ರೋಹಿತ್​ ಚಕ್ರತೀರ್ಥ ಸಮಿತಿ ವಿಸರ್ಜನೆ; ಸರ್ಕಾರದ ನಡೆ-ಅನುಮಾನಕ್ಕೆ ಎಡೆ

ಬೆಂಗಳೂರು: ಶಾಲಾ ಪಠ್ಯಪುಸ್ತಕದಲ್ಲಿ ಸಾಕಷ್ಟು ತಪ್ಪುಗಳು ಹಾಗೂ ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ ಎಂದು ರಾಜ್ಯದ ಎಲ್ಲೆಡೆ ಜನಾಕ್ರೋಶಕ್ಕೆ ಮಣಿದಿರುವ ರಾಜ್ಯದ ಬಿಜೆಪಿ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜನೆ ಮಾಡಿದೆ.

ಸರ್ಕಾರದ ಈ ಕ್ರಮಕ್ಕೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ವಿವಾದವೊಂದಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಂತೆ ಆಗಿದೆ. ಆದರೆ, ಮುಖ್ಯಮಂತ್ರಿಯ ಈ ಕ್ರಮವು ಪಠ್ಯಪರಿಷ್ಕರಣೆ ವಿವಾದವನ್ನು ಸಂಪೂರ್ಣ ಶಮನ ಮಾಡಿಲ್ಲ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ಆಗಿರುವ ಪಠ್ಯ ಪರಿಷ್ಕರಣೆ ತಿರಸ್ಕರಿಸಬೇಕು. ಅಂಬೇಡ್ಕರ್, ಕನ್ನಡ ಧ್ವಜ ಮತ್ತು ರಾಷ್ಟ್ರಕವಿ ಕುವೆಂಪು ಅವರಿಗೆ ಈ ಹಿಂದೆ ಅವಮಾನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ, ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯ ಮುಂದುವರಿಸಿದ್ದಾರೆ.

ಸದ್ಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕಾರ್ಯ ಮುಗಿದಿರುವ ಹಿನ್ನೆಲೆಯಲ್ಲಿ ಸಮಿತಿಯನ್ನು ವಿಸರ್ಜಿಸಲಾಗಿದೆ. ಇದೇ ವೇಳೆ, ಹಳೇ ಪಠ್ಯಪುಸ್ತಕಗಳನ್ನು ಮುದ್ರಣ ಮಾಡಿ ನೀಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವಾನಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ನಿನ್ನೆ(ಜೂನ್‌ 03) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್​ ವರದಿ ನೀಡಿದ್ದರು. ವರದಿ ಕೈಸೇರುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಸಭೆಯನ್ನು ನಡೆಸಿ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜಿಸಿರುವ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿನ ಲೋಪದೋಷಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ಸರಕಾರ, ಪರಿಷ್ಕೃತ ಪಠ್ಯದಲ್ಲೂ ಪರಿಷ್ಕರಣೆಗೆ ಸಹಮತ ವ್ಯಕ್ತಪಡಿಸಿದೆ. ಪಠ್ಯದಲ್ಲಿ ಆಕ್ಷೇಪಾರ್ಹ ವಿಷಯವಿದ್ದರೆ ಮತ್ತೆ ಪರಿಷ್ಕರಿಸುತ್ತೇವೆ. ಬಸವಣ್ಣನವರ ವಿಷವನ್ನು ಸೂಕ್ತವಾಗಿ ಪರಿಷ್ಕರಿಸಲಾಗುವುದು ಎಂದು ತಿಳಿಸಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಬಿ.ಸಿ.ನಾಗೇಶ್ ಅವರ ಜತೆ ಸಭೆ ನಡೆಸಿದ ಬಳಿಕ ಅವರು ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಪರಿಷ್ಕರಿಸಿದ ಪಠ್ಯಪುಸ್ತಕದಲ್ಲಿ ಯಾವುದೇ ಆಕ್ಷೇಪಾರ್ಹ ವಿಷಯಗಳು ಇದ್ದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಷ್ಕರಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದೂ ಹೇಳಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯ ಮುಗಿದಿರುವುದರಿಂದ ಹಾಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ರಚಿಸಿದ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು ಕುರಿತಾದ 7 ಗದ್ಯ ಮತ್ತು ಪದ್ಯಗಳು ಸೀಮಿತವಾಗಿದ್ದರೆ, ಪ್ರಸ್ತುತ ಪರಿಷ್ಕರಣಾ ಸಮಿತಿ 10ಕ್ಕೆ ಏರಿಸಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಕುವೆಂಪು ಅವರ ನಾಡಗೀತೆ ವಿಕೃತಿಗೊಳಿಸಿದವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದ್ದು, ಮೂಲ ಕವನ ಬರೆದ ವ್ಯಕ್ತಿಗಳ ಬಗ್ಗೆ ಕಾನೂನಾತ್ಮಕ ತನಿಖೆಗೆ ಸೂಚಿಸಲಾಗಿದೆ. ಪರಿಷ್ಕರಿಸಿರುವ ಪಠ್ಯದಲ್ಲಿ ಕೆಂಪೇಗೌಡರ ಕುರಿತ ಪಾಠ ಹೊಸ ಸೇರ್ಪಡೆ ಮಾಡಲಾಗಿದೆ. ಪಠ್ಯದಲ್ಲಿ ಇಸ್ಲಾಂ, ಕ್ರೈಸ್ತ ಜೊತೆ ಹಿಂದೂ ಧರ್ಮದ ವಿಷಯ ಸೇರ್ಪಡಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಶಾಲಾ ಪಠ್ಯಕ್ರಮ ಕಾಲ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಜಾರಿಯಾದ ಕೆಲವು ಪಠ್ಯಪುಸ್ತಕದಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳಿದ್ದವು. ಆದ ಕಾರಣ ಸಮಾಜ ವಿಜ್ಞಾನ ಮತ್ತು ಕನ್ನಡ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಪಠ್ಯದಲ್ಲಿ ಅಲ್ಪ ಪರಿಷ್ಕರಣೆ ಮಾಡಲಾಗಿದೆ.

ಪಂಡಿತಾರಾಧ್ಯ ಸ್ವಾಮೀಜಿ ಮತ್ತು ಇತರ ಸ್ವಾಮೀಜಿಗಳು ಪಠ್ಯಪುಸ್ತಕದಲ್ಲಿ ಬಸವಣ್ಣನವರ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಗಳನ್ನು ಎತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬರಗೂರು ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಮತ್ತು ಈಗಿನ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಸಮಾನ ಅಂಶಗಳನ್ನು ಬಿಟ್ಟು, ಈಗಿನ ಪುಸ್ತಕದಲ್ಲಿ ಬಸವಣ್ಣ ಅವರ ವಿಷಯದ ಅಂಶವನ್ನು ಯಾರ ಭಾವನೆಗೂ ಧಕ್ಕೆ ಆಗದಂತೆ ಪರಿಷ್ಕರಿಸಲಾಗುವುದು ಎಂದು ತಿಳಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸರ್ಕಾರದ ನಿರ್ಣಯಗಳು

  • ಪಠ್ಯಪುಸ್ತಕ ಸಮಿತಿ ಕಾರ್ಯ ಮುಗಿದಿರುವುದರಿಂದ ಸಮಿತಿ ವಿಸರ್ಜನೆ.
  • ಪ್ರಸ್ತುತ ಪಠ್ಯದಲ್ಲಿ ಮತ್ತೆ ಪರಿಷ್ಕರಣೆ ಇದ್ದರೆ ಮುಕ್ತ ಮನಸ್ಸನ್ನು ಸರ್ಕಾರ ಹೊಂದಿದೆ. ಬಸವಣ್ಣ ಪಠ್ಯ ಪರಿಷ್ಕರಣೆ ನಿರ್ಧಾರ.
  • ಕುವೆಂಪು ನಾಡಗೀತೆ ಆಕ್ಷೇಪಾರ್ಹ ವಿಕೃತಗೊಳಿಸಿದ ಪಠ್ಯ ಉಲ್ಲೇಖವಾಗಿಲ್ಲ. ಇದರ ಮೂಲ ಕವನ ಬರೆದ ವ್ಯಕ್ತಿಗಳ ಬಗ್ಗೆ ಸರ್ಕಾರ ಕ್ರಮ.
  • ಬರಗೂರು ಸಮಿತಿಗಿಂತ ಈಗಿನ ಸಮಿತಿ ಕುವೆಂಪು ಅವರ ಗದ್ಯ, ಪದ್ಯವನ್ನು ಇನ್ನೂ ಮೂರು ಏರಿಕೆ ಮಾಡಿದೆ. ಮೊದಲು ಏಳು ಇತ್ತು. ಈಗ 10ಕ್ಕೆ ಏರಿಕೆ.
  • ನಾಡಪ್ರಭು ಕೆಂಪೇಗೌಡ ಪಠ್ಯವನ್ನು ಸೇರ್ಪಡೆ
  • ಇಸ್ಲಾಂ, ಕ್ರೈಸ್ತ ಧರ್ಮದ ಪರಿಚಯದ ಜೊತೆ ಹಿಂದೂ ಧರ್ಮ ವಿಷಯ ಸೇರ್ಪಡೆ
  • ಉಳಿದಂತೆ ನಾಡಗೀತೆಯನ್ನ ಅವಹೇಳಕಾರಿಯಾಗಿ ಬರೆದವರ ಬಗ್ಗೆ ತನಿಖೆಗಾಗಿ ಸೈಬರ್ ಕ್ರೈಂಗೆ ಸೂಚನೆ.

ಪಿಯು ಪಠ್ಯಪುಸ್ತಕ ಪರಿಷ್ಕರಣೆಯನ್ನು ರೋಹಿತ್ ಚಕ್ರತೀರ್ಥ ಸಮಿತಿಗೆ ವಹಿಸಿ ಕಳೆದ ಫೆಬ್ರುವರಿಯಲ್ಲಿ ಆದೇಶ ಹೊರಡಿಸಲಾಗಿದ್ದು, ಅದನ್ನು ರದ್ದುಪಡಿಸುವ ಬಗ್ಗೆ ಯಾವುದೇ ಮಾಹಿತಿಯನ್ನು ಮುಖ್ಯಮಂತ್ರಿ ನೀಡಿಲ್ಲ.

Donate Janashakthi Media

Leave a Reply

Your email address will not be published. Required fields are marked *