ಜಾಹೀರಾತು ನೀಡಿಕೆಯಲ್ಲಿ ಸರಕಾರದ ಜಾತಿ ತಾರತಮ್ಯ: ಸಿಪಿಐ(ಎಂ) ಖಂಡನೆ

ಬೆಂಗಳೂರು: ಕರ್ನಾಟಕ ಸರಕಾರ ಜಾಹೀರಾತು ನೀಡಿಕೆಯಲ್ಲಿ ಬ್ರಾಹ್ಮಣರ ಮಾಲೀಕತ್ವದಲ್ಲಿರುವ ಮಾಧ್ಯಮಗಳಿಗೆ ಪ್ರತಿ ತಿಂಗಳು ಎರಡು ಜಾಹೀರಾತು ನೀಡುವಂತೆ ಆದೇಶಿಸುವ ಮೂಲಕ ಜಾತಿ ತಾರತಮ್ಯ ಮೆರೆದಿರುವ, ಜಾತಿವಾದಿ ನೀತಿಯನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)- ಸಿಪಿಐ(ಎಂ) ಬಲವಾಗಿ ಖಂಡಿಸಿದೆ.

ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು, ಇದೊಂದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾದ ದುಷ್ಕೃತ್ಯವಾಗಿದ್ದು, ಕೂಡಲೇ ಅಂತಹ ತಾರತಮ್ಯ ನೀತಿಯನ್ನು ಮತ್ತು ಸುತ್ತೋಲೆಯನ್ನು ವಾಪಾಸ್ಸು ಪಡೆಯುವಂತೆ ಆಗ್ರಹಿಸಿದ್ದಾರೆ.

ಇದನ್ನು ಓದಿ: ಬ್ರಾಹ್ಮಣರ ಒಡೆತನದ ಪತ್ರಿಕೆಗೆಳಿಗೆ ಜಾಹೀರಾತು : ರಾಜ್ಯ ಸರಕಾರದಿಂದ ಆದೇಶ – ವ್ಯಾಪಕ ಖಂಡನೆ

ಅದಾಗಲೇ ಜಾತಿ ತಾರತಮ್ಯವನ್ನು ಬಲಗೊಳಿಸುವ ನೀತಿಯನ್ನು ಜಾರಿಗೊಳಿಸಲು, ಕರ್ನಾಟಕ ರಾಜ್ಯ ಧಾರ್ಮಿಕ ಸ್ವಾತಂತ್ಯ ಸಂರಕ್ಷಣೆಯ ಸುಗ್ರಿವಾಜ್ಞೆಯನ್ನು ಹೊರಡಿಸಿರುವುದರ ಮುಂದುವರೆದ ಭಾಗವಾಗಿದೆ.

ಬಿಜೆಪಿ ಸರಕಾರ ಕೇವಲ ಜಾತಿ ತಾರತಮ್ಯ ಎಸಗುತ್ತಿರುವುದು ಮಾತ್ರವಲ್ಲಾ, ಧಾರ್ಮಿಕ ತಾರತಮ್ಯವನ್ನು ಮುಂದುವರೆಸಿದೆ. ಧಾರ್ಮಿಕ ದ್ವೇಷಕ್ಕೆ ಬಲಿಯಾದ ಹಿಂದುತ್ವವಾದಿ ಯುವಜನರಿಗೆ ನೀಡುತ್ತಿರುವ 25 ಲಕ್ಷ ರೂಪಾಯಿಗಳ ಪರಿಹಾರವನ್ನು ಅದೇ ರೀತಿ ಧಾರ್ಮಿಕ ದ್ವೇಷಕ್ಕೆ ತುತ್ತಾದ ಮುಸ್ಲಿಂ ಯುವಕರ ಕುಟುಂಬಗಳಿಗೆ ಪರಿಹಾರ ನೀಡಲು ನಿರಾಕರಿಸುತ್ತಿದೆ. ಮಾತ್ರವಲ್ಲಾ, ಹಿಂದುತ್ವವಾದಿ ಕೊಲೆಗಡುಕರ ಮೇಲೆ ಕಠಿಣ ಕ್ರಮವಹಿಸದೇ ಮೀನ ಮೇಷ ಮಾಡುತ್ತಾ ನಿರಾಕರಿಸುತ್ತಿರುವುದು ಹಿಂದುತ್ವ ಮತಾಂಧರಿಗೆ ನೀಡುವ ಕುಮ್ಮಕ್ಕಾಗಿದೆ ಎಂದು ಯು. ಬಸವರಾಜ ಅವರು ತಿಳಿಸಿದ್ದಾರೆ.

ಇಂತಹ ಎಲ್ಲ ಜಾತಿವಾದಿ ಹಾಗೂ ಕೋಮುವಾದಿ ತಾರತಮ್ಯವನ್ನು ಈ ಕೂಡಲೇ ನಿಲ್ಲಿಸುವಂತೆ ಸಿಪಿಐ(ಎಂ) ಆಗ್ರಹಿಸಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *