ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ, ಸಿಎಂ ಬದಲಾವಣೆ ವಿಚಾರ ಕುರಿತಂತೆ ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ದಿಢೀರ್ ದೆಹಲಿ ಪ್ರಯಾಣ ಬೆಳೆಸಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಇತ್ತೀಚಿನ ರಾಜ್ಯ ರಾಜಕೀಯ ಬೆಳವಣಿಗೆ ನಡುವೆ ಹುಬ್ಬಳ್ಳಿಯಿಂದ ಮಾಜಿ ಸಿಎಂ ಜಗದೀಶ್ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿರುವುದು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಅವಕಾಶವನ್ನೊದಗಿಸಿದೆ. ಬಿಜೆಪಿ ವರಿಷ್ಠರ ಬುಲಾವ್ ಹಿನ್ನೆಲೆ ಜಗದೀಶ್ ಶೆಟ್ಟರ್ ದಿಲ್ಲಿಗೆ ಪ್ರಯಾಣ ಬೆಳೆಸಿರುವುದು ಹಲವು ಸಂಶಯಗಳನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಆಗಲಿದೆ ಎನ್ನುವ ಮಾತುಗಳು ಮತ್ತೆ ಚರ್ಚೆಗೆ ಬಂದಿವೆ.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಿಟ್ ಕಾಯಿನ್ ಹಗರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿ ಬಿಜೆಪಿಯ ಮೂರನೇ ಮುಖ್ಯಮಂತ್ರಿ ಸದ್ಯದಲ್ಲೇ ಬರಲಿದ್ದಾರೆ ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ಬಿಜೆಪಿ ವಲಯದಲ್ಲಿನ ಈ ಎಲ್ಲ ಬೆಳವಣಿಗೆಗಳ ನಡುವೆ ಶೆಟ್ಟರ್ ದಿಲ್ಲಿಗೆ ತೆರಳಿರುವುದು ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ಬಿಟ್ ಕಾಯಿನ್ ಹಗರಣದ ಬಗ್ಗೆ ಸಾಕಷ್ಟು ದಾಖಲೆಗಳಿವೆ, ಸುಪ್ರಿಂ ಕೋರ್ಟ್ಗೆ ಹೋಗಲು ಸಿದ್ದ – ಪ್ರಿಯಾಂಕ್ ಖರ್ಗೆ
ಜೆಪಿ ನಡ್ಡಾ ಜೊತೆ ಸಭೆ : ಇಂದು ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಜೊತೆ ಜಗದೀಶ್ ಶಟ್ಟರ ಸಭೆ ನಿಗದಿಯಾಗಿದೆ. ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಶೆಟ್ಟರ್ರಿಂದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮಾಹಿತಿ ಪಡೆಯಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಮೂರು ದಿನಗಳ ಹಿಂದಷ್ಟೇ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿ, ಪ್ರಧಾನಿ ಮೋದಿ ಸೇರಿ ಹಲವರು ನಾಯಕರನ್ನ ಭೇಟಿಯಾಗಿದ್ದರು, ಈ ಬೆನ್ನಲ್ಲೇ ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಜೋರಾಗಿತ್ತು ಜಗದೀಶ್ ಶೆಟ್ಟರ್ ದೆಹಲಿ ಭೇಟಿ ಈಗ ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಬಿರುಗಾಳಿ ಎಬ್ಬಿಸಿದ ಬಿಟ್ ಕಾಯಿನ್ ಹಗರಣ, ಸಿಎಂ ಮೇಲೆ ತೂಗುಕತ್ತಿ
ಸಾಲು ಸಾಲು ಸಭೆಗಳ ಹಿಂದೆ ಏನಿದೆ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವೇಳೆ ಮೌನವಾಗಿದ್ದ ಶೆಟ್ಟರ್, ಇತರರಂತೆ ದೆಹಲಿ ಪ್ರಯಾಣವೂ ಮಾಡಿರಲಿಲ್ಲ ಅನ್ನೋದು ಗಮನಾರ್ಹವಾಗಿತ್ತು. ಇನ್ನು ಈಗ ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ಪ್ರಕರಣ ದೊಡ್ಡ ಸುದ್ದಿ ಆಗ್ತಿದೆ. ಬಿಟ್ ಕಾಯಿನ್ ದಂಧೆ ಪ್ರಕರಣಕ್ಕೂ ಸಿಎಂಗೂ ಸಂಬಂಧವಿದೆಯೇ? ಅನ್ನೋ ಬಗ್ಗೆ ಖುದ್ದು ಪ್ರಧಾನಿ ಮೋದಿ, ಸಿಎಂ ಭೇಟಿಗೂ ಮುನ್ನ ರಾಜ್ಯಪಾಲರಿಂದ ಮಾಹಿತಿ ಪಡೆದುಕೊಂಡಿದ್ದರು. ಈ ಮೊದಲೇ ಪ್ರಧಾನಿ ಭೇಟಿ ಆಗಿದ್ದ ಥಾವರಚಂದ್ ಗೆಹಲೋತ್ ಈ ಬಗ್ಗೆ ಮಾಹಿತಿ ನೀಡಿದ್ರು. ಒಟ್ನಲ್ಲಿ ಒಂದ್ಕಡೆ ರಾಜ್ಯಪಾಲರು, ಇನ್ನೊಂದ್ಕಡೆ ಸಿಎಂ, ಈಗ ಶೆಟ್ಟರ್ ಪ್ರವಾಸದಿಂದ ಬಿಜೆಪಿ ಹೈಕಮಾಂಡ್ ನಾಯಕರು ಮಾಡುತ್ತಿರುವುದಾದ್ರೂ ಏನು? ಅನ್ನೋ ಪ್ರಶ್ನೆಯನ್ನ ಹುಟ್ಟುಹಾಕಿದೆ.