲವಾದ ಪುರಾವೆ ಒದಗಿಸುತ್ತದೆ ಎಂದು ಎಂಗೆಲ್ಸಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಮಾತ್ರವಲ್ಲ ನಾನು ಡಾರ್ವಿನ್ನರ ಪ್ರಾಮಾಣಿಕ ಅಭಿಮಾನಿ ಎಂದು ಮಾರ್ಮಿಕವಾಗಿ ನುಡಿದಿದ್ದರು. ಒರಟು ಶೈಲಿಯಲ್ಲಿದ್ದರೂ ವಸ್ತುವಾದಿ ಸಿದ್ಧಾಂತದ ಗಟ್ಟಿತನಕ್ಕೆ ಡಾರ್ವಿನ್ ಸಂಶೋಧನೆ ಎರವಾಗಿದೆ ಎಂದರು.

ಪ್ರಕೃತಿಯಲ್ಲಾದ ವಿಕಾಸ, ಈ ವಿಕಾಸದಿಂದಾಗಿಯೇ ಆಗಿರುವ ಬದಲಾವಣೆಗಳು ಒಂದು ನಿರ್ದಿಷ್ಟ ನಿಯಮಗಳ ಪ್ರಕಾರವೇ ಆಗಿದೆ ಎಂಬುದನ್ನು 19ನೇ ಶತಮಾನದ ಹಲವಾರು ವೈಜ್ಞಾನಿಕ ಆಧಾರಗಳ ಮೇಲೆ ಫೆಡ್ರಿಕ್ ಎಂಗೆಲ್ಸ್‌ ನಿರೂಪಿಸಲು ಡಾರ್ವಿನ್ ಸಿದ್ಧಾಂತ ಪ್ರಮುಖ ಆಕರವಾಗಿತ್ತು. ಅದರ ಹಿನ್ನಲೆಯಲ್ಲೇ ಎಂಗೆಲ್ಸ್ ನಿಸರ್ಗದ ದ್ವಂದ್ವಾತ್ಮಕತೆ (Dielectics of Nature) ನಲ್ಲಿ ಬದಲಾವಣೆಗಳು ಮೂರು ನಿಯಮಗೊಳಪಟ್ಟು ಆಗುತ್ತಿವೆ ಎಂದು ನಿರೂಪಿಸಿದರು. ಒಂದು ಪ್ರಮಾಣಾತ್ಮಕ ಬದಲಾವಣೆಯಿಂದ ಗುಣಾತ್ಮಕ ಬದಲಾವಣೆ (Quantitive changes to Qualitative change), ಎರಡೂ ಒಂದೇ ವಸ್ತುವಿನಲ್ಲಿ ಅಡಕವಾಗಿರುವ ಎರಡು ವಿರೋಧಾಭಾಸ ಗುಣಗಳ ನಡುವೆ ನಡೆಯುವ ಸಂಘರ್ಷ(Struggle between two opposite nature in a matter) ಮತ್ತು ಮೂರನೆಯದಾಗಿ ನಿಷೇಧದ ನಿಷೇಧ (Nagation of Nagation).

1953 ರಲ್ಲಿ ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ವಂಶವಾಹಕ ಕಣಗಳ ರಾಸಾಯನಿಕ ರಚನೆಯನ್ನು ಕಂಡು ಹಿಡಿದ ನಂತರ ತಳಿವಿಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಯಾಯಿತು. ಅಣುಅನುವಂಶೀಯ ವಿಜ್ಞಾನ(Molecular genetics) ಡಾರ್ವಿನ್ ಸಿದ್ಧಾಂತವನ್ನು ಗಟ್ಟಿಮಾಡಿ ಬೆಳೆಯಿತು.

ಇಂದು ತಳಿವಿಜ್ಞಾನ, ಜೀವ ವಿಜ್ಞಾನ ಬಹುಮುಖಿಯಾಗಿ ಬೆಳೆಯಲು ಡಾರ್ವಿನ್ ಬಹುಮುಖ್ಯ ಕಾರಣ, ಇದುವೆ ಜನವಿಜ್ಞಾನಿಯೊಬ್ಬನ ಸಾಧನೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *