ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿ ಮುಸ್ಲಿಂ ಹೆಣ್ಣು‌ಮಕ್ಕಳ ಶಿಕ್ಷಣದ ಹಕ್ಕು ರಕ್ಷಿಸಿ – ಮಹಿಳಾ ಸಂಘಟನೆ ಆಗ್ರಹ

ಬೆಂಗಳೂರು : ಶಿರವಸ್ತ್ರ ವಿವಾದದ ಹೈಕೋರ್ಟ ತೀರ್ಪಿಗೆ ತಡೆಯಾಜ್ಞೆ ನೀಡಿ ಹೆಣ್ಣುಮಕ್ಕಳ ಶಿಕ್ಷಣದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕು ಎಂದು ಅಖಿಲ ಭಾರತ  ಜನವಾದಿ ಮಹಿಳಾ ಸಂಘಟನೆ ಮನವಿ ಮಾಡಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಶಿರವಸ್ತ್ರ ಮತ್ತು ಸಮವಸ್ತ್ರ ದ ಹೆಸರಿನಲ್ಲಿ ಕರ್ನಾಟಕದಲ್ಲಿ ಎದ್ದ ವಿವಾದದ ಕುರಿತು ಕರ್ನಾಟಕ ಉಚ್ಚನ್ಯಾಯಾಲಯದ ಆದೇಶ ಹೊರಬಿದ್ದಿದೆ. ಈ ವಿವಾದದ ಒಳಗೆ ಅಡಕವಾಗಿರುವ,  ಶಿಕ್ಷಣದ ಹಕ್ಕು ಮತ್ತು ಮಹಿಳೆಯರ ಕುರಿತು ಇರುವ ತಾರತಮ್ಯವನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದನ್ನು ನಾವು‌ ಗಮನಿಸಿದ್ದೇವೆ. ಇದು ವಿದ್ಯಾರ್ಥಿನಿಯರ ಶಿಕ್ಷಣದ ಅವಕಾಶವನ್ನು ನಿರಾಕರಿಸುವ ಸಂದರ್ಭ ಸೃಷ್ಟಿಸಬಹುದಾಗಿದ್ದು, ಸರ್ವೋಚ್ಚ ನ್ಯಾಯಾಲಯವು ಈ ಆದೇಶಕ್ಕೆ ಸ್ಟೇ ನೀಡುವ‌ ಮೂಲಕ ಹಿಜಾಬ್ ಧರಿಸಿಯೂ ಶಿಕ್ಷಣ ಮುಂದುವರೆಸುವ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ರಕ್ಷಣೆ ಮಾಡಬೇಕೆಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷ ದೇವಿಯವರು ತಿಳಿಸಿದ್ದಾರೆ.

ಜನ ಹಿತಕಾಯುವ ಸಾಮಾಜಿಕ ಬದಲಾವಣೆಗಳು ಉಂಟಾಗುವಾಗ ಅವುಗಳಿಗೆ ಪೂರಕವಾಗಿ ಕಾನೂನಿನ ಬಲ ತುಂಬುವುದು ನಿಜವಾದ ಬದಲಾವಣೆಗೆ ದಾರಿಯಾಗುತ್ತದೆ. ಅದಿಲ್ಲದೆಯೇ ಸಾಮಾಜಿಕ ಬದಲಾವಣೆಯನ್ನು ಕಾನೂನಿನ ವ್ಯಾಖ್ಯಾನ ದ ಮೂಲಕ ತರಲು ಹೊರಟರೆ ವಿವಿಧ ಹಿತಾಸಕ್ತಿಗಳ ಸಂಘರ್ಷವು ನಿರ್ಮಾಣವಾಗಬಹುದಾಗಿದೆ.

ಶೈಕ್ಷಣಿಕ ವರ್ಷದ ಅಂತಿಮ ಘಟ್ಟದಲ್ಲಿ ಪರೀಕ್ಷೆ ಬರೆಯಲಾರದಂಥಹ ಸ್ಥಿತಿ‌ಯಿಂದನಿ ರ್ಮಾಣವಾಗಿರುವ ಕಳವಳಕಾರಿ ಸನ್ನಿವೇಶಕ್ಕೆ ಪರಿಹಾರ ಹುಡುಕುವ ಅಗತ್ಯವಿದೆ ಎಂದು ರಾಜ್ಯಕಾರ್ಯದರ್ಶಿ ಗೌರಮ್ಮ ಆಗ್ರಹಿಸಿದ್ದಾರೆ.

ಈ ಮೊದಲೇ ಉಚ್ಚ‌ ನ್ಯಾಯಾಲಯವು ನೀಡಿದ ‌ಮಧ್ಯಂತರ ಆದೇಶವನ್ನು ಜಾರಿ ಮಾಡುವಾಗಲೂ ಸಾಕಷ್ಟು ಸಮಸ್ಯೆ ಗಳು ಉದ್ಭವವಾಗಿದೆ. ಕೇವಲ  ವಿದ್ಯಾರ್ಥಿನಿಯರು ಮಾತ್ರವಲ್ಲದೇ ಹಿಜಾಬ್ ಧರಿಸಿ ಇದುವರೆಗೂ ಯಾವುದೆ ತೊಂದರೆ ಇಲ್ಲದೇ ಕೆಲಸ ನಿರ್ವಹಿಸಿದ ಶಿಕ್ಷಕಿಯರನ್ನೂ ಬಾಧಿಸಿದೆ. ಇದು ಮುಂದಿನ ದಿನಗಳಲ್ಲಿ ಉದ್ಭವವಾಗಬಹುದಾದ ಸಮಸ್ಯೆಗಳ ಸಣ್ಣ ಸೂಚನೆಯಾಗಿದ್ದು ಸರ್ವೋಚ್ಚ ನ್ಯಾಯಾಲಯವು ಮಧ್ಯಪ್ರವೇಶ ಮಾಡಿ ಮುಸ್ಲಿಂ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುತ್ತದೆ ಎಂಬ ಭರವಸೆಯನ್ನು ಹೊಂದಿರುವುದಾಗಿ ಸಂಘಟನೆ ತಿಳಿಸಿದೆ.

ಕರ್ನಾಟಕದಲ್ಲಿ ಈಗಾಗಲೆ ಪರೀಕ್ಷೆಗಳು ಪ್ರಾರಂಭವಾಗಿವೆ.  ಶೈಕ್ಷಣಿಕ ವರ್ಷಾಂತ್ಯದ ಈ ಸಮಸ್ಯೆ ವಿದ್ಯಾರ್ಥಿನಿಯರ ಭವಿಷ್ಯವನ್ನು ಕರಾಳ ಕತ್ತಲೆಗೆ ದೂಡಲಿದೆ.ಈ  ನಿಟ್ಟಿನಲ್ಲಿ ಸರಕಾರವು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು  ಅಭಿಪ್ರಾಯ ಪಡುತ್ತೇವೆ. ಮತ್ತು ಇಂಥದ್ದೇ ವಿವಾದಗಳಿಗೆ ಸಂಬಂಧಿಸಿದಂತೆ ಇತರ ರಾಜ್ಯಗಳ ಉಚ್ಚ‌ ನ್ಯಾಯಾಲಯಗಳ ವಿಭಿನ್ನ ತೀರ್ಪು ಈಗಾಗಲೆ ಬಂದಿದ್ದು, ಮಹಿಳೆಯರ ಶಿಕ್ಷಣದ ಮೂಲಭೂತ  ಹಕ್ಕನ್ನು ರಕ್ಷಿಸುವ‌ ನೆಲೆಯ ಕ್ರಮಗಳು ಅಗತ್ಯವಿದೆ ಎಂಬುದು  ಇದರಿಂದ ಸುಸ್ಪಷ್ಟವಾಗುತ್ತದೆ.

ಈ ಹಿನ್ನೆಲೆಯಲ್ಲಿ ಮಹಿಳೆಯರ ಸಂವಿಧಾನದತ್ತ ಶಿಕ್ಷಣದ ಹಕ್ಕಿಗೆ ಚ್ಯುತಿ ಬಾರದಂತೆ  ಕ್ರಮ ಕೈಗೊಳ್ಳಲು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ  ರಾಜ್ಯ ಸಮಿತಿಯು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *