ಜನಸೇವೆಗೆ ತೊಂದರೆ-ಎರಡುವರೆ ವರ್ಷದಿಂದ ಅಧಿಕಾರಿಗಳಿಲ್ಲದ ಪಂಚಾಯಿತಿ: ಸಿಪಿಐ(ಎಂ) ಖಂಡನೆ

ಕೊಡಗು: ಜಿಲ್ಲೆ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡುವರೆ ವರ್ಷದಿಂದಲೂ ಒಬ್ಬ ಅಧಿಕಾರಿಯೂ ಇಲ್ಲ. ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಗ್ರೇಡ್ 1 ಪಂಚಾಯಿತಿಯಾಗಿದೆ. ಆದರೆ ಇಲ್ಲಿ ಒಬ್ಬ ಅಧಿಕಾರಿ ಇಲ್ಲರ ಜನರ ಸೇವೆಗಳಿಗೆ ಕುಂಟಿತವಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಖಂಡಿಸಿದೆ.

ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದ ಸಿಪಿಐ(ಎಂ) ಪಕ್ಷವು ಎಲ್ಲಾ ಸೌಲಭ್ಯಗಳು ಗ್ರಾಮ ಮಟ್ಟದವರೆಗೆ ಸರಿಯಾಗಿ ತಲುಪಬೇಕು ಎಂಬ ಆಶಯದಿಂದಲೇ ದೇಶದಲ್ಲಿ ಗ್ರಾಮ ಪಂಚಾಯಿತಿಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ ಆ ಗ್ರಾಮ ಪಂಚಾಯಿತಿಗಳಲ್ಲಿ ಒಬ್ಬ ಅಧಿಕಾರಿಯೂ ಇಲ್ಲದಿದ್ದರೆ ಜನರಿಗೆ ಸೌಲಭ್ಯಗಳು ತಲುಪುವುದಾದರು ಹೇಗೆ ಎಂದು ಪ್ರಶ್ನಿಸಿದೆ.

ಸಿಪಿಐ(ಎಂ) ಪಕ್ಷದ ಮುಖಂಡ ಭರತ್‌ ಮಾತನಾಡಿ ʻನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಎದುರಾದಾಗಲೆಲ್ಲಾ ಇಲ್ಲಿ ಅತಿ ಹೆಚ್ಚಿನ ಸಮಸ್ಯೆ ಎದುರಾಗುತ್ತದೆ. ಆದರೆ ಸಮಸ್ಯೆ ಆಲಿಸುವುದಕ್ಕೆ ಮಾತ್ರ ಅಧಿಕಾರಿಗಳು ಇರುವುದಿಲ್ಲ. ಇದು ಗ್ರೇಡ್ 1 ಪಂಚಾಯಿತಿ ಆಗಿರುವುದರಿಂದ ಇಲ್ಲಿ ಒಬ್ಬರು ಪಿಡಿಓ, ಒಬ್ಬರು ಕಾರ್ಯದರ್ಶಿ ಮತ್ತು ಒಬ್ಬರು ಲೆಕ್ಕ ಸಹಾಯಕರು ಇರಬೇಕಾಗಿತ್ತು. ಇವರ‍್ಯಾರು ಇಲ್ಲದಿರುವುದರಿಂದ ಜನರು ಸಮಸ್ಯೆಗಳ ಸುಳಿಯಲ್ಲಿ ಬದುಕು ಕಳೆಯಬೇಕಾಗಿದೆʼ ಎಂದು ಹೇಳಿದರು.

ಪಂಚಾಯಿತಿ ಸದಸ್ಯ ಮುಸ್ತಫಾ ಮಾತನಾಡಿ ʻಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಪಿಡಿಓ ಅವರನ್ನೇ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಅವರು ವಾರದಲ್ಲಿ ಒಂದು ದಿನ ಮಾತ್ರವೇ ಸಾರ್ವಜನಿಕರಿಗೆ ಭೇಟಿಯಾಗುತ್ತಾರೆ. ಇದರಿಂದಾಗಿ ಜನರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕಾದರೂ ತಿಂಗಳಾನುಗಟ್ಟಲೇ ಪಂಚಾಯಿತಿ ಸುತ್ತಬೇಕಾಗಿದ ಪರಿಸ್ಥಿತಿ ಇದೆ ಎಂದು ಹೇಳಿದರು.

ನಿಯೋಜನೆ ಮೇಲೆ ಇರುವ ಅಧಿಕಾರಿ ಸಣ್ಣಪುಟ್ಟ ಕೆಲಸಗಳಿಗೂ ಸಾವಿರಾರು ರೂಪಾಯಿ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಇದರ ವಿರುದ್ಧವೂ ಪಂಚಾಯಿತಿ ಆಡಳಿತ ಮಂಡಳಿ ಸಭೆಗಳನ್ನು ನಡೆಸಿ, ನಿರ್ಣಯಗಳನ್ನು ಮಾಡಿ ಜನರಿಗೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಆದರೂ ಯಾರೂ ಇದರ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪ ಮಾಡಿದರು.

ಅಧಿಕಾರಿಗಳನ್ನು ನೇಮಿಸುವಂತೆ ಪಂಚಾಯಿತಿ ಆಡಳಿತ ಮಂಡಳಿ ಹಲವು ಬಾರಿ ಸಭಾ ನಡಾವಳಿಯನ್ನು ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಹಲವು ಸಂಘ ಸಂಸ್ಥೆಗಳು ರಾಜಕೀಯ ಪಕ್ಷಗಳು ಪ್ರತಿಭಟನೆ ಮಾಡಿವೆ. ಇದ್ಯಾವುದಕ್ಕೂ ಜಿಲ್ಲಾಡಳಿತ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *