ಜನಾರ್ದನ ರೆಡ್ಡಿ ಕುಟುಂಬಸ್ಥರ ಅಕ್ರಮ ಆಸ್ತಿ ಮುಟ್ಟುಗೋಲಿಗೆ ಸಿಬಿಐ ವಿಳಂಬ: ಹೈಕೋರ್ಟ್ ಅಸಮಾಧಾನ

ಬೆಂಗಳೂರು: ಅಕ್ರಮ ಗಣಿಕಾರಿಕೆಗೆ ಹೆಸರುವಾಸಿಯಾಗಿರುವ, ಆರೋಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬದವರಿಗೆ ಸೇರಿರುವ ಸುಮಾರು 65 ಕೋಟಿ ರೂಪಾಯಿಗಳ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡಿ ಏಳು ವರ್ಷಗಳು ಕಳೆದರೂ, ತಾರ್ಕಿಕ ಅಂತ್ಯ ಕಾಣಿಸದ ಕೇಂದ್ರೀಯ ತನಿಖಾ ದಳ(ಸಿಬಿಐ) ಕ್ರಮಕ್ಕೆ ಕರ್ನಾಟಕ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡಲು ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸಿಬಿಐ ಹೈಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿತು. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ  ನಡೆಸಿತು.

ಇದನ್ನು ಓದಿ: ಧಾರ್ಮಿಕ ಕೇಂದ್ರಗಳ ಪ್ರದರ್ಶನ ಮಾಡುತ್ತಿರುವ ಉದ್ಯಮಿ ಜನಾರ್ದನ ರೆಡ್ಡಿ; ಕೋಟಿಗಟ್ಟೆಲೇ ದೇಣಿಗೆ ನೀಡಿಕೆ

ನ್ಯಾಯಾಲದ ವಿಚಾರಣೆಯಲ್ಲಿ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್‌ಚಿನ್ನಪ್ಪ, ಈ ಹಿಂದೆ 65 ಕೋಟಿ ರೂಪಾಯಿಗಳ ಅಕ್ರಮ ಆಸ್ತಿಗಳ ಮುಟ್ಟುಗೋಲಿಗೆ ನೀಡಿದ್ದ ಅನುಮತಿಗೆ ಸಂಬಂಧಿಸಿದಂತೆ ಸಿಬಿಐ ಈವರೆಗೂ ಕ್ರಮಕ್ಕೆ ಮುಂದಾಗಿಲ್ಲ. ಜೊತೆಗೆ, ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದರೂ, ಇದುವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಆಸ್ತಿ ಮುಟ್ಟುಗೋಲಿಗೆ ಆದೇಶ ಬಂದಿಲ್ಲ. ಆದರೂ ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು. ಹಾಗಾದರೆ, ಈ ಹಿಂದೆ ಜಪ್ತಿ ಆದೇಶಕ್ಕೆ ಸಂಬಂಧಿಸಿದಂತೆ ಸಂಬಂಧಿತ ನ್ಯಾಯಾಲಯದಲ್ಲಿನ ಅರ್ಜಿಯ ಕುರಿತು 6-7 ವರ್ಷ ಸಿಬಿಐ ಏನು ಮಾಡುತ್ತಿತ್ತು?” ಎಂದು ಆಕ್ಷೇಪಿಸಿದರು.

ಸಿಬಿಐ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಅವರಿಗೆ ನ್ಯಾಯಪೀಠ  ಮೌಖಿಕವಾಗಿ “ಹಿಂದೆ ರಾಜ್ಯ ಸರ್ಕಾರ ನೀಡಿರುವ ಅನುಮತಿಗೆ ಸಂಬಂಧಿಸಿದಂತೆ ಜಪ್ತಿ ಆದೇಶ ಎಲ್ಲಿದೆ? 2015ರಲ್ಲಿ ಸಿಬಿಐಯು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. 2022ರಲ್ಲಿ ಅರ್ಜಿಗೆ ಸಂಖ್ಯೆ ನಿಗದಿಪಡಿಸಲಾಗಿದೆ. ಪ್ರಕರಣವೊಂದಕ್ಕೆ ನಂಬರ್ ನೀಡಲು ಏಳು ವರ್ಷಗಳ ಕಾಲ‌ ತೆಗೆದುಕೊಂಡಿದ್ದು ಏಕೆ? ಸಂಖ್ಯೆ ಏಕೆ ನಿಗದಿಯಾಪಡಿಸಿಲ್ಲ. ನೀವು (ಸಿಬಿಐ) ಅದನ್ನು ಕೈಗೆತ್ತುಕೊಂಡಿರಲಿಲ್ಲವೇ? ಈದನ್ನು ಹೇಗೆ ಸಮರ್ಥಿಸುತ್ತೀರಿ. ಆದರೆ, ರಾಜ್ಯ ಸರ್ಕಾರದ ಮೇಲೆ ತಡವಾಗಿದೆ ಎಂದು ದೂರು ಹೇಳುತ್ತಿದ್ದೀರಿ. ಪ್ರಕರಣಕ್ಕೆ ನಂಬರ್‌ ನೀಡಲು ಏಳು ವರ್ಷಗಳು ಹಿಡಿದಿದೆ ಎಂಬುದು ಆಘಾತ ಉಂಟು ಮಾಡಿದೆ. ಎಲ್ಲಾ ಅರ್ಜಿಗಳಲ್ಲಿಯೂ ಈ ತರಹವೇ ಆಗುತ್ತದಾ? ಅಥವಾ ಇದೊಂದರಲ್ಲಿ ಮಾತ್ರ ಈ ರೀತಿಯೇ?” ಎಂದು ಸಿಬಿಐಗೆ ನ್ಯಾಯಪೀಠ ಪ್ರಶ್ನೆಗಳನ್ನು ಮಾಡಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಇದು ಅತ್ಯಂತ ಅಸಮಂಜಸ ನಡೆಯಾಗಿದೆ ಎಂದಿರುವ ನ್ಯಾಯಪೀಠ ಇದರ ಹಿಂದಿನ ಉದ್ದೇಶ ಏನು ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.

Donate Janashakthi Media

Leave a Reply

Your email address will not be published. Required fields are marked *