ಐಟಿಐ ಕಾರ್ಖಾನೆಯ ಕಾರ್ಮಿಕರ ವಜಾ-ಸಂಪೂರ್ಣ ವಿವರ ಪಡೆದು ಕ್ರಮ ಕೈಗೊಳ್ಳುವೆ: ಸಚಿವ ನಾಗೇಶ್

ಬೆಂಗಳೂರು: ನಗರದ ಐಟಿಐ ಕಾರ್ಖಾನೆಯಲ್ಲಿ ಕಾರ್ಮಿಕರನ್ನು ವಜಾಗೊಳಿಸಿರುವ ಬಗ್ಗೆ ಸೂಕ್ತವಾದ ಸಂಪೂರ್ಣ ಮಾಹಿತಿ ಪಡೆದು, ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. ವಿಧಾನ ಪರಿಷತ್ತಿನಲ್ಲಿ ನಿಯಮ 72ರ ಅಡಿ ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಪ್ರಶ್ನೆಯು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಇಲಾಖೆಯಲ್ಲಿ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ ಎಂದರು.

ಆದರೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಕೋರಲಾಗಿ, ಸದರಿಯವರು ಈ ಕೆಳಕಂಡಂತೆ ಮಾಹಿತಿ ನೀಡಿರುತ್ತಾರೆ. ಸದಸ್ಯರು ಸಾಕಷ್ಟು ಒತ್ತಾಯ ಮಾಡಿರುವ ಹಿನ್ನೆಲೆ ಕೂಡಲೇ ಈ ಬಗ್ಗೆ ಮಾತುಕತೆ ನಡೆಸಿ, ಕಾರ್ಮಿಕರ ಸಮಸ್ಯೆ ಏನೆಂದು ಅರಿತುಕೊಳ್ಳಲಾಗುವುದು. ಕೆಲಸದಿಂದ ವಜಾಗೊಳಿಸಿದ್ದರ ಹಿಂದೆ ಸೂಕ್ತ ಕಾರಣ ಲಭಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರಕಾಶ್ ರಾಥೋಡ್ ಮಾತನಾಡಿ, ಕೋವಿಡ್ ಅವಧಿಯಲ್ಲಿ 3 ಸಾವಿರ ವೆಂಟಿಲೇಟರ್ ನಿರ್ಮಿಸಿದವರು ವಜಾ ಆಗಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಸರ್ಕಾರದ ಪರವಾಗಿ ಸಚಿವರು ಉತ್ತರ ಕೊಡಬೇಕು. ನಾನೂ ಸಹ ಒಂದು ಸಮಯದಲ್ಲಿ ಇಲ್ಲಿ ಕೆಲಸ ಮಾಡಿದ್ದೆ. ನನ್ನ ಜತೆ ಕೆಲಸ ಮಾಡಿದ್ದ ಹಲವು ಮಂದಿ ಈಗ ಉದ್ಯೋಗ ಕಳೆದುಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಐಟಿಐ ಕಾರ್ಮಿಕರು ಸುಮಾರು 30 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ 80 ಕಾರ್ಮಿಕರನ್ನು ಏಕಾಏಕಿ ಕಾನೂನು ಬಾಹಿರವಾಗಿ ಕೆಲಸದಿಂದ ವಜಾ ಮಾಡಿದ್ದು, ಶೋಚನೀಯ ಸಂಗತಿಯಾಗಿದೆ. ಈ ಕಾರ್ಮಿಕರು ಕೇವಲ ಐಟಿಐ ಕೆಲಸವನ್ನು ನಂಬಿ ಕುಟುಂಬ ನಿರ್ವಹಣೆ ಮಾಡಿ ಕೊಂಡಿರುವುದರಿಂದ ಅವರ ಕುಟುಂಬವು ಬೀದಿಪಾಲಾಗಿದೆ. ಆದುದರಿಂದ ಕೂಡಲೇ ವಜಾಗೊಳಿಸಿರುವ ಕಾರ್ಮಿಕರನ್ನು ಪುನರ್ ನೇಮಕ ಮಾಡಿಕೊಳ್ಳುವ ಕುರಿತು ಗಮನ ಸೆಳೆಯುತ್ತಿದ್ದೇನೆ ಎಂದರು.

ದರ್ಜಿಗಳ ಸಮಸ್ಯೆ ಬಗೆಹರಿಸಿ:

ವಿಧಾನ ಪರಿಷತ್​ನಲ್ಲಿ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ಕಾಂಗ್ರೆಸ್ ಸದಸ್ಯ ಹರೀಶ್ ಕುಮಾರ್ ನಿಯಮ 72ರ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್ ‌ʻʻದರ್ಜಿಗಳನ್ನು(ಟೈಲರ್) ಅಸಂಘಟಿತ ವಲಯದಿಂದ ಸಂಘಟಿತ ವಲಯಕ್ಕೆ ತರುವ ಯತ್ನ ಮಾಡುತ್ತೇವೆ. ಆದರೆ, ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಯೋಚನೆ ಸರ್ಕಾರದ ಮುಂದೆ ಇಲ್ಲʼʼ ಎಂದು ತಿಳಿಸಿದ್ದಾರೆ.

ಅಸಂಘಟಿತ ಕಾರ್ಮಿಕರನ್ನು ಪತ್ತೆ ಮಾಡಿ ನೋಂದಣಿ ಮಾಡಿಸುವ ಕಾರ್ಯ ನಡೆಯುತ್ತಿದೆ. ವರ್ಷದ ಕೊನೆಯಲ್ಲಿ 1.7 ಲಕ್ಷ ಮಂದಿ ನೋಂದಣಿ ಮಾಡಿಸುತ್ತೇವೆ. ಪ್ರತ್ಯೇಕ ನಿಗಮ ಸ್ಥಾಪನೆ ಪ್ರಸ್ತಾಪ ನಮ್ಮ ಮುಂದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಪ್ರಸ್ತಾಪಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಚಿವರು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *