ಭಾರತದ ಜನ ಇತಿಹಾಸ ಮಾಲೆಯಿಂದ ಇತಿಹಾಸದ ಪಾಠಗಳನ್ನು ಕಲಿಯೋಣ !!

ಇತಿಹಾಸದಿಂದ ಪಾಠ ಕಲಿಯದವರು ಅದರ ಪುನರಾವರ್ತನೆ ಮಾಡುವ ಶಿಕ್ಷೆಗೆ ಒಳಗಾಗುತ್ತಾರಂತೆ!

ಭಾರತದ ಜನ ಇತಿಹಾಸ ಮಾಲೆ  (ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ) ಯಿಂದ ಇತಿಹಾಸದ ಪಾಠಗಳನ್ನು ಕಲಿಯೋಣ !!

ಇತಿಹಾಸವನ್ನು ರಾಜರುಗಳ ಆಳ್ವಿಕೆಗಳ ಪಟ್ಟಿಯಾಗಿಸುವ ಬದಲು ಅದನ್ನು ನಿರ್ಮಿಸಿದ ಸಾಮಾನ್ಯ ಜನರನ್ನೇ ಕೇಂದ್ರವಾಗಿರಿಸಿಕೊಂಡಿರುವ, ನಿಜವಾದ ಇತಿಹಾಸದ ವೈಜ್ಞಾನಿಕ, ವಸ್ತುನಿಷ್ಟ ಅಧ್ಯಯನದಿಂದ ಮೂಡಿಬರುತ್ತಿರುವ “ಭಾರತದ ಜನ ಇತಿಹಾಸ ಮಾಲೆ”   “ಅಲಿಘರ್ ಹಿಸ್ಟೋರಿಯನ್ಸ್ ಸೊಸೈಟಿ” ಯ ಮಹತ್ವಾಕಾಂಕ್ಷೀ ಯೋಜನೆ.  “ಅಲಿಘರ್ ಹಿಸ್ಟೋರಿಯನ್ಸ್ ಸೊಸೈಟಿ”  ಹಲವು ವರ್ಷಗಳಿಂದ ಇತಿಹಾಸದ ಬಗ್ಗೆ ವೈಜ್ಞಾನಿಕ ಮತ್ತು ಜಾತ್ಯಾತೀತ ಕಣ್ಣೋಟವನ್ನು ಪ್ರೋತ್ಸಾಹಿಸುತ್ತಿರುವ ಹಾಗೂ ಕೋಮುವಾದಿ ಮತ್ತು ಸಂಕುಚಿತವಾದಿ ವ್ಯಾಖ್ಯೆಗಳನ್ನು ಪ್ರತಿರೋಧಿಸುತ್ತಿರುವ ಒಂದು ಸಂಸ್ಥೆ.

ಹಿರಿಯ ಇತಿಹಾಸಕಾರ ಪ್ರೊ. ಇರ್ಫಾನ್ ಹಬೀಬ್ ‌ರವರ ನೇತೃತ್ವದಲ್ಲಿ “ಅಲಿಘರ್ ಹಿಸ್ಟೋರಿಯನ್ಸ್ ಸೊಸೈಟಿ” ಭಾರತದ ಇತಿಹಾಸವನ್ನು ಸಮಗ್ರವಾಗಿ ನಿರೂಪಿಸುವ ಮತ್ತು ಭಾರತದ ಜನ ಇತಿಹಾಸವನ್ನು ಸಂಕಲಿಸುವ ಈ ಮಾಲೆ ಯಲ್ಲಿ 36 ಕೃತಿಗಳನ್ನು ಪ್ರಕಟಿಸುವ ಬೃಹತ್ ಯೋಜನೆಯನ್ನು ಹಾಕಿಕೊಂಡಿದೆ.  ಇದರಲ್ಲಿ ಇದುವರೆಗೆ 15 ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲಿ 6 (ಸಂಪುಟಗಳು 1ರಿಂದ 5 ಮತ್ತು 28) ಕೃತಿಗಳು ಈಗಾಗಲೇ ಅನುವಾದವಾಗಿ “ಚಿಂತನ ಪುಸ್ತಕ” ಕನ್ನಡದಲ್ಲಿ ಪ್ರಕಟಿಸಿದೆ.  ಮೌರ್ಯಾನಂತರದ ಭಾರತದ (ಕ್ರಿ.ಪೂ. 200-ಕ್ರಿ.ಶ. 300) ರಾಜಕೀಯ-ಆರ್ಥಿಕ (ಸಂಪುಟ 6), ಸಮಾಜ-ಸಂಸ್ಕೃತಿ (ಸಂಪುಟ 7)* ಮತ್ತು *ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತದ (1757-1857) ಆರ್ಥಿಕತೆಯ (ಸಂಪುಟ 25) ಇತಿಹಾಸದ ಕುರಿತ ಮೂರು ಕೃತಿಗಳು ಈಗ ಪ್ರಕಟಣೆಗೊಳ್ಳುತ್ತಿವೆ. ಉಳಿದ 6 ಕೃತಿಗಳು ಅನುವಾದದ ಹಂತದಲ್ಲಿವೆ ಎಂದು ಚಿಂತನ ಪುಸ್ತಕ ಮಾಹಿತಿ ನೀಡಿದೆ.

ಈ ಮೂರು ಕೃತಿಗಳನ್ನು ಬಿಡುಗಡೆ ಮಾಡುತ್ತಾ ಭಾರತದ ಜನ ಇತಿಹಾಸ ಮಾಲೆಯ ಪರಿಕಲ್ಪನೆಯ ಕುರಿತು ಪ್ರೊ. ಇರ್ಫಾನ್ ಹಬೀಬ್ ಅವರು ಮಾತನಾಡಲಿದ್ದಾರೆ.  ಅವರ ಜತೆ ಸಂವಾದಕ್ಕೂ ಅವಕಾಶವಿರುತ್ತದೆ. ಪರಿಣತ ಇತಿಹಾಸಕಾರರಾದ (ಕಲಬುರ್ಗಿ ಕೇಂದ್ರೀಯ ವಿವಿ ಯ ಉಪಕುಲಪತಿಗಳು ಮತ್ತು ಬೆಂಗಳೂರು ವಿ ವಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ) ಡಾ.ಎಸ್.ಚಂದ್ರಶೇಖರ್, (ಐ.ಸಿ.ಎಚ್.ಆರ್ ದಕ್ಷಿಣ ಕೇಂದ್ರದ) ಡಾ.ಶಿವಶರಣ ಕೆ ಅರುಣಿ ಮತ್ತು (ಕ್ರೈಸ್ಟ್ ವಿ ವಿ ಯ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ) ಡಾ. ಎಸ್.ಪಿ.ವಾಗೀಶ‍್ವರಿ ಅವರು ಅನುಕ್ರಮವಾಗಿ ಸಂಪುಟ 25, 6 ಮತ್ತು 7 ರ ಪರಿಚಯವನ್ನು ಮಾಡಿಕೊಡಲಿದ್ದಾರೆ.  ಅನುಕ್ರಮವಾಗಿ ಸಂಪುಟ 25, 6 ಮತ್ತು 7 ರ ಅನುವಾದಕರಾದ ಡಾ.ಕೆ.ಎಂ.ಲೋಕೇಶ್, ಎಸ್.ಎನ್. ಸ್ವಾಮಿ ಮತ್ತು ಟಿ,ವೆಂಕಟೇಶ ಮೂರ್ತಿ ಅವರುಗಳು ತಮ್ಮ ಅನುವಾದದ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.

ಪುರಾಣವನ್ನು ಇತಿಹಾಸ ಎಂದು ಪ್ರಚಾರ ಮಾಡುತ್ತಿರುವ ಇಂದಿನ ಸನ್ನಿವೇಶದಲ್ಲಿ  ಇತಿಹಾಸದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಪ್ರಾಧ್ಯಾಪಕರಿಗೆ ಹಾಗೂ ಎಲ್ಲ ಆಸಕ್ತರಿಗೆ ನಿಜವಾದ ಇತಿಹಾಸ ತಿಳಿಯಲು ಇದೊಂದು ಅಪೂರ್ವ ಅವಕಾಶ.

ಈ ಮೂರು ಪುಸ್ತಕಗಳ ವಿವರಗಳು ಮತ್ತು ಕಿರು ಪರಿಚಯ ಈ ಕೆಳಗಿನಂತಿದೆ:

ಮೌರ್ಯರ ನಂತರದ ಭಾರತ – ರಾಜಕೀಯ ಮತ್ತು ಆರ್ಥಿಕ ಇತಿಹಾಸ (ಕ್ರಿ,ಪೂ. 200 – ಕ್ರಿ.ಶ. 300) :
ಭಾರತದ ಜನ ಇತಿಹಾಸ ಮಾಲಿಕೆ ಸಂಪುಟ -6
ಮೂಲ : ಪ್ರೊ, ಇರ್ಫಾನ್ ಹಬೀಬ್
ಅನುವಾದ : ಎಸ್.ಎನ್. ಸ್ವಾಮಿ
ಪ್ರಕಾಶಕರು : ಚಿಂತನ ಪುಸ್ತಕ ಬೆಲೆ: 140

‘ಭಾರತದ ಜನ ಇತಿಹಾಸ’ದ ಈ ಸಂಪುಟವು ಬಹಳ ದೀರ್ಘ ಕಾಲಘಟ್ಟವನ್ನು (500 ವರ್ಷಗಳಿಗೂ ಹೆಚ್ಚು ಕಾಲಾವಧಿ) ತೆಗೆದುಕೊಂಡು ಮತ್ತು ಆ ಕಾಲಘಟ್ಟದ ರಾಜಕೀಯ ಮತ್ತು ಆರ್ಥಿಕ ಇತಿಹಾಸವನ್ನು ಮಾತ್ರ ಚರ್ಚಿಸುತ್ತಾ, ಕಳೆದೆರಡು ಸಂಪುಟಗಳಿಗಿಂತ ಭಿನ್ನ ಹಾದಿಯಲ್ಲಿ ಸಾಗುತ್ತದೆ. ಇದಕ್ಕೆ ಸ್ವಲ್ಪಮಟ್ಟಿಗೆ ಕಾಲಾನುಕ್ರಮದಲ್ಲಿರುವ (ಮುಖ್ಯವಾಗಿ ಪಠ್ಯಗಳ, ಹಾಗೆಯೇ ರಾಜಕೀಯ ಘಟನೆಗಳ ಕಾಲವನ್ನು ಗುರುತಿಸುವಲ್ಲಿರುವ) ಅನಿಶ್ಚಿತತೆಗಳು ಮತ್ತು ಕಾಲಘಟ್ಟವನ್ನು ವಿಭಾಗಿಸುವಂತಹ ಸ್ಪಷ್ಟ ಗೆರೆಗಳು ಇಲ್ಲದಿರುವ ಸಂಗತಿ ಕಾರಣವಾಗಿದೆ. ಆದ್ದರಿಂದ ಈ ಐದೂ ಶತಮಾನಗಳ ಇತಿಹಾಸದ ವಿವಿಧ ಅಂಶಗಳನ್ನು ಒಳಗೊಳ್ಳಲು ಎರಡು ಪ್ರತ್ಯೇಕ ಗ್ರಂಥಗಳನ್ನು (ಈಗಿನ ಆರನೇ ಸಂಪುಟ ಮತ್ತು ಮುಂದಿನ ಏಳನೇ ಸಂಪುಟ) ಯೋಜಿಸುವ ಅಗತ್ಯ ಬಂದಿತು. …

… ಇದರಲ್ಲಿ ನಾಣ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರದ ಮೂಲಭೂತ ಪರಿಕಲ್ಪನೆಗಳು … ಹಾಗೂ ಪುರಾಣಗಳು ಮತ್ತು ಶಂಗಂ ಪಠ್ಯಗಳಲ್ಲಿರುವ ಇತಿಹಾಸದ ಅಂಶಗಳು ಮತ್ತು ಕುಶಾನರ ಕಾಲಾನುಕ್ರಮದ ಮರುರಚನೆಯಂತಹ ಐತಿಹಾಸಿಕ ಸಮಸ್ಯೆಗಳ ಕುರಿತು ವಿಶೇಷ ಟಿಪ್ಪಣಿಗಳಿವೆ.

– ಪ್ರೊ. ಇರ್ಫಾನ್ ಹಬೀಬ್ (ಪುಸ್ತಕದ ಬ್ಲರ್ಬಿನಿಂದ)

‘ಭಾರತದ ಜನ ಇತಿಹಾಸ’ದ ಪುಸ್ತಕ ಮಾಲೆಯ ಪುಸ್ತಕಗಳಲ್ಲಿ ಕೆಲವು ಇಂಗ್ಲಿಷ್ ಚರಿತ್ರೆಕಾರರಲ್ಲಿದ್ದ ವಸಾಹತುಪರ ಧೋರಣೆಯೂ ಇಲ್ಲ ಅಥವಾ ಧರ್ಮಾಧಾರಿತ ವ್ಯಾಖ್ಯಾನವೂ ಇಲ್ಲಿಲ್ಲ. ಅಥವಾ ಚರಿತ್ರೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದಕ್ಕೋಸ್ಕರ ತಿರುಚಿದ ಚರಿತ್ರೆಯ ಕಟ್ಟುವಿಕೆಯೂ ಅಲ್ಲ. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳಿಂದ ಶಾಸನ, ನಾಣ್ಯ, ಗ್ರಂಥಗಳು, ಪುರಾಣಗಳು, ಸಾಹಿತ್ಯ, ಇತ್ಯಾದಿ ಪುರಾವೆಗಳನ್ನು ಒಗ್ಗೂಡಿಸಿಕೊಂಡು, ಅದರಲ್ಲಿರುವ ಗೊಂದಲಗಳನ್ನು ಸರಿಪಡಿಸಿಕೊಂಡು ಚರಿತ್ರೆಯನ್ನು ಕಟ್ಟುವ ವಿಧಾನ. ಹಾಗಾಗಿ ನಮ್ಮ ಹಿಂದಿನ ಚರಿತ್ರೆಯ ಮೇಲೆ ಬೆಳಕು ಚೆಲ್ಲುತ್ತಾ, ಅದರ ತಳಹದಿಯ ಮೇಲೆ ಭವಿಷ್ಯವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಗೆ ಇಂಬು ಕೊಡುತ್ತದೆ. ಇದು ಇಂದಿನ ಅತ್ಯವಶ್ಯಕತೆ.

– ಎಸ್.ಎನ್.ಸ್ವಾಮಿ (ಪುಸ್ತಕದ ಬ್ಲರ್ಬಿನಿಂದ)

 

ಮೌರ್ಯಾನಂತರದ ಭಾರತದಲ್ಲಿ ಸಮಾಜ ಮತ್ತು ಸಂಸ್ಕೃತಿ(ಕ್ರಿ,ಪೂ. 200 – ಕ್ರಿ.ಶ. 300)
: ಭಾರತದ ಜನ ಇತಿಹಾಸ ಮಾಲಿಕೆ ಸಂಪುಟ -7
ಮೂಲ : ಪ್ರೊ. ಭೈರಬಿ ಪ್ರಸಾದ ಸಾಹು, ಪ್ರೊ. ಕೇಶವನ್ ವೇಲುತಾಟ್
ಅನುವಾದ : ಡಾ. ಟಿ. ವೆಂಕಟೇಶಮೂರ್ತಿ
ಪ್ರಕಾಶಕರು : ಚಿಂತನ ಪುಸ್ತಕ ಬೆಲೆ: 90

 

ಭಾರತ ಪ್ರಾಚೀನ ಇತಿಹಾಸದಲ್ಲಿ ಮೌರ್ಯರ ನಂತರ ಸುಮಾರು ಐನೂರು ವರ್ಷಗಳ ಕಾಲಾವಧಿ ಪ್ರಾಚೀನ ಭಾರತದ ಇತಿಹಾಸದಲ್ಲಿ ಆಸಕ್ತಿ ಇರುವವರು ಬಹಳಷ್ಟು ಉತ್ಸುಕತೆಯಿಂದ ಓದುವ ಕಾಲಘಟ್ಟ ಇದು. ಮೌರ್ಯ ಆಳ್ವಿಕೆಯ ನಂತರದ ಅವಧಿ. ಒಂದೆಡೆಯಲ್ಲಿ ಇದು ಬೌದ್ಧಧರ್ಮ ಮತ್ತು ಜೈನಧರ್ಮಗಳ ಏಳಿಗೆಗೆ ಸಾಕ್ಷಿಯಾದರೆ, ಅದರ ಜತೆಗೆ ಸಮಾಜವನ್ನು ಕುರಿತ ಬ್ರಾಹ್ಮಣೀಯ ಪರಿಕಲ್ಪನೆ ಮತ್ತು ಪೌರಾಣಿಕ ಧರ್ಮ ಪ್ರಾರಂಭದ ವರ್ಷಗಳಲ್ಲಿ ಪಡೆದ ರೂಪಕ್ಕೂ ಸಾಕ್ಷಿಯಾಯಿತು. ಇದೇ ಅವಧಿಯಲ್ಲೇ ಪ್ರಾಚೀನ ಸಂಸ್ಕೃತದ ಉದಯ ಮತ್ತು ತಮಿಳು-ಬ್ರಾಹ್ಮಿ ಲಿಪಿಯ ಬಳಕೆಯೂ ಕಾಣ ಬಂತು ಅರ್ಥಶಾಸ್ತ್ರ, ಮನುಸ್ಮೃತಿ, ರಾಮಾಯಣ, ಮಹಾಭಾರತ, ನಾಟ್ಯಶಾಸ್ತ್ರ, ಕಾಮಸೂತ್ರ ಮುಂತಾದ ಸಂಸ್ಕೃತದ ಪ್ರಮುಖ ರಚನೆಗಳು ರೂಪುಗೊಂಡದ್ದು/ಅಂತಿಮ ರೂಪ ಪಡೆದದ್ದು ಈ ಕಾಲಘಟ್ಟದಲ್ಲೇ. ಹಾಗೆಯೇ ಸಾಂಚಿ ಸ್ತೂಪ ಮತ್ತು ಅಜಂತಾದ ಆರಂಭಿಕ ಗುಹಾ ವರ್ಣಚಿತ್ರಗಳು ಕೂಡ.

‘ಭಾರತದ ಜನ ಇತಿಹಾಸ’ ಪುಸ್ತಕಮಾಲೆಯ ಸಂಪುಟ 6 ಈ ಐದು ಶತಮಾನಗಳ ರಾಜಕೀಯ ಮತ್ತು ಆರ್ಥಿಕ ಇತಿಹಾಸವನ್ನು ಚರ್ಚಿಸಿದ್ದರೆ, ಈ ಪುಸ್ತಕ ಅದೇ ಅವಧಿಯ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳನ್ನು ಚರ್ಚಿಸುತ್ತದೆ.  ಸಾಮಾನ್ಯವಾಗಿ ಪಠ್ಯಪುಸ್ತಕಗಳಲ್ಲಿ ಗಮನಕ್ಕೆ ತಗೊಳ್ಳದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.

 

 

 

 

 

 

ಭಾರತದ ಆರ್ಥಿಕತೆ (ಬ್ರಿಟಿಷ್ ಆಳ್ವಿಕೆಯ ಆರಂಭಿಕ ಹಂತದಲ್ಲಿ 1757-1857)
ಭಾರತದ ಜನ ಇತಿಹಾಸ ಮಾಲಿಕೆ ಸಂಪುಟ – 25
ಮೂಲ : ಪ್ರೊ, ಇರ್ಫಾನ್ ಹಬೀಬ್ ;
ಅನುವಾದ : ಡಾ.ಕೆ.ಎಂ.ಲೋಕೇಶ ;
ಪ್ರಕಾಶಕರು : ಚಿಂತನ ಪುಸ್ತಕ ಬೆಲೆ: 140

`ಪೀಪ್‌ಲ್ಸ್ ಹಿಸ್ಟರಿ ಆಫ್ ಇಂಡಿಯಾ’ ಸರಣಿಯಲ್ಲಿ ಪ್ರಸ್ತುತ (ಸಂಪುಟ 25) ಪುಸ್ತಕವು ಭಾರತದ ಒಂದು ಶತಮಾನದ, 1757-1857, ಆರ್ಥಿಕ ಇತಿಹಾಸವನ್ನು ವಿವರಿಸುತ್ತದೆ. ಇದನ್ನು, ಈಗಾಗಲೇ ಪ್ರಕಟವಾಗಿರುವ, ಅನುಕ್ರಮದಲ್ಲಿ ಬರುವ ಶತಮಾನದ, 1858-1914 ಅರ್ಥಿಕತೆಯನ್ನು ಚರ್ಚಿಸುವ ಸಂಪುಟ 28ರ ಜೊತೆಗಾರ ಹೊತ್ತಗೆಯಾಗಿ ಸಹಕರಿಸಲು ರೂಪಿಸಲಾಗಿದೆ.

ಆಧುನಿಕ ಭಾರತದ ಇತಿಹಾಸದಲ್ಲಿ ಕ್ರಿ.ಶ.1757 ರಿಂದ 1857ರವರೆಗಿನ ಇತಿಹಾಸವು ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಇತಿಹಾಸವಾಗಿದ್ದು ಅದು, ಆ ಕಂಪನಿಯು ಅತೀವ ಮೋಸಗಾರಿಕೆ, ಲಾಲಸೆ ಹಾಗೂ ಕ್ರ‍್ರೌರ್ಯದಿಂದ ನಿರಂತರವಾಗಿ ಭಾರತವನ್ನು ಲೂಟಿ ಮಾಡಿದ ಅಮಾನವೀಯತೆಯ ಕಥೆಯಾಗಿದೆ. … `ಲೂಟ್’ ಎಂಬ ಪದವು ಹಿಂದುಸ್ತಾನಿ ಗ್ರಾಮ್ಯ ಭಾಷೆಯ ಪದವಾಗಿದ್ದು ಈಸ್ಟ್ ಇಂಡಿಯಾ ಕಂಪನಿಯ ಲಜ್ಜೆಗೆಟ್ಟ `ಲೂಟಿ’ಯಿಂದಾಗಿ ಕುಪ್ರಸಿದ್ಧವಾಗಿ ಹದಿನೆಂಟನೇ ಶತಮಾನದಲ್ಲಿ ಆಂಗ್ಲ ಅರ್ಥಕೋಶವನ್ನು ಸೇರಿಕೊಂಡ ಮೊದಲ ಹಲವು ಪದಗಳಲ್ಲಿ ಒಂದು. …

ಬ್ರಿಟಿಷರ ಆಗಮನದ ಮೊದಲು ಭಾರತವು ಸುಭದ್ರವಾದ ಅರ್ಥವ್ಯವಸ್ಥೆಯನ್ನು ಹೊಂದಿತ್ತು. ಸ್ವಾವಲಂಬೀ ಕೃಷಿ ವ್ಯವಸ್ಥೆ, ಲಾಭದಾಯಕ ವ್ಯಾಪಾರ-ವಾಣಿಜ್ಯ ಮತ್ತು ಶ್ರೀಮಂತ ಕರಕುಶಲ ಕೈಗಾರಿಕೆ, ಮುಂತಾದವು ಭಾರತದ ಆರ್ಥಿಕತೆಯ ಕೆಲವು ಲಕ್ಷ್ಷಣಗಳಾಗಿದ್ದವು. … ವಸಾಹತುಶಾಹಿ-ಪೂರ್ವದಲ್ಲಿ ಭಾರತದ ಗ್ರಾಮಗಳು ಸ್ವಾವಲಂಬಿಗಳಾಗಿದ್ದವು. ಅಂತೆಯೇ, ಭಾರತವು ಆಂತರಿಕವಾಗಿ ಒಂದು ಪ್ರದೇಶವು ಇನ್ನೊಂದರೊಂದಿಗೆ ಹಾಗೂ ಬಾಹ್ಯವಾಗಿ ಏಷ್ಯಾ ಹಾಗೂ ಯುರೋಪ್‌ನ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದು ಆಮದು ಮತ್ತು ರಫ್ತು ವ್ಯಾಪಾರಗಳಲ್ಲಿ ಸಮತೋಲನವನ್ನು ಹೊಂದಿತ್ತು. ಹೆಚ್ಚಿನ ಸಂದರ್ಭಗಳಲ್ಲಿ ಮಿಗುತಾಯವನ್ನು ಅನುಭವಿಸುತ್ತಿತ್ತು. … ಇಂಗ್ಲೆAಡ್‌ನಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿಯು ಭಾರತದ ಆರ್ಥಿಕತೆಯ ಮೂಲ ಲಕ್ಷಣಗಳನ್ನೇ ಬುಡಮೇಲು ಮಾಡಿತು. ಉತ್ಪಾದನೆಗಳಿಗೆ ಹೆಸರುವಾಸಿಯಾಗಿದ್ದ ಭಾರತವು ಈಗ ಇಂಗ್ಲೆಂಡ್-ಉತ್ಪಾದಿತ ವಸ್ತುಗಳ ಮಾರುಕಟ್ಟೆ ಹಾಗೂ ಅನುಭೋಗಿಯಾಗಿ ಪರಿವರ್ತನೆ ಹೊಂದಿತು.

ಇರ್ಫಾನ್ ಹಬೀಬರು ಪ್ರಸ್ತುತ ಕೃತಿಯಲ್ಲಿ ಸಾಮ್ರಾಜ್ಯಶಾಹಿ ಸಮರ್ಥಕರ ಹಾಗೂ ಪರಿಷ್ಕರಣಾವಾದಿಗಳ ಅಭಿಪ್ರಾಯಗಳನ್ನು ಪ್ರಶ್ನಿಸುತ್ತಾ ಅವರ ಹೇಳಿಕೆಗಳ, ಅಧ್ಯಯನಗಳ ಫಲಿತಗಳ ಪೊಳ್ಳುತನವನ್ನು ಬಯಲಿಗೆಳೆಯುತ್ತಾರೆ. ತಮ್ಮ ವಾದಗಳನ್ನು ಸಮಕಾಲೀನ ಸಂದರ್ಭಗಳ ದಾಖಲೆಗಳೊಂದಿಗೆ ಮುಂದಿಡುತ್ತಾರೆ.

ಪ್ರತೀ ಅಧ್ಯಾಯದಲ್ಲಿ ಭೂಪಟಗಳು, ಘಟನೆಗಳ ಕಾಲಾನುಕ್ರಮತೆ, ಉದ್ಧರಣೆಗಳು, ವಿದ್ವತ್‌ಪೂರ್ಣ ಟಿಪ್ಪಣಿಗಳನ್ನೊಳಗೊಂಡ ಗ್ರಂಥಸೂಚಿ, ಅಂತೆಯೇ ಗಂಭೀರ ವಿಷಯಗಳ ಕುರಿತು ಸಂಕ್ಷಿಪ್ತ ಲೇಖನಗಳು, ಉದಾಹರಣೆ, ಹದಿನೆಂಟನೇ ಶತಮಾನದ ಸ್ವರೂಪ. ಚಾರಿತ್ರಿಕ ಜನಸಂಖ್ಯೆ, ಕಪ್ಪ/ಪೊಗದಿಯ ಸ್ವರೂಪ ಇತ್ಯಾದಿ ಓದುಗರಿಗೆ ಅಪಾರ ಮಾಹಿತಿಯನ್ನು ನೀಡುವುದಲ್ಲದೆ ವಸಾಹತುಶಾಹಿ ಆರ್ಥಿಕತೆಯ ತತ್ವ, ಸ್ವರೂಪ, ಕಾರ್ಯಸೂಚಿ ಮತ್ತು ಕಾರ್ಯನಿರ್ವಣೆಯ ಪ್ರಕ್ರಿಯೆಗಳನ್ನು ಅವುಗಳ ವಿನಾಶಕಾರಿ ಪರಿಣಾಮಗಳೊಂದಿಗೆ ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತವೆ.

ಭಾರತದ ವಸಾಹತುಶಾಹಿಯನ್ನು ಕುರಿತಂತೆ ಇರ್ಫಾನ್ ಹಬೀಬ್‌ರ ಈ ಕೃತಿಯನ್ನು ಸಂಪುಟ 28ರೊಂದಿಗೆ ಒಟ್ಟಾಗಿ ಅಧ್ಯಯನ ಮಾಡಿದರೆ ಹೆಚ್ಚು ಲಾಭದಾಯಕವಾಗುವುದೆಂದರೆ ತಪ್ಪಾಗಲಾರದು.

 

 

 

 

 

 

 

 

Donate Janashakthi Media

One thought on “ಭಾರತದ ಜನ ಇತಿಹಾಸ ಮಾಲೆಯಿಂದ ಇತಿಹಾಸದ ಪಾಠಗಳನ್ನು ಕಲಿಯೋಣ !!

Leave a Reply

Your email address will not be published. Required fields are marked *