ಜಯಕ್ಕನ ಶವಕ್ಕೆ ಹೆಗಲು ನೀಡಿ, ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು

ಮೈಸೂರು: ಮುಸ್ಲಿಮರು 60 ವರ್ಷದ ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟು ಅಂತ್ಯ ಸಂಸ್ಕಾರ ನಡೆಸುವ ಮೂಲಕ ಕೋಮು ಸೌಹಾರ್ದತೆ ಮೆರೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮುಸ್ಲಿಂ ಜನಸಂಖ್ಯೆಯ ಪ್ರಾಬಲ್ಯವಿರುವ ಗೌಸಿಯಾನಗರದ ನಿವಾಸಿಯಾಗಿದ್ದ ಹಿಂದೂ ಮಹಿಳೆ ಜಯಕ್ಕ(60) ಅವರು ಶುಕ್ರವಾರ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮಹಿಳೆಗೆ ಪತಿ‌ ಮತ್ತು ಮಗನನ್ನು ಹೊರತು ಪಡಿಸಿ ಯಾರು ಇರಲಿಲ್ಲ. ಆಗ ಗೌಸಿಯಾ ನಗರದ ಮುಸ್ಲಿಮರು ಮೃತದೇಹವನ್ನು ಹೆಗಲಿನಲ್ಲಿ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಅವರೇ ಗುಂಡಿಯನ್ನು ತೋಡಿ ಅಂತ್ಯಕ್ರಿಯೆಯನ್ನು ನೆರವೇರಿಸಿದರು.

ಜಯಕ್ಕನ ಮೃತದೇಹವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದ ಮುಸ್ಲಿಂ ಬಾಂಧವರು, ಅವರೇ ಗುಂಡಿ ತೆಗೆದು ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನಡೆಸಿದರು.

ಜಯಕ್ಕ ಅವರು ತಮ್ಮ ಜೀವನದ ಬಹುಪಾಲು ಈ ಪ್ರದೇಶದಲ್ಲಿಯೇ ವಾಸಿಸುತ್ತಿದ್ದರು. ಆಕೆಯ ಕುಟುಂಬ ಇಲ್ಲಿರುವ ಏಕೈಕ ಹಿಂದೂ ಕುಟುಂಬವಾಗಿತ್ತು. ಆದರೆ ನಾವೆಲ್ಲರೂ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದೇವೆ. ನಾವು ಹಬ್ಬಗಳು ಮತ್ತು ಕುಟುಂಬ ಸಮಾರಂಭಗಳನ್ನು ಒಟ್ಟಿಗೆ ಆಚರಿಸುತ್ತೇವೆ. ಆಕೆಯ ಹಠಾತ್ ನಿಧನದ ಬಗ್ಗೆ ತಿಳಿದಾಗ ನಮಗೆ ಆಘಾತವಾಯಿತು. ಈ ಸಮಯದಲ್ಲಿ ನಾವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಅವರ ಶವಕ್ಕೆ ನಮ್ಮ ಹೆಗಲು ಕೊಡುವುದು ಮತ್ತು ಅವರಿಗೆ ಗೌರವಾನ್ವಿತ ವಿದಾಯ ಹೇಳುವುದು ಎಂದು ಸಾಮಾಜಿಕ ಕಾರ್ಯಕರ್ತ ತನ್ವೀರ್ ಪಾಷಾ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕೋಮು ಘರ್ಷಣೆ ಮತ್ತು ವಿಭಜಕ ರಾಜಕಾರಣ ನಡೆಯುತ್ತಿರುವ ಈ ಹೊತ್ತಿನಲ್ಲಿ ಮೈಸೂರಿನಲ್ಲಿ ಮುಸ್ಲಿಮರು ತೋರಿದ ಸೌಹಾರ್ದತೆ, ರಾಜ್ಯದ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *