ಕಲಬುರಗಿ: ಕಳೆದ ಮಾರ್ಚ್ ತಿಂಗಳಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಆರರಿಂದ ಎಂಟನೇ ತರಗತಿ ಮಕ್ಕಳಿಗೆ ಪಾಠ ಮಾಡಲು 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ನೇಮಕಾತಿ ಆಯ್ಕೆ ಸಂಬಂಧಿಸಿದ ಪರೀಕ್ಷೆಯೂ ಮುಗಿದಿದೆ. ಆದರೆ, ನವಂಬರ್ 18ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ರಾಜ್ಯದ ಸುಮಾರು 2 ಸಾವಿರ ಮಹಿಳಾ ಅಭ್ಯರ್ಥಿಗಳ ವಿವರ ಬಿಡುಗಡೆಯಾಗಿಲ್ಲ.
ಇದಕ್ಕೆ ಕಾರಣ ಮದುವೆಯಾಗಿರುವ ಮಹಿಳಾ ಅಭ್ಯರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ್ದೇ ಗೊಂದಲವಾಗಿದೆ ಎಂದು ತಿಳಿದುಬಂದಿದೆ. ರಾಜ್ಯದ ಕೆಲವು ಕಡೆಗಳಲ್ಲಿ ಎಸ್‌ಸಿ/ಎಸ್‌ಟಿ ಹಾಗೂ ಕ್ಯಾಟಗರಿ 1 ಅಭ್ಯರ್ಥಿಗಳಿಗೆ ದಾಖಲೆ ಸ್ವೀಕರಿಸಲಾಗಿದೆ. ಆದಾಯ ಪ್ರಮಾಣ ಪತ್ರ ಅಗತ್ಯ ಇಲ್ಲ ಅಂತಾ ಪರಿಗಣಿಸಲಾಗಿದೆ. ಆದರೆ, 2ಎ, 2ಬಿ, 3ಎ, 3ಬಿ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗಂಡನ ಮನೆಯ ಆದಾಯ ದಾಖಲೆ ತರುವಂತೆ ಕೇಳಿದ್ದಾರೆ. ಒಬಿಸಿ ಮೀಸಲಾತಿ ಬಯಸಿ ಅರ್ಜಿ ಸಲ್ಲಿಸಿದ 2,300 ಮಹಿಳಾ ಅಭ್ಯರ್ಥಿಗಳು ಈಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಅನೇಕ ಅಭ್ಯರ್ಥಿಗಳು ಅರ್ಜಿ ಹಾಕುವಾಗ, ನೀವು ವಿವಾಹಿತರೇ ಅನ್ನೋ ಕಾಲಂನಲ್ಲಿ ಹೌದು ಅಂತ ನಮೂದಿಸಿದ್ದಾರೆ. ಆದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ತಂದೆಯದು ನೀಡಿದ್ದಾರೆ. ಮದುವೆಯಾದ ಮೇಲೆ ಪತಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸದೇ, ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಿದ್ದಾರೆ ಎಂಬ ಕಾರಣವನ್ನು ನೀಡಿ ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದ ಅನೇಕರನ್ನು ಮೀಸಲಾತಿ ಅಡಿ ಪರಿಗಣಿಸದೇ, ಸಾಮಾನ್ಯ ಕೋಟಾದಲ್ಲಿ ಪರಿಗಣಿಸಲಾಗಿದೆ.
ಆದರೂ ಸಹ ಅನೇಕರು ಸಾಮಾನ್ಯ ಕೋಟಾದಡಿಯಲ್ಲಿಯೂ ಆಯ್ಕೆಯಾಗಿಲ್ಲ. ತಮ್ಮನ್ನು ಮೀಸಲಾತಿ ಅಡಿ ಪರಿಗಣಿಸಿದ್ದರೆ, ತಾವು ಆಯ್ಕೆಯಾಗುತ್ತಿದ್ದೆವು, ಸಾಮಾನ್ಯ ಕೋಟಾದಲ್ಲಿ ಪರಿಗಣಿಸಿದ್ದರಿಂದ ಆಯ್ಕೆಯಾಗಿಲ್ಲಾ ಎಂದು ನೊಂದ ಮಹಿಳೆಯರು ಆರೋಪಿಸಿದ್ದಾರೆ. ಇಲ್ಲೂ ಕೆಲ ವಿವಾಹಿತ ಮಹಿಳೆಯರು ಅರ್ಜಿ ಸಲ್ಲಿಸುವಾಗ, ಅಭ್ಯರ್ಥಿ ವಿವಾಹಿತರೇ? ಎಂಬ ಕಾಲಂನಲ್ಲಿ ಅವಿವಾಹಿತರು ಅಂತ ನಮೂದಿಸಿದ್ದಾರೆ. ಅವರುಗಳು ಆಯ್ಕೆಯಾಗಿದ್ದಾರೆ. ಆದರೆ, ಪ್ರಾಮಾಣಿಕತೆ ತೋರಿದ ಅನೇಕರಿಗೆ ಇದೀಗ ಸರ್ಕಾರಿ ನೌಕರಿಯಿಂದ ವಂಚಿತರಾಗಿದ್ದಾರೆ.
ಅಧಿಸೂಚನೆಯನ್ನು ಹೊರಡಿಸುವಾಗ ಅಭ್ಯರ್ಥಿಗಳು ಗಂಡನ ಮನೆಯ ದಾಖಲೆ ಕೊಡಬೇಕೆಂದು ಉಲ್ಲೇಖ ಮಾಡಿರಲಿಲ್ಲ. ಹೀಗಾಗಿ ತಂದೆ ಮನೆಯ ಇರುವ ದಾಖಲೆಗಳನ್ನೆ ಮಹಿಳಾ ಅಭ್ಯರ್ಥಿಗಳು ನೀಡಿದ್ದಾರೆ. ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ತಂದೆ ಹೆಸರಲ್ಲೇ ಇವೆ. ಅದೇ ದಾಖಲೆಗಳನ್ನ ಇಲಾಖೆಗೆ ನೀಡಲಾಗಿತ್ತು. ದಾಖಲೆ ಪರಿಶೀಲನೆ ವೇಳೆಯೂ ಅದೇ ದಾಖಲೆಗಳನ್ನ ಪರಿಗಣಿಸಲಾಗಿದೆ. ಆದರೆ, ಏಕಾಏಕಿ ಗಂಡನ ಮನೆಯ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೇಳ್ತಿದಾರೆ.
ಕಲಬುರಗಿ ನಗರದ ಮಧುಮತಿ ಕಂಬಾರ್ ಎಂಬ ಅಭ್ಯರ್ಥಿಯು, 2ಎ ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದರು. ಇವರು ಶೇಕಡಾ 67 ರಷ್ಟು ಅಂಕಗಳನ್ನು ಪಡೆದಿದ್ದಾರೆ. ಆದರೆ 2ಎ ಅಡಿ ಶೇಕಡಾ 63 ರಷ್ಟು ಅಂಕ ಪಡೆದವರು ಆಯ್ಕೆಯಾಗಿದ್ದಾರೆ. ಅದೇ ಶೇಕಡಾ 67 ರಷ್ಟು ಅಂಕ ಪಡೆದಿದ್ದ ಮಧುಮತಿ ಕಂಬಾರ್ ಅವರು ಆಯ್ಕೆಯಾಗಿಲ್ಲ! ಇದೇ ರೀತಿ ವಿವಿಧ ಜಾತಿಗಳ ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದ ಅನೇಕರು ಹೆಚ್ಚಿನ ಅಂಕ ಪಡೆದಿದ್ದರೂ ಸಹ ಆಯ್ಕೆಯಾಗಿಲ್ಲ.
ನಮಗೆ ಅವಕಾಶ ನೀಡಿದರೆ ಪತಿಯ ಜಾತಿ ಮತ್ತು ಆದಾಯ ಪತ್ರ ಸಲ್ಲಿಸಲು ನಾವು ಸಿದ್ದರಿದ್ದೇವೆ. ಆದರೆ ಸರ್ಕಾರ ಯಾವುದನ್ನೂ ಹೇಳದೆ, ನಮ್ಮನ್ನು ಕತ್ತಲೆಯ ಕೋಣೆಯಲ್ಲಿಟ್ಟು ನಮಗೆ ಅನ್ಯಾಯ ಮಾಡಿದೆ. ನಮಗೆ ನ್ಯಾಯ ಬೇಕು, ಇಲ್ಲದಿದ್ದರೆ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ ಅನ್ನುತ್ತಾರೆ ಮಧುಮತಿ ಸೇರಿದಂತೆ ಅನೇಕ ಅಭ್ಯರ್ಥಿಗಳು.
ದಾಖಲಾತಿ ಪರಿಶೀಲನೆ ವೇಳೆಯಲ್ಲಿ ಗಂಡನ ಮನೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೇಳಿದ್ದರೆ ನೀಡ್ತಿದ್ದೆವು. ಆದರೆ ಈ ಹಿಂದೆ ಒಂದು ಹುದ್ದೆಗೆ ಇಬ್ಬರಂತೆ ನಡೆದ ದಾಖಲಾತಿಗಳ ಪರಿಶೀಲನೆ ವೇಳೆ ಕೂಡಾ ಏನನ್ನೂ ಕೇಳಿಲ್ಲಾ. ಇದೀಗ ದಿಢೀರನೆ ನಮ್ಮನ್ನು ಕೈ ಬಿಟ್ಟಿದ್ದಾರೆ. ಇದರಿಂದ ಅನೇಕ ವರ್ಷಗಳ ತಮ್ಮ ಕನಸು ನುಚ್ಚು ನೂರಾಗಿದೆ ಅಂತ ನೊಂದ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
Virupakshi k