ಜನ ಇತಿಹಾಸ ಮಾಲೆ ಜಾತಿವ್ಯವಸ್ಥೆ ಸೇರಿದಂತೆ ಭಾರತದ ಜನರ ಬದುಕಿನ ಎಲ್ಲ ಆಯಾಮಗಳ ಸಮಗ್ರ ಇತಿಹಾಸ ನಿರೂಪಣೆಯ ಪ್ರಯತ್ನ:ಪ್ರೊ. ಹಬೀಬ್

– ವಸಂತರಾಜ ಎನ್.ಕೆ.

ಭಾರತದ ಜನರ ಬದುಕಿನ ಎಲ್ಲ (ರಾಜಕೀಯ, ಆರ್ಥಿಕ, ಧಾರ್ಮಿಕ, ವಿಜ್ಞಾನ-ತಂತ್ರಜ್ಞಾನ, ಸಾಮಾಜಿಕ, ಸೈದ್ಧಾಂತಿಕ – ಭಾರತದ ಸಂದರ್ಭದಲ್ಲಿ ವಿಶೇವಾಗಿ ಜಾತಿ ವ್ಯವಸ್ಥೆಯ) ಆಯಾಮಗಳ ಕುರಿತು ಸಮಗ್ರ ಇತಿಹಾಸ ನಿರೂಪಿಸುವ ಪ್ರಯತ್ನವಾಗಿ ಭಾರತ ಜನ ಇತಿಹಾಸ ಮಾಲೆಯನ್ನು ಹಮ್ಮಿಕೊಳ್ಳಲಾಯಿತು. ಇದು ಭಾರತದ ಇತಿಹಾಸ ರಚನೆಯ ಈ ಮೊದಲಿನ ಎರಡು ಪ್ರಮುಖ (ಆರ್.ಸಿ.ಮುಜುಂದಾರ ಅವರ ಭಾರತೀಯ ವಿದ್ಯಾ ಭವನದ, ಮತ್ತು ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ನ ಮಾಲೆಯ ಸಂಪುಟಗಳು) ಪ್ರಯತ್ನಗಳಿಗೆ ಪೈಪೋಟಿ ಅಥವಾ ಬದಲಿ ಅಲ್ಲ. ಬದಲಾಗಿ, ಆ ಸಂಪುಟಗಳಲ್ಲಿ ಗಣನೆಗೆ ತೆಗೆದುಕೊಳ್ಳದಿರುವ ಭಾರತದ ಜನರ ಬದುಕಿನ ಆಯಾಮಗಳನ್ನು ಒಳಗೊಂಡು ಸಮಗ್ರ ಇತಿಹಾಸ ರಚಿಸುವ ಪ್ರಯತ್ನ. ಜಾಗತಿಕ ಇತಿಹಾಸ ರಚನೆಯಲ್ಲಿ ಹೊಮ್ಮಿರುವ ಹೊಸ ಆಯಾಮಗಳನ್ನೂ (ತಂತ್ರಜ್ಞಾನ, ಮಹಿಳೆಯರು, ಪರಿಸರ) ಒಳಗೊಳ್ಳುವ, ಅದಕ್ಕೆ ಬೇಕಾದ ಮಾಹಿತಿ ಕಲೆ ಹಾಕುವ ಪ್ರಯತ್ನ. ಭಾರತದ ಪ್ರಸಿದ್ಧ ಇತಿಹಾಸಕಾರ ಪ್ರೊ.ಇರ್ಫಾನ್ ಹಬೀಬ್. ಅವರು “ಭಾರತದ ಜನ ಇತಿಹಾಸ ಮಾಲೆ ಏಕೆ?” ಎಂಬ ವಿಷಯದ ಕುರಿತು ಉಪನ್ಯಾಸ ಮಾಡುತ್ತಾ ಹೀಗೆಂದರು.

 

‘ಚಿಂತನ ಪುಸ್ತಕ’ ಪ್ರಕಟಿಸಿರುವ “ಭಾರತದ ಜನ ಇತಿಹಾಸ ಮಾಲೆ”ಯ ಸಂಫುಟ 6 (ಮೌರ್ಯರ ನಂತರದ ಭಾರತ – ಕ್ರಿ.ಪೂ. 200-ಕ್ರಿ.ಶ. 300) ರಾಜಕೀಯ ಆರ್ಥಿಕ ಇತಿಹಾಸ, 7 (ಮೌರ್ಯರ ನಂತರದ ಭಾರತ –ಸಮಾಜ ಮತ್ತು ಸಂಸ್ಕೃತಿ), ಮತ್ತು 25 (ಭಾರತದ ಆರ್ಥಿಕ ಸ್ಥಿತಿ – 1755-1857) ರ ಕನ್ನಡ ಅನುವಾದದ ಪುಸ್ತಕಗಳನ್ನು ಮಾರ್ಚ್ 13ರಂದು ವೆಬ್ ಸಮಾರಂಭದಲ್ಲಿ ಬಿಡುಗಡೆ ಮಾಡಿ ಪ್ರೊ.ಇರ್ಫಾನ್ ಹಬೀಬ್. ಅವರು ಮಾತನಾಡುತ್ತಿದ್ದರು. ಈ ವೆಬ್ ಸಭೆಯನ್ನು “ಚಿಂತನ ಪುಸ್ತಕ”ವು,  ಬೆಂಗಳೂರು ಹಿಸ್ಟೋರಿಯನ್ಸ್ ಸೊಸೈಟಿ, ಇತಿಹಾಸ ದರ್ಪಣ ಮತ್ತು ಋತುಮಾನ. ಕಾಂ ಸಂಘಟನೆಗಳ ಸಹಯೋಗದೊಂದಿಗೆ ಸಂಘಟಿಸಿತ್ತು.

“ಭಾರತದ ಜನ ಇತಿಹಾಸ”ದತ್ತ ಪಯಣದ ಕಥನ

ಮುಂದುವರೆದು ಹಬೀಬ್ ಅವರು ಈ ಮಾಲೆಯ ಉದ್ದೇಶ ಭಾರತದ ಚರಿತ್ರೆಯ ಮಾರ್ಕ್ಸ್ ವಾದಿ ನಿರೂಪಣೆ ಅಲ್ಲ. ಭಾರತದ ಚರಿತ್ರೆಯ ಮಾರ್ಕ್ಸ್ ವಾದಿ ನಿರೂಪಣೆಗೆ ಬೇಕಾದ ಭಾರತದ ಜನರ ಬದುಕಿನ ಎಲ್ಲ ಆಯಾಮಗಳ ಕುರಿತು ಸಮಗ್ರ ಪ್ರಾಥಮಿಕ ಸಾಮಗ್ರಿ ಸಂಪನ್ಮೂಲಗಳನ್ನು ಮಾಹಿತಿ ಸಾಕ್ಷ್ಯಗಳನ್ನು ಸಂಗ್ರಹಿಸುವ ಪ್ರಯತ್ನ. ಇದರಿಂದ ಮುಂದೆ ಭಾರತದ ಚರಿತ್ರೆಯ ಮಾರ್ಕ್ಸ್ ವಾದಿ ನಿರೂಪಣೆ ಸಾಧ್ಯವಾಗಬಹುದು, ಎಂದು ಹೇಳಿದರು.

ಆ ನಂತರ “ಭಾರತದ ಜನ ಇತಿಹಾಸ”ದತ್ತ ತಮ್ಮ ವೈಯಕ್ತಿಕ ಪಯಣದ ಕಥನವನ್ನು ಪ್ರೊ. ಹಬೀಬ್ ಅವರು ನಮ್ಮ ಮುಂದಿಟ್ಟರು. ಇಂಟರ್ ಮಿಡಿಯೇಟ್ ನಲ್ಲಿ ಡಿ.ಆರ್.ಭಂಡಾರ್ಕರ್ ಅವರ ಚರಿತ್ರೆ ಸಂಪುಟದ ಓದಿನಿಂದ ಸಾಕ್ಷ್ಯ ಮೂಲಗಳಿದ್ದೇ ಇತಿಹಾಸ ರಚಿಸಬೇಕೆಂಬ ಮೊದಲ ಪಾಠ ಕಲಿತದ್ದನ್ನು ನೆನಪಿಸಿಕೊಂಡರು. 1938ರಲ್ಲಿ ಪ್ರಕಟವಾದ ಎ.ಎಲ್. ನಾರ್ಟನ್ ಅವರ “ಪೀಪಲ್ಸ್ ಹಿಸ್ಟರಿ ಆಫ್ ಬ್ರಿಟನ್” ಅಧ್ಯಯನ ಮಾಡಿ, ಒಂದು ಪ್ರದೇಶದ ಜನರ ಬದುಕಿನ ಎಲ್ಲಾ ಆಯಾಮಗಳನ್ನು ಒಳಗೊಳ್ಳುವ ಇತಿಹಾಸದ ನಿರೂಪಣೆಯ ಅಗತ್ಯದ ಕುರಿತು ಮನದಟ್ಟಾಯಿತು.ಈ ಧೋರಣೆಯನ್ನು ಭಾರತದ ಇತಿಹಾಸದ ರಚನೆಗೆ ಅನ್ವಯ ಮಾಡಲು ಪ್ರಯತ್ನಿಸಿದ ಡಿಡಿ ಕೊಸಾಂಬಿ ಮತ್ತು ಆರ್.ಎಸ್.ಶರ್ಮ ಅವರ ಪ್ರಭಾವವೂ ಆಯಿತು ಎಂದು ಹಬೀಬ್ ತಿಳಿಸಿದರು.

ಸಾಮಾನ್ಯ ಜನರ ಬದುಕಿನ ಎಲ್ಲ ಆಯಾಮಗಳನ್ನು ಒಳಗೊಳ್ಳಬೇಕು

ಇತಿಹಾಸ ಈ ವರೆಗೆ ಆಗಿದ್ದಂತೆ ರಾಜಕೀಯ, ಧಾರ್ಮಿಕ ಇತಿಹಾಸಕ್ಕೆ ಸೀಮಿತವಾಗಬಾರದು, ಸಾಮಾನ್ಯ ಜನರ ಬದುಕಿನ ಎಲ್ಲ ಆಯಾಮಗಳನ್ನು ಒಳಗೊಳ್ಳಬೇಕು. ಜನ – ಶ್ರೀಮಂತರು ಮತ್ತು ಬಡವರು, ರಾಜರು ಮತ್ತು ಪ್ರಜೆಗಳು, ಚಿಂತಕರು ಮತ್ತು ಕುಶಲಕಸುಬಿಗರು –  ಹೇಗೆ ಬದುಕಿದರು, ಏನು ಮಾಡಿದರು, ಯಾವ ರೀತಿ ಯೋಚಿಸುತ್ತಿದ್ದರು, ಈ ಎಲ್ಲವೂ ಇತಿಹಾಸದಲ್ಲಿ ನಿರೂಪಿತವಾಗಬೇಕು ಎಂದು ಪ್ರೊ. ಹಬೀಬ್ ಹೇಳಿದರು.

ಈ ನಡುವೆ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ಗೆ ಶಿಕ್ಷಣ ಇಲಾಖೆಯಿಂದ ಸಿಕ್ಕಿದ ಅನುದಾನದಿಂದ ತಯಾರಾದ ಭಾರತದ ಇತಿಹಾಸದ ಸಂಪುಟಗಳಲ್ಲಿ ಕೆಲಸ ಮಾಡಿನ ಅನುಭವ, ಇದರಲ್ಲಿ ಜೊತೆಯಾದ ಇತರ ಇತಿಹಾಸಕಾರರ ಅನುಭವವೂ ಸೇರಿಕೊಂಡಿತು. ಜೊಸೆಫ್ ನೀದಂ ಅವರ ಚೀನಾದ ವಿಜ್ಞಾನ-ತಂತ್ರಜ್ಞಾನದ ಇತಿಹಾಸ, ಮಹಿಳೆಯರ ಇತಿಹಾಸದ ಕುರಿತು ಒತ್ತು ಇತ್ಯಾದಿ,ಜಾಗತಿಕ ಇತಿಹಾಸ ರಚನೆಯಲ್ಲಿ ಆದ ಬೆಳವಣಿಗೆಗಳ ಪ್ರಭಾವ ಸಹ ಪರಿಣಾಮ ಬೀರಿತು. ವೈಯಕ್ತಿಕವಾಗಿ ಮಾತ್ರವಲ್ಲ ಅಲಿಘರ್ ಇತಿಹಾಸಕಾರರ ಸಂಘದ ಹಲವರು ಇವೇ ಪ್ರಭಾವಕ್ಕೆ ಒಳಗಾಗಿದ್ದರು. ಎಲ್ಲರೂ ಸೇರಿ ಭಾರತದ ಜನ ಇತಿಹಾಸದ ಯೋಜನೆಯನ್ನು ಹಾಕಿಕೊಂಡೆವು. ಎಂದು ಪ್ರೊ. ಹಬೀಬ್ ಅದರತ್ತ ತಮ್ಮ ಪಯಣವನ್ನು ಬಣ್ಣಿಸುತ್ತಾ ಈ ಯೋಜನೆ ಏಕೆ ಹಮ್ಮಿಕೊಳ್ಳಲಾಯಿತು ಎಂದು ವಿವರಿಸಿದರು.

ಯೋಜನೆಯ ಇಂದಿನ ಸ್ಥಿತಿ

ಭಾರತದ ದೀರ್ಘ ಇತಿಹಾಸ, ಹಲವು ಪ್ರದೇಶಗಳು, ಹಲವಾರು ಅವಧಿಗಳು, ಹಲವಾರು ಆಯಾಮಗಳು, ಹಲವರು ಈ ಯೋಜನೆಯಲ್ಲಿ ತೊಡಗಬೇಕಾದ ಅನಿವಾರ್ಯತೆ – ಇತ್ಯಾದಿಗಳಿಂದಾಗಿ ಬ್ರಿಟನ್ ಅಥವಾ ಯು.ಎಸ್ ನಂತೆ ಜನ ಇತಿಹಾಸದ ಒಂದು ದೊಡ್ಡ ಸಂಪುಟ ಕಾರ್ಯಸಾಧುವಲ್ಲ ಎಂದು ಮೊದಲೇ ತೀರ್ಮಾನಿಸಲಾಯಿತು. ಆದ್ದರಿಂದ ವಿವರವಾದ ಯೋಜನೆ ತಯಾರಿಸಿ 36 ಚಿಕ್ಕ ಸಂಪುಟಗಳ ಸರಣಿಯನ್ನು ಹಮ್ಮಿಕೊಳ್ಳಲಾಯಿತು. ಸಾಧ್ಯವಾದಷ್ಟು ಎಲ್ಲ ಅವಧಿಗಳು, ಪ್ರದೇಶಗಳು ಮತ್ತು ಆಯಾಮಗಳನ್ನು ಒಳಗೊಳ್ಳುವ ಪ್ರಯತ್ನ ಮಾಡಲಾಯಿತು.  ವಿವಿಧ ಆಯ್ದ ವಿಷಯಗಳನ್ನು ವಿವಿಧ ಪರಿಣತರಿಂದ ಬರೆಯಿಸುವ ಯೋಜನೆ ಹಾಕಲಾಯಿತು.ಭಾರತದ ಪರಿಸರದ ಕುರಿತು ಸಂಪುಟ (36), ಮಧ್ಯಯುಗದ ತಂತ್ರಜ್ಞಾನದ ಇತಿಹಾಸದ ಕುರಿತ ಸಂಪುಟ (20) – ಭಾರತದ ಇತಿಹಾಸ ರಚನೆಯಲ್ಲಿ ಮೊದಲ ಇಂತಹ ಪ್ರಯತ್ನವೆನ್ನಬಹುದು ಎಂದು ಪ್ರೊ. ಹಬೀಬ್ ತಿಳಿಸಿದರು.

ಇಡೀ ಯೋಜನೆಯ ಜಾರಿಯಲ್ಲಿ ವಿಳಂಬವಾಗಿದ್ದರೂ, ಈ ವರೆಗೆ 36 ಸಂಪುಟಗಳಲ್ಲಿ 15 ಸಂಪುಟಗಳು ಪ್ರಕಟವಾಗಿರುವುದು ಕಡಿಮೆ ಸಾದನೆಯಲ್ಲ. ಈ 15 ಸಂಪುಟಗಳಲ್ಲಿ 9 ಸಂಪುಟಗಳನ್ನು ಕನ್ನಡದಲ್ಲಿ ಅನುವಾದಿಸಲಾಗಿದೆ. ಈ ಮೂರು ಪುಸ್ತಕಗಳ ಬಿಡುಗಡೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕರ್ನಾಟಕದ ಇತಿಹಾಸಕಾರರು, ಪರಿಣತರು ಇದರ ಕುರಿತು ಮಾತನಾಡಲಿದ್ದಾರೆ. ಇವು ರಾಜ್ಯದಲ್ಲಿ ಪ್ರಚಾರವಾಗಿ ಚರ್ಚೆಗೆ ಒಳಗಾಗಲಿವೆ ಎಂಬುದರ ಕುರಿತು ಸಂತೋಷ ವ್ಯಕ್ತಪಡಿಸುತ್ತಾ, ಇದಕ್ಕಾಗಿ ಪ್ರೊ. ಹಬೀಬ್ ಅವರು “ಚಿಂತನ ಪುಸ್ತಕ”ವನ್ನು ಅಭಿನಂದಿಸಿದರು.

ಜನ ಇತಿಹಾಸ ಮಾಲಿಕೆಯ ವಿಶೇಷತೆಗಳು.

ಜನ ಇತಿಹಾಸ ಮಾಲಿಕೆಯ ಪುಸ್ತಕಗಳಲ್ಲಿ ಕೆಲವು ವಿಶೇಷತೆಗಳಿವೆ. ಎಲ್ಲ ಸಂಪುಟಗಳಲ್ಲಿ ಯಾವುದೇ ಹೇಳಿಕೆ, ನಿರೂಪಣೆಗಳಿಗೆ ಸಾಕ್ಷ್ಯ, ಆಕರ,ಮೂಲಗಳನ್ನು ಗುರುತಿಸಲಾಗುವುದು.  ಅಲ್ಲದೆ ಅದರ ಅನುವಾದಿತ ಉದ್ಧರಣೆಗಳನ್ನೂ (ಉದಾ: ಸಂಪುಟ 6 ರ ಸಮಸ್ಯಾತ್ಮಕ ಮಥುರಾ ಮರಳುಗಲ್ಲಿನ ಶಾಸನ) ಕೊಡಲಾಗುವುದು. ಇತಿಹಾಸದಲ್ಲಿ (ಮತ್ತು ಇತರ ಸಾಮಾಜಿಕ ವಿಜ್ಞಾನ – ಅರ್ಥಶಾಸ್ತ್ರ, ಪುರಾತತ್ವಶಾಸ್ತ್ರ, – ಇತ್ಯಾದಿಗಳಲ್ಲಿ) ಬರುವ ವಿಶೇ಼ಷ ಕಾಲಾನುಕ್ರಮಗಳು (ಉದಾ: ಕುಶಾನರ ಕಾಲಾನುಕ್ರಮದ ಕುರಿತ ವಾಗ್ವಾದದ ಕುರಿತು), ಸ್ಥಳ, ಪದವಿ ಇತ್ಯಾದಿಗಳ ಹೆಸರುಗಳು, ಪರಿಕಲ್ಪನೆಗಳ (ಪಾಳೆಯಗಾರಿ – ಬಂಡವಾಳಶಾಹಿ; ಜಾತ್ಯತೀತತೆ-ಕೋಮುವಾದ, ಸಮಾಜವಾದ-ಸಮತಾವಾದ ಇತ್ಯಾದಿ) ಕುರಿತು ಟಿಪ್ಪಣಿಗಳು, ಗ್ರಂಥಸೂಚಿ, ಪದಸೂಚಿಗಳು, ನಕ್ಷೆಗಳು ಇಲ್ಲಿ ಕೊಡಲಾಗುತ್ತದೆ. ಜನ ಇತಿಹಾಸದ ಸಂಪುಟಗಳಲ್ಲಿ  ನಿಖರ ಆಕರಗಳ ಆಧಾರದ ಮೇಲೆ ವೈಜ್ಞಾನಿಕ ನಿರೂಪಣೆ ಇರುತ್ತದೆ. ಕಲ್ಪಿಸಿಕೊಂಡ ಪುರಾಣವಿರುವುದಿಲ್ಲ. ಧಾರ್ಮಿಕ ಆಯಾಮಗಳನ್ನು ಪರಿಗಣಿಸಲಾಗುತ್ತದೆ. ಆದರೆ ಧರ್ಮದ ಪಾರಮ್ಯವಿಲ್ಲ.ಇತಿಹಾಸದಲ್ಲಿ ಅದರ ಪಾತ್ರವನ್ನು ಗುರುತಿಸಲಾಗುತ್ತದೆ. ಆದರೆ ಅದಕ್ಕೆ ವಿಶೇಷ ಮನ್ನಣೆಯಾಗಲಿ ಅಥವಾ ಅನಗತ್ಯ ಟೀಕೆಯಾಗಲಿ ಇರುವುದಿಲ್ಲ ಎಂದು ಜನ ಇತಿಹಾಸದ ವಿಶೇ಼ಷತೆಗಳನ್ನು ಪ್ರೊ. ಹಬೀಬ್ ಸ್ಪಷ್ಟಪಡಿಸಿದರು.

ಮುಂದುವರಿಸುತ್ತಾ ಸಂಫುಟ 6, 7 ಮತ್ತು 25ರ ಕೆಲವು ವಿಶೇಷತೆಗಳನ್ನು ಪ್ರೊ.ಹಬೀಬ್ ಗುರುತಿಸಿದರು.

“ಭಾರತದ ಜನ ಇತಿಹಾಸ ಮಾಲೆ ಏಕೆ?” ಉಪನ್ಯಾಸದ ನಂತರ ಪ್ರೊ. ಇರ್ಫಾನ್ ಹಬೀಬ್ ಅವರ ಜತೆ ಸಂವಾದವಿತ್ತು.

ಭಾರತೀಯ ವಿದ್ಯಾಭವನ ಇತಿಹಾಸ ಮಾಲೆಯ ಕುರಿತು ಅಭಿಪ್ರಾಯ

ಭಾರತೀಯ ವಿದ್ಯಾಭವನ ಇತಿಹಾಸ ಮಾಲೆಯ ಕುರಿತು ಅವರ ಅಭಿಪ್ರಾಯ ಕೇಳಲಾಯಿತು. ಈ ಮಾಲೆಯ ಲೇಖಕ ಆರ್.ಸಿ.ಮುಜುಂದಾರ್ ಉತ್ತಮ ಇತಿಹಾಸಕಾರರು. ಹಿಂದೂ  ಸಂಪ್ರದಾಯಸ್ಥರಾಗಿದ್ದು ಹಿಂದೂ ಮಹಾಸಭಾದ ಬೆಂಬಲಿಗರಾಗಿದ್ದರೂ, ಇತಿಹಾಸ ರಚನೆಯಲ್ಲಿ ಪುರಾಣಕ್ಕೆ ಅವಕಾಶ ಕೊಡುವವರಲ್ಲ. ಇತಿಹಾಸವನ್ನು ಪುರಾಣ ಮಾಡಿ ಪ್ರಚಾರ ಮಾಡುವ (ತಾಜ ಮಹಲ್ ಶಿವ ದೇವಾಲಯ ಎಂಬ ಆಧಾರರಹಿತ ಪ್ರಚಾರ ಮಾಡಿದ) ಆರೆಸ್ಸೆಸ್ ಧೋರಣೆಯನ್ನು ವಿರೋಧಿಸಿ ‘ಅವರು ‘ಆರ್ಗನೈಸರ್’ ಪತ್ರಿಕೆಗೆ ಬರೆಯುವುದನ್ನು  ನಿಲ್ಲಿಸಿದರು. ಮುನ್ಶಿ ಜತೆಗೂ ಅವರಿಗೆ ಹಲವು ಭಿನ್ನಾಭಿಪ್ರಾಯಗಳಿದ್ದವು, ವಿಶೇಷವಾಗಿ ಆರ್ಯರು ಭಾರತ ಮೂಲದವರೇ ಅಥವಾ ಹೊರಗಿಂದ ಬಂದವರೇ ಎಂಬುದರ ಕುರಿತು. ಹಾಗಾಗಿ ಈ ಕುರಿತು ಎರಡೂ ವಾದಗಳು ಸಂಪುಟಗಳಲ್ಲಿ ಬರುತ್ತವೆ.  ಈ ರೀತಿ ಈ ಸಂಪುಟಗಳಲ್ಲಿ ಹಲವು ಅಸಮಂಜಸತೆಗಳು, ಏರುಪೇರುಗಳು, ಅಸಮತೋಲನಗಳು ಇವೆ. ಮರಾಠಾ ಆಳ್ವಿಕೆಯನ್ನು ಅತಿಯಾಗಿ ವಿಜೃಂಭಿಸಿದ್ದು ಇನ್ನೊಂದು ಉದಾಹರಣೆ.  ಕೆಲವು ಐತಿಹಾಸಿಕ ಮೂಲ ಆಕರ ಗಳ ಬಳಕೆ, ಇತರವುಗಳ ನಿರ್ಲಕ್ಷ ಇಂತಹ ನ್ಯೂನತೆಗಳು ಇವೆ. ಆದರೆ ಭಾರತ ಇತಿಹಾಸ ಕಾಂಗ್ರೆಸ್ ನ ಸಮಗ್ರ ಇತಿಹಾಸದ ಸಂಫುಟಗಳಂತೆ ಅದು ಅಪೂರ್ಣವಾಗಲಿಲ್ಲ. ಪೂರ್ಣವಾಗಿ ಬಂತು ಎಂಬುದು ಅದರ ಹೆಗ್ಗಳಿಕೆ. ಅದರ ಬಹುಭಾಗ  ಮೂಲ ಆಕರ ಗಳನ್ನು ಆಧರಿಸಿದ ಇತಿಹಾಸದ ಉತ್ತಮ ಪಠ್ಯವೇ, ಎಂದು ಪ್ರೊ. ಹಬೀಬ್ ಉತ್ತರಿಸಿದರು.

ಜಾತಿ ವ್ಯವಸ್ಥೆ ದಕ್ಷಿಣ ಭಾರತ (ಅಥವಾ ದ್ರಾವಿಡ) ಮೂಲದ್ದೇ?

ಜಾತಿ ವ್ಯವಸ್ಥೆ ದಕ್ಷಿಣ ಭಾರತ (ಅಥವಾ ದ್ರಾವಿಡ ಮೂಲದ್ದೇ?) ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಪ್ರೊಟೊ ದ್ರಾವಿಡ  ಭಾಷೆಯಲ್ಲಿ ಅಸ್ಪೃಶ್ಯತೆಗೆ ಶಬ್ದವಿದೆ. ಆದರೆ ಇದು ಜಾತಿ ವ್ಯವಸ್ಥೆ ದಕ್ಷಿಣ ಭಾರತದ ಮೂಲದ್ದು ಎಂಬುದಕ್ಕೆ ಸಾಕಷ್ಟು ಪುರಾವೆ ಅಲ್ಲ. ಋಗ್ವೇದದಲ್ಲಿ 4 ವರ್ಣಗಳ ಪ್ರಸ್ತಾಪವಿದೆ. ಆದರೆ ಅದು ಜಾತಿಯ ದ್ಯೋತಕವಲ್ಲ. ಇಸ್ಲಾಮ್ ಸೇರಿದಂತೆ ಹೆಚ್ಚಿನ ಸಾಹಿತ್ಯದಲ್ಲಿ ಸಮಾಜವು 2, 3, 4 ವರ್ಗಗಳಾಗಿ ವಿಭಜಿತವಾಗಿರುವ ಕುರಿತು ಪ್ರಸ್ತಾಪ ಸಾಮಾನ್ಯ. ಆದರೆ ಅದು ಜಾತಿವ್ಯವಸ್ಥೆ ಅಲ್ಲ. ಉಪನಿಷತ್ತುಗಳ  ಕಾಲದಲ್ಲಿ ಜಾತಿ ಉದಯವಾಗಿದೆ. ಜಾತಿ ವ್ಯವಸ್ಥೆ ಆರ್ಯನ್ ಪ್ರದೇಶದಲ್ಲಿ ನಿರ್ದಿಷ್ಟವಾಗಿ ಮಗಧದಲ್ಲಿ (ಅಂದರೆ ಈಗಿನ ಬಿಹಾರ, ಪೂರ್ವ ಉತ್ತರ ಪ್ರದೇಶ) ವಿಕಾಸವಾದ್ದು. ಉತ್ತರ ಭಾರತಕ್ಕೆ ಜಾತಿ ವ್ಯವಸ್ಥೆ ದ್ರಾವಿಡ ಸಮಾಜದಿಂದ ಹೋದದ್ದು ಎಂಬುದಕ್ಕೆ ಪುರಾವೆ ಇಲ್ಲ, ಏಕೆಂದರೆ  ದ್ರಾವಿಡ ಪ್ರಭಾವ ಕಾಣುವ ಸಿಂದೂ ನಾಗರಿಕತೆಯಲ್ಲೂ ಜಾತಿಯ ಕುರುಹುಗಳಿಲ್ಲ. ಒಂದೆರಡು ಜಾತಿ ವ್ಯವಸ್ಥೆಯ ಆಯಾಮಗಳು ದ್ರಾವಿಡ ಸಮಾಜದಿಂದ ಹೋಗಿರಬಹುದು. ಆದರೆ ಲಭ್ಯ ಪುರಾವೆಗಳಿಂದ ಹೇಳುವುದಾದರೆ, ಉತ್ತರ ಭಾರತದಲ್ಲಿಆರ್ಯರ ಸಮಾಜದಲ್ಲಿ ಉದಯವಾದ ಜಾತಿ ಪದ್ಧತಿ ಭಾರತದ ಜಾತಿ ಪದ್ಧತಿಗೆ ಮೂಲವಾಗಿದೆ. ಅಲ್ಲಿಂದ ಅದು ಬದಲಾಗುತ್ತಾ, ವಿಸ್ತರಿಸುತ್ತಾ, ಕ್ರೋಢೀಕೃತವಾಗುತ್ತಾ ಹೋಯಿತು ಎನ್ನಬಹುದು ಎಂದು ಪ್ರೊ. ಹಬೀಬ್ ಉತ್ತರಿಸಿದರು.

ದಮನಿತರು ಇತಿಹಾಸದಲ್ಲಿ ಯಾಕೆ ಕಾಣಸಿಗುವುದಿಲ್ಲ ?

ಇತಿಹಾಸ ಬರೆಯುವವರು, ನಿರೂಪಿಸುವವರು, ಓದುವವರು ಯಾರು ಎನ್ನುವುದರ ಮೇಲೆ ಇತಿಹಾಸ ಆಧಾರಿತವಾಗಿರುವುದಿಲ್ಲವೇ? ಆದ್ದರಿಂದ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಇತರ ದಮನಿತರು ಇತಿಹಾಸದಲ್ಲಿ ಕಾಣಸಿಗುವುದಿಲ್ಲ ಎಂಬ ಪ್ರಶ್ನೆಗೆ, ಇದು ಭಾಗಶಃ ನಿಜ ಎಂದು ಪ್ರೊ. ಹಬೀಬ್ ತಿಳಿಸಿದರು. ಶಿಕ್ಷಣದಿಂದ ವಂಚಿತರಾದ ಜನ  ಇತಿಹಾಸದಲ್ಲಿ ಕಾಣಸಿಗುವುದಿಲ್ಲವೆಂಬುದು ಮತ್ತು ಇದಕ್ಕೆ ಇತಿಹಾಸಕಾರರ ಸಾಮಾಜಿಕ ಮೂಲ ಕಾರಣವಾಗಿರಬಹುದು ಎಂಬುದು ಭಾಗಶಃ ನಿಜ. ಆದರೆ ಪ್ರಾಮಾಣಿಕ ಇತಿಹಾಸಕಾರರ ಮೇಲೂ ಈ ಸಾಮಾನ್ಯ ಆಪಾದನೆ ಹಾಕುವುದು ಅಷ್ಟೇನೂ ನ್ಯಾಯಯುತವಲ್ಲ. ಪ್ರಾಚೀನ ಅವಧಿಯಲ್ಲಿ ಮಾಹಿತಿ, ಆಕರಗಳ ಕೊರತೆಯ ತೀವ್ರ ಸಮಸ್ಯೆ ಇದೆ. ಮಾಹಿತಿ ಇದ್ದದ್ದನ್ನು ನಿರೂಪಿಸಲಾಗಿದೆ. ಉದಾ ಜಾತಿ ವ್ಯವಸ್ಥೆಯ ವಿವರಗಳಿಗೆ ಮನುಸ್ಮೃತಿಯೇ ಮುಖ್ಯ ಆಕರ. ಬೇರೆ ಹೆಚ್ಚು ಆಕರಗಳಿಲ್ಲ. ಮಾಹಿತಿ ಇಲ್ಲ ಅಂತ ಕಲ್ಪನೆಯಿಂದ ಇತಿಹಾಸ ಬರೆಯಬಾರದಲ್ಲ. ಮಧ್ಯ ಕಾಲದ ಜಾತಿ ವ್ಯವಸ್ಥೆ ಕುರಿತು ಸಾಕಷ್ಟು ಮಾಹಿತಿ ಇದೆ. ಆಧುನಿಕ ಕಾಲದಲ್ಲಿ ಸಾಮಾಜಿಕ ಸುಧಾರಕರು ಜಾತಿ ವಿರುದ್ಧ ಹೋರಾಟ ಮಾಡಿದ್ದು ಜಾತಿವ್ಯವಸ್ಥೆಯ ಹಲವು ವಿವರಗಳು ಚರಿತ್ರೆಯಲ್ಲಿ ದಾಖಲಾಗಿವೆ. ಸಮಾಜಶಾಸ್ತ್ರಜ್ಞರು ಜಾತಿ ವ್ಯವಸ್ಥೆಯ ಬಗ್ಗೆ ಅಧ‍್ಯಯನ  ಮಾಡಿದ್ದಾರೆ. ಜನ ಇತಿಹಾಸ ಮಾಲೆಯಲ್ಲಿ ಜಾತಿವ್ಯವಸ್ಥೆ ಸೇರಿದಂತೆ ದುಡಿಯುವ ಜನರನ್ನು ದಮನಿತರನ್ನು ಇತಿಹಾಸದಲ್ಲಿ ಒಳಗೊಳ್ಳುವ ವ್ಯಾಪಕ ಪ್ರಯತ್ನ ನಡೆದಿದೆ. ಆದರೂ ಮಾಹಿತಿಯ, ಆಕರಗಳ ಕೊರತೆಯಿಂದಾಗಿ ಅವರ ಕುರಿತು ಹೆಚ್ಚು ಕಾಣಸಿಗುವುದಿಲ್ಲ ಎಂಬ ಕೊರತೆ ಇದ್ದೇ ಇದೆ.

ಪ್ರೊ. ಇರ್ಫಾನ್ ಹಬೀಬ್ ಅವರ  ಉಪನ್ಯಾಸ ಮತ್ತು ಸಂವಾದದ ನಂತರ ಹಿರಿಯ ಇತಿಹಾಸಕಾರ ಡಾ.ಎಸ್ ಚಂದ್ರಶೇಖರ್ ಅವರು ಸಂಪುಟ 25ರ ಪುಸ್ತಕ ಪರಿಚಯವನ್ನು ಮಾಡಿದರು. ಐ.ಸಿ.ಎಚ್.ಆರ್ ನ ಡಾ.ಎಸ್.ಕೆ.ಅರುಣಿ ಅವರು ಸಂಪುಟ 6ರ ಪರಿಚಯವನ್ನು ಮಾಡಿಕೊಟ್ಟರು. ಕ್ರೈಸ್ಟ್ ವಿವಿಯ ಡಾ.ಎಸ್.ಪಿ.ವಾಗೀಶ್ವರಿ ಅವರು ಸಂಪುಟ 7ರ ಕುರಿತು ವಿವರವಾಗಿ ಮಾತನಾಡಿದರು. ಆ ಮೇಲೆ ಅನುವಾದಕರುಗಳಾದ ಎಸ್.ಎನ್.ಸ್ವಾಮಿ (ಸಂಪುಟ 6) ಮತ್ತು ಪ್ರೊ.ಟಿ.ವೆಂಕಟೇಶ ಮೂರ್ತಿ (ಸಂಪುಟ 7) ತಮ್ಮ ಅನುವಾದದ ಅನುಭವಗಳನ್ನು ಹಂಚಿಕೊಂಡರು.

ಡಾ.ಕೆ.ಫ್ರಕಾಶ್ ಅವರು ಇಡೀ ಕಾರ್ಯಕ್ರಮದ ನಿರೂಪಣೆ, ನಿರ್ವಹಣೆಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಪ್ರೊ. ಇರ್ಫಾನ್ ಹಬೀಬ್ ಮತ್ತು ಇತರ ಭಾಷಣಕಾರರ ಪರಿಚಯ ಮಾಡಿದ್ದಲ್ಲದೆ, ಉಪನ್ಯಾಸ ವಿಷಯದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಹಬೀಬ್ ಜೊತೆಗೆ ಸಂವಾದವನ್ನು ನಡೆಸಿಕೊಟ್ಟರು. ಚಿಂತನ ಪುಸ್ತಕದ ವಸಂತರಾಜ ಎನ್.ಕೆ. ಎಲ್ಲರನ್ನೂ ಸ್ವಾಗತಿಸಿ ಚಿಂತನ ಪುಸ್ತಕದ ಭಾರತದ ಜನ ಇತಿಹಾಸ ಮಾಲೆ ಮತ್ತು ಇತರ ಇತಿಹಾಸ ಪುಸ್ತಕಗಳ ಪ್ರಕಟಣೆ ಯೋಜನೆಯ ಕುರಿತು ಪರಿಚಯ ನೀಡಿದರು. ಇತಿಹಾಸ ದರ್ಪಣದ ರಾಜೇಶ್ ಹಂ.ಗು ಅವರು ಎಲ್ಲ ಸಂಘಟಕರ ಪರವಾಗಿ ವಂದಿಸಿದರು.

ಇಡೀ ಕಾರ್ಯಕ್ರಮ ಝೂಮ್ ನಲ್ಲಿ ನಡೆದಿದ್ದು ಜೊತೆಗೆ ‘ಜನಶಕ್ತಿ ಮೀಡಿಯಾ’ ಮತ್ತು ‘ಋತುಮಾನ.ಕಾಂ’ ಫೇಸ್ ಬುಕ್ ಲೈವ್ ಮತ್ತು ‘ಜನಶಕ್ತಿ ಮೀಡಿಯಾ’ದ ಯೂ ಟ್ಯೂಬ್ ಲೈವ್ ಮೂಲಕ ನೇರ ಪ್ರಸಾರವಾಯಿತು. ಸುಮಾರು ಎರಡುವರೆ ಸಾವಿರದಷ್ಟು ಜನ ಈ ಕಾರ್ಯಕ್ರಮವನ್ನು ವಿವಿಧ ವೇದಿಕೆಗಳಲ್ಲಿ ವೀಕ್ಷಿಸಿದರು ಎಂಬುದು ಗಮನಾರ್ಹ..

(ಪ್ರೊ. ಇರ್ಫಾನ್ ಹಬೀಬ್ ಮತ್ತು ಕನ್ನಡದಲ್ಲಿ ಆಹ್ವಾನಿತ ಪರಿಣತರು ಮೂರು ಪುಸ್ತಕಗಳ ಕುರಿತು ಮಾತನಾಡಿದ್ದರ ಮುಖ್ಯಾಂಶಗಳ ವರದಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು)

 

 

 

 

 

Donate Janashakthi Media

Leave a Reply

Your email address will not be published. Required fields are marked *