ಮೈಸೂರು: ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿ(ಎಸ್) ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಅವರು ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿ ಸಿದ್ಧರಾಮಯ್ಯ ಜಾತಿ ಜಾತಿಗಳನ್ನೇ ಒಡೆದರು. ಸಿಂಧಗಿ, ಹಾನಗಲ್‌ನಲ್ಲಿ ಜಾತಿವಾರು ಸಭೆಗಳನ್ನು ಮಾಡುತ್ತಿದ್ದಾರೆ. ಜಾತ್ಯಾತೀತವಾಗಿದ್ದರೆ ಇವರು ಜಾತಿವಾರು ಸಭೆ ಯಾಕೆ ನಡೆಸುತ್ತಿದ್ದರು. ಇವರೆಂಥಾ ಜಾತ್ಯಾತೀತವಾದಿಗಳು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಮತ್ತು ತಂಡ ಸಿಂಧಗಿಯಲ್ಲಿ ಕುಳಿತಿರುವುದೇ ಜೆಡಿಎಸ್ ಸೋಲಿಸಿ ಬಿಜೆಪಿಯನ್ನು ಗೆಲ್ಲಿಸಲು. ಸಿಂಧಗಿಯಲ್ಲಿ ಸ್ಪರ್ಧೆ ಇರೋದು ಜೆಡಿಎಸ್ ಮತ್ತು ಬಿಜೆಪಿ ನಡುವೆ, ಹೀಗಾಗಿ ಕಾಂಗ್ರೆಸ್‌ನವರು ಅಲ್ಲಿ ಯಾಕೆ ಬೀಡು ಬಿಟ್ಟಿದ್ದಾರೆ. ಹಾಗಾಗಿ ಅವರ ಉದ್ದೇಶ ಸ್ಪಷ್ಟ ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸೋದೇ ಆಗಿದೆ ಎಂದು ಹೇಳಿದರು.
ಸಿದ್ದರಾಮಯ್ಯರಿಂದ ಪ್ರತಿ ಸಭೆಯಲ್ಲಿ ನನ್ನ ವಿರುದ್ಧ ಆರೋಪವಾಗಿದೆ. ಪ್ರತಿ ಸಭೆಯಲ್ಲೂ ನನ್ನ ವಿರುದ್ದ ಹೊಲ ಉಳುಮೆ ಮಾಡಿದ್ದಾನ ಎಂದು ಆರೋಪ ಮಾಡುತ್ತಾರೆ. ನಿಜವಾದ ರೈತ ನಾನು, ನಾವು ಕುರಿ ಮಂದೆಯ ನಡುವೆ ಊಟ ಮಾಡಿ ಮಲಗಿದ್ದೇನೆ. ನಾನು ಕೃಷಿಕನೋ ಅಲ್ಲವೋ ಅಂತ ಬಿಡದಿ ತೋಟಕ್ಕೆ ಬಂದು ನೋಡಲಿ. ಆದರೆ ಸಿದ್ದರಾಮಯ್ಯ ಎಲ್ಲಿ ಹೊಲ ಉಳುಮೆ ಮಾಡಿದ್ದಾರೆ. ಅವರದ್ದು ಒಂದು ಫಾರಂ ಹೌಸ್ ಇದಿಯಲ್ಲ, ಏನ್ ಬಿತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬ್ರದರ್ ಬ್ರದರ್ ಎನ್ನುತ್ತಾ ಮುಸಲ್ಮಾನರ ಕತ್ತು ಕೋಯುತ್ತಾರೆ ಎಂಬ ಜಮೀರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಬಿ.ಎಂ.ಫಾರುಕ್‌ರನ್ನು ಚುನಾವಣೆಗೆ ನಿಲ್ಲಿಸಿ ಕತ್ತು ಕೋಯ್ದವರು ಯಾರು?. ಬಿ.ಎಂ.ಫಾರುಕ್ ವಿರುದ್ದ ರಾಮಸ್ವಾಮಿಗೆ ಓಟು ಹಾಕಿದ್ದು ಯಾರು, ಇವರಿಂದ ಮುಸಲ್ಮಾನರು ಯಾರು ಉದ್ದಾರ ಆಗಿದ್ಧಾರೆ. ಹೋಗಲಿ ರಾಮಸ್ವಾಮಿಯವರನ್ನಾದರೂ ಉಳಿಸಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಇವರಿಂದ ನಾವು ಕಲಿಯುವುದು ಏನಿಲ್ಲ ಇವರೆಲ್ಲಾ ಚುನಾವಣೆಯುದ್ದಕ್ಕೂ ಹೀಗೆ ಮಾತನಾಡಲಿ. ನನಗೆ ಒಳ್ಳೆಯದು, ನಾನು ಅದನ್ನೇ ಆಶಿಸುತ್ತೇನೆಂದರು.