ಕೋಲಾರ: ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಜೆಸಿಬಿ ಯಂತ್ರಗಳಿಂದ ಕೆಲಸ ಮಾಡಿಸಬಾರದು ನೇರವಾಗಿ ಕೂಲಿಕಾರರಿಗೆ ಕೆಲಸ ನೀಡಲು ಮತ್ತು ನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಒತ್ತಾಯಿಸಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಜಾರಿ ಸಮಿತಿ ವತಿಯಿಂದ ಇಂದು ನಗರದ ತಾಲೂಕು ಪಂಚಾಯತಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೇಂದ್ರ ಸರಕಾರವು ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಸ್ಥಳೀಯವಾಗಿ ಕೆಲಸ ನೀಡಿ, ದೂರದ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ರಾಷ್ಟಿಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಜೆಸಿಬಿ ಯಂತ್ರಗಳಿಂದ ಮಾಡಿಸಿ ಕೂಲಿಕಾರರಿಗೆ ಕೆಲಸ ನೀಡದೇ ವಂಚಿಸಿ ಕಾನೂನು ಉಲ್ಲಂಘನೆ ಮಾಡುತ್ತಾ ಇದ್ದು ಇದಕ್ಕೆ ಅಧಿಕಾರಿಗಳ ಕುಮ್ಮಕ್ಕು ನೀಡಿರುತ್ತಿರುವುದರಿಂದ ಸಾಕಷ್ಟು ಅವ್ಯವಹಾರವನ್ನು ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದನ್ನು ಓದಿ: ಮನರೇಗ ಸಲಹಾ ಆದೇಶದ ಬಗ್ಗೆ ಗ್ರಾಮೀಣಾಭಿವೃದ್ಧಿ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ
ತಾಲೂಕಿನ ಶಾಪೂರು ಗ್ರಾಮ ಪಂಚಾಯಿತಿಯಲ್ಲಿ ಕೂಲಿಕಾರರಿಗೆ ಕೆಲಸ ನೀಡುವಂತೆ ಅರ್ಜಿ ಸಲ್ಲಿಸಲು ಹೋದರೆ, ಅರ್ಜಿಗಳನ್ನು ಸ್ವೀಕರಿಸದೇ ನಾನಾ ಕಾರಣಗಳನ್ನು ಹೇಳಿ ವಾಪಸು ಕಳುಹಿಸುತ್ತಾರೆ. ಹತ್ತಾರು ಬಾರಿ ಅಲೆದಾಡಿ ಅರ್ಜಿ ಸಲ್ಲಿಸಿದ ನಂತರ ಸಕಾಲಕ್ಕೆ ಕೆಲಸ ನೀಡುವುದಿಲ್ಲ, ಕೆಲಸ ನೀಡಿದರೂ ನಾನಾ ರೀತಿಯ ಕಿರುಕುಳವನ್ನು ನೀಡುವುದು, ನಂತರ ಸಕಾಲಕ್ಕೆ ಬಿಲ್ ಪಾವತಿ ಮಾಡದೇ ಸತಾಯಿಸುತ್ತಾರೆ. ಇದರಿಂದ ಕೂಲಿಕಾರರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಮುಂದೆ ಬರುವುದಿಲ್ಲ. ಶಾಪೂರು ಗ್ರಾಮ ಪಂಚಾಯತಿಯಲ್ಲಿ ನರೇಗಾ ಕೂಲಿ ಮಾಡುವ ಕೆಲಸಗಳಿಗೆ ನಾನಾ ರೀತಿಯ ಕಿರುಕುಳಗಳನ್ನು ನೀಡಿದ್ದಾರೆ. ಅದೇ ಯಂತ್ರಗಳಿಂದ ಮಾಡುವವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದರು.
ನರೇಗಾ ಸಮರ್ಪಕ ಜಾರಿ ಸಮಿತಿ ಅಧ್ಯಕ್ಷೆ ವಿ.ಗೀತಾ ಮಾತನಾಡಿ ʻʻಯಂತ್ರಗಳಿಂದ ಮಾಡಿಸಲಾಗುತ್ತಿರುವ ಕೆಲಸವನ್ನು ಆರಂಭ ಮಾಡುವ ಮೊದಲೇ ಎನ್‌ಎಂಆರ್ ತೆಗೆಸುತ್ತಾರೆ, ಪ್ರತಿದಿನ ದಾಖಲಾತಿ ಮತ್ತು ಯಾವುದೇ ಮಾಹಿತಿ ಇರದಿದ್ದರೂ ಸಕಾಲಕ್ಕೆ ಬಿಲ್ ಪಾವತಿ ಮಾಡಲಾಗುತ್ತಿದೆ. ಯಂತ್ರಗಳಿಂದ ಕೆಲಸ ಮಾಡಿದ ಬಗ್ಗೆ ದೂರು ನೀಡಿದ್ದಕ್ಕೆ ಜೆಎಂಎಸ್ ನಾಯಕಿ ಆಂಜಿನಮ್ಮ ಮೇಲೆ ಜನಪ್ರತಿನಿಧಿಗಳು ಬೆದರಿಕೆ, ದೌರ್ಜನ್ಯ, ದರ್ಪ, ಅಸಭ್ಯವಾಗಿ ವರ್ತಿಸಿದ್ದಾರೆ. ಇದಕ್ಕೆ ಅಧಿಕಾರಿಗಳು ಕುಮ್ಮಕು ಇರುವುದು ಸ್ಪಷ್ಠವಾಗಿದೆ ಸಾಕಷ್ಠು ಅವ್ಯವಹಾರಗಳು ನಡೆದಿದೆ ಈ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕುʼʼ ಎಂದು ಒತ್ತಾಯಿಸಿದರು.
ನರೇಗಾ ಸಮರ್ಪಕ ಜಾರಿ ಸಮಿತಿಯ ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಮಾತನಾಡಿ ʻʻಹಳ್ಳಿಗಳಲ್ಲಿ ಕೆಲಸವಿಲ್ಲದೇ ಇರುವ ಕೂಲಿ ಕಾರ್ಮಿಕರಿಗೆ ಸಭೆಗಳನ್ನು ನಡೆಸಿ ಉದ್ಯೋಗ ಖಾತ್ರಿ ಅರಿವು ಮೂಡಿಸಿ ಕೆಲಸ ನೀಡಬೇಕು ಯಂತ್ರಗಳಿಂದ ಕೆಲಸ ಮಾಡುವ ಗುತ್ತಿಗೆದಾರರ ಪರವಾಗಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಬಿಎಫ್‌ಟಿ ನಾರಾಯಣಮ್ಮ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು.ಕೂಲಿಕಾರರು ಫಾರಂ ೬ ಅರ್ಜಿಗಳನ್ನು ಸಲ್ಲಿಸಿದಾಗ ಸ್ವೀಕರಿಸಿ, ತಕ್ಷಣ ಕೆಲಸ ನೀಡಬೇಕು, ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ತಕ್ಷಣವೇ ಕೂಲಿ ಹಣ ಬಿಡುಗಡೆ ಮಾಡಬೇಕು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ ೨೦೦ ದಿನಗಳ ಕೆಲಸ ನೀಡಬೇಕು ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಕ್ಕೆ ೬೦೦ ಕೂಲಿ ನೀಡಬೇಕು ಒತ್ತಾಯಿಸಿದರು.
ಇದನ್ನು ಓದಿ: ಮನರೇಗಾ ಕೆಲಸ ಕಡಿತ: ಪರಿಹಾರಕ್ಕೆ ಆಗ್ರಹಿಸಿ ಹಕ್ಕೊತ್ತಾಯ
ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ತಾಲ್ಲೂಕು ಪಂಚಾಯತಿ ಇ.ಒ. ಬಾಬು, ಮಾತನಾಡಿ ʻʻಶಾಪೂರು ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಭರವಸೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ನರೇಗಾ ಜಾರಿ ಸಮಿತಿಯ ಎನ್.ಎನ್ ಶ್ರೀರಾಮ್, ವಿ.ನಾರಾಯಣರೆಡ್ಡಿ, ಟಿ.ಕೃಷ್ಣೇಗೌಡ, ಎಂ.ವಿಜಯಕೃಷ್ಣ, ಅಪ್ಪಯ್ಯಣ್ಣ, ರಮೇಶ್, ಸುಶೀಲಾ, ಯಲ್ಲಪ್ಪ, ವೆಂಕಟೇಶಪ್ಪ, ಅಂಜಿನಮ್ಮ, ಮುಂತಾದವರು ವಹಿಸಿದ್ದರು.