ಬೆಂಗಳೂರು: ವಿಧಾನ ಪರಿಷತ್ತಿಗೆ ನಡೆದ ಉಪಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಪುಟ್ಟಣ್ಣ ಜಯಭೇರಿ ಬಾರಿಸಿದ್ದಾರೆ. ಅವರು ಬಿಜೆಪಿ-ಜೆಡಿ(ಎಸ್) ಮೈತ್ರಿಕೂಟದ ಜಂಟಿ ಅಭ್ಯರ್ಥಿ ಎ.ಪಿ. ರಂಗನಾಥ್ ಅವರನ್ನು 1,506 ಮತಗಳಿಂದ ಸೋಲಿಸಿದ್ದಾರೆ. ಇದು ಪುಟ್ಟಣ್ಣ ಅವರ ಸತತ ಐದನೇ ಬಾರಿಯ ಗೆಲುವಾಗಿದೆ. ಈ ಹಿಂದೆ ಅವರು ನಾಲ್ಕು ಬಾರಿ ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಮೂರು ಬಾರಿ ಜೆಡಿಎಸ್ ಆಯ್ಕೆಯಾಗಿದ್ದರೆ, ಒಮ್ಮೆ ಬಿಜೆಪಿಯಿಂದ ಗೆದ್ದಿದ್ದಾರೆ.
ಫೆಬ್ರವರಿ 16 ರಂದು ನಡೆದ ಚುನಾವಣೆಯಲ್ಲಿ ಒಟ್ಟು 14,432 ಮತದಾರರು ಮತ ಚಲಾಯಿಸಿದ್ದರು. ಪುಟ್ಟಣ್ಣ ಅವರು ನವೆಂಬರ್ 2020 ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದಿದ್ದರು. ಆದರೆ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಾಳಯಕ್ಕೆ ಸೇರಿದ್ದ ಕಾರಣಕ್ಕೆ ಪರಿಷತ್ ಸ್ಥಾನವು ತೆರವುಗೊಂಡಿತ್ತು.
ಇದನ್ನೂ ಓದಿ: ತೆಲಂಗಾಣ | ಕಂಪೆನಿ ತೊರೆದ ದಲಿತ ಉದ್ಯೋಗಿಗಳಿಗೆ ಬೆಲ್ಟ್ ಮತ್ತು ಟೈರ್ ಟ್ಯೂಬ್‌ಗಳಿಂದ ತೀವ್ರ ಥಳಿತ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದ್ದ ಜೆಡಿಎಸ್ ಪಕ್ಷವೂ ಜಂಟಿಯಾಗಿ ಸ್ಪರ್ಧಿಸಿದ ಮೊದಲ ಚನಾವಣೆ ಇದಾಗಿದೆ. ಅದಾಗ್ಯೂ ಮೊದಲನೆಯ ಚುನಾವಣೆಯಲ್ಲೆ ಬಿಜೆಪಿ ಮತ್ತು ಜೆಡಿ (ಎಸ್) ಮೈತ್ರಿಗೆ ಈ ಫಲಿತಾಂಶವು ತೀವ್ರ ಮುಖಭಂಗ ನೀಡಿದೆ.
ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮೈತ್ರಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಹೊಂದಾಣಿಕೆಗಾಗಿ ಬಿಜೆಪಿಯು ಬೆಂಗಳೂರು ಶಿಕ್ಷಕರ ಕ್ಷೇತ್ರದ ಸ್ಥಾನವನ್ನು ಜೆಡಿ (ಎಸ್) ಗೆ ಬಿಟ್ಟುಕೊಟ್ಟಿತ್ತು. ಜನವರಿಯಲ್ಲಿ ಉಭಯ ಪಕ್ಷಗಳ ರಾಜ್ಯ ನಾಯಕರ ಸಭೆ ನಡೆಸಿ ಜೆಡಿಎಸ್‌ಗೆ ಸ್ಥಾನ ಬಿಟ್ಟುಕೊಡಲಾಗಿತ್ತು.
ಜೆಡಿಎಸ್‌ನ ಕಾನೂನು ಘಟಕದ ದೀರ್ಘಕಾಲ ಅಧ್ಯಕ್ಷರಾಗಿದ್ದ ಎಪಿ ರಂಗನಾಥ್ ಅವರು ಪುಟ್ಟಣ್ಣ ವಿರುದ್ಧ ಸೋಲುಂಡಿದ್ದಾರೆ. ಈ ಹಿಂದೆ ಜೆಡಿಎಸ್‌ನಿಂದ ಕಣಕ್ಕಿಳಿದು ಸೋತಿದ್ದರೂ, ಬಿಜೆಪಿಯ ಬೆಂಬಲ ತಮಗೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ರಂಗನಾಥ್ ಇದ್ದರು.
ವಿಡಿಯೊ ನೋಡಿ: ಬ್ರಿಟಿಷರಿಗೆ ಸಹಾಯ ಮಾಡಿದ್ದ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರ ಆಗಲು ಹೇಗೆ ಸಾಧ್ಯ?