ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಾವನ್ನಪ್ಪಿರುವುದು ಜನರ ಮನಸ್ಸಿನಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಘಟನೆಯು ಸಂಶಯಸ್ಪದವಾಗಿದೆ ಎಂದು ಶಿವಸೇನೆ ಪಕ್ಷದ ರಾಜ್ಯಸಭೆ ಸಂಸದ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ.
ಈ ದುರ್ಘಟನೆಯು ಇಡೀ ದೇಶ ಮತ್ತು ನಾಯಕತ್ವವು ಗೊಂದಲಕ್ಕೀಡಾಗಿದೆ. ಹಾಗಾಗಿ ರಕ್ಷಣಾ ಸಚಿವರು ಅಥವಾ ಪ್ರಧಾನಿ ಎಲ್ಲಾ ಅನುಮಾನಗಳ ನಿವಾರಣೆಗೆ ಮುಂದಾಗಬೇಕೆಂದು ಸಂಜಯ್ ರಾವುತ್ ಒತ್ತಾಯಿಸಿದರು.
ಚೀನಾ ಹಾಗೂ ಪಾಕಿಸ್ತಾನದ ವಿರುದ್ಧ ದೇಶದ ಮಿಲಿಟರಿ ಪ್ರತಿಕ್ರಿಯೆಯನ್ನು ರೂಪಿಸುವಲ್ಲಿ ಜನರಲ್ ಬಿಪಿನ್ ರಾವತ್ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದರು. ಇಂತಹ ಅಪಘಾತ ಸಂಭವಿಸಿದಾಗ, ಇದು ಜನರ ಮನಸ್ಸಿನಲ್ಲಿ ಅನುಮಾನವನ್ನು ಹುಟ್ಟು ಮಾಡುತ್ತದೆ ಎಂದು ಅವರು ತಿಳಿಸಿದರು.
ಜನರಲ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಎರಡು ಎಂಜಿನ್‌ಗಳಿಂದ ಚಾಲನೆಗೊಳ್ಳುವ ಆಧುನಿಕ ಯಂತ್ರವಾಗಿತ್ತು. “ನಾವು ಸಶಸ್ತ್ರ ಪಡೆಗಳನ್ನು ಆಧುನೀಕರಿಸಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ. ಇದು ಹೇಗೆ ಸಂಭವಿಸಿತು?” ಎಂದು ಅವರು ಆಶ್ಚರ್ಯಪಟ್ಟರು.
ಪುಲ್ವಾಮಾ ದಾಳಿಯ ನಂತರ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಜನರಲ್ ರಾವತ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಂಜಯ್ ರಾವತ್ ಹೇಳಿಕೆ ನೀಡಿದರು.
ಡಿಸೆಂಬರ್ 08ರಂದು ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಹಲವು ಮಂದಿ ಮರಣ ಹೊಂದಿದರು.