ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪರವರು ಅಂತೂ ಕೊನೆಗೆ, ತಡವಾಗಿಯಾದರೂ ಜನತೆಯ ಒತ್ತಾಯಕ್ಕೆ ಮಣಿದು ರಾಜ್ಯದ ಜನತೆಗೆ 608 ಕೋಟಿ ರೂ.ಗಳ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯ 492 ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಿದ್ದಾರೆ. ಇದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ಸ್ವಾಗತಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿಲಾಗಿದೆ. ಕಳೆದ 2021 ರ ಮಾರ್ಚ್ ತಿಂಗಳಿಂದಲೇ ಕೋವಿಡ್ ಎರಡನೇ ಅಲೆಯ ಬಾಧೆಗೊಳಗಾದ ಜನತೆಗೆ ಘೋಷಿಸಲಾದ ಈ ನೆರವು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಿದೆ ಎಂದು ತಿಳಿಸಲಾಗಿದೆ.
ತಜ್ಞರ ಪ್ರಕಾರ ಈ ಕೋವಿಡ್ ಅಲೆ ಜುಲೈ – ಆಗಸ್ಟ್ ತಿಂಗಳವರೆಗೆ ಮುಂದುವರೆಯಲಿದ್ದು, ಮುಂದೆ ಸೆಪ್ಟಂಬರ್ ನಂತರ ಮೂರನೇ ಅಲೆ ಅಪ್ಪಳಿಸುವ ಭೀತಿಯು ನಮ್ಮ ಮುಂದಿದೆ. ಪರಿಸ್ಥಿತಿ ಹೀಗಿರುವಾಗ, ಕೋವಿಡ್ ಬಾದೆ ನಿವಾರಣೆಯಾಗಿ, ಯಥಾ ಸ್ಥಿತಿ ನಿರ್ಮಾಣವಾಗುವವರೆಗೆ ರಾಜ್ಯದ ಜನತೆಗೆ ಸರಕಾರ ನೆರವು ನೀಡಿ ರಕ್ಷಿಸಬೇಕಾಗಿದೆ.
ಸರಕಾರವೇ ತಿಳಿಸಿದಂತೆ ಸುಮಾರು 1.27 ಕೋಟಿ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರಿಗೆ ಬಹುತೇಕ ನೀಡಲಾದ ನೆರವು ಇದಾಗಿದೆ. ತಲಾ ಕುಟುಂಬಗಳಿಗೆ ಸುಮಾರು ಸರಾಸರಿ ಕೇವಲ 500 ರೂ. ಗಳಿಗಿಂತಲೂ ಕಡಿಮೆ ಆಗಿದೆ. ಅಂದರೇ ತಲಾ ವ್ಯಕ್ತಿಗೆ 125 ರೂ.ಗಳಷ್ಟಾದರೂ ಪರಿಹಾರವಿಲ್ಲ.
ಕೇಂದ್ರ ಸರಕಾರದ ನೆರವಿನಲ್ಲಿ ಕೇವಲ ಎರಡು ತಿಂಗಳಿಗಷ್ಠೇ ತಲಾ ಐದು ಕೆ.ಜಿ. ಅಕ್ಕಿ ಮಾತ್ರವೇ ನೀಡಲಾಗುತ್ತದೆ. ಇತರೇ ಧಾನ್ಯಗಳು ಮತ್ತು ತರಕಾರಿ ಮತ್ತಿತರೆ ಸಾಮಾಗ್ರಿ ಖರೀದಿಸಲು ಯಾವುದೇ ನೆರವಿಲ್ಲ. ಕೇವಲ 89,000 ರೈತರಿಗೆ ಪ್ರತಿ ಎಕರೆಗೆ ಹೂ- ಹಣ್ಣು, ತರಕಾರಿ ಬೆಳೆಗಾರರಿಗೆ ಕೇವಲ 4,000 ರೂ.ಗಳ ಪರಿಹಾರ ಘೋಷಿಸಿದೆ. ಇದು,ಈ ರೈತರು ತಲಾ ಎಕರೆಯಲ್ಲಿ ನಷ್ಠ ಹೊಂದಿದುದರ ಕೇವಲ ಶೇ. 5 ರಷ್ಠು ಮಾತ್ರವೇ ಆಗಿದೆ.
ರಾಜ್ಯದ ಬಹುತೇಕ ಭತ್ತ, ತೊಗರಿ, ಮೆಕ್ಕೆಜೋಳ, ರೇಷ್ಮೆ, ಈರುಳ್ಳಿ, ಒಣ ಮೆಣಸಿನಕಾಯಿ ಮುಂತಾದ ದಶಲಕ್ಷಾಂತರ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಕನಿಷ್ಟ ಬೆಂಬಲ ಬೆಲೆಯೂ ದೊರೆಯದೇ ಲೂಟಿಗೊಳಗಾದವರಿಗೆ ಯಾವುದೇ ಪರಿಹಾರವಿಲ್ಲ.
ಉದ್ಯೋಗ ಖಾತ್ರಿ ಕೆಲಸ ಸಿಗದೇ ನಿರುದ್ಯೋಗ ಎದುರಿಸುವ ಕೃಷಿಕೂಲಿಕಾರರಿಗೆ ಯಾವುದೇ ಪರಿಹಾರವಿಲ್ಲ. ಅದೇ ರೀತಿ, ಮನೆ ಮನೆ ತಿರುಗಿ ಹೂ- ಹಣ್ಣು, ತರಕಾರಿ ಮಾರಾಟ ಮಾಡುವ ನಿರುದ್ಯೋಗಕ್ಕೆ, ಮದುವೆ ಮತ್ತಿತರೆ ಸಂಭ್ರಮದ ಕಾರ್ಯ ಕ್ರಮಗಳಿಲ್ಲದೇ ನಿರುದ್ಯೋಗ ಎದುರಿಸುವ ಮಂಗಳವಾದ್ಯ ಕಲಾವಿದರು, ಬಾಣಸಿಗರು ಮುಂತಾದವರಿಗೆ, ಅಕ್ಷರ ದಾಸೋಹ, ಹಾಸ್ಟೆಲ್ ಸಿಬ್ಬಂದಿಯವರಿಗೆ ಯಾವುದೇ ನೆರವಿಲ್ಲ. ಮಸಣಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ವಿಮೆಯಾಗಲೀ, ಸುರಕ್ಷತಾ ಕ್ರಮಗಳಾಗಲೀ, ವಿಶೇಷ ನೆರವಾಗಲೀ ಇಲ್ಲ.
ಕರ್ಫ್ಯೂ, ಲಾಕ್‌ಡೌನ್, ಸಂಪೂರ್ಣ ಲಾಕ್‌ಡೌನ್ ಕಾರಣದಿಂದ, ಆದಾಯವಿಲ್ಲದವರ ಸಾಲ ಹಾಗೂ ಸ್ತ್ರೀಶಕ್ತಿ, ಸ್ವ ಸಹಾಯ ಗುಂಪುಗಳ ಮಹಿಳೆಯರ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಸಾಲದ ಮೇಲಿನ ಬಡ್ಡಿ ಮನ್ನಾ ಯಾವುದೂ ಇಲ್ಲ.
ಇನ್ನು ಸಾರಿಗೆ, ಕಟ್ಟಡ ಮುಂತಾದ ಕಾರ್ಮಿಕರಿಗೆ ಘೋಷಿಸಲಾದ ನೆರವು ಕೇವಲ 3,000 ರೂ. ಮಾತ್ರವೇ ಆಗಿದೆ. ಕಾರ್ಮಿಕರ ವೇತನ ಸಹಿತ ರಜೆಯ ವಿಚಾರದ ಪ್ರಸ್ಥಾಪವೇ ಇಲ್ಲ.
ಇದೆಲ್ಲಾ, ದುಃಖಕ್ಕೀಡು ಮಾಡಿದವನೇ, ದುಃಖಿತನ ಕಣ್ಣೀರು ಒರೆಸಿ, ಒಣ ಪ್ರಚಾರ ಪಡೆಯುವ ಕ್ರೌರ್ಯದ ಕೆಲಸದಂತೆ ತೋರುತ್ತಿದೆ. ಕೋವಿಡ್ ಸಂಕಷ್ಠದಲ್ಲಿರುವ ಮತ್ತು ಹಸಿವಿನ ಆತಂಕದಲ್ಲಿರುವ ಜನತೆಯ ಜೊತೆ ನಿಲ್ಲಲು ಸರಕಾರ ಪ್ರಾಮಾಣಿಕವಾಗಿಲ್ಲವೆಂಬುದನ್ನು ಮರಳಿ ಇದು ಬೆತ್ತಲುಗೊಳಿಸುತ್ತಿದೆ.
ತಕ್ಷಣವೇ ಸಮಗ್ರ ಪರಿಹಾರದ ಕ್ರಮಗಳಿಗೆ ತುರ್ತು ಗಮನ ನೀಡಲೇಬೇಕೆಂದು ಸಿಪಿಐ(ಎಂ) ಮುಖ್ಯಮಂತ್ರಿಗಳನ್ನು ಬಲವಾಗಿ ಮರಳಿ ಒತ್ತಾಯಿಸುತ್ತದೆ.
ಕೋವಿಡ್ ಬಾಧೆ ನಿವಾರಣೆಯಾಗಿ ಯಥಾಸ್ಥಿತಿ ನಿರ್ಮಾಣವಾಗುವವರೆಗೆ, ಎಲ್ಲಾ ಬಿಪಿಎಲ್, ಅಂತ್ಯೋದಯ ಹಾಗೂ ಅಗತ್ಯವಿರುವ ಎಪಿಎಲ್ ಕಾರ್ಡ್‌ದಾರರಿಗೆ ತಲಾ 10 ಕೆ.ಜಿ. ಅಗತ್ಯ ವಿವಿಧ ಆಹಾರ ಸಾಮಗ್ರಿಗಳನ್ನು ಕೇರಳ ಸರಕಾರದ ಮಾದರಿಯಲ್ಲಿ ನೀಡಬೇಕು. ರಾಜ್ಯ ಸರಕಾರ ಪಡಿತರ ಕಡಿತಮಾಡಿರುವುದನ್ನು ವಾಪಾಸು ಪಡೆದು ಪೂರ್ಣ ಪಡಿತರ ನೀಡಬೇಕು. ಅದೇ ರೀತಿ, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ, ಕನಿಷ್ಠ ಈ ಎಲ್ಲಾ ಕುಟುಂಬಗಳಿಗೆ ಮಾಸಿಕ 10,000 ರೂ. ಗಳ ನೆರವು ಒದಗಿಸಬೇಕು.
ಅದೇ ರೀತಿ, ಈ ಎಲ್ಲಾ ಕುಟುಂಬಗಳಿಗೆ ಆರೋಗ್ಯ ಸುರಕ್ಷತಾ ಕಿಟ್ ಒದಗಿಸಬೇಕು. ವೃದ್ಧಾಪ್ಯ, ವಿಧವಾ, ಅಂಗವಿಕಲರ, ದೇವದಾಸಿ ಮಹಿಳೆಯರು ಸೇರಿದಂತೆ ಎಲ್ಲಾ ಸಾಮಾಜಿಕ ಪಿಂಚಣಿದಾರರ ಬಾಕಿ ವೇತನ ಮತ್ತು ಮುಂದಿನ ಮೂರು ತಿಂಗಳ ಮುಂಗಡ ವೇತನವನ್ನು ಒಂದೇ ಬಾರಿ ಕೂಡಲೇ ಒದಗಿಸಬೇಕು.