ಬೆಂಗಳೂರು: ಜನಾರ್ಧನ ರೆಡ್ಡಿಯವರು ಅಕ್ರಮ ಗಣಿಕಾರಿಕೆಯ ಮೂಲಕ ಸಂಗ್ರಹಿಸಲಾದ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರದ ಶಾಮೀಲು ನೀತಿಯನ್ನು ಬಲವಾಗಿ ಖಂಡಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ), ಇನ್ನಷ್ಠು ವಿಳಂಬ ಮಾಡದೇ ತಕ್ಷಣ ರೆಡ್ಡಿಯವರ ಅಕ್ರಮ ಆಸ್ತಿಗಳ ಮುಟ್ಟುಗೋಲಿಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಇದನ್ನು ಓದಿ: ಜನಾರ್ದನ ರೆಡ್ಡಿ ಕುಟುಂಬಸ್ಥರ ಅಕ್ರಮ ಆಸ್ತಿ ಮುಟ್ಟುಗೋಲಿಗೆ ಸಿಬಿಐ ವಿಳಂಬ: ಹೈಕೋರ್ಟ್ ಅಸಮಾಧಾನ
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು,ಉನ್ನತ ನ್ಯಾಯಾಲಯದ ಸುಪರ್ಧಿಯಲ್ಲಿ ತನಿಖೆ ನಡೆಸಿದ ಸಿ.ಬಿ.ಐ, ಜನಾರ್ಧನ ರೆಡ್ಡಿಯವರ ಅಕ್ರಮ ಆಸ್ತಿ ಮುಟ್ಟುಗೋಲಿಗೆ ಕ್ರಮ ವಹಿಸುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದರೂ ರಾಜ್ಯ ಸರಕಾರ ಆ ಕುರಿತು ಕ್ರಮವಹಿಸದಿರುವುದು, ಲೂಟಿಕೋರರ ಹಾಗೂ ಭ್ರಷ್ಠತೆಯ ಜೊತೆಗಿನ ರಾಜ್ಯ ಸರಕಾರದ ನಂಟನ್ನು ಇದು ಸ್ಪಷ್ಟ ಪಡಿಸುತ್ತದೆ ಎಂದು ಪಕ್ಷವು ಆರೋಪಿಸಿದ್ದಾರೆ.
ಕೊನೆಗೂ, ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಿಬಿಐ ಸಂಸ್ಥೆಯು, ಸರಕಾರದ ವಿಳಂಬ ನೀತಿಯನ್ನು ಖಂಡಿಸಿ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ನ್ಯಾಯಾಲಯವು ಸರ್ಕಾರದ ವಿಳಂಬ ನೀತಿಯನ್ನು ಖಾರವಾಗಿ ಪ್ರಶ್ನಿಸಿದೆ. ಇಷ್ಠಾದರೂ ಸರಕಾರಕ್ಕೆ ನಾಚಿಕೆ ಇಲ್ಲವಾಗಿದೆ ಎಂದು ಸಿಪಿಐಎಂ ಕಟುವಾಗಿ ವಿಮರ್ಶಿಸಿದೆ.
ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕತ್ವ ಈ ರೀತಿಯ ದುರುದ್ದೇಶ ಪೂರಿತ ವಿಳಂಬ ಧೋರಣೆಯ ಮೂಲಕ, ಬಿಜೆಪಿ ಪಕ್ಷದ ಒಡಕನ್ನು ತಡೆಯುವ ಶಾಮೀಲು ಧೋರಣೆಯನ್ನು ಅನುಸರಿಸಿರುವುದು ಮೇಲ್ನೋಟಕ್ಕೆ ಸ್ಪಷ್ಠವಾಗಿ ಕಂಡು ಬರುತ್ತದೆ.
ಈ ಕಾರಣಗಳಿಂದಲೇ, ರಾಜ್ಯ ಸರಕಾರ, ಬಿಜೆಪಿ ಹಾಗೂ ಆರ್ ಎಸ್ ಎಸ್ ಗಳು, ಈ ಸರಕಾರಿ ಸಂಸ್ಥೆಯ ಕೆಲಸದ ಮೇಲೆ ತಮ್ಮ ಅಧಿಕಾರದ ಪ್ರಭಾವ ಬೀರಿ ಅದು ಕಾರ್ಯ ನಿರ್ವಹಿಸದಂತೆ ಇದುವರೆಗೆ ತಡೆ ಹಿಡಿದಿರುವುದು ಈ ಮೂಲಕ ಮತ್ತೊಮ್ಮೆ ಬಹಿರಂಗ ಗೊಂಡಿದೆ.
ಇದನ್ನು ಓದಿ: ಸಿಬಿಐ ಮತ್ತು ಇಡಿ ನಿರ್ದೇಶಕರ ಕಾರ್ಯಾವಧಿ ಕುರಿತ ಸುಗ್ರೀವಾಜ್ಞೆಗಳು ಆಳುವ ಪಕ್ಷದ ಅಜೆಂಡಾದ ಜಾರಿಗಾಗಿ: ಸಿಪಿಐ(ಎಂ)
ಇದೀಗ, ಜನಾರ್ಧನ ರೆಡ್ಡಿಯವರು ಬಿಜೆಪಿಯಿಂದ ಹೊರ ನಡೆದು ಸ್ವತಂತ್ರವಾಗಿ ಪ್ರತ್ಯೇಕ ಪಕ್ಷ ರಚಿಸಿದ ನಂತರ, ಬಿಜೆಪಿಗೆ ಉಂಟಾದ ಹಿನ್ನಡೆ ಹಾಗೂ ಉಂಟಾಗಬಹುದಾದ ಸೋಲಿನ ಭೀತಿಯಿಂದ ಅವರನ್ನು ಮಣಿಸಲು ಮತ್ತು ಬಿಜೆಪಿ ಜೊತೆ ಕೈ ಜೋಡಿಸುವಂತೆ ಪುನಃ ಜನಾರ್ಧನರೆಡ್ಡಿಯವರ ಮೇಲೆ ಒತ್ತಡ ಹೇರಲು, ಸಿಬಿಐ ಮೂಲಕ ಈ ಕ್ರಮ ವಹಿಸಲಾಗಿದೆ ಎಂಬ ರಾಜಕೀಯ ವಲಯದ ಭಾವನೆಗೆ ಇಂಬು ನೀಡಿದೆ.
ಸರಕಾರಿ ಸಂಸ್ಥೆಗಳ ಮೇಲೆ ತಮ್ಮ ಅಧಿಕಾರ ಬಲದ ಪ್ರಭಾವ ಭೀರಿ ಅದರ ಸ್ವತಂತ್ರ ಕಾರ್ಯಾಚರಣೆಗೆ ಭಂಗ ಉಂಟು ಮಾಡುವ ಬಿಜೆಪಿ ಹಾಗೂ ಆರ್ ಎಸ್ ಎಸ್ ಅಧಿಕಾರ ದುರುಪಯೋಗವನ್ನು ಬಲವಾಗಿ ಖಂಡಿಸಿರುವ ಸಿಪಿಐಎಂ, ಅವುಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡ ಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಿದೆ.
ರೆಡ್ಡಿಯವರ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ವಿಫಲರಾದ ಕಾನೂನು ಬಾಹಿರ ರಾಜಕೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನಿನ ಕ್ರಮವಹಿಸುವಂತೆಯೂ ರಾಜ್ಯ ಸರಕಾರವನ್ನು ಸಿಪಿಐಎಂ ಒತ್ತಾಯಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ