ಹೊಸ ವರ್ಷಕ್ಕೆ ಜೆಡಿಎಸ್ ಗೆ ಬಂಪರ್ ಆಫರ್ ಕೊಟ್ಟ ಸಚಿವ ಸುಧಾಕರ್

ಚಿಕ್ಕಬಳ್ಳಾಪುರ , ಜ -01, : ಬಿಜೆಪಿ ಜೊತೆ ಜೆಡಿಎಸ್‌ ವಿಲೀನ ಬಗ್ಗೆ ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಈ ಬಗ್ಗೆ ಖುದ್ದು ಜೆಡಿಎಸ್ ವರಿಷ್ಠ HD ದೇವೆಗೌಡ, HD ಕುಮಾರಸ್ವಾಮಿ ಪ್ರತಿಕ್ರಿಯಿಸಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ವಿಲೀನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬೆಳವಣಿಗೆ ಮಧ್ಯೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು, ಬಿಜೆಪಿಯ ರೈಲಿನ ಜೊತೆ ಜೆಡಿಎಸ್ ಬೋಗಿ ಸೇರಿದ್ರೆ ಅವರಿಗೂ ಒಳ್ಳೆಯದು, ರಾಜ್ಯಕ್ಕೂ ಒಳ್ಳೆಯದು ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

ಸುಧಾಕರ್ ರವರು ನಿನ್ನೆ (ಗುರುವಾರ) ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್‌ನವರಿಗೆ ಯಾರ ಜೊತೆ ಇದ್ದರೆ ಒಳ್ಳೆಯದು ಎಂದು ಈಗಾಗಲೇ ಅರ್ಥವಾಗಿದೆ. ಅಂತಹ ರಾಜಕೀಯ ಧ್ರುವೀಕರಣ ಆದ್ರೆ ರಾಜ್ಯದ ಜನತೆ ಹಾಗೂ ಜೆಡಿಎಸ್‌ಗೂ ಒಳ್ಳೆಯದು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಜೊತೆ ಹೋದಾಗಲೆಲ್ಲಾ ಅವರ ಅಸ್ತಿತ್ವವೇ ಹಾಳಾಗಿದ್ದು, ತಮ್ಮ ಶಾಸಕರನ್ನ ಕಳೆದುಕೊಂಡಿದೆ. ಇದರಿಂದ ಜೆಡಿಎಸ್ ಗೆ ಇರುವ ಒಂದೇ ಅವಕಾಶವಿದ್ದು, ಬಿಜೆಪಿ ಜೊತೆ ಗುರುತಿಸಿಕೊಳ್ಳೋದ್ರಿಂದ ಅವರಿಗೆ ಲಾಭ ರಾಜ್ಯಕ್ಕೂ ಒಳಿತಾಗಲಿದೆ. ಬಿಜೆಪಿ ಜನರ ಪರ ಸರ್ಕಾರ ಅಂತ ಇಡೀ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದು, ಬಿಜೆಪಿ ರೈಲಿನ ಜೊತೆ ಹತ್ತಿಕೊಂಡವರು ದೆಹಲಿ ಸೇರ್ತಾರೆ ಇಲ್ಲ ಅಂದ್ರೆ ಹಳ್ಳಿಯಲ್ಲೇ ಉಳಿದು ಬಿಡ್ತಾರೆ ಎಂದರು.

ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರಕಾರದ ಪತನಕ್ಕೆ ಸುಧಾಕರ್ ಕಾರಣ ಎಂದು HD ಕುಮಾರಸ್ವಾಮಿ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು. ಈಗ ಸುಧಾಕರ್ ರವರೆ ಜೆಡಿಎಸ್ ಗೆ ಈ ಆಫರ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್ ನ್ನು ಬಿಜೆಪಿಯಲ್ಲಿ ವಿಲೀನ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಆಸಕ್ತಿ ತೋರುತ್ತಿದ್ದರೆ, ಜೆಡಿಎಸ್ ತಳ್ಳಿ ಹಾಕುತ್ತಿದೆ. ಒಳಗಿನ ಗುಟ್ಟೇನು ಎಂಬುದು ದಳಪತಿಗಳಿಗೆ ಮಾತ್ರ ಗೊತ್ತು?

Donate Janashakthi Media

Leave a Reply

Your email address will not be published. Required fields are marked *