ಬೆಂಗಳೂರು: ಸ್ವಯಂ ಘೋಷಿತ ದೇವಮಾನವನೆಂದು ಘೋಷಿಸಿಕೊಂಡಿರುವ ಜಗ್ಗಿ ವಾಸುದೇವ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ನೀಡಲಾಗಿದೆ. ಅದರ ಜೊತೆಗೆ ಮಣ್ಣು ಸಂರಕ್ಷಣೆಯ ಹೆಸರಿನಲ್ಲಿ ಒಂದು ನೂರು ಕೋಟಿ ರೂಪಾಯಿಗಳನ್ನು ಕೊಡಲಾಗಿದೆ. ಈ ಬಗ್ಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಮಾತನಾಡಿ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.
‘ರಾಜ್ಯದಲ್ಲಿ ಈ ನೆಲದ ಮಣ್ಣು, ಬೆಳೆಗಳ ಕುರಿತು ಅದ್ಯಯನ ನಡೆಸಲು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ತಜ್ಞರು ಮತ್ತು ಪ್ರಗತಿಶೀಲ ರೈತರಿದ್ದಾರೆ. ಜಗ್ಗಿ ವಾಸುದೇವ್ ಅವರಂತಹ ವ್ಯಾಪಾರಿ ಮನೋಭಾವದ ದೇವಮಾನವರ ಅವಶ್ಯಕತೆ ಕರ್ನಾಟಕಕ್ಕೆ ಬೇಕಾಗಿಲ್ಲ. ಜನಸಾಮಾನ್ಯರ ತೆರಿಗೆ ಹಣವನ್ನು ವಂಚಕರಿಗೆ ಬೇಕಾಬಿಟ್ಟಿ ಹಂಚಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಯಾವುದೇ ಅಧಿಕಾರ ಇಲ್ಲ’ ಎಂದು ಆರೋಪಿಸಿದರು.
ಜಗ್ಗಿ ವಾಸುದೇವ್ ಈ ಹಿಂದೆಯೂ ಕರ್ನಾಟಕ ಸರ್ಕಾರಕ್ಕೆ ಹಣ ಮತ್ತು ಭೂಮಿ ಕೋರಿ ಮನವಿಗಳನ್ನು ಸಲ್ಲಿಸಿದ್ದರು. ಹಿಂದಿನ ಸರ್ಕಾರಗಳು ಇವರ ಮನವಿಯನ್ನು ಪರಿಗಣಿಸಿರಲಿಲ್ಲ. ಕಾವೇರಿ ಕೂಗು ಅಭಿಯಾನದಲ್ಲಿ ಸಂಗ್ರಹವಾದ ಹಣದ ಮಾಹಿತಿ ಬಹಿರಂಗಪಡಿಸದ ಆರೋಪಗಳು ಸಹ ಜಗ್ಗಿ ವಾಸುದೇವ್ ಮೇಲಿದೆ’ ಎಂದು ಟೀಕಿಸಿದರು.
‘ತಮಿಳುನಾಡಿನ ಕೊಯಮತ್ತೂರಿನ ಭೂ ಹಗರಣ, ಸರ್ಕಾರಕ್ಕೆ ತೆರಿಗೆ ವಂಚನೆ ಆರೋಪ, ಅರಣ್ಯ ಭೂಮಿಯ ಒತ್ತುವರಿ ಮುಂತಾದ ಆರೋಪಗಳು ವಾಸುದೇವ್ ಮೇಲೆ ಇದೆ. ರಾಜ್ಯಕ್ಕೆ ಉಪಯೋಗವಿಲ್ಲದ, ನಕಲು ಯೋಜನೆಗೆ ಹಣ ನೀಡುವ ಮೂಲಕ ಮುಖ್ಯಮಂತ್ರಿಗಳು ತಪ್ಪನ್ನು ಎಸಗಿದ್ದಾರೆ’ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ವೈಯಕ್ತಿಯ ಚಪಲಕ್ಕೆ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ರಮೇಶ್ ಬಾಬು ಅವರು, ಒಂದು ಕಡೆ ಸರ್ಕಾರದ ಹಣವನ್ನು ಬೇಕಾಬಿಟ್ಟಿ ಹಂಚಿಕೆ ಮಾಡುವ ಮುಖ್ಯಮಂತ್ರಿಗಳು ಇನ್ನೊಂದು ಕಡೆ ಪುಣ್ಯಕೋಟಿ ಯೋಜನೆಗೆ ಭಿಕ್ಷೆ ಬೇಡುತ್ತಾರೆ. ರಾಜ್ಯದ ಸರ್ಕಾರಿ ಮತ್ತು ಅನುದಾನಿತ ನೌಕರರ ನ್ಯಾಯಯುತ ಬೇಡಿಕೆಗಳನ್ನು ಬಾಕಿಯಿಟ್ಟಿದ್ದಾರೆ. ಪುಣ್ಯಕೋಟಿ ಯೋಜನೆಗೆ ಹಣ ನೀಡಿದರೆ ಬೇಡಿಕೆಗಳನ್ನು ಈಡೇರಿಸುವ ಆಮಿಷ ಒಡ್ಡಿದ್ದಾರೆ ಎಂದು ಹೇಳಿದರು.
ಜಗ್ಗಿ ವಾಸುದೇವನಿಗೆ ಕಾರಣವಿಲ್ಲದೇ ಜನರ ತೆರಿಗೆ ಹಣವನ್ನು ನೀಡಿದ್ದಾರೆ. ರಾಜ್ಯವನ್ನು ವಂಚಿಸಿರುವ ಮುಖ್ಯಮಂತ್ರಿಗಳಿಗೆ ಸರ್ಕಾರಿ ನೌಕರರಿಂದ ವಂತಿಗೆ ಪಡೆಯುವ ನೈತಿಕತೆ ಇದೆಯೇ?’ ಎಂದು ಪ್ರಶ್ನಿಸಿದರು.
‘ಇದುವರೆಗೆ ಏಳನೇ ವೇತನ ಆಯೋಗವನ್ನು ರಚಿಸಿಲ್ಲ. ನೌಕರರಿಗೆ 18 ತಿಂಗಳ ತುಟ್ಟಿಭತ್ಯೆ ನೀಡಿಲ್ಲ. ಖಾಲಿಯಿರುವ ಹುದ್ದೆಗಳನ್ನು ತುಂಬಿಲ್ಲ. ವರ್ಗಾವಣೆ ನೀತಿ ಭ್ರಷ್ಟಮಯವಾಗಿದೆ. ಸರ್ಕಾರ ಘೋಷಣೆ ಮಾಡಿದ ಸ್ಥಳಗಳಲ್ಲಿ ಗೋಶಾಲೆಗಳೇ ಇಲ್ಲ. ರಾಜ್ಯದ ರೈತರಿಗೆ ಸ್ಪಂದಿಸದ ಸರ್ಕಾರ ಜಗ್ಗಿ ವಾಸುದೇವ್‌ಗೆ ತಲೆಬಾಗುತ್ತದೆ. ಪುಣ್ಯಕೋಟಿ ಹೆಸರಿನಲ್ಲಿ ದಂಧೆ ಮಾಡುವ ಅನಿವಾರ್ಯತೆ ಸೃಷ್ಟಿ ಮಾಡಿದೆ’ ಎಂದು ಆರೋಪಿಸಿದ್ದಾರೆ.
‘ಜಗ್ಗಿ ವಾಸುದೇವ್‌ರವರ ಮೇಲೆ ಆರೋಪಗಳ ಜೊತೆಗೆ ಪ್ರಕರಣಗಳೂ ನ್ಯಾಯಾಲಯದಲ್ಲಿ ಬಾಕಿ ಇವೆ. ಕಳಂಕಿತರಿಗೆ ಮತ್ತು ಆರೋಪಿಗಳಿಗೆ ರಾಜ್ಯ ಸರ್ಕಾರದ ಹಣವನ್ನು ಹಂಚಿಕೆ ಮಾಡುವ ಪ್ರವೃತ್ತಿ ಸಾರ್ವಜನಿಕ ಹಿತದೃಷ್ಟಿಯಿಂದ ನಿಲ್ಲಬೇಕಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಜಗ್ಗಿ ವಾಸುದೇವ್ ಪೌಂಡೇಷನ್ ಜೊತೆಯಲ್ಲಿ ಮಾಡಿಕೊಂಡಿರುವ ಒಪ್ಪಂದ ರದ್ದುಪಡಿಸಿ, ಹಂಚಿಕೆಯಾದ ಜಮೀನು ವಾಪಸ್ಸು ಪಡೆದು ರಾಜ್ಯದ ಜನರ ಕ್ಷಮೆ ಕೇಳಲಿ’ ಎಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.