ದೇವದುರ್ಗ : ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ. ನಾಯಕ್ ಅವರಿಗೆ ನಿಂದಿಸಿದ ಆರೋಪದಡಿ ಮಾಜಿ ಶಾಸಕ ಶಿವನಗೌಡರ ಸೋದರ ಸೇರಿದಂತೆ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಶಾಸಕಿ ಕರೆಯಮ್ಮ ಅವರನ್ನು ನಿಂದಿಸಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಠಾಣೆಗೆ ಮುತ್ತಿಗೆ ಹಾಕಿದ್ದ ಜೆಡಿಎಸ್ ಕಾರ್ಯಕರ್ತರು ಪ್ರಕರಣ ದಾಖಲಿಸಬೇಕು ಎಂದು ಪಟ್ಟು ಹಿಡಿದಿದ್ದರು. ಪ್ರತಿಭಟನೆಗೆ ಮಣಿದ ದೇವದುರ್ಗ ಪೊಲೀಸರು ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಏನಿದು ಪ್ರಕರಣ : ಜೂನ್ 4ರಂದು ವಿದ್ಯುತ್ ದುರಸ್ತಿ ವೇಳೆ ಅರಕೇರಾ ತಾಲ್ಲೂಕಿನ ಆಲದಮರದ ತಾಂಡದಲ್ಲಿ ಲೈನ್ಮ್ಯಾನ್ ವಿರೂಪಾಕ್ಷ ಎಂಬವರು ಸಾವನ್ನಪ್ಪಿದ್ದರು. ಈ ವೇಳೆ ಘಟನಾ ಸ್ಥಳಕ್ಕೆ ಶಾಸಕಿ ಕರೆಮ್ಮ ನಾಯಕ್ ಆಗಮಿಸಿದ್ದರು. ಘಟನಾ ಸ್ಥಳಕ್ಕೆ ಶಾಸಕಿ ಭೇಟಿ ತಡವಾಗಿ ಭೇಟಿ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕೆಲ ಬಿಜೆಪಿ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಹಿಡಿದು ಎಳೆದಾಡಿ, ಚಪ್ಪಲಿ ಎಸೆದಿದ್ದರು ಎಂದು ಆರೋಪಿಸಲಾಗಿದೆ.
ಚುನಾವಣೆಯ ಸೋಲಿನಿಂದ ಹತಾಶರಾಗಿರುವ ಬಿಜೆಪಿ ಕಾರ್ಯಕರ್ತರು ಈ ದುಷ್ಕೃತ್ಯವನ್ನು ಎಸಗಿದ್ದಾರೆ. ಹೆಣ್ಣು ಮಗಳು ಚುನಾವಣೆಯಲ್ಲಿ ಗೆದ್ದಿರುವುದು ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ, ಹಾಗಾಗಿ ಇಂತಹ ನೀಚ ಕೃತ್ಯಗಳನ್ನು ಎಸಗುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.ವ