ಕೋವಿಡ್‌ ನಿಯಮ ಉಲ್ಲಂಘನೆ: ಬಿಜೆಪಿ ವಿರುದ್ಧ ಒಟ್ಟು 36 ಕೇಸು ದಾಖಲು

ಮುಂಬಯಿ: ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಮುಂಬೈ ಪೊಲೀಸರು ಶನಿವಾರ ಇಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ 17 ಹೊಸ  ಪ್ರಕರಣಗಳನ್ನು ದಾಖಲಿಸಿದ್ದಾರೆ.

ಮುಂಬೈನ ವಿವಿಧ ಭಾಗಗಳಲ್ಲಿ ಕೇಂದ್ರ ಸಚಿವ ನಾರಾಯಣ್ ರಾಣೆ ಅವರ ಜನಾಶೀರ್ವಾದ ಯಾತ್ರೆಯಲ್ಲಿ ಕೋವಿಡ್‌ ನಿಯಮಗಳನ್ನು ಉಲ್ಲಂಘಸಿರುವ ಬಗ್ಗೆ ಪೊಲಿಸರು ಕೇಸು ದಾಖಲಿಸಿದ್ದಾರೆ.  ವಿವಿಧ ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಹೊಸ ಪ್ರಕರಣಗಳು ದಾಖಲಾಗುತ್ತಿದ್ದಂತೆ ಒಟ್ಟು ಪ್ರಕರಣಗಳ ಸಂಖ್ಯೆ 36 ಕ್ಕೆ ಏರಿಕೆಯಾಗಿದೆ.

ಎಎನ್‌ಐ ಸುದ್ದಿಸಂಸ್ಥೆ  ಪ್ರಕಾರ, ನೆನ್ನೆಯವರೆಗೆ ಮುಂಬೈನ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ 19 ಎಫ್‌ಐಆರ್‌ಗಳು ದಾಖಲಾಗಿದ್ದವು ಇಂದು ಮತ್ತೆ 17 ಹೊಸ ಕೇಸು ದಾಖಲಿಸಲಾಗಿದೆ.

ಇದನ್ನು ಓದಿ: ಯೋಧ ಬದುಕಿದ್ದರೂ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಕೇಂದ್ರ ಸಚಿವ ನಾರಾಯಣಸ್ವಾಮಿ!

ಮುಂಬಯಿನ ಮುಲುಂದ್, ಘಾಟ್ಕೋಪರ್, ವಿಕ್ರೋಲಿ, ಭಂಡುಪ್, ಪಂತ್ ನಗರ, ಖಾರ್, ಸಾಂತಾಕ್ರೂಜ್, ಪೊವಾಯಿ, ಎಂಐಡಿಸಿ, ಸಾಕಿ ನಾಕಾ, ಮೇಘವಾಡಿ, ಗೋರೆಗಾಂವ್, ಚಾರ್ಕೋಪ್, ಬೋರಿವಲಿ ಮತ್ತು ಎಂಎಚ್‌ಬಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಮುಂಬೈ ಪೊಲೀಸರ ನಿರ್ಬಂಧಗಳ ನಡುವೆಯೂ ಕೇಂದ್ರ ಸಚಿವ ನಾರಾಯಣ್‌ ರಾಣೆ ಗುರುವಾರದಂದು ಮುಂಬೈನಲ್ಲಿ ತಮ್ಮ ಜನಾಶೀರ್ವಾದ ಯಾತ್ರೆ ಆರಂಭಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಗಮನದಲ್ಲಿಟ್ಟುಕೊಂಡು ಅನೇಕ ವಿರೋಧ ಪಕ್ಷದ ನಾಯಕರು ರ‍್ಯಾಲಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರಾದ ಅಶೋಕ್ ಚವ್ಹಾಣ್ ಮತ್ತು ಭಾಯ್ ಜಗ್ತಾಪ್ ಅವರು ರಾಜ್ಯದ ಕೊರೊನಾ ಪರಿಸ್ಥಿತಿಯನ್ನು ಕಡೆಗಣಿಸಿ ರ‍್ಯಾಲಿ ನಡೆಸಿದ್ದಕ್ಕಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಶಿವಸೇನಾ ನಾಯಕ ಏಕನಾಥ ಶಿಂಧೆ ತಮ್ಮ ಪಕ್ಷವನ್ನು ಗುರಿಯಾಗಿಸಿಕೊಂಡು ಮಹಾರಾಷ್ಟ್ರ ಸರ್ಕಾರದ ಬಿಜೆಪಿ ಹಕ್ಕುಗಳನ್ನು ನಿರಾಕರಿಸಿದರು ಮತ್ತು ಕೋವಿಡ್ -19 ಮಾರ್ಗಸೂಚಿಗಳನ್ನು ಎಲ್ಲರೂ, ಅದು ಯಾವುದೇ  ರಾಜಕೀಯ ಹಿನ್ನೆಲೆ ಇದ್ದರೂ ಅನುಸರಿಸಬೇಕು ಎಂದು ಪ್ರತಿಪಾದಿಸಿದರು.

ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕೇಂದ್ರ ಸಚಿವ ನಾರಾಯಣ್‌ ರಾಣೆ ಖಂಡಿಸಿದರು ಮತ್ತು ಜನಾಶೀರ್ವಾದ ಯಾತ್ರೆಯ ವಿರುದ್ಧ ಎಫ್‌ಐಆರ್‌ಗಳನ್ನು ಹಾಕಿದರೂ ರ‍್ಯಾಲಿಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *