ಮಣ್ಣಿನಿಂದ ಹಬ್ಬದ ಅಡುಗೆ ಮಾಡಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ಹೊರಹಾಕಿದ ಮಹಿಳೆಯರು

ಕಲಬುರಗಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ವಿನೂತನ ಪ್ರತಿಭಟನೆ ನಡೆಸಿದರು.

ಮಣ್ಣಿನಿಂದ ತಯಾರಿಸಿದ ಉಂಡಿ, ಕರ್ಚಿಕಾಯಿ, ಶಂಕರಪೋಳೆ, ಬೇಸನ್ ಉಂಡಿಯನ್ನು ತಟ್ಟೆಯಲ್ಲಿಟ್ಟುಕೊಂಡು ವಿನೂತನ ಪ್ರತಿಭಟನೆ ನಡೆಸಿದರು. ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿದಿರಿ ಮಣ್ಣಿನಲ್ಲಿ ಇವನ್ನೆಲ್ಲ ಮಾಡಿ, ಮನಸ್ಸನಿಲ್ಲಿಯೇ ಹಬ್ಬದ ಊಟವನ್ನು ಸವಿಯುವಂತೆ ಮಾಡಿದರಿ, ಸಾಮಾನ್ಯ ಜನರಿಗೆ ‘ಬೆಲೆ ಏರಿಕೆಯನ್ನೆ ಹಬ್ಬದ ಉಡುಗೊರೆಯನ್ನಾಗಿ ನೀಡಿದ್ದೀರಿ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಮುಖಂಡರಾದ ಪದ್ಮಿನಿ ಕಿರಣಗಿ ಮಾತನಾಡಿ, ಏಷ್ಯಾ ಖಂಡದಲ್ಲಿಯೇ ಭಾರತ ಅತಿ ಹೆಚ್ಚು ಬೆಲೆ ಏರಿಕೆ ಮಾಡಿದ ಕುಖ್ಯಾತಿಗೆ ಒಳಗಾಗಿದ್ದು, ಇದು ಕೇಂದ್ರ ಸರ್ಕಾರದ ವೈಫಲ್ಯವೇ ಆಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ಔಪಚಾರಿಕವಾಗಿ ಶುಭಕೋರುವ ಪ‍್ರಧಾನಮಂತ್ರಿ ಸಾರ್ವಜನಿಕ ಪಡಿತರ ವ್ಯವಸ್ಥೆಯ ಮೂಲಕ ಜೀವನಾವಶ್ಯಕ ಆಹಾರ ಧಾನ್ಯಗಳು, ಬೇಳೆ ಕಾಳುಗಳು, ಬೆಲ್ಲ, ಎಳ್ಳು, ಅಡುಗೆ ಎಣ್ಣೆಯನ್ನು ನೀಡಿ ಬಡಬಗ್ಗರು ಹಬ್ಬವನ್ನು ಆಚರಿಸಲು ಅನುವು ಮಾಡಿಕೊಡಬೇಕು. ಸರ್ಕಾರಗಳು ಕನಿಷ್ಠ ತಮ್ಮ ಪಾಲಿನ ತೆರಿಗೆಯನ್ನಾದರೂ ಇಳಿಸಬೇಕು. ಅದಾವುದನ್ನೂ ಮಾಡದೇ ತಾನು ಹಿಂದಿನ ಸರ್ಕಾರಗಳಿಗೇನು ಕಡಿಮೆಯಲ್ಲವೆಂಬಂತೆ ತೀವ್ರವಾಗಿ ಬೆಲೆಗಳನ್ನು ಏರಿಸುತ್ತಲೇ ಇದೆ ಎಂದು ಟೀಕಿಸಿದರು.

ದೀಪಾವಳಿ ಹಬ್ಬದಾಗ ಇವೆಲ್ಲ ಮಾಡ್ಲಿಕ್ ನಮ್ಮ ಮನ್ಯಾಗ ಗ್ಯಾಸ್ ನೂ ಇಲ್ಲ ರೊಕ್ಕನೂ ಇಲ್ಲ ಅದಕ್ಕೆ ಮಣ್ಣಿನ್ಯಾಗೆ ರವೆ ಉಂಡಿ, ಬೆಸನ್ ಉಂಡಿ, ಖರ್ಚಿಕಾಯಿ, ಶಂಕರ್ ಪಾಳೆ, ಹೋಳಿಗೆ, ಚುಡುವಾ ಮಾಡೀವಿ, ಹೆಂಗಿದೆ ಅಂತ ರುಚಿ ನೋಡಿ‌ ಹೇಳಬೇಕು ನೋಡ್ರಿ ಮೋದಿಜೀ ನೀವು..ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲದ ಬೆಲೆ ಮುಗಿಲ ಮುಟ್ಟ್ಯಾದ್ ನೀವು ಬಂದಾಗಿನಿಂದ ದೀಪಾವಳಿ ಹಬ್ಬ ದಿವಾಳೆದ್ದು ಹೋಗ್ಯಾದ. ಈ ಸಲ ದೀಪಾವಳಿ ಹೆಂಗ ಆಚರಸಬೇಕು ಹೇಳ್ರಿ ಎಂದು ಸಂಘಟನೆಯ ಪ್ರಿಯಾಂಕ ಮಾವಿನಕರ್ ಪ್ರಶ್ನಿಸಿದ್ದಾರೆ.

ಸಂಘಟನೆಯ ಮುಖಂಡರಾದ  ಜಗದೇವಿ ನೂಲಕರ, ಸೈನಾಜ್ ಅಖ್ತರ್, ಅಶ್ವಿನಿ, ಅನ್ನಪೂರ್ಣ ಮಠದ ಸೇರಿದಂತೆ ನೂರಾರು ಮಹಿಳೆಯರು ಇದ್ದರು.

Donate Janashakthi Media

Leave a Reply

Your email address will not be published. Required fields are marked *